ವಿಶ್ವಾಸಮತ ಪರೀಕ್ಷೆಯಲ್ಲಿ ಕುಮಾರಸ್ವಾಮಿ ಪಾಸ್

 ಡಿಜಿಟಲ್ ಕನ್ನಡ ಟೀಮ್:
ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರಕಾರದಲ್ಲಿ ಮುಖ್ಯಮಂತ್ರಿಯಾಗಿ ಬುಧವಾರ ಅಧಿಕಾರ ಸ್ವೀಕರಿಸಿದ್ದ ಎಚ್ ಡಿ ಕುಮಾರಸ್ವಾಮಿ ಇಂದು ವಿಧಾನಸಭೆಯಲ್ಲಿ ವಿಶ್ವಾಸಮತ ಪಡೆಯುವಲ್ಲಿ ಯಶಸ್ವಿಯಾದರು.
ಪ್ರತಿಪಕ್ಷ ಬಿಜೆಪಿಯ ಸಭಾತ್ಯಾಗದ ನಡುವೆಯೇ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ವಿಶ್ವಾಸಮತ ಸಾಬೀತುಪಡಿಸಿದರು. ಆರು ತಿಂಗಳ ಮಟ್ಟಿಗೆ ಸರ್ಕಾರಕ್ಕೆ ಯಾವುದೇ ಗಂಡಾತರವಿಲ್ಲ.
ಮುಖ್ಯಮಂತ್ರಿಯವರ ವಿಶ್ವಾಸ ಮಂಡನೆ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಪ್ರತಿಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ತಮ್ಮ ಮಾತು ಮುಗಿಸಿ, ಕಲಾಪವನ್ನು ಬಹಿಷ್ಕರಿಸಿ, ಇತರ ತಮ್ಮ ಪಕ್ಷದ ಸದಸ್ಯರೊಟ್ಟಿಗೆ ಸನದನದಿಂದ ಹೊರ ನಡೆದರು.
ಯಡಿಯೂರಪ್ಪ ಅವರ ಪ್ರಶ್ನೆಗಳಿಗೆ ಉತ್ತರಿಸಿದ ಕುಮಾರಸ್ವಾಮಿ, ಕೊನೆಯಲ್ಲಿ ಸದನದಲ್ಲಿ ವಿಶ್ವಾಸ ಮತ ಕೋರಿದರು. ಸಭಾಧ್ಯಕ್ಷರು ಪ್ರಸ್ತಾವವನ್ನು ಧ್ವನಿಮತಕ್ಕೆ ಹಾಕಿ, ಬೆಂಬಲಿಸುತ್ತೇವೆ ಎನ್ನುವವರು ಹೌದು ಎಂದು, ಬೆಂಬಲಿಸದವರು ಇಲ್ಲಾ ಎಂದು ಹೇಳುವಂತೆ ಕೋರಿದರು.
ಬಳಿಕ, ಜೆಡಿಎಸ್-ಕಾಂಗ್ರೆಸ್ ಮೈತ್ರಿ ಕೂಟದ ಸದಸ್ಯರು ಹೌದು ಎಂದು ಧ್ವನಿ ಮತದ ಮೂಲಕ ಬಹುಮತ ತೋರಿದರು. ನಂತರ, ಸಭಾಧ್ಯಕ್ಷರು ವಿಶ್ವಾಸಮತವನ್ನು ಅನುಮೋದಿಸಿದರು. ವಿಶ್ವಾಸಮತ ಸಿಗುತ್ತಿದ್ದಂತೆ ಕಾಂಗ್ರೆಸ್ ಜೆಡಿಎಸ್ ಶಾಸಕರು ಪರಸ್ಪರ ಹಸ್ತಲಾಘವ ಮಾಡಿದರು. ಮುಖ್ಯಮಂತ್ರಿ ಬಳಿಗೆ ಬಂದು ಶುಭಕೋರಿದರು.
ಕುಮಾರಸ್ವಾಮಿ ವಿಧಾನಸಭೆಯಲ್ಲಿ ವಿಶ್ವಾಸ ಮತ ಪಡೆಯುತ್ತಿದ್ದಂತೆ ಕಾಂಗ್ರೆಸ್ ಜೆಡಿಎಸ್‍ನ ಸದಸ್ಯರು ಸ್ವಾತಂತ್ರ ಹಕ್ಕಿಯಂತೆ ಹೊರ ಬಂದು ತಮ್ಮ ಕ್ಷೇತ್ರಗಳತ್ತ ತೆರಳಿದರು.

Leave a Reply