ಕುಮಾರಸ್ವಾಮಿ ಅವರನ್ನು ಹಾವು, ಗೋಸುಂಬೆಗೆ ಹೋಲಿಸಿದ ಯಡಿಯೂರಪ್ಪ!

ಡಿಜಿಟಲ್ ಕನ್ನಡ ಟೀಮ್:

ಹಾವಿಗೆ ಹನ್ನೆರಡು ವರ್ಷ ರೋಷವಾದರೆ ಕುಮಾರಸ್ವಾಮಿಯದ್ದು ಅದಕ್ಕೂ ಮಿಗಿಲಾದದ್ದು. ಅಪ್ಪ-ಮಕ್ಕಳು (ದೇವೇಗೌಡ ಮತ್ತು ಕುಮಾರಸ್ವಾಮಿ) ಕಾಂಗ್ರೆಸ್ ನಿರ್ನಾಮ ಮಾಡುವುದು ಖಚಿತ. ನನ್ನ ಹೋರಾಟವೇನಿದ್ದರೂ ಅಪ್ಪ-ಮಕ್ಕಳ ವಿರುದ್ಧವೇ ಹೊರತು ಕಾಂಗ್ರೆಸ್ ವಿರುದ್ಧ ಅಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ವಿಧಾನಸಭೆಯಲ್ಲಿ ಪ್ರತಿಪಕ್ಷ ನಾಯಕ ಯಡಿಯೂರಪ್ಪ ಗುಡುಗಿದ್ದಾರೆ.

ಹಿಂದೆ ಜೆಡಿಎಸ್ ಜತೆಗೂಡಿ ಸರಕಾರ ಮಾಡಿದ್ದು ನನ್ನ ಜೀವಮಾನದ ಅತಿದೊಡ್ಡ ತಪ್ಪು. ಮೊದಲ 20 ತಿಂಗಳು ಬೇಷರತ್ ಸರಕಾರದ ನಡೆಸಿದ ಕುಮಾರಸ್ವಾಮಿ ನಂತರ ಏನೋನೋ ಷರತ್ತುಗಳನ್ನು ಹಾಕಿ ನನ್ನ ಬೆನ್ನಿಗೆ ಚೂರಿ ಹಾಕಿದರು. ಅವರೊಬ್ಬರು ಕಾಲಕ್ಕೆ ತಕ್ಕಂತೆ ಬಣಬದಲಿಸುವ ಊಸರವಳ್ಳಿ. ಭವಿಷ್ಯದಲ್ಲಿ ಕಾಂಗ್ರೆಸ್ ಮುಖಂಡರಿಗೂ ಇದರ ಅನುಭವ ಆಗಲಿದೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ವಿಶ್ವಾಸಮತ ಯಾಚನೆ ಕುರಿತ ಪ್ರಸ್ತಾವನೆಗೆ ಪ್ರತಿಕ್ರಿಯಿಸಿ ಶುಕ್ರವಾರ ಭವಿಷ್ಯ ನುಡಿದರು.
ಬಿಜೆಪಿ ವಿಶ್ವಾಸಮತ ಯಾಚನೆ ಸಂದರ್ಭದಲ್ಲಿ ಕಾಂಗ್ರೆಸ್-ಜೆಡಿಎಸ್ ಶಾಸಕರನ್ನು ಹಿಡಿದಿಟ್ಟ ಡಿ.ಕೆ. ಶಿವಕುಮಾರ್ ಖಳನಾಯಕರಾಗಲಿದ್ದಾರೆ. ಅಪ್ಪ-ಮಕ್ಕಳ ವರಸೆ ಏನೆಂಬುದು ಅವರಿಗೂ ಸದ್ಸಯದಲ್ಲೇ ಗೊತ್ತಾಗಲಿದೆ. ಅದೇನು ಅವರಿಗೆ ಗೊತ್ತಿಲ್ಲ ಎಂದೇನೂ ಇಲ್ಲ. ಕುಮಾರಸ್ವಾಮಿ ಪ್ರಮಾಣ ಸ್ವೀಕಾರ ಸಂದರ್ಭದಲ್ಲಿ ಮೂಲೆಗುಂಪಾಗಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಥಿತಿ ಅನುಕುಂಪ ಮೂಡಿಸುವಂಥದ್ದು. ಯಾವ ಸಿದ್ದರಾಮಯ್ಯ ಅವರನ್ನು ಮುಂದಿಟ್ಟುಕೊಂಡು ಚುನಾವಣೆ ಪ್ರಚಾರ ಮಾಡಿದ ರಾಹುಲ್ ಗಾಂಧಿ ಅವರೇ ಸಿದ್ದರಾಮಯ್ಯ ಅವರಿಗೆ ಕಿಮ್ಮತ್ತು ಕೊಡಲಿಲ್ಲ. ತಮ್ಮನ್ನು ಹೀನಾಯವಾಗಿ ಸೋಲಿಸಿದ ಜೆಡಿಎಸ್ನ ಜಿ.ಟಿ. ದೇವೇಗೌಡರ ಜತೆ ಒಂದೆಡೆ ಕುಳಿತುಕೊಳ್ಳಬೇಕಾದ ಸಿದ್ದರಾಮಯ್ಯನವರ ದುಸ್ಥಿತಿ ಯಾರಿಗೂ ಬೇಡ ಎಂದು ಮೂವತ್ತು ನಿಮಿಷಗಳ ಭಾಷಣದುದ್ದಕ್ಕೂ ಕುಮಾರಸ್ವಾಮಿ ಕುಟುಂಬ ಸದಸ್ಯರು ಹಾಗೂ ಕಾಂಗ್ರೆಸ್ ಮುಖಂಡರನ್ನು ತರಹೇವಾರಿ ಚುಚ್ಚಿದರು.
ಅಧಿಕಾರ ಹೋದದ್ದು ಒಂದು ಕಡೆಯಾದರೆ, ಹಿಂದೊಮ್ಮೆ ತಮಗೆ ವಂಚಿಸಿದ್ದ ಕುಮಾರಸ್ವಾಮಿ ಕೈಗೆ ಅದು ಸಿಕ್ಕಿದ್ದರಿಂದ ಕೆಂಡಮಂಡಲರಾಗಿದ್ದ ಯಡಿಯೂರಪ್ಪ ಟೀಕೆಯುದ್ದಕ್ಕೂ ಕೋಪ-ತಾಪ ಜತೆಜತೆಗೆ ವ್ಯಂಗ್ಯ, ಮೂದಲಿಕೆ, ನಿಂದನೆ, ಪರಿಹಾಸ್ಯದ ನಾನಾ ಲಹರಿಗಳನ್ನು ಹರಿಸಿದರು. ಕುಮಾರಸ್ವಾಮಿ ಅವರನ್ನು ಮಹಾಭಾರತದ ದುರ್ಯೋದನನಿಗೆ, ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸದಸ್ಯರನ್ನು ಕುರುವಂಶದ ಕುಡಿಗಳಿಗೆ ಹೋಲಿಸಿ ಸಮಾಧಾನ ಮಾಡಿಕೊಂಡರು. ಇದಕ್ಕೆಲ್ಲ ಕುಮಾರಸ್ವಾಮಿ ಉತ್ತರ ಕೊಡುವಷ್ಟೊತ್ತಿಗೆ ಸಭಾತ್ಯಾಗ ಮಾಡಿ ಮಾರುತ್ತರ ನೀಡುವ ಅವಕಾಶ ಕಳೆದುಕೊಂಡರು.

Leave a Reply