ಮಗ್ಗಲು ಬದಲಿಸೋ ಅನುಕೂಲಸಿಂಧು ರಾಜಕಾರಣ!

ರಾಜಕೀಯ ಎಂಬುದು ಮೇಲ್ನೋಟಕ್ಕೆ ಕಾಣುವಷ್ಟು ಸರಳ, ಸುಲಭ, ಸಾದಾ-ಸೀದಾ ಆಗಿರುವುದಿಲ್ಲ. ಅದು ಬಗೆದಷ್ಟು ಆಳವಾಗಿರುತ್ತದೆ, ಕಾಣದಷ್ಟು ನಿಗೂಢವಾಗಿರುತ್ತದೆ. ಬಿಡಿಸುತ್ತಾ ಹೋದಷ್ಟು ಜಟಿಲವಾಗಿರುತ್ತದೆ, ಸುಕ್ಕುಗಳ ಸುಳಿಯಾಗಿರುತ್ತದೆ. ಒಮ್ಮೆ ತೆರೆದುಕೊಂಡ ನಂತರ ಅದರೊಳಗೆ ಅಡಗಿದ್ದ ಗಾಢ ನಿಗೂಢತೆ ಕಂಡು ಜನ ನಿಬ್ಬೆರ ಗಾಗುತ್ತಾರೆ.

ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ಸರಕಾರದ ಚುಕ್ಕಾಣಿ ಹಿಡಿದಿರುವ ಮುಖ್ಯಮಂತ್ರಿ ಕುಮಾರಸ್ವಾಮಿ, ವಿಧಾನಸಭೆಯಲ್ಲಿ ವಿಶ್ವಾಸ ಮತ ಯಾಚನೆ ಸಂದರ್ಭದಲ್ಲಿ, ಅವರು ಮತ್ತು ಪ್ರತಿಪಕ್ಷ ನಾಯಕ ಬಿ.ಎಸ್. ಯಡಿಯೂರಪ್ಪ ನಡುವೆ ಆದ ‘ಜಗಳ್ಬಂದಿ’ ಜನ ಬೆಚ್ಚಿಬೀಳುವ ಅನೇಕ ಸಂಗತಿಗಳನ್ನು ತೆರೆದಿಟ್ಟಿದೆ. ಜನಸಾಮಾನ್ಯರಿಗೆ ಕಾಣಿಸುವ ರಾಜಕೀಯ ಹೇಗಿರುತ್ತದೆ? ಒಳಗೊಳಗೆ ನಡೆಯುವ ರಾಜಕೀಯ ಅದರ ಹಿಂದಿರುವ ಮರ್ಮ ಏನು? ಅಧಿಕಾರ ಹಿಡಿಯಲು ಯಾರು ಏನೆಲ್ಲ ಮಾಡುತ್ತಾರೆ? ರಾಜಕೀಯ ತಿರುವುಗಳಿಗೆ ಇವು ಹೇಗೆ ಕಾರಣವಾಗುತ್ತವೆ? ಅಧಿಕಾರ ಹಿಡಿದ ನಂತರ ಯಾರೆಲ್ಲ ಹೇಗೆ ಪರಿವರ್ತನೆ ಆಗುತ್ತಾರೆ? ಸತ್ಯ ಎಷ್ಟು ಕಹಿಯಾಗಿರುತ್ತದೆ? ಇದನ್ನು ಅರಗಿಸಿ ಕೊಳ್ಳಬೇಕಾದ ಜನರ ಹೃದಯ ಎಷ್ಟು ಭಾರವಾಗುತ್ತದೆ ಎಂಬುದನ್ನು ಈ ವಾಕ್ಸಮರ ಸಂದರ್ಭ ಅನಾವರಣಗೊಳಿಸಿ ಅನೇಕ ವಿಚಾರ ಗಳನ್ನು ಶ್ರುತಪಡಿಸಿದೆ.

ನಿಜ, ಕುಮಾರಸ್ವಾಮಿ ಅವರು ಈಗಾಗಲೇ ಹೇಳಿರುವಂತೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ಎಂಬುದು ಸಾಂದರ್ಭಿಕ ಶಿಶು. ಮುಖ್ಯಮಂತ್ರಿ ಪಟ್ಟ ದೊರೆತದ್ದೂ ಸಾಂದರ್ಭಿಕ ಕೊಡುಗೆಯೇ. ಅದೇ ರೀತಿ ಯಡಿಯೂರಪ್ಪನವರು ಸಿಎಂ ಆಗಿ ಪ್ರಮಾಣ ಸ್ವೀಕರಿಸಿದ ಎರಡೇ ದಿನದಲ್ಲಿ ಪ್ರತಿಪಕ್ಷ ನಾಯಕನ ಸ್ಥಾನದಲ್ಲಿ ಕೂರಬೇಕಾಗಿ ಬಂದದ್ದು ಕೂಡ ಸಾಂದರ್ಭಿಕ ಕರ್ಮವೇ. ‘ಮತ್ತೊಮ್ಮೆ ಮುಖ್ಯಮಂತ್ರಿ’ ಕನಸು ಕಂಡ ಸಿದ್ದರಾಮಯ್ಯನವರ ಬಯಕೆ ಕಾಂಗ್ರೆಸ್ ಶಾಸಕಾಂಗ ನಾಯಕನ ಸ್ಥಾನಕ್ಕೆ ಸೀಮಿತ ವಾದದ್ದು ಸಹ ಸಾಂದರ್ಭಿಕ ಪಿತೂರಿಯಿಂದಾಗಿಯೇ.

