ಬಿಜೆಪಿಯ ರೈತರ ಸಾಲಮನ್ನಾ ಒತ್ತಾಯದ ಹಿಂದೆ ಇರೋದು ಲೋಕಸಭೆ ಚುನಾವಣೆ ಲೆಕ್ಕಾಚಾರ!

ಡಿಜಿಟಲ್ ಕನ್ನಡ ಟೀಮ್:

ನಾವು ಅಧಿಕಾರಕ್ಕೆ ಬಂದರೆ ರೈತರ ಸಾಲವನ್ನು ಸಂಪೂರ್ಣ ಮನ್ನಾ ಮಾಡ್ತೇವೆ ಎಂದು ಚುನಾವಣಾ ಪ್ರಣಾಳಿಕೆಯಲ್ಲಿ ಜೆಡಿಎಸ್ ಹೇಳಿತ್ತು. ಸಂಪೂರ್ಣ ಬಹುಮತದಲ್ಲಿ ಅಧಿಕಾರಕ್ಕೆ ಬಂದರೆ ತನ್ನ ಚುನಾವಣಾ ಪ್ರಣಾಳಿಕೆ ಈಡೇರಿಸಬೇಕು ಸರಿ. ಆದರೆ ಇದೀಗ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದಿರೋದ್ರಿಂದ ಎರಡೂ ಪಕ್ಷಗಳ ಪ್ರಣಾಳಿಕೆ ಜಾರಿ ಮಾಡಬೇಕಿದೆ. ಯಾವುದೆ ಯೋಜನೆ ಜಾರಿಗೆ ತರುವ ಮುನ್ನ ಎರಡೂ ಪಕ್ಷದ ನಾಯಕರು ಕುಳಿತು ಸಾಧಕ ಬಾಧಕಗಳ ಬಗ್ಗೆ ಚರ್ಚೆ ನಡೆಸಬೇಕಿದೆ. ಆದ್ರೆ ಭಾರತೀಯ ಜನತಾ ಪಕ್ಷ ಕರ್ನಾಟಕ ಬಂದ್‌ಗೆ ಕರೆ ನೀಡಿರುವ ಹಿಂದೆ ರೈತರ ಮೇಲಿನ ಅಭಿಮಾನಕ್ಕಿಂತ ಬೇರೆಯದೇ ಯೋಜನೆ ಅಡಗಿದೆ.

ಸಾಲ ಮನ್ನಾ ವಿಚಾರವಾಗಿ ಈಗಾಲೇ ಸಾಕಷ್ಟು ಬಾರಿ ಪ್ರತಿಕ್ರಿಯೆ ಕೊಟ್ಟೊರುವ ಸಿಎಂ ಕುಮಾರಸ್ವಾಮಿ, ರೈತರ ಸಾಲ ಮನ್ನಾ ವಿಚಾರದಲ್ಲಿ ಯಾವುದೇ ಅನುಮಾನ ಬೇಡ ಎಂದಿದ್ದಾರೆ, ಜೊತೆಗೆ ಮೈತ್ರಿ ಸರ್ಕಾರ ಆಗಿರೋದ್ರಿಂದ ಒಂದು ವಾರ ಕಾಲಾವಕಾಶ ಕೊಡಿ, ಯಾವುದೇ ರೈತರು ಆತ್ಮಹತ್ಯೆ ಮಾಡಿಕೊಳ್ಳಬೇಡಿ ಎಂದು ಮನವಿ ಮಾಡಿದ್ದಾರೆ. ಸಾಲ ಮನ್ನಾ ವಿಚಾರವಾಗಿ ರೈತ ಸಂಘಟನೆಗಳು ನನಗೆ ಒತ್ತಡ ತರೊದು ಬೇಡ, ನನಗೂ ರೈತರ ಬಗ್ಗೆ ಕಾಳಜಿ ಇದೆ, ನಾನು ಸಿಎಂ ಆಗಿರೋದೆ ರೈತರ ಕಲ್ಯಾಣಕ್ಕಾಗಿ ಎಂದು ಪುನರುಚ್ಚಾರ ಮಾಡಿದ್ದಾರೆ. ಜೊತೆಗೆ ನಾನು ಕುರ್ಚಿಗೆ ಅಂಟಿಕೊಂಡು ಕೂರುವವನಲ್ಲ. ಬಿಜೆಪಿಯವರೇನು ನನ್ನ ರಾಜೀನಾಮೆ ಕೇಳೋದು? ಒಂದು ವೇಳೆ ನಾನು ರೈತರ ಸಾಲ ಮನ್ನಾ ಮಾಡಿಲ್ಲ ಅಂದ್ರೆ ನಾನೇ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಮನೆಗೆ ಹೋಗ್ತೇನೆ ಎಂದು ಸವಾಲು ಹಾಕಿದ್ದಾರೆ .

