ಬೆಂಗಳೂರಲ್ಲೇ ಇದ್ದರೂ ರೈತರ ಸಭೆಗೆ ಬಿಎಸ್‌ವೈ ಗೈರು ಯಾಕೆ?

ಡಿಜಿಟಲ್ ಕನ್ನಡ ಟೀಮ್:
ರೈತರ ಸಾಲ ಮನ್ನಾ ವಿಚಾರವಾಗಿ ಬುಧವಾರ ಬೆಳಗ್ಗೆ 11 ಗಂಟೆಗೆ ವಿಧಾನಸೌಧದಲ್ಲಿ ರೈತರ ಸಭೆ ಕರೆದಿದ್ದ ಸಿಎಂ ಕುಮಾರಸ್ವಾಮಿ, ವಿರೋಧ ಪಕ್ಷದ ನಾಯಕರಾದ ಬಿ.ಎಸ್ ಯಡಿಯೂರಪ್ಪ ಅವರಿಗೂ ಆಹ್ವಾನ ನೀಡಿದ್ರು. ಆದ್ರೆ ಮಂಗಳೂರಿನಲ್ಲಿ ಭಾರೀ ಮಳೆ ಆಗುತ್ತಿರುವ ಹಿನ್ನೆಲೆಯಲ್ಲಿ ನಾನು ಪರಿಸ್ಥಿತಿ ಅವಲೋಕಿಸಲು ತೆರಳುತ್ತಿದ್ದೇನೆ. ಹಾಗಾಗಿ ನಾನು ರೈತರ ಜೊತೆ ಸಿಎಂ ಕುಮಾರಸ್ವಾಮಿ ಕರೆದಿರುವ ಸಭೆಯಲ್ಲಿ ಹಾಜರು ಆಗುವುದಿಲ ಎಂದು ಮುಂಚಿತವಾಗಿಯೇ ಯಡಿಯೂರಪ್ಪ ಮಾಧ್ಯಮಗಳಿಗೆ ತಿಳಿಸಿದ್ರು.
ಆದರೆ ಸಿಎಂ ಕುಮಾರಸ್ವಾಮಿ ರೈತರ ಜೊತೆಗಿನ ಸಭೆ ಅಂತ್ಯವಾಗಿ ಮುಂದಿನ 15 ದಿನದಲ್ಲಿ ಸಾಲ ಮನ್ನಾ ಮಾಡ್ತೇವೆ. ಎರಡು ಹಂತದಲ್ಲಿ ಸಾಲ ಮನ್ನಾ ಮಾಡಲು ಯೋಜನೆ ರೂಪಿಸಿದ್ದೇವೆ, ಎಲ್ಲಾ ಜಿಲ್ಲಾಧಿಕಾರಿಗಳನ್ನು ನೋಡಲ್ ಅಧಿಕಾರಿಯಾಗಿ ನೇಮಕ ಮಾಡಲಾಗುತ್ತದೆ. ರೈತರು ತಮ್ಮ ಸಾಲದ ಸಂಪೂರ್ಣ ಮಾಹಿತಿಯನ್ನು ಅವರ ಬಳಿ ನೀಡಬೇಕು ಎಂದಿರುವ ಸಿಎಂ ರಾಷ್ಟ್ರೀಕೃತ ಬ್ಯಾಂಕುಗಳೊಂದಿಗೆ ಎರಡು ದಿನನದಲ್ಲಿ ಸಭೆ ನಡೆಸಿ, ಆರ್ಥಿಕ ಶಿಸ್ತು ಉಳಿಸಿಕೊಂಡು ರೈತರನ್ನು ಖುಣಮುಕ್ತ ಮಾಡುತ್ತೇವೆ ಅಂದ್ರು. ಜೊತೆಗೆ ಸಾಲ ಮನ್ನಾ ಬಗ್ಗೆ ನಮ್ಮ ತೀರ್ಮಾನ ಅಚಲವಾಗಿದ್ದು, ಯಾವೊಬ್ಬ ರೈತನೂ ಆತ್ಮಹತ್ಯೆ ಮಾಡಿಕೊಳ್ಳೋದು ಬೇಡ, ಬೆಳೆ ಸಾಲ ಮೊದಲ ಹಂತದಲ್ಲೇ ಮನ್ನಾ ಆಗುತ್ತೆ. ವಾಹನ ಹಾಗೂ ಇತರೆ ಸಾಲಗಳ ಬಗ್ಗೆ ಬಳಿಕ ತೀರ್ಮಾನ ಮಾಡಲಾಗುತ್ತದೆ ಎಂದಿದ್ದಾರೆ. ಅಂತ ಕುಮಾರಸ್ವಾಮಿ ಮಾಧ್ಯಮಗಳಲ್ಲಿ ಹೇಳಿಕೆ ನೀಡುತ್ತಿದ್ದ ಹಾಗೆ ಮನೆಯಿಂದ ಹೊರಬಂದ ಬಿ.ಎಸ್ ಯಡಿಯೂರಪ್ಪ,