ರಾಜಕೀಯದಲ್ಲಿ ಈ ‘ಸಂದರ್ಭದ ಆಟ’ ಹೇಗೆಲ್ಲ ತಿರುವು ಪಡೆದುಕೊಳ್ಳುತ್ತದೆ ಎಂಬುದಕ್ಕೆ ಇವು ಸಂಕೇತ ಮಾತ್ರ. ಏಕೆಂದರೆ ರಾಜಕೀಯ ಸಾಂದರ್ಭಿಕ ಸ್ಥಿತಿ, ಸುಸ್ಥಿತಿ, ದುಸ್ಥಿತಿಯ ಮೇಲೆಯೇ. ಹೀಗಾಗಿ ಇವತ್ತು ಬಾಯವರೆಗೂ ಬಂದ ಲಡ್ಡು ಕೈಜಾರಿ ಕೆಸರಿಗೆ ಬಿದ್ದ ಸ್ಥಿತಿಯಲ್ಲಿರುವ ಯಡಿಯೂರಪ್ಪನವರು ತಮ್ಮ ದುಸ್ಥಿತಿಯನ್ನು ತಾವೇ ಹಳಿದುಕೊಂಡು ಸಂಕಟಪಡುತ್ತಿದ್ದಾರೆ. ಅದೇ ಕಾಲಕ್ಕೆ ತಮ್ಮ ದುಸ್ಥಿತಿ ಕುಮಾರಸ್ವಾಮಿಯವರ ಸುಸ್ಥಿತಿಯಾಗಿ ಪರಿವರ್ತನೆಗೊಂಡ ಹತಾಶೆ ಬೇರೆ ಅವರನ್ನು ಕಾಡುತ್ತಿದೆ. ಹೀಗಾಗಿ ಮಾಜಿ ಪ್ರಧಾನಿ ದೇವೇಗೌಡರು ಹಾಗೂ ಅವರ ಮಕ್ಕಳ ನಿಂದನೆಗೆ ಇಳಿದಿದ್ದಾರೆ. ಹಾಗೆ ‘ಅಪ್ಪ-ಮಕ್ಕಳ’ ನಿಂದನೆಗೆ ಇಳಿಯುವ ಭರದಲ್ಲಿ ಕವುಚಿಕೊಂಡಿದ್ದ ರಾಜಕೀಯ ಒಳಸುಳಿಗಳನ್ನು ತೆರೆದಿಟ್ಟು ಬಟಾಬಯಲು ಮಾಡಿದ್ದಾರೆ, ಅದರ ಜತೆಗೆ ತಮ್ಮನ್ನೂ! ಅವರ ಆವೇಶದ ಮಾತುಗಳು ಚಪ್ಪಾಳೆ ಗಿಟ್ಟಿಸುತ್ತಾ, ರಾಜಕೀಯ ಯುಕ್ತಿಯನ್ನು ನುಂಗಿ ನೀರು ಕುಡಿದಿವೆ.

