‘ಮಂತ್ರಿ ಮಾಡಿ ಸಾಕು ಎಂದು ಯಡಿಯೂರಪ್ಪ ನನ್ನ ಮನೆ ಬಾಗಿಲಿಗೆ ಬಂದಿದ್ದರು’, ಬಿಎಸ್ ವೈಗೆ ಎಚ್ಡಿಕೆ ತಿರುಗೇಟು

ಡಿಜಿಟಲ್ ಕನ್ನಡ ಟೀಮ್:

‘ನಾನು ಅಧಿಕಾರಕ್ಕಾಗಿ ಯಾರ ಮನೆ ಬಾಗಿಲಿಗೂ ನಾನು ಹೋಗಿಲ್ಲ. 10 ವರ್ಷದ ಹಿಂದೆ ಯಡಿಯೂರಪ್ಪ ಅವರೇ ನನ್ನನ್ನು ಕೇವಲ ಸಚಿವನನ್ನಾಗಿ ಮಾಡಿ ಎಂದು ಕೇಳಿಕೊಂಡು ನನ್ನ ಮನೆ ಬಾಗಿಲಿಗೆ ಬಂದಿದ್ದರು…’ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಬಿಜೆಪಿ ರಾಜ್ಯಾಧ್ಯಕ್ಷ  ಬಿ.ಎಸ್ ಯಡಿಯೂರಪ್ಪನವರ ಟೀಕೆಗೆ ಪ್ರತಿಯಾಗಿ ಕೊಟ್ಟ ತಿರುಗೇಟು.

ವಿಶ್ವಾಸ ಮತಯಾಚನೆ ಪ್ರಕ್ರಿಯೆ ವೇಳೆ ಮಾತನಾಡಿದ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹಾಗೂ ಹಾಲಿ ಮುಖ್ಯಮಂತ್ರಿ ಕುಮಾರಸ್ವಾಮಿ ವಾಕ್ಸಮರ ನಡೆಸಿದರು. ಆರಂಭದಲ್ಲಿ ಕುಮಾರಸ್ವಾಮಿ ಮಾತನಾಡಿ, ‘ನಾನು ಅಧಿಕಾರಕ್ಕೆ ಆಸೆಪಟ್ಟವನಲ್ಲ. ನಮ್ಮ ತಂದೆಯೂ ಅಧಿಕಾರ ಹಿಂದೆ ಬಿದ್ದವರಲ್ಲ. ಆದರೆ ಹತ್ತು ವರ್ಷಗಳ ಹಿಂದೆ ಬಿಜೆಪಿ ಜತೆ ಸರಕಾರ ಮಾಡಿ ತಪ್ಪು ಮಾಡಿದೆ. ಈಗ ಅದನ್ನು ಸರಿಪಡಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದೇನೆ’ ಎಂದರು. ನಂತರ ಮಾತನಾಡಿದ ಬಿ.ಎಸ್ ಯಡಿಯೂರಪ್ಪ, ‘ಜೆಡಿಎಸ್ ಅಪ್ಪ ಮಕ್ಕಳ ಪಕ್ಷ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಸರ್ವ ನಾಶ ಮಾಡುತ್ತಾರೆ. ಅವರ ದ್ವೇಷ ನಾಗರ ಹಾವಿಗಿಂತಲೂ ಹೆಚ್ಚಿನದು. ಅವರು ಗೋಸುಂಬೆಯಂತೆ ಬಣ್ಣ ಬದಲಿಸುವವರು. ನನ್ನ ಹೋರಾಟ ಕಾಂಗ್ರೆಸ್ ವಿರುದ್ಧವಲ್ಲ, ಅಪ್ಪ-ಮಕ್ಕಳ ವಿರುದ್ಧ’ ಎಂದು ಜೆಡಿಎಸ್ ವಿರುದ್ಧ ಕಿಡಿ ಕಾರಿದರು.

ಈ ವೇಳೆ ರಾತರ ಸಾಲ ಮನ್ನಾ ಮಾಡದಿದ್ದರೆ ಸೋಮವಾರ ರಾಜ್ಯ ಬಂದ್ ಮಾಡಲಾಗುವುದು ಎಂದು ಎಚ್ಚರಿಸಿ ಸಭಾತ್ಯಾಗ ಮಾಡಿದರು.