ಕಳೆದ ಸೋಮವಾರ ಬಿಜೆಪಿ ಬಂದ್ ಕರೆ ನೀಡಿ ಹೋರಾಟ ಮಾಡಿದ್ದರ ಪರಿಣಾಮವಾಗಿ ಸಿಎಂ ರೈತ ಮುಖಂಡರ ಸಭೆ ಕರೆದಿದ್ದಾರೆ. 15 ದಿನಗಳಲ್ಲಿ ಸಣ್ಣ ರೈತರ ಸಾಲಮನ್ನಾ ಬಗ್ಗೆ ಮಾತನಾಡ್ತಿದ್ದಾರೆ. ಕುಮಾರಸ್ವಾಮಿ ನೀವು ಹೇಳಿದ್ದು ಏನು..? ರೈತರ ವಿಚಾರದಲ್ಲಿ ದೊಂಬರಾಟ ಮಾಡ್ತಿದಿರಾ..? ಎಂದು ಪ್ರಶ್ನಿಸಿದ್ದಾರೆ. ಸಣ್ಣ ಹಾಗೂ ಅತೀ ಸಣ್ಣ ರೈತರು ಸಹಕಾರ ಸಂಘದಲ್ಲಿ 20 ಅಥವಾ 40 ಸಾವಿರ ಸಾಲ ಮಾಡಿರುತ್ತಾರೆ. ಈ ಹಿಂದಿನ ಸರ್ಕಾರ ಸಣ್ಣ ರೈತರ ಸಹಕಾರ ಸಂಘಗಳ ಸಾಲಮನ್ನಾ ಮಾಡಿದೆ. ನಿಮ್ಮ ಹೇಳಿಕೆಗೆ ತಕ್ಕಂತೆ ನಡೆದುಕೊಂಡಿಲ್ಲ ಎಂದು ಕಿಡಿಕಾರಿರುವ ಅವರು ಕುಮಾರಸ್ವಾಮಿ ರೈತರ ಕಣ್ಣಿಗೆ ಮಣ್ಣು ಎರಚುವ ಕೆಲಸ ಮಾಡ್ತಿದ್ದಾರೆ. ಕೊಟ್ಟ ಮಾತಿನಂತೆ ನಡೆದುಕೊಳ್ಳದಿದ್ರೆ ಬಿಜೆಪಿ ಹೋರಾಟ ಮುಂದುವರಿಯುತ್ತದೆ ಎಂದ್ರು.
ಯಡಿಯೂರಪ್ಪ ಮಾತಿಗೆ ತಿರುಗೇಟು ಕೊಟ್ಟ ಕುಮಾರಸ್ವಾಮಿ, ಯಡಿಯೂರಪ್ಪ ಮೊದಲು ಚಿಲ್ಲರೆ ರಾಜಕಾರಣ ಬಿಡಲಿ, ರಾಜ್ಯದ ರೈತರ ಬಗ್ಗೆ ಯಡಿಯೂರಪ್ಪಗೆ ಕಾಳಜಿ ಇದ್ದಿದ್ರೆ ಇಂದಿನ ಸಭೆಗೆ ಬರಬೇಕಿತ್ತು. ಇಲ್ಲಿ ಬಂದು ಚರ್ಚೆ ಮಾಡ್ಬೇಕಿತ್ತು. ಅದು ಬಿಟ್ಟು ಇಲ್ಲೇ ಬೆಂಗಳೂರಿನಲ್ಲಿ ಕುಳಿತುಕೊಂಡು ಅವರ ಪರವಾಗಿ ಗೋವಿಂದ ಕಾರಜೋಳರನ್ನ ಕಳಸಿದ್ದಾರೆ. ನನ್ನ ಬಗ್ಗೆ ಹಗುರವಾಗಿ ಮಾತಾಡೋದನ್ನ ಮೊದಲು ಬಿಡಬೇಕು, ಇಲ್ಲವಾದಲ್ಲಿ ನಿಮ್ಮ ಬಗ್ಗೆ ಜನರೇ ತೀರ್ಮಾನ ಮಾಡ್ತಾರೆ ಎಂದು ಎಚ