ಹಿಂದೆ 2006 ರಲ್ಲಿ ಇದೇ ಯಡಿಯೂರಪ್ಪನವರು ಜೆಡಿಎಸ್ ಜತೆ ಮೈತ್ರಿ ಮಾಡಿಕೊಂಡು ಉಪಮುಖ್ಯಮಂತ್ರಿಯಾದಾಗ ಅಂದಿನ ಮುಖ್ಯಮಂತ್ರಿ ಧರ್ಮಸಿಂಗ್ ಅವರೂ ಇವತ್ತಿನ ಯಡಿಯೂರಪ್ಪನವರ ಸ್ಥಿತಿ ಅನುಭವಿಸುತ್ತಿದ್ದರು. ಯಡಿಯೂರಪ್ಪನವರ ಪ್ರಕಾರ ಕುಮಾರಸ್ವಾಮಿ, ಧರ್ಮಸಿಂಗ್ ಅವರಿಗೆ ಕೈ ಕೊಟ್ಟು, ಅವರು ಅದೇ ಕೊರಗಿನಲ್ಲಿ ಸಾಯುವಂತೆ ಮಾಡಿದರು. ಹಾಗಾದರೆ ಅದೇ ಕುಮಾರಸ್ವಾಮಿ ಸೇರಿಕೊಂಡು ಆಗ ಸರಕಾರ ಮಾಡಿದ ಯಡಿಯೂರಪ್ಪನವರು ಈ ಪಾಪಕರ್ಮದ ಭಾಗಿದಾರರಲ್ಲವೇ? ಅವರು ಜೆಡಿಎಸ್ ಜತೆ ಹೋಗದಿದ್ದರೆ ಧರ್ಮಸಿಂಗ್ ಅವರನ್ನು ಮತ್ತಷ್ಟು ವರ್ಷ ಬದುಕಿಸಿದ ಪುಣ್ಯ ಅವರಿಗೇ ಬರುತ್ತಿತ್ತಲ್ಲವೇ? ಅದನ್ನೇಕೆ ಅವರು ಮಾಡಲಿಲ್ಲ? ಜೆಡಿಎಸ್ ಜತೆ ಹೋಗಿ ಸರಕಾರ ಮಾಡಿ ಎಂದು ಕರ್ನಾಟಕದ ಜನ ಅವರ ಕೈಕಾಲು ಹಿಡಿದುಕೊಂಡಿದ್ದರೇ? ನೀವು ಸರಕಾರ ಮಾಡದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಹೆದರಿಸಿದ್ದರೇ? ಅವತ್ತು ಅಧಿಕಾರ ಬೇಕಾಗಿತ್ತು, ಕುಮಾರಸ್ವಾಮಿ ಹೆಗಲ ಮೇಲೆ ಕೈ ಹಾಕಿದರು.

ಭಾರತದಲ್ಲಿ ಬಿಜೆಪಿಗೆ ಮೊದಲ ಬಾರಿ ಅಧಿಕಾರ ತಂದುಕೊಟ್ಟ ಕಿರೀಟ ತಲೆಗೇರಿಸಿಕೊಂಡರು. ಎಲ್ಲಕ್ಕಿಂತ ಮಿಗಿಲಾಗಿ ಕುಮಾರ ಸ್ವಾಮಿ ಸದನದಲ್ಲಿಯೇ ಅರುಹಿದ ಪ್ರಕಾರ ‘ನನ್ನನ್ನು ಬರೀ ಮಂತ್ರಿ ಮಾಡಿ ಸಾಕು, ಜೆಡಿಎಸ್‌ಗೆ ಬರುತ್ತೇನೆ’ ಎಂದು ಯಡಿ ಯೂರಪ್ಪನವರು ಗೋಗರೆದಿದ್ದರಂತೆ. ಆಗ ಬಿಜೆಪಿಯಲ್ಲಿನ ತಮ್ಮ ವಿರೋಧಿ ತಂಡ ಕೊಡುತ್ತಿದ್ದ ಕಾಟ ಒಂದು ಕಡೆ, ಅಧಿಕಾರದ ಹಪಾಹಪಿ ಮತ್ತೊಂದು ಕಡೆ, ಇವರೆಡೂ ಅವರ ಪಕ್ಷನಿಷ್ಠೆಯನ್ನೇ ಆಪೋಶನ ತೆಗೆದುಕೊಂಡಿತ್ತು. ಅಂಥ ಯಡಿಯೂರಪ್ಪನವರು ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ಅಪವಿತ್ರ ಎಂದು ಹೇಳುವುದು ಮಟ್ಟಿಗೆ ಸರಿ? ಅವರಿಗೊಂದು ನ್ಯಾಯ, ಬೇರೆಯವರಿಗೊಂದು ನ್ಯಾಯವೇ? ಪಾಪ, ಅಧಿಕಾರ ಕೈಜಾರಿ ಹೋಗಿರುವುದರಿಂದ ಅವರಿಗಾಗಿರುವ ಸಂಕಟ ಯಾರಿಗೂ ಅರ್ಥವಾಗದ್ದೇನೂ ಅಲ್ಲ.