ನಂತರ ಬಿಎಸ್ ವೈ ಅವರ ಆರೋಪಗಳಿಗೆ ಸುದೀರ್ಘ ಉತ್ತರ ಕೊಟ್ಟ ಕುಮಾರಸ್ವಾಮಿ, ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರಕಾರದಲ್ಲಿ ನಡೆದ ಘಟನೆ, ಕಾಂಗ್ರೆಸ್‌ನೊಂದಿಗೆ ಮೈತ್ರಿಯ ಅನಿವಾರ್ಯತೆ, ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆಗಳ ಈಡೇರಿಸುವ ಸಲುವಾಗಿ ಕೈಗೊಳ್ಳುವ ಯೋಜನೆಗಳ ಬಗ್ಗೆ ಸವಿಸ್ತಾರವಾಗಿ ಮಾತನಾಡಿದರು. ಅವುಗಳ ಪ್ರಮುಖ ಅಂಶಗಳು ಹೀಗಿವೆ…

ಸಚಿವ ಸ್ಥಾನ ಸಾಕು ಎಂದಿದ್ದರು ಬಿಎಸ್ ವೈ: 2004ರಲ್ಲಿ ಧರಂಸಿಂಗ್ ಮುಖ್ಯಮಂತ್ರಿಯಾಗಿದ್ದ ವೇಳೆ, ಯಡಿಯೂರಪ್ಪ ತಮಗೆ ಹಾಗೂ ಶೋಭಾ ಕರಂದ್ಲಾಜೆ ಅವರಿಗೆ ಸಚಿವ ಸ್ಥಾನ ನೀಡಿದರೆ, ಜೆಡಿಎಸ್‌ಗೆ ಬರುವುದಾಗಿ ಹೇಳಿದ್ದ ಮಾತನ್ನು ನಾನು ಮರೆತಿಲ್ಲ. ಈ ವೇಳೆ ಅವರಿಗಿಂತ ಕಿರಿಯನಾಗಿದ್ದ ನಾನು, ‘ಜೆಡಿಎಸ್‌ಗೆ ಬರುವುದಾದರೆ, 40 ಶಾಸಕರೊಂದಿಗೆ ಬನ್ನಿ’ ಎಂದು ಸಲಹೆ ನೀಡಿದ್ದನ್ನು ಮರೆತಿಲ್ಲ. 2006ರಲ್ಲಿ ಯಡಿಯೂರಪ್ಪ ಅವರ ಮಾತು ಕೇಳಿ ನಮ್ಮ ತಂದೆಯ ಮಾತನ್ನುಲೆಕ್ಕಿಸದೇ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ಮುಖ್ಯಮಂತ್ರಿ ಯಾದೆ. ಪಕ್ಷದ ಹಿತದೃಷ್ಟಷ್ಟಿಯಿಂದ ಈ ನಿರ್ಣಯ ಅನಿವಾರ್ಯವಾಗಿತ್ತಾದ್ದರೂ, ದೇವೇಗೌಡರ ಸಿದ್ಧಾಂತಗಳಿಗೆ ವಿರೋಧವಾಗಿತ್ತು. ಅಂದಿನ ಆ ತಪ್ಪು ನಿರ್ಧಾರದಿಂದ ತಂದೆಯ ಆರೋಗ್ಯ ಹದಗೆಟ್ಟಿತ್ತು. ಆ ಆರೋಪವನ್ನು ಕಳೆದ ಒಂದು ದಶಕದಿಂದ ಅನುಭವಿಸಿದ್ದೇನೆ. ದೇವೇಗೌಡರ ಜಾತ್ಯತೀತ ಸಿದ್ಧಾಂತಕ್ಕೆ ಹೊಂದುವ ಕಾಂಗ್ರೆಸ್‌ನೊಂದಿಗೆ ಇಂದು ಮೈತ್ರಿ ಮಾಡಿಕೊಳ್ಳುವ ಮೂಲಕ, ಆ ಕಪ್ಪು ಚುಕ್ಕಿ ಅಳಿಸಿ ಹಾಕುವ ಪ್ರಯತ್ನ ಮಾಡಿದ್ದೇನೆ.

