ನೋಟು ಅಮಾನ್ಯದ ಲಾಭ ಪ್ರಶ್ನಿಸಿದ ನಿತೀಶ್ ಕುಮಾರ್! ನಾಲ್ಕು ವರ್ಷದ ಸಂಭ್ರಮದಲ್ಲಿ ಬಿಜೆಪಿಗೆ ಮುಳುವಾಗ್ತಾರ ಬಿಹಾರ ಸಿಎಂ!

The Chief Minister of Bihar, Shri Nitish Kumar calling on the Prime Minister, Shri Narendra Modi, in New Delhi on March 26, 2015.

ಡಿಜಿಟಲ್ ಕನ್ನಡ ಟೀಮ್:

‘ನಾನು ಕೂಡ ನೋಟು ಅಮಾನ್ಯ ನಿರ್ಧಾರವನ್ನು ಬೆಂಬಲಿಸಿದವ. ಆದರೆ ಕೆಲವು ಪ್ರಭಾವಿಗಳು ಹಣವನ್ನು ಒಂದೆಡೆಯಿಂದ ಮತ್ತೊಂದೆಡೆಗೆ ವರ್ಗಾಯಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ನೋಟು ಅಮಾನ್ಯ ನಿರ್ಧಾರದಿಂದ ಆಗಿರುವ ಪ್ರಯೋಜನಗಳೇನು?’ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಪ್ರಶ್ನಿಸಿದ್ದಾರೆ.
ಕೇವಲ ನೋಟು ಅಮಾನ್ಯ ನಿರ್ಧಾರ ಮಾತ್ರವಲ್, ಬ್ಯಾಂಕುಗಳಲ್ಲಿ ಸಾಲ ಮಾಡಿ ದೇಶ ಬಿಡುತ್ತಿರುವ ಉದ್ಯಮಿಗಳ ವಿಚಾರವಾಗಿಯೂ ಪ್ರಶ್ನೆ ಮಾಡಿದ್ದಾರೆ. ನಿತೀಶ್ ಕುಮಾರ್ ಅವರು ಕೇಂದ್ರ ಸರ್ಕಾರದ ವಿರುದ್ಧ ಮಾತನಾಡಿರುವ ಪ್ರಮುಖ ಅಂಶಗಳು ಹೀಗಿವೆ… ‘ನೋಟು ಅಮಾನ್ಯ ನಿರ್ಧಾರವನ್ನು ಹೇಗೆ ಬೆಂಬಲಿಸಿದ್ದೆನೋ ಅದೇ ರೀತಿ ಟೀಕಿಸುತ್ತೇನೆ. ಈ ನಿರ್ಧಾರ ಸರಿಯಾಗಿ ಜಾರಿಗೆ ತರದ ಪರಿಣಾಮ ಕೆಳ ವರ್ಗದ ಜನರು ಕಷ್ಟ ಪಡುವಂತಾಗಿದೆ. ನೋಟು ಅಮಾನ್ಯ ನಿರ್ಧಾರದಲ್ಲಿ ಕೆಲವರು ಕೇವಲ ಋಣಾತ್ಮಕ ಅಂಶವನ್ನು ಮಾತ್ರ ನೋಡುತ್ತಿದ್ದಾರೆ. ಆದರೆ ನಾನು ಸಕಾರಾತ್ಮಕ ಹಾಗೂ ಋಣಾತ್ಮಕ ಎರಡೂ ಅಂಶವನ್ನು ನೋಡುತ್ತಿದ್ದೇನೆ. ಹೀಗಾಗಿ ನೋಟು ಅಮಾನ್ಯ ನಿರ್ಧಾರದಿಂದ ಆಗಿರುವ ಪ್ರಯೋಜನವಾದರೂ ಏನು? ಇನ್ನು ಬ್ಯಾಂಕುಗಳು ಸಾಮಾನ್ಯ ಜನರಿಗೆ ನೀಡಿದ ಸಾಲವನ್ನು ಹಿಂಪಡೆಯುವಲ್ಲಿ ಸಾಕಷ್ಟು ಉತ್ಸುಕರಾಗಿರುತ್ತೀರಿ. ಆದರೆ ದೊಡ್ಡ ಪ್ರಮಾಣದ ಸಾಲ ಪಡೆದ ಪ್ರಭಾವಿ ವ್ಯಕ್ತಿಗಳು ನಾಪತ್ತೆಯಾಗುತ್ತಾರೆ? ಅಂತಹವರನ್ನು ನೀವು ಏನು ಮಾಡುತ್ತೀರಿ? ದುರಾದೃಷ್ಟಕರ ಸಂಗತಿ ಎಂದರೆ, ಈ ಬಗ್ಗೆ ಬ್ಯಾಂಕಿನ ಉನ್ನತ ಅಧಿಕಾರಿಗಳಿಗೆ ಮಾಹಿತಿಯೇ ಇರುವುದಿಲ್ಲ. ನಾನು ಈ ಎಲ್ಲ ಅಂಶಗಳ ಕುರಿತು ಚಿಂತಿಸುತ್ತಿದ್ದೇನೆಯೇ ಹೊರತು ಟೀಕಿಸುತ್ತಿಲ್ಲ.’