ಯಡಿಯೂರಪ್ಪನವರ ಅಧಿಕಾರವಿಹಿತ ಸಂಕಟ ಕಾಲಗರ್ಭದಲ್ಲಿ ಹುದುಗಿದ್ದ ಅನೇಕ ಸತ್ಯ ಸಂಗತಿಗಳನ್ನು ಹೊರಹಾಕಿದೆ. ಅದು ಒಳಿತಿನದೋ, ಕೆಡುಕಿನದೋ ಅಂತೂ ಒಂದಷ್ಟು ವಿಚಾರಗಳು ಬೆಳಕು ಕಂಡಿವೆ. ಆಗ ಕುಮಾರಸ್ವಾಮಿ-ಯಡಿಯೂರಪ್ಪವರು ಮೈತ್ರಿ ಮಾಡಿಕೊಂಡಾಗ ದೇವೇಗೌಡರು ತಮ್ಮ ರಾಜಕೀಯ ತತ್ವ-ಸಿದ್ಧಾಂತಗಳಿಗೆ ಬೆಂಕಿ ಬಿದ್ದಂತೆ ಆಡಿದ್ದರು. ಕುಮಾರಸ್ವಾಮಿ ತಮ್ಮ ಪಾಲಿಗೆ ಇಲ್ಲ ಎನ್ನುವಷ್ಟರಮಟ್ಟಿಗೆ ರೋದಿಸಿದ್ದರು. ಯಡಿಯೂರಪ್ಪನವರು ಸದನದಲ್ಲಿ ಬಿಚ್ಚಿಟ್ಟ ಮಾಹಿತಿ ಪ್ರಕಾರ ಕತೆ ಬೇರೆಯೇ ಇದೆ. ಆಗ ಡಿಸಿಎಂ ಯಡಿಯೂರಪ್ಪನವರು ರೈತರ ಸಾಲದ ಮೇಲಿನ ಶೇಕಡಾ 4 ರಷ್ಟು ಬಡ್ಡಿ ಮನ್ನಾ ಮಾಡಲು ಮುಂದಾದಾಗ ಗೌಡರು ಅವರನ್ನು ತಮ್ಮ ಮನೆಗೆ ಕರೆಯಿಸಿಕೊಂಡು ಅವರಿಗೆ ಈ ಅಧಿಕಾರ ಕೊಟ್ಟವರು ಯಾರು ಎಂದು ಪ್ರಶ್ನಿಸಿ ದ್ದಾರೆ.

ಅಲ್ಲದೇ ಮುಖ್ಯಮಂತ್ರಿ ಪದವಿ ಹಸ್ತಾಂತರ ಸಂದರ್ಭದಲ್ಲಿ ಅನೇಕ ಷರತ್ತುಗಳನ್ನು ಹಾಕಿ ಸರಕಾರ ಉರುಳಿ ಹೋಗುವಂತೆ ಮಾಡಿದ್ದಾರೆ. ಅಂದರೆ ದೇವೇಗೌಡರಿಗೆ ನಿಜವಾಗಿಯೂ ಜೆಡಿಎಸ್-ಬಿಜೆಪಿ ಸರಕಾರದ ಬಗ್ಗೆ ಅಸಡ್ಡೆ, ಅಸಹ್ಯ ಇದ್ದಿದ್ದರೆ ಅವರು ಸರಕಾರದ ಚಟುವಟಿಕೆಯಲ್ಲಿ ಮೂಗು ತೂರಿಸುತ್ತಿರಲಿಲ್ಲ. ಯಡಿಯೂರಪ್ಪನವರನ್ನು ಕರೆದು ಪ್ರಶ್ನೆ ಮಾಡುತ್ತಿರಲಿಲ್ಲ. ಸಿಎಂ ಪದವಿ ಹಸ್ತಾಂತರಕ್ಕೂ ಷರತ್ತುಗಳನ್ನು ಹಾಕುತ್ತಿರಲಿಲ್ಲ. ಅಂದರೆ ಇದರರ್ಥ, ಗೌಡರ ಮೂಗಿನ ನೇರದಲ್ಲೇ ಬಿಜೆಪಿ-ಜೆಡಿಎಸ್ ಮೈತ್ರಿ ಸರಕಾರ ನಡೆಯುತ್ತಿತ್ತು! ಅವರಿಗೆ ಈ ಸರಕಾರದ ಬಗ್ಗೆ ಅಸಮಾಧಾನ ಇತ್ತು ಎಂಬುದೆಲ್ಲ ಬರೀ ತೋರಿಕೆಯಷ್ಟೇ.

