ಕಾಂಗ್ರೆಸ್- ಜೆಡಿಎಸ್ ಮಧ್ಯೆ ಸಂಪುಟ ಸಮಸ್ಯೆ- ಬಿಜೆಪಿಯಲ್ಲಿ ಈಶ್ವರಪ್ಪ ಮುನಿಸು, ರಾಜ್ಯ ರಾಜಕೀಯದಲ್ಲೀಗ ಕೇವಲ ಭಿನ್ನ ರಾಗ

ಡಿಜಿಟಲ್ ಕನ್ನಡ ಟೀಮ್:
ಸದ್ಯ ರಾಜ್ಯ ರಾಜಕೀಯದಲ್ಲಿ ಭಿನ್ನಮತ ಅಸಮಾದಾನವೇ ತಾಂಡವವಾಡುತ್ತಿದೆ. ಕಾಂಗ್ರೆಸ್- ಜೆಡಿಎಸ್ ಮೈತ್ರಿ ಸರ್ಕಾರದಿಂದ ಹಿಡಿದು ವಿರೋಧಪಕ್ಷ ಬಿಜೆಪಿವರೆಗೂ ಮುಸುಕಿನ ಗುದ್ದಾಟ ನಡೆಯುತ್ತಿದೆ.
ಅನೇಕ ಸರ್ಕಸ್ ಗಳನ್ನು ಮಾಡಿದ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರಕಾರ ರಚನೆಯಾಗಿ ನಾಲ್ಕು ದಿನಗಳೇ ಕಳೆದಿವೆ. ಆದರೆ ಅಲ್ಲಿಂದ ಇಲ್ಲಿಯವರೆಗೂ ಸರ್ಕಾರ ಒಂದಿಂಚು ಕೂಡ ಮುಂದಕ್ಕೆ ಹೋಗಿಲ್ಲ. ಕಾರಣ ಮೈತ್ರಿ ಸರ್ಕಾರದ ಸಂಪುಟ ವಿಸ್ತರಣೆ ಕುರಿತು ಉದ್ಭವವಾಗಿರುವ ಗೊಂದಲ. ಚುನಾವಣೆ ಫಲಿತಾಂಶ ಅತಂತ್ರವಾಗುವ ಸೂಚನೆ ಸಿಗುತ್ತಿದ್ದಂತೆ ಕಾಂಗ್ರೆಸ್ ನಾಯಕರು ಮಾಧ್ಯಮಗಳ ಮುಂದೆ ಬಂದು ನಾವು ಜೆಡಿಎಸ್ ಗೆ ಬೇಷರತ್ ಬೆಂಬಲ ನೀಡುತ್ತೇವೆ ಎಂದು ಘೋಷಣೆ ಮಾಡಿ ಬಿಟ್ಟರು. ಅಲ್ಲದೆ ಮುಖ್ಯಮಂತ್ರಿ ಸ್ಥಾನವನ್ನು ಜೆಡಿಎಸ್ ಗೆ ಬಿಟ್ಟುಕೊಡುವುದಾಗಿಯು ತಿಳಿಸಿತ್ತು.
ಈಗ ಸರ್ಕಾರ ರಚನೆಯಾದ ಬಳಿಕ ಕಾಂಗ್ರೆಸ್ ಹಣಕಾಸು ಸಚಿವಾಲಯ ಸೇರಿದಂತೆ ಒಟ್ಟು 22 ಖಾತೆಗಳು ಬೇಕೆಂದು ಪಟ್ಟು ಹಿಡಿದಿದೆ. ಇದಕ್ಕೆ ಜೆಡಿಎಸ್ ಅಸಮಾಧಾನ ವ್ಯಕ್ತಪಡಿಸಿದ್ದು, ಹಣಕಾಸು ಖಾತೆ ಇಲ್ಲದ ಮೇಲೆ ಮುಖ್ಯಮಂತ್ರಿ ಸ್ಥಾನದ ಪ್ರಯೋಜನವಾದರೂ ಏನು ಎಂದು ಬುಸುಗುಡುತ್ತಿದೆ. ಇನ್ನು ಖಾತೆ ಹಂಚಿಕೆ ವಿಚಾರದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದೊಳಗಿನ ನಾಯಕರ ನಡುವೆ ಲಾಭಿ ದೊಡ್ಡ ಪ್ರಮಾಣದಲ್ಲಿಯೇ ನಡೆಯುತ್ತಿದೆ. ಅದರಲ್ಲೂ ಕಾಂಗ್ರೆಸ್ ನಲ್ಲಿ ಹಿರಿಯ ಶಾಸಕರ ಪಟ್ಟು ಜೋರಾಗಿದ್ದು, ಇವರನ್ನು ಸಮಾಧಾನ ಪಡೆಸುವುದು ಹೈ ಕಮಾಂಡ್ ಗೆ ದೊಡ್ಡ ಸವಾಲಾಗಿದೆ. ಹೀಗಾಗಿ ಸಚಿವ ಸಂಪುಟ ರಚನೆ ಕಗ್ಗಂಟಾಗಿದ್ದು, ಸದ್ಯಕ್ಕೆ ಸಮಸ್ಯೆ ಬಗೆಹರಿಯುವ ಲಕ್ಷಣಗಳು ಗೋಚರಿಸುತ್ತಿಲ್ಲ.