ನಿತೀಶ್ ಕುಮಾರ್ ಅವರು ತಾನು ಕೇಂದ್ರದ ವಿರುದ್ಧ ಟೀಕಿಸುತ್ತಿಲ್ಲ ಎಂದರೂ ಕೇಂದ್ರ ಸರ್ಕಾರದ ವೈಫಲ್ಯಗಳನ್ನು ಪ್ರಶ್ನಿಸಿರುವುದು ಉತ್ತಮ ಬೆಳವಣಿಗೆಯೇ. ಆದರೆ ಅವರು ಪ್ರಶ್ನಿಸುತ್ತಿರುವ ಸಂದರ್ಭ ಸಾಕಷ್ಟು ಚರ್ಚೆಗೆ ಹಾಗೂ ಕುತೂಹಲಕ್ಕೆ ದಾರಿ ಮಾಡಿಕೊಟ್ಟಿದೆ.
ಬಿಹಾರದಲ್ಲಿ ಕಾಂಗ್ರೆಸ್ ಹಾಗೂ ಆರ್ ಜೆಡಿ ಜತೆಗೆ ಮಹಾಮೈತ್ರಿ ಮಾಡಿಕೊಂಡು ಅಧಿಕಾರ ಏರಿದ್ದ ನಿತೀಶ್ ಕುಮಾರ್, ಎರಡು ವರ್ಷಗಳ ಹಿಂದಷ್ಟೇ ಮತ್ತೆ ಎನ್ ಡಿಎ ತೆಕ್ಕೆಗೆ ಮರಳಿದ್ದರು. ಅದರೊಂದಿಗೆ ಮಹಾಮೈತ್ರಿ ಎಂಬುದು ಕೇವಲ ನೀರಿನ ಮೇಲಿನ ಗುಳ್ಳೆಯಂತೆ ಎಂದು ಅನೇಕರು ಆಡಿಕೊಂಡಿದ್ದರು. ನಿತೀಶ್ ಕುಮಾರ್ ಮತ್ತೆ ಬಿಜೆಪಿಗೆ ಮರಳಿದ ನಂತರ ಇದೇ ಮೊದಲ ಬಾರಿಗೆ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿದ್ದಾರೆ. ಕೇಂದ್ರ ಸರ್ಕಾರಕ್ಕೆ ನಾಲ್ಕು ವರ್ಷಗಳು ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಬಿಜೆಪಿ ನಾಯಕರು ನೋಟು ಅಮಾನ್ಯ ನಿರ್ಧಾರವನ್ನು ತಮ್ಮ ದೊಡ್ಡ ಸಾಧನೆಯಾಗಿ ಬಿಂಬಿಸಿಕೊಳ್ಳುತ್ತಿರುವಾಗ ಅದರಿಂದ ಆಗಿರುವ ಪ್ರಯೋಜನ ಏನು? ಎಂದು ನಿತೀಶ್ ಕುಮಾರ್ ಪ್ರಶ್ನಿಸಿರುವುದು ಅಚ್ಚರಿ ಮೂಡಿಸಿದೆ.
ಇತ್ತ ಕರ್ನಾಟಕದ ಮುಖ್ಯಮಂತ್ರಿಯಾಗಿ ಕುಮಾರಸ್ವಾಮಿ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮದಲ್ಲಿಬಿಎಸ್ ಪಿ, ಎಸ್ ಪಿ, ಎನ್ ಸಿಪಿ, ಡಿಎಂಕೆ, ಟಿಎಂಸಿ, ಟಿಡಿಪಿ ಸೇರಿದಂತೆ ಅನೇಕ ಪ್ರದೇಶಿಕ ಪಕ್ಷಗಳು ಒಗ್ಗಟ್ಟಿನ ಮಂತ್ರ ಜಪಿಸಿ ಮುಂದಿನ ವರ್, ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ತೃತೀಯ ರಂಗದ ಅಥವಾ ಮಹಾ ಮೈತ್ರಿಗೆ ಜೀವ ತುಂಬುವ ಪ್ರಯತ್ನ ನೀಡುತ್ತಿರುವುದು ಸ್ಪಷ್ಟವಾಗಿತ್ತು. ಇಂತಹ ಸಂದರ್ಭದಲ್ಲಿ ನಿತೀಶ್ ಕುಮಾರ್ ಅವರ ಈ ನಡೆ ಸಾಕಷ್ಟು ಕುತೂಹಲ ಮೂಡಿಸಿದೆ.

Leave a Reply