ಇದೇ ಸಂದರ್ಭದಲ್ಲಿ ಯಡಿಯೂರಪ್ಪನವರು ಮತ್ತೊಂದು ವಿಚಾರ ಒಪ್ಪಿಕೊಂಡಿದ್ದಾರೆ. ಬಿಜೆಪಿಯ 104 ಸ್ಥಾನಗಳನ್ನು ಸರಳ ಬಹುಮತಕ್ಕೆ ಹಿಗ್ಗಿಸಿಕೊಳ್ಳಲು ಒಂದಷ್ಟು ಕಾಂಗ್ರೆಸ್ ಶಾಸಕರನ್ನು ಸಂಪರ್ಕ ಮಾಡಿದ್ದು ಸತ್ಯ, ತಮ್ಮ ಮತ್ತು ಡಿ.ಕೆ. ಶಿವಕುಮಾರ್ ನಡುವೆ ನಡೆದ ಮಾತುಕತೆ ವಿವರವನ್ನು ತಾವಿಲ್ಲಿ ಬಹಿರಂಗಪಡಿಸುವುದಿಲ್ಲ ಎಂದು. 104 ಸ್ಥಾನ ಹಿಗ್ಗಬೇಕಾದರೆ ಕುದುರೆ ವ್ಯಾಪಾರ ನಡೆಯಲೇಬೇಕು. ಇದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಹಾಗೆಂದು ಯಾರೂ ಅದನ್ನು ಒಪ್ಪಿಕೊಳ್ಳುವುದಿಲ್ಲ. ತಮ್ಮ ಪಕ್ಷದ ತತ್ವ-ಸಿದ್ಧಾಂತದಲ್ಲಿ ನಂಬಿಕೆ ಇಟ್ಟು ಅವರಾಗಿಯೇ ಬಂದರು ಎಂದು ‘ಪಕ್ಷಾಂತರ’ ಮಾಡಿಸಿದವರು ಬೂರಿ ಬಿಡುತ್ತಾರೆ. ಪಕ್ಷಾಂತರ ಮಾಡಿದವರೂ ಇದೇ ಶೀಲು ಒತ್ತುತ್ತಾರೆ. ಆದರೆ ಮಾತ್ರ ಹಾಗಲ್ಲ.

ಅನ್ಯಪಕ್ಷದವರನ್ನು ತಾವು ಸಂಪರ್ಕಿಸಿದ್ದಾಗಿ ಸದನದ ಒಳಗೇ ಒಪ್ಪಿಕೊಂಡಿದ್ದಾರೆ. ತಪ್ಪು ಮಾಡಿ ಸತ್ಯ ಹೇಳಿದರೆ ಆ ತಪ್ಪು ಸರಿ ಹೋಗುವುದಿಲ್ಲ ಎಂಬುದು ಬೇರೆ ಮಾತು. ಆದರೆ ಮಾಡಿದ ತಪ್ಪು ಒಪ್ಪಿಕೊಳ್ಳುವ ಧೈರ್ಯ ತೋರಿದ್ದು ಯಡಿಯೂರಪ್ಪನವರ ಭಂಡ ಧೈರ್ಯಕ್ಕೊಂದು ಸಾಕ್ಷಿ. ಅಂದರೆ ಅವಕಾಶವಾದದ ರಾಜಕೀಯದಲ್ಲಿ ಎಲ್ಲವೂ ನಡೆಯುತ್ತದೆ. ಎಲ್ಲರೂ ಅದರ ಪಾಲುದಾರರೇ. ಒಬ್ಬರು ಹೆಚ್ಚು, ಮತ್ತೊಬ್ಬರು ಕಡಿಮೆ ಎಂಬುದು ಇಲ್ಲವೇ ಇಲ್ಲ. ಅಧಿಕಾರ ಸಿಗುತ್ತದೆ ಎಂದರೆ ಆತ್ಮಸಾಕ್ಷಿಯ ಗೋಡೆ ಎಲ್ಲರೂ ನಾ ಮುಂದು, ತಾ ಮುಂದು ಎಂದು ನುಗ್ಗುತ್ತಾರೆ. ಇದಿಲ್ಲಿ ವೇದ್ಯವಾಗುವ ಸಂಗತಿ.

ಹೌದು, ಅನುಕೂಲಸಿಂಧು ರಾಜಕೀಯದಲ್ಲಿ ಪಕ್ಷ ಹಾಗೂ ನಾಯಕರ ಅಸ್ತಿತ್ವವಷ್ಟೇ ಮುಖ್ಯವಾಗುತ್ತದೆ. ಧರ್ಮ-ಕರ್ಮ, ನೀತಿ-ನಿಷ್ಠೆ, ತತ್ವ-ಸಿದ್ಧಾಂತ ಎಲ್ಲವೂ ಮಣ್ಣುಪಾಲಾಗುತ್ತದೆ. 2004 ರಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ಅಸ್ತಿತ್ವಕ್ಕೆ ಬಂದಾಗ ಸಿದ್ದರಾಮಯ್ಯ ಸಿಎಂ ಆಗಬೇಕು ಎಂದು ದೇವೇಗೌಡರಾಗಲಿ, ಕುಮಾರಸ್ವಾಮಿ ಅವರಾಗಲಿ ಬಯಸಲಿಲ್ಲ. ಅವತ್ತೂ 58 ಸ್ಥಾನಗಳೊಂದಿಗೆ ಜೆಡಿಎಸ್ ಮೂರನೇ ಸ್ಥಾನದಲ್ಲಿತ್ತು. 65 ಸ್ಥಾನಗಳೊಂದಿಗೆ ಕಾಂಗ್ರೆಸ್ ಎರಡನೇ ಸ್ಥಾನದಲ್ಲಿತ್ತು. ಸೀಟುಗಳನ್ನು ಗೆದ್ದಿದ್ದ ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಇವತ್ತು 37 ಸ್ಥಾನಗಳನ್ನು ಹೊಂದಿರುವ ಜೆಡಿಎಸ್ಸಿಗೆ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡುವುದು ಸಾಧ್ಯವಾಗಿರುವುದಾದರೆ ಅವತ್ತು ಸಿದ್ದರಾಮಯ್ಯ ಅವರನ್ನೂ ಸಿಎಂ ಮಾಡುವುದು ಏಕೆ ಸಾಧ್ಯವಾಗುತ್ತಿರಲಿಲ್ಲ? ಆದರೆ ಧರ್ಮಸಿಂಗ್ ಸಿಎಂ ಆದರು.