ಒಬ್ಬನೇ ನೋವು ತಿಂದೆ: ಮೈತ್ರಿ ಸರಕಾರ ರಚಿಸಲು ಯಡಿಯೂರಪ್ಪ ಮತ್ತು ನನ್ನ ಮಧ್ಯೆ ಒಪ್ಪಂದವಾಗಿತ್ತೇ ವಿನಃ ಬಿಜೆಪಿಯೊಂದಿಗಲ್ಲ. ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಎರಡು ತಿಂಗಳಿನಲ್ಲಿಯೇ, ನನ್ನ ವಿರುದ್ಧ 150 ಕೋಟಿ ಲಂಚ ಸ್ವೀಕರಿಸಿದ ಆರೋಪವನ್ನು ಬಿಜೆಪಿ ನಾಯಕರೊಬ್ಬರು ಹೋರಿಸಿದರು. ನಂತರ ಜಂತಕಲ್ಲು ಅದಿರು ಪ್ರಕರಣದಲ್ಲಿ ನನ್ನನ್ನು ಬಲಿಪಶು ಮಾಡಲಾಯಿತು. ಈ ಆರೋಪಗಳ ಬಗ್ಗೆ ಎಂದಿಗೂ ಚಕಾರವೆತ್ತದೇ, ಪಕ್ಷದ ಬೆಂಬಲ ಪಡೆಯದೇ ಏಕಾಂಗಿಯಾಗಿ ಹೋರಾಡಿದೆ. ಆಧಾರರಹಿತವಾಗಿ ನನ್ನ ಸಂಪುಟ ಸಚಿವರ ವಿರುದ್ಧ ಸುಪಾರಿ ನೀಡಿದ್ದೇನೆ ಎನ್ನುವ ಆರೋಪವನ್ನು ಬಿಜೆಪಿಯವರು ಮಾಡಿದರು. ಈ ಎಲ್ಲ ನೋವುಗಳ ಬಗ್ಗೆ ಯಾರೊಂದಿಗೂ ಹೇಳಿಕೊಳ್ಳದೇ ಏಕಾಂಗಿಯಾಗಿ ಅನುಭವಿಸಿದ್ದೇನೆ.

ಮಾಡದ ತಪ್ಪಿಗೆ ಶಿಕ್ಷೆ: 20 ತಿಂಗಳ ಅಧಿಕಾರಾವಧಿ ಮುಗಿದ ಬಳಿಕ, ಏಕಾಏಕಿ ಬಿಜೆಪಿಯ ಕೇಂದ್ರ ನಾಯಕರು ಬಂದು ಹತ್ತು ಹಲವು ಷರತ್ತುಗಳನ್ನು ಹಾಕಿದ್ದರು. ಅವರೇಕೆ ಬಂದರೂ ಎಂದು ಈಗಲೂ ತಿಳಿಯುತ್ತಿಲ್ಲ. ಬಳಿಕ 9 ದಿನದ ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ಬಹುಮತ ಸಾಬೀತುಪಡಿಸದೇ, ಅಧಿಕಾರದಿಂದ ಕೆಳಗಿಳಿದರು. ನಾನು ಈ ವೇಳೆ ಮೂಕ ಪ್ರೇಕ್ಷಕನಾಗಿದ್ದೆ. ನನ್ನದ್ದಲ್ಲದ ತಪ್ಪಿಗೆ ‘ವಚನಭ್ರಷ್ಟ’ ಎನ್ನುವ ಕಳಂಕ ಹೊರಿಸಿ, 2008ರ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿತ್ತು. ಜೆಡಿಎಸ್‌ನೊಂದಿಗೆ ಅಪವಿತ್ರ ಮೈತ್ರಿ ಎಂದು ಬಿಜೆಪಿಯವರು ಹೇಳಿಕೊಳ್ಳುತ್ತಾರೆ. ಆದರೆ, 2008ರಲ್ಲಿ 9ದಿನಕ್ಕೆ ಅಧಿಕಾರ ಕಿತ್ತುಕೊಂಡರು ಎನ್ನುವ ಆರೋಪ ಮಾಡುತ್ತಾರೆ. ಆದರೆ, ಒಂದು ವೇಳೆ ಜೆಡಿಎಸ್ ಬಿಜೆಪಿಗೆ ಬೆಂಬಲ ನೀಡದಿದ್ದರೆ, ರಾಜ್ಯದ ಮುಖ್ಯಮಂತ್ರಿಯಾಗಲೂ ಯಡಿಯೂರಪ್ಪ ಅವರಿಗೆ ಸಾಧ್ಯವಿತ್ತೇ? ‘ದಕ್ಷಿಣ ಭಾರತದಲ್ಲಿ ಕಮಲವನ್ನು ಅರಳಿಸಲು ಕರ್ನಾಟಕ ಹೆಬ್ಬಾಗಿಲು’ಆಗುತಿತ್ತೇ? ಕೇವಲ ಸಚಿವ ಸ್ಥಾನಕ್ಕಾಗಿ ಮನೆಗೆ ಬಂದಿದ್ದ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿ ರಾಜ್ಯ ನಾಯಕರನ್ನಾಗಿ ಮಾಡಿದ್ದೇ ಜೆಡಿಎಸ್.

