ರಾಜರಾಜೇಶ್ವರಿ ನಗರ ಚುನಾವಣೆ: ಮೈತ್ರಿ ಸರಕಾರಕ್ಕೆ ಆಗುತ್ತಾ ಮೊದಲ ಮುಖಭಂಗ?

ಡಿಜಿಟಲ್ ಕನ್ನಡ ಟೀಮ್:
ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರ ಈ ಚುನಾವಣೆಯಲ್ಲಿ ಭಾರೀ ಸುದ್ದಿಯಾದ ಕ್ಷೇತ್ರಗಳಲ್ಲಿ ಒಂದು. 10 ಸಾವಿರ ವೋಟರ್ ಐಡಿಗಳು ಒಂದೇ ಸ್ಥಳದಲ್ಲಿ ಸಿಕ್ಕಿದ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ತಾತ್ಕಾಲಿಕವಾಗಿ ಚುನಾವಣೆಯನ್ನು ಮುಂದೂಡುವ ನಿರ್ಧಾರ ಮಾಡಿತ್ತು. ಇದೇ 28 ರಂದು ಚುನಾವಣಾ ಆಯೋಗ ನಿರ್ಧಾರ ಮಾಡಿದ್ದು, ಮೂರೂ ಪಕ್ಷಗಳು ಗೆಲ್ಲುವ ಕಸರತ್ತು ನಡೆಸಿವೆ. ರಾಜ್ಯದಲ್ಲಿ ಯಾವ ಪಕ್ಷಕ್ಕೂ ಬಹುಮತ ಬಾರದೇ ಇರುವ ಹಿನ್ನೆಲೆಯಲ್ಲಿ, ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷಗಳು ಮೈತ್ರಿ ಸರ್ಕಾರ ರಚನೆ ಮಾಡಿವೆ. ಆದ್ರೆ ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿ ಇವೆರಡೂ ಪಕ್ಷಗಳು ಹೊಂದಾಣಿಕೆ ಮಾಡಿಕೊಂಡು ಸರ್ಕಾರ ಬಲಪಡಿಸುವ ಕೆಲಸ ಮಾಡುತ್ತವೆ ಎಂದುಕೊಂಡಿದ್ದ ಕಾರ್ಯಕರ್ತರ ಆಸೆ ಹುಸಿಯಾಗಿದೆ. ವಿಜಯ್ ಕುಮಾರ್ ನಿಧನದಿಂದ ಜಯನಗರ ಕ್ಷೇತ್ರದಲ್ಲೂ ಚುನಾವಣೆ ನಡೆದಿಲ್ಲ. ಹಾಗಾಗಿ ಜಯನಗರ ಕ್ಷೇತ್ರವನ್ನು ಕಾಂಗ್ರೆಸ್ ಪಕ್ಷಕ್ಕೆ ಬಿಟ್ಟುಕೊಡ್ತೇವೆ, ರಾಜರಾಜೇಶ್ವರಿ ಕ್ಷೇತ್ರವನ್ನು ತನಗೆ ಬಿಟ್ಟುಕೊಡಿ ಎಂದು ಜೆಡಿಎಸ್ ಪಕ್ಷ ಸಂಧಾನ ಸೂತ್ರ ಮುಂದಿಟ್ಟಿತ್ತು. ಜೊತೆಗೆ ಹಾಲಿ ಶಾಸಕರಾಗಿದ್ದ ಮುನಿರತ್ನ ಅವರನ್ನು ಪರಿಷತ್ ಸದಸ್ಯರನ್ನಾಗಿ ಮಾಡಿಕೊಳ್ಳೋಣ ಎನ್ನುವ ಪ್ರಸ್ತಾವನೆಯೂ ಬಂದಿತ್ತು. ಆದ್ರೆ ಡಿಕೆಶಿ ಬ್ರದರ್ ಜೊತೆ ಲಾಬಿ ನಡೆಸಿದ ಮುನಿರತ್ನ ಕಣದಿಂದ ಹಿಂದೆ ಸರಿಯಲು ನಿರಾಕರಿಸಿದರು. ಹೀಗಾಗಿ ಶನಿವಾರ ಬಹಿರಂಗ ಪ್ರಚಾರದ ಕಡೇ ದಿನ ಮೂರೂ ಪಕ್ಷಗಳ ನಾಯಕರು ಭರ್ಜರಿ ಪ್ರಚಾರ ನಡೆಸಿದ್ದು, ತಮ್ಮದೇ ಪಕ್ಷದ ಅಭ್ಯರ್ಥಿ ಗೆಲ್ಲಿಸುವಂತೆ ಮತದಾರ ಪ್ರಭುಗಳನ್ನು ಬೇಡಿಕೊಂಡಿದ್ದಾರೆ.