ಬಹುಮತ ಸಾಬೀತು ಮಾಡಲಾಗದೆ ಅಧಿಕಾರ ಕಳೆದುಕೊಂಡ ಬಳಿಕ ಯಡಿಯೂರಪ್ಪ ರೈತರ ಆತ್ಮಹತ್ಯೆಗೆ ಪ್ರಚೋದನೆ ನೀಡೋದು ಬೇಡ. ಪ್ರತಿಭಟನೆಯ ಪ್ರಚೋದನೆ ಕೊಟ್ಟು ಬಿಎಸ್‌ವೈ ಸಮಾಜ ಒಡೆಯುವ ಕೆಲಸವನ್ನು ಮಾಡ್ತಿದ್ದಾರೆ. ಎಂದು ಮಾಜಿ ಸಿಎಂ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಹಾಗಿದ್ರೆ ಬಿಜೆಪಿ ಬಂದ್ ಮಾಡುವ ಮೂಲಕ ಸರ್ಕಾರದ ವಿರುದ್ಧ ಪ್ರತಿಭಟನೆಗೆ ಮುಂದಾಗಿರೋದು ಯಾಕೆ ಅನ್ನೋ ಪ್ರಶ್ನೆ ಕಾಡುವುದು ಸಹಜ. ಮುಖ್ಯಮಂತ್ರಿ ಹೇಳುತ್ತಿರೋದ್ರಲ್ಲಿ ನ್ಯಾಯವಿದೆ. ಒಂದೇ ಪಕ್ಷ ಅಧಿಕಾರಕ್ಕೆ ಬಂದಾಗ ಯಾವುದೇ ಯೋಜನೆ ಘೋಷಣೆ ಮಾಡೋದು ತುಂಬಾ ಸುಲಭ. ಕಳೆದ ಬಾರಿ ಸಿಎಂ ಆದ ಕೂಡಲೇ ಸಿದ್ದರಾಮಯ್ಯ ಅನ್ನಭಾಗ್ಯ ಯೋಜನೆ ಘೋಷಣೆ ಮಾಡಿದ ರೀತಿ ಪ್ರಣಾಳಿಕೆ ಜಾರಿ ಮಾಡಬಹುದು. ಆದ್ರೆ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರ ಲೆಕ್ಕಾಚಾರ ಬೇರೆಯೇ ಇದೆ ಅಂತಿದ್ದಾರೆ ಕಮಲ ಪಕ್ಷದ ನಾಯಕರು.

