ಕಾಂಗ್ರೆಸ್ ನಲ್ಲಿ ಬಗೆಹರಿಯುತ್ತಿಲ್ಲ ಖಾತೆ ಕ್ಯಾತೆ, ರಾಹುಲ್ ಸಭೆಯಲ್ಲಿ ಇತ್ಯರ್ಥವಾಗಲಿಲ್ಲ ಸಂಪುಟ ಸಮಸ್ಯೆ!

ಡಿಜಿಟಲ್ ಕನ್ನಡ ಟೀಮ್:

ರಾಜ್ಯದಲ್ಲಿ ಅಧಿಕಾರ ಹಿಡಿದಿರುವ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರ ಈಗಲೇ ಸಚಿವ ಸಂಪುಟವನ್ನು ಹೊಂದುವ ಯಾವುದೇ ಲಕ್ಷಣಗಳು ಗೋಚರಿಸುತ್ತಿಲ್ಲ. ಮಂತ್ರಿ ಸ್ಥಾನಕ್ಕಾಗಿ ಕಾಂಗ್ರೆಸ್ ನಾಯಕರು ನಡೆಯುತ್ತಿರುವ ಲಾಭಿಯನ್ನು ನಿಭಾಯಿಸುವಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ವಿಫಲರಾಗಿದ್ದು, ಅಮೆರಿಕಕ್ಕೆ ಹೊರಟಿದ್ದಾರೆ. ರಾಹುಲ್ ನೇತೃತ್ವದ ಸಭೆಯಲ್ಲಿ ಅಂತಿಮ ನಿರ್ಧಾರ ಸಾಧ್ಯವಾಗದ ಹಿನ್ನೆಲೆಯಲ್ಲಿ, ಇದರ ಜವಾಬ್ದಾರಿಯನ್ನು ರಾಜ್ಯ ಉಸ್ತುವಾರಿ ಹೊತ್ತಿರುವ ವೇಣುಗೋಪಾಲ್ ಅವರ ಮೇಲೆ ಬಿದ್ದಿದೆ. ಹೀಗಾಗಿ ವೇಣುಗೋಪಾಲ್ ಹಾಗೂ ಪರಮೇಶ್ವರ್ ನಡುವೆ ಚರ್ಚೆ ಮುಂದುವರಿದಿದೆ.

ಇತ್ತ ರಾಹುಲ್ ಗಾಂಧಿ ಅವರು ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನೂ ಮಾತುಕತೆಗೆ ಆಹ್ವಾನಿಸಿದ್ದು, ಶನಿವಾರ ಈ ಇಬ್ಬರೂ ನಾಯಕರು ಭೇಟಿಯಾಗುವ ಸಾಧ್ಯತೆ ಇದೆ. ಹೀಗಾಗಿ ಇನ್ನು ಒಂದು ವಾರಗಳ ಕಾಲ ರಾಜ್ಯ ಸಚಿವ ಸಂಪುಟ ನಿರ್ಧಾರವಾಗುವುದು ಅನುಮಾನವಾಗಿದೆ. ದೆಹಲಿಯಲ್ಲಿ ಪ್ರತಿಕ್ರಿಯೆ ನೀಡಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ಖಾತೆ ಹಂಚಿಕೆ ವಿಚಾರವಾಗಿ ಅಂತಿಮ ತೀರ್ಮಾನವನ್ನು ಕುಮಾರಸ್ವಾಮಿ ಹಾಗೂ ಪರಮೇಶ್ವರ್ ಅವರಿಗೆ ಬಿಡಲಾಗಿದೆ. ಅಗತ್ಯ ಬಿದ್ದರೆ ನಾನು ಕುಮಾರಸ್ವಾಮಿ ಜತೆಗೆ ಚರ್ಚಿಸುತ್ತೇನೆ’ ಎಂದಿದ್ದಾರೆ.
ಇನ್ನು ಕುಮಾರಸ್ವಾಮಿ ಐದು ವರ್ಷಗಳ ಮುಖ್ಯಮಂತ್ರಿಯೋ ಅಥವಾ 30 ತಿಂಗಳ ಮುಖ್ಯಮಂತ್ರಿಯೋ? ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಿದ್ದರಾಮಯ್ಯ, ‘ಮುಖ್ಯಮಂತ್ರಿ ಸ್ಥಾನದ ಅವಧಿ ಬಗ್ಗೆ ಚರ್ಚೆ ನಡೆದಿಲ್ಲ’ ಎಂದು ಉತ್ತರಿಸಿದ್ದಾರೆ.
ಒಟ್ಟಿನಲ್ಲಿ ಕಾಂಗ್ರೆಸ್ ನಾಯಕರ ಒತ್ತಡವನ್ನು ನಿಭಾಯಿಸುವ ಜವಾಬ್ದಾರಿ ವೇಣುಗೋಪಾಲ್ ಹಾಗೂ ಪರಮೇಶ್ವರ್ ಅವರ ಹೆಗಲ ಮೇಲಿದ್ದು, ಇವರ ನಡುವಿನ ಸಭೆ ಮಹತ್ವ ಪಡೆದುಕೊಂಡಿದೆ. ಇವರಿಬ್ಬರೂ ಅಂತಿಮ ತೀರ್ಮಾನ ತೆಗೆದುಕೊಳ್ಳಲು ಸಾಧ್ಯವಾಗದಿದ್ದರೆ, ಇನ್ನು ಒಂದು ವಾರ ಸಂಪುಟ ಸರ್ಕಸ್ ಮುಂದುವರಿಯಲಿದೆ.

Leave a Reply