ರಾಜಕೀಯ ಒಳಮರ್ಮದ ತಿರುಗಣಿಗೆ ಸಿಕ್ಕ ಸಿದ್ದರಾಮಯ್ಯ ‘ಅಹಿಂದ’ ಸಂಘಟನೆ ಬೆನ್ನತ್ತಿ ಜೆಡಿಎಸ್ ಪರಿತ್ಯಕ್ತರಾದರು. ಅವರು ಕಳೆದುಕೊಂಡ ಡಿಸಿಎಂ ಸ್ಥಾನಕ್ಕೆ ಎಂ.ಪಿ. ಪ್ರಕಾಶ್ ಬಂದರು. ಆದರೆ ರಾಜಕೀಯ ತಿರುವುಗಳಿಗೆ ಕೊನೇ ಎಂಬುದಿಲ್ಲವಲ್ಲ. ಕಾಂಗ್ರೆಸ್ ಪಿತೂರಿ ಗೊಂಬೆಯಾದ ಎಂ.ಪಿ. ಪ್ರಕಾಶ್ ಸಿಎಂ ಸ್ಥಾನಕ್ಕೆ ಕೈಚಾಚಿ ಮುಗ್ಗರಿಸಿ ಬಿದ್ದರು. ಆ ಸಂದರ್ಭದಲ್ಲಿ ಜೆಡಿಎಸ್ ಉಳಿಸಿಕೊಳ್ಳಲು ಕುಮಾರಸ್ವಾಮಿ ಮತ್ತು ಅಧಿಕಾರಕ್ಕಾಗಿ ಯಡಿಯೂರಪ್ಪ ಕೈಜೋಡಿಸಿದ್ದರಿಂದ ಬಿಜೆಪಿ-ಜೆಡಿಎಸ್ ಮೈತ್ರಿ ಸರಕಾರ ಅಸ್ತಿತ್ವಕ್ಕೆ ಬಂತು. ಕಾಂಗ್ರೆಸ್ ಅಧಿಕಾರ ವಂಚಿತವಾಯಿತು. ಬರೀ ಅದೊಂದೇ ಅವಧಿಗೆ ಮಾತ್ರವಲ್ಲ. ಜೆಡಿಎಸ್ ಕೈಕೊಟ್ಟಿದ್ದರಿಂದ 2008 ರ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು ಕಾಂಗ್ರೆಸ್ ಪ್ರತಿಪಕ್ಷ ಸ್ಥಾನದಲ್ಲಿ ಕೂರಬೇಕಾಯಿತು. ಜೆಡಿಎಸ್ ಕರ್ಮ ಫಲವನ್ನು ಕಾಂಗ್ರೆಸ್ಸೂ ಉಣ್ಣಬೇಕಾಯಿತು.

ಈಗ ಮರುಕಳಿಸಿದೆ. ಅವಕಾಶವಾದ ರಾಜಕಾರಣ ಊಹೆ ಮೀರಿ ಸಾಗುತ್ತಿದೆ. 2013 ರ ಚುನಾವಣೆಯಲ್ಲಿ ದೇವೇಗೌಡರ ಕುಟುಂಬ ವನ್ನು ಅಣಕಿಸುವಂತೆ ಸಿಎಂ ಆದ ಸಿದ್ದರಾಮಯ್ಯನವರು ತಮ್ಮ ಸೇಡಿನ ಕಿಚ್ಚನ್ನು ಅಷ್ಟಕ್ಕೆ ಸೀಮಿತಗೊಳಿಸಿದ್ದರೆ ಚೆನ್ನಾಗಿರು ತ್ತಿತ್ತು. ಆದರೆ ಗೌಡರ ಕುಟುಂಬದ ಮೇಲಿನ ದ್ವೇಷವನ್ನು ಇಡೀ ಒಕ್ಕಲಿಗ ಸಮುದಾಯಕ್ಕೆ ವಿಸ್ತರಿಸಿದ್ದರ ಪರಿಣಾಮ ಚಾಮುಂಡೇಶ್ವರಿ ಚುನಾವಣೆಯಲ್ಲಿ ಹೀನಾಯ ಸೋಲು ಕಂಡಿದ್ದಾರೆ. ಈ ಭಯದಿಂದಲೇ ಸ್ಪರ್ಧಿಸಿದ್ದ ಬಾದಾಮಿಯಲ್ಲೂ ಕೇವಲ 1696 ಮತಗಳ ಅಂತರದಿಂದ ‘ಹೀನಾಯ ಗೆಲುವು’ ಉಂಡಿದ್ದಾರೆ. ವಿಧಿವಿಲಾಸ ಅಲ್ಲಿಗೇ ಅತಂತ್ರ ವಿಧಾನಸಭೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ಏರ್ಪಟ್ಟು ಕುಮಾರಸ್ವಾಮಿ ಸಿಎಂ ಆಗಿದ್ದಾರೆ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ಸೇ ಅದಕ್ಕೆ ಬೆಂಬಲ ಕೊಟ್ಟಿದೆ. ಸಿದ್ದರಾಮಯ್ಯನವರ ಆತ್ಮಸಾಕ್ಷಿ ಏನಾಗಿರಬೇಡ? ಅವರ ಕರುಳು ಹೇಗೆ ಹಿಂಡಿರಬೇಡ? ಹಿಂದೆ ಅವರು ಸಿಎಂ ಆದಾಗ ಕಾಂಗ್ರೆಸ್ ಯಾರ ಮರ್ಜಿಗೂ ಬಿದ್ದಿರಲಿಲ್ಲ. ಕಾಂಗ್ರೆಸ್ ಏಕಾಂಗಿಯಾಗಿ ಅಧಿಕಾರಕ್ಕೆ ಬಂದಿತ್ತು. ಆದರೆ ಇವತ್ತು. ತಾವು ಕಡುವಾಗಿ ವಿರೋಧಿಸುತ್ತಾ ಬಂದಿದ್ದ ಕುಮಾರಸ್ವಾಮಿ ತಮ್ಮ ಪಕ್ಕದಲ್ಲೇ ಸಿಎಂ ಆಗಿ ಕೂತಿರುವುದನ್ನು ಸಹಿಸಿಕೊಳ್ಳಬೇಕಾದ ಆತ್ಮ ಕಿವುಚುವ ಸ್ಥಿತಿ. ಸರಕಾರದ ಒಳಗೇ ಇದ್ದುಕೊಂಡು.

ಅನೂಕೂಲಸಿಂಧು ರಾಜಕಾರಣದ ತಾಕತ್ತೇ ಅದು. ಯಾರನ್ನು ಯಾವಾಗ ಉಪ್ಪರಿಗೆ ಮೇಲೆ ಕೂರಿಸುತ್ತದೆ, ಉಪ್ಪರಿಗೆ ಮೇಲಿಂದ ಎತ್ತಿ ಬಿಸಾಡುತ್ತದೆ ಎಂದು ಊಹಿಸುವುದು ಕಷ್ಟ. ಕರ್ನಾಟಕ ರಾಜಕಾರಣದ ಷೋ ಇಷ್ಟಕ್ಕೇ ನಿಲ್ಲುತ್ತದೆ ಎಂದು ಹೇಳುವಂತಿಲ್ಲ. ದೇಶದ ಬಹುತೇಕ ಕಡೆ ಬೀಸಿರುವ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಅಲೆ ತಡೆಯಲು ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾಡಿಕೊಂಡಿರುವುದನ್ನು ಅವು ಸಮರ್ಥಿಸಿಕೊಂಡಿವೆ.