ಲೋಕಸಭಾ ಚುನಾವಣೆಗೆ ಬಿಜೆಪಿಯನ್ನು ಹಣಿಗೊಳಿಸಬೇಕಾದ ಅನಿವಾರ್ಯತೆ ಬಿಎಸ್ ಯಡಿಯೂರಪ್ಪ ಮೇಲಿದೆ. ಸದ್ಯಕ್ಕೆ ಸರ್ಕಾರ ವಿರುದ್ಧ ಪ್ರಚಾರ ಮಾಡಿಕೊಂಡು ಮತ ಕೇಳುವ ಸ್ಥಿತಿಯಲ್ಲಿ ಇಲ್ಲ. ಅಥವಾ ಸರ್ಕಾರ ರಚನೆ ಮಾಡಿದ್ದ ನಮ್ಮಿಂದ ಅಧಿಕಾರವನ್ನು ಕಿತ್ತುಕೊಂಡರು ಎಂದು ಮತ ಕೇಳಲು ಸಾಧ್ಯವಿಲ್ಲ. ಯಾಕಂದ್ರೆ ಸರ್ಕಾರ ರಚನೆಗೆ ಬೇಕಾದ ಸರಳ ಬಹುಮತ ಬಿಜೆಪಿ ಪಕ್ಷಕ್ಕೆ ಸಿಕ್ಕಿಲ್ಲ. ಹೀಗಾಗಿ ರೈತರ ಹೆಸರಿನಲ್ಲಿ ಕರ್ನಾಟಕ ಬಂದ್ ಮಾಡಿದರೆ ಪಕ್ಷಕ್ಕೆ ಇರುವ ಬೆಂಬಲ ಹೇಗಿದೆ ಅನ್ನೋ ಲೆಕ್ಕಾಚಾರ ಸಿಕ್ಕಿಬಿಡುತ್ತದೆ. ಜೊತೆಗೆ ಸರ್ಕಾರ ಹೇಗಿದ್ದರೂ ಸಾಲ ಮನ್ನಾ ಮಾಡೋದು ಗ್ಯಾರಂಟಿ, ಆದ್ರೆ ಸರ್ಕಾರ ಸಾಲ ಮನ್ನಾ ಮಾಡಿದರೆ ಕೇವಲ ಜೆಡಿಎಸ್ ಕಾಂಗ್ರೆಸ್ ಪಕ್ಷಗಳು ಮಾತ್ರ ಕ್ರೆಡಿಟ್ ಪಡೆದುಕೊಳ್ಳಲಿದ್ದು, ಬಿಜೆಪಿಗೆ ರೈತಾಪಿ ವರ್ಗದ ಮತಗಳು ಮಿಸ್ ಆಗಬಹುದು. ಅದಕ್ಕಾಗಿ ಈಗಲೇ ಸಾಲ ಮನ್ನಾ ಮಾಡುವಂತೆ ಸರ್ಕಾರಕ್ಕೆ ಒತ್ತಾಯ ಮಾಡಿ ಬಂದ್ ಮಾಡಿಬಿಟ್ಟರೆ, ಚುನಾವಣೆಯಲ್ಲಿ ಜನರ ಮುಂದೆ ಭಾಷಣ ಮಾಡಲಾದರೂ ಅವಕಾಶ ಸಿಗಲಿದೆ ಅನ್ನೋ ಲೆಕ್ಕಾಚಾರ ಹಾಕಿದೆ. ನಾವು ಒತ್ತಡ ಹಾಕದಿದ್ದರೆ, ಮೈತ್ರಿ ಸರ್ಕಾರ ಎಂದು ಸಾಲ ಮನ್ನಾ ಮಾಡುತ್ತಿರಲಿಲ್ಲ, ನಮ್ಮ ಹೋರಾಟಕ್ಕೆ ಬೆದರಿ ಸಾಲ ಮನ್ನಾ ಮಾಡಿದೆ, ಇದರಲ್ಲಿ ನಮ್ಮ ಪಾತ್ರವೇ ಹೆಚ್ಚು ಎಂದು ಪ್ರಚಾರಕ್ಕೆ ಅಸ್ತ್ರ ಸಿದ್ಧಪಡಿಸಿಕೊಳ್ಳುವುದು ಬಿಜೆಪಿಯ ಸಮಾನ ಮನಸ್ಕ ನಾಯಕರ ಬಿಚ್ಚು ಮಾತು. ಆದ್ರೆ ಬಹಿರಂಗವಾಗಿ ಹೇಳುವುದಿಲ್ಲ ಅಷ್ಟೇ. ಆದ್ರೆ ಈಗಾಗಲೇ ಬಂದ್‌ಗೆ ಬೆಂಬಲವಿಲ್ಲ ಎಂದು ಹಲವು ಸಂಘಟನೆಗಳು ಹೇಳಿರೋದ್ರಿಂದ ಬಂದ್‌ ಆಗೋದು ಅನುಮಾನವಾಗಿದೆ. ಒತ್ತಾಯ ಪೂರ್ವಕವಾಗಿ ಬಂದ್ ಮಾಡಿದರೆ ಪೊಲೀಸ್ ಕೇಸ್ ಬೀಳೋದು ಗ್ಯಾರಂಟಿ.

Leave a Reply