ಇವಿಷ್ಟು ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ವಿಚಾರವಾಗಿ ನಡೆಯುತ್ತಿರುವ ಹಗ್ಗಜಗ್ಗಾಟ. ಇನ್ನು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಮತ್ತೆ ಸ್ಫೋಟವಾಗುವ ಲಕ್ಷಣ ಗೋಚರಿಸಿದೆ. ಚುನಾವಣೆಯ ಹಿನ್ನೆಲೆಯಲ್ಲಿ ಕೆಲಕಾಲ ತಣ್ಣಗಾಗಿದ್ದ ಈಶ್ವರಪ್ಪ ವರ್ಸಸ್ ಬಿ.ಎಸ್ ಯಡಿಯೂರಪ್ಪ ಅವರ ನಡುವಣ ಕಿತ್ತಾಟ ಈಗ ಮತ್ತೆ ಶುರುವಾಗಿದೆ. ಬಿಜೆಪಿಯ ಆಂತರಿಕ ಭಿನ್ನಮತಕ್ಕೆ ವಿಧಾನ ಪರಿಷತ್ ಸದಸ್ಯರ ಆಯ್ಕೆ ವಿಚಾರ ಕಾರಣವಾಗಿದೆ. ವಿಧಾನಪರಿಷತ್ ಸದಸ್ಯರಾಗಿದ್ದ ಭಾನುಪ್ರಕಾಶ್ ಅವರನ್ನು ಮತ್ತೊಂದು ಅವಧಿಗೆ ಎಂಎಲ್ ಸಿ ಮಾಡಲು ಈಶ್ವರಪ್ಪ ಉತ್ಸುಕರಾಗಿದ್ದಾರೆ. ಆದರೆ ಭಾನುಪ್ರಕಾಶ್ ರಾಯಣ್ಣ ಬ್ರಿಗೇಡ್ ವಿಚಾರದಲ್ಲಿ ಈಶ್ವರಪ್ಪ ಜತೆಗೂಡಿ ತಮಗೆ ಇರಿಸುಮುರಿಸು ಮಾಡಿದ್ದ ಕಾರಣಕ್ಕೆ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಈಗ ಭಾನುಪ್ರಕಾಶ್ ಅವರ ಹೆಸರು ಪರಿಗಣಿಸದಿರಲು ನಿರ್ಧರಿಸಿದ್ದಾರೆ. ಅವರ ಬದಲಿಗೆ ವಕ್ತಾರ ವಾಮನಾಚಾರ್ ಅಥವಾ ಗೋಮಧುಸುಧನ್ ಅವರನ್ನು ಎಂಎಲ್ ಸಿ ಮಾಡಲು ಆಸಕ್ತಿ ತೋರಿದ್ದಾರೆ. ಈ ವಿಚಾರಕ್ಕೆ ಈಗ ಮತ್ತೆ ಈಶ್ವರಪ್ಪ ಮತ್ತು ಬಿಎಸ್ ವೈ ನಡುವಣ ಸಮರ ಪುನಾರಂಭವಾಗಿದೆ. ಇಂದು ಬಿಜೆಪಿ ಕೋರ್ ಕಮಿಟಿ ಸಭೆ ನಡೆಯಲಿದ್ದು, ಈ ಸಭೆಗೆ ಈಶ್ವರಪ್ಪ ಗೈರಾಗಲಿದ್ದಾರೆ ಎಂಬ ವರದಿಗಳು ಬರುತ್ತಿವೆ.

Leave a Reply