ಅವು ಹಾಗೆ ಸಮರ್ಥಿಸಿಕೊಳ್ಳುತ್ತಿವೆ ಎನ್ನುವುದಕ್ಕಿಂತ ಪರಿಸ್ಥಿತಿಯ ಅನಿವಾರ್ಯತೆಯೇ ಹಾಗಿದೆ. ಯಡಿಯೂರಪ್ಪನವರು ಈಗಾಗಲೇ ಕರಗತ ಮಾಡಿಕೊಂಡಿರುವ ‘ಜಾದೂಕಲೆ’ ಪ್ರದರ್ಶಿಸಿ 104 ಸ್ಥಾನಗಳನ್ನು 111 ಕ್ಕೆ ಹಿಗ್ಗಿಸಿಕೊಂಡು ಸರಳ ಬಹುಮತ ಪಡೆದುಕೊಂಡು ಬಿಟ್ಟಿದ್ದರೆ ಕಾಂಗ್ರೆಸ್-ಜೆಡಿಎಸ್ಸಿಗೆ ಈ ಅವಕಾಶವೇ ಬರುತ್ತಿರಲಿಲ್ಲ. ರಾಜ್ಯಪಾಲರು ಹೇಗಿದ್ದರೂ ಸರಕಾರ ರಚಿಸುವ ಮೊದಲ ಅವಕಾಶವನ್ನು ಅವರಿಗೇ ದಯಪಾಲಿಸಿದ್ದರು. ಆದರೆ ಈ ಬಾರಿ ‘ಜಾದೂ’ ಯಡಿಯೂರಪ್ಪನವರಿಗೇ ಕಣ್ಕಟ್ಟಾಗಿ ಕೈ ಕೊಟ್ಟ ಪರಿಣಾಮ ಕಾಂಗ್ರೆಸ್-ಜೆಡಿಎಸ್ ಸರಕಾರ ಮಾಡಿವೆ. ಇದರಲ್ಲಿ ಆ ಪಕ್ಷಗಳ ತಪ್ಪೇನೂ ಇಲ್ಲ. ಬಿಜೆಪಿ ಅದೃಷ್ಟ ನೆಟ್ಟಗಿರಲಿಲ್ಲ ಅಷ್ಟೇ. ಎಲ್ಲಕ್ಕಿಂತ ಮಿಗಿಲಾಗಿ ವ್ಯವಸ್ಥೆ ಇರುವುದೇ ಹೀಗೆ. ಯಾರಿಗೆ ಇಷ್ಟವಾಗಲಿ, ಬಿಡಲಿ ಈ ವ್ಯವಸ್ಥೆಯನ್ನು ಕಟ್ಟಿಹಾಕಲು ಯಾರಿಂದಲೂ ಸಾಧ್ಯವಿಲ್ಲ. ಇದು ಇವತ್ತಿನ ಹೊಂದಾಣಿಕೆ.

ನಾಳೆ ಏನಾಗುತ್ತದೋ ಗೊತ್ತಿಲ್ಲ. ಕಾಂಗ್ರೆಸ್-ಜೆಡಿಎಸ್‌ನ್ನು ನಿಂದಿಸಿಕೊಂಡು ತಿರುಗುತ್ತಿರುವ ಬಿಜೆಪಿಗೆ ನಾಳೆ ಜೆಡಿಎಸ್ ಜತೆಗೇ ಕೈಜೋಡಿಸುವ ಪರಿಸ್ಥಿತಿ ಬರಬಹುದು. ಇಲ್ಲವೇ ಈಗಿನ ಮೈತ್ರಿ ಸರಕಾರದಲ್ಲಿ ಏಳಬಹುದಾದ ಅಪಸ್ವರಗಳನ್ನೇ ಸದ್ಬಳಕೆ ಮಾಡಿಕೊಂಡು ಅನ್ಯಪಕ್ಷಗಳನ್ನು ಒಡೆದು ಬಿಜೆಪಿಯೇ ಸರಕಾರ ಮಾಡಬಹುದು. ರೊಚ್ಚಿಗೆದ್ದ ಗೂಳಿ ಗೂಟ ಕಿತ್ತುಕೊಂಡು ಪೇರಿ ಕೀಳುವಂತೆ, ಯಾರು, ಯಾರ ತೆಕ್ಕೆಗೆ ಹೇಳಲು ಬಾರದು. ಎಲ್ಲಕ್ಕಿಂತ ಮಿಗಿಲಾಗಿ ಸದನದಲ್ಲಿ ಯಡಿಯೂರಪ್ಪನವರೇ ಅಲ್ಪಾವಧಿ ಸಿಎಂ ಗಾದಿಗೆ ರಾಜೀನಾಮೆ ಕೊಡುವ ಮೊದಲು ಒಂದು ಮಾತು ಹೇಳಿದ್ದಾರೆ. ಅನ್ಯಪಕ್ಷಗಳನ್ನು ಸೆಳೆಯಲು ಯತ್ನಿಸಿದ್ದು ನಿಜ. ಆ ಪ್ರಕ್ರಿಯೆ ಮುಂದುವರಿಯುತ್ತದೆ ಎಂದು. ಅವರ ಮನದಾಳದಲ್ಲಿ ಬೇರೂರಿರುವ ಅಧಿಕಾರದ ಹಪಾಹಪಿ ಅವಕಾಶವಾದ ರಾಜಕಾರಣಕ್ಕೆ ಮತ್ಯಾವ ತಿರುವು ಕೊಡುತ್ತದೋ ಗೊತ್ತಿಲ್ಲ. ಏಕೆಂದರೆ ರಾಜಕೀಯದಲ್ಲಿರುವ ಯಾರೂ ಸನ್ಯಾಸಿಗಳಲ್ಲ!

ಲಗೋರಿ : ತೆರೆಯ ನೊರೆ ಹಿಡಿಯಲು ಹೋದರೆ ಸಿಗುವುದು ಬರೀ ಶೂನ್ಯ ಮಾತ್ರ.

(ವಿಶ್ವವಾಣಿಯಲ್ಲಿ ಪ್ರಕಟಿತ)

Leave a Reply