ಇಂದು ಮನೆ ಮನೆ ಪ್ರಚಾರ ಮಾತ್ರ ನಡೆಯಲಿದ್ದು, ಇಂದು ಕಾಂಗ್ರೆಸ್ ಅಥವಾ ಜೆಡಿಎಸ್ ಅಭ್ಯರ್ಥಿ ಸೈಲೆಂಟ್ ಆದರೆ ಮಾತ್ರ ಸರ್ಕಾರ ತನ್ನ ಮೈತ್ರಿ ಪಕ್ಷದ ಅಭ್ಯರ್ಥಿಯಾಗಿ ಒಬ್ಬರನ್ನು ಗೆಲ್ಲಿಸಿಕೊಂಬಹುದು. ಒಂದು ವೇಳೆ ಇಬ್ಬರೂ ಅಭ್ಯರ್ಥಿಗಳು ಕಣದಲ್ಲಿ ಉಳಿದುಕೊಂಡ್ರೆ ಬಿಜೆಪಿ ಅಭ್ಯರ್ಥಿ ನಿರಾಯಾಸವಾಗಿ ಗೆಲುವು ಸಾಧಿಸಲಿದ್ದಾರೆ ಅನ್ನೋ ಮಾತುಗಳೂ ಕೇಳಿ ಬರುತ್ತಿವೆ. ಒಂದು ವೇಳೆ ಬಿಜೆಪಿ ಅಭ್ಯರ್ಥಿ ಏನಾದರೂ ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ರೆ, ಬಿಜೆಪಿ ನಾಯಕರ ಬಾಯಿಗೆ ಮತ್ತೊಂದು ಅಸ್ತ್ರ ಸಿಕ್ಕಂತೆ ಆಗುತ್ತದೆ. ಈಗಾಗಲೇ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷವನ್ನು ರಾಜ್ಯದ ಜನತೆ ತಿರಸ್ಕರಿಸಿದ್ದಾರೆ ಎನ್ನುವ ಬಿಜೆಪಿ ನಾಯಕರು ಜೆಡಿಎಸ್ ಹಾಗೂ ಕಾಂಗ್ರೆಸ್ ಅಕ್ರಮ ಮೈತ್ರಿಯನ್ನೂ ಜನರು ತಿರಸ್ಕರಿಸಿದ್ದಾರೆ. ಒಂದು ವೇಳೆ ಇವರಿಬ್ಬರ ಮೈತ್ರಿಯನ್ನು ಜನ ಒಪ್ಪುವುದೇ ಆಗಿದ್ದರೆ, ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿ ಅವರ ಅಭ್ಯರ್ಥಿ ಗೆಲುವು ಸಾಧಿಸಬೇಕಿತ್ತು ಎಂದು ಹೇಳುವುದರಲ್ಲಿ ಹಿಂದೆ ಬೀಳುವುದಿಲ್ಲ ಎನಿಸುತ್ತದೆ.
ಇಂದು ದೆಹಲಿಗೆ ತೆರಳಲಿರುವ ಸಿಎಂ ಕುಮಾರಸ್ವಾಮಿ, ರಾಹುಲ್ ಗಾಂಧಿ ಜೊತೆ ಸಂಪುಟ ವಿಸ್ತರಣೆ ಬಗ್ಗೆ ಚರ್ಚೆ ನಡೆಸಲಿದ್ದು, ರಾಜರಾಜೇಶ್ವರಿ ನಗರ ಕ್ಷೇತ್ರದ ಬಿಕ್ಕಟ್ಟಿನ ಬಗ್ಗೆಗೂ ಚರ್ಚೆ ನಡೆಸಲಿದ್ದಾರೆ. ಒಂದು ವೇಳೆ ಹೈಕಮಾಂಡ್ ಆದೇಶ ಕೊಟ್ಟರೆ ಇಂದು ಕಾಂಗ್ರೆಸ್ ಅಭ್ಯರ್ಥಿ ಅಖಾಡದಿಂದ ದೂರ ಉಳಿಯಲಿದ್ದಾರೆ. ಆಗ ಜೆಡಿಎಸ್ ಅಭ್ಯರ್ಥಿ ಗೆಲುವು ಸಾಧಿಸಲಿದ್ದಾರೆ. ಈ ನಡುವೆ ಮುನಿರತ್ನ ವಿರುದ್ಧ ಬಿಜೆಪಿ ನಾಯಕ ಸಲ್ಲಿಸಿದ್ದ ದೂರಿನ ಆಧಾರದಲ್ಲಿ ಎಫ್‌ಐಆರ್ ಹಾಕಲು ಕೋರ್ಟ್ ಸೂಚನೆ ಕೊಟ್ಟಿದ್ದು, ಬಂಧನ ಭೀತಿಯೂ ಎದುರಾಗಿದೆ. ಇದೇ ವೇಳೆ ನಿನ್ನೆ ಪ್ರಚಾರದಲ್ಲಿ ಪರೋಕ್ಷ ವಾಗ್ದಾಳಿ ನಡೆಸಿರುವ ಮಾಜಿ ಪ್ರಧಾನಿ ದೇವೇಗೌಡರು, ಇಲ್ಲಿ ಒಬ್ಬ ಅಭ್ಯರ್ಥಿ ಅಕ್ರಮ ಮಾಡಿದ್ರು ಅನ್ನೋ ಕಾರಣಕ್ಕೆ ಮತದಾನ ಮುಂದೂಡಿಕೆ ಆಗಿತ್ತು. ಆದ್ರೆ ಅವರ ಮೇಲೆ ಚುನಾವಣಾ ಆಯೋದಲ್ಲಿ ದೂರಿದೆ, ಆ ಪ್ರಕರಣದಲ್ಲಿ ಏನಾಗುತ್ತೋ ನೋಡೋಣ. ನಾನು ಮಾತ್ರ ಯಾರ ಬಗ್ಗೆಯೂ ಆರೋಪ ಮಾಡಲ್ಲ, ಆದರೆ ನಮ್ಮ ಪಕ್ಷದ ಅಭ್ಯರ್ಥಿಯಾಗಿ ರಾಮಚಂದ್ರ ಇದ್ದಾರೆ ಅವರನ್ನು ಗೆಲ್ಲಿಸಿ ಎಂದು ಮನವಿ ಮಾಡಿದ್ದಾರೆ. ಒಂದು ವೇಳೆ ಇದ್ಯಾವುದೂ ಸಾಧ್ಯವಾಗದೇ ಹೋದರೆ ಮೈತ್ರಿ ಸರ್ಕಾರಕ್ಕೆ ಮುಖಭಂಗ ಆಗುವುದರಲ್ಲಿ ಅನುಮಾನವಿಲ್ಲ.

Leave a Reply