ಸಾಲಮನ್ನಾ ಏಕಾಂಗಿ ನಿರ್ಧಾರವಲ್ಲ: ಅಧಿಕಾರಕ್ಕೆ ಬಂದರೆ ಸಾಲಮನ್ನಾ ಮಾಡುವುದಾಗಿ ಪ್ರಣಾಳಿಕೆಯಲ್ಲಿ ಹೇಳಿದ್ದೆ. ಆದರೆ, ಫಲಿತಾಂಶದ ಬಳಿಕ ತಮಾಷೆಗೆಂದು ಬಹುಮತ ನೀಡಿಲ್ಲ ಎನ್ನುವ ಕಾರಣಕ್ಕೆ ಮಾಡುವುದಿಲ್ಲ ಎಂದು ಹೇಳಿದ್ದೆ. ಆದರೆ, ಯಾವುದೇ ಕಾರಣಕ್ಕೂ ರಾಜ್ಯದ ರೈತರ ಸಾಲಮನ್ನಾ ಮಾಡುವ ಅಂಶ ಕೈಬಿಡುವುದಿಲ್ಲ. ಕಾಂಗ್ರೆಸ್ ನಾಯಕರೊಂದಿಗೆ ಈ ಬಗ್ಗೆ ಚರ್ಚಿಸಿ, ಈ ಹಿಂದೆ ಹೇಳಿದಂತೆ ರೈತರ ಸಾಲಮನ್ನಾ ಮಾಡುತ್ತೇವೆ. ಈ ಕುರಿತು ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ನಾಯಕರೊಂದಿಗೂ ಚರ್ಚಿಸಿ ಅದಕ್ಕೆ ಸಂಪನ್ಮೂಲ ಕ್ರೋಢೀಕರಣ ಹೇಗೆ ಮಾಡಬೇಕೆಂಬುದನ್ನು ಚರ್ಚಿಸಿ ನಂತರ ತೀರ್ಮಾನ ತೆಗೆದುಕೊಳ್ಳುತ್ತೇವೆ. ಯಡಿಯೂರಪ್ಪನವರು ಸಂಜೆಯೊಳಗೆ ನಿರ್ಧಾರ ತೆಗೆದುಕೊಳ್ಳಬೇಕು. ಇಲ್ಲವಾದರೆ ಸೋಮವಾರ ರಾಜ್ಯಾದ್ಯಂತ ಪ್ರತಿಭಟನೆ ಮಾಡುವುದಾಗಿ ಹೇಳಿದ್ದಾರೆ. ಅನಗತ್ಯವಾಗಿ ಜನರನ್ನು ಉದ್ರೇಕಿಸುವ ಪ್ರಯತ್ನ ಮಾಡಬಾರದು. ಇದೇ ರೀತಿ ಕರಾವಳಿ ಭಾಗವನ್ನು ಬಿಜೆಪಿಯವರು ಹಾಳು ಮಾಡಿದ್ದಾರೆ. ನನ್ನ ಅಧಿಕಾರ ಅವಧಿಯಲ್ಲಿ ಇಂತಹ ಘಟನೆಗಳಿಗೆ ಅವಕಾಶ ನೀಡುವುದಿಲ್ಲ. ಇಂತಹ ಎಷ್ಟೋ ಬಂದ್ ಗಳನ್ನು ನಾನು ನೋಡಿದ್ದೇನೆ. ಇವರ ಬೆದರಿಕೆಗೆ ಹೆದರುವುದಿಲ್ಲ.

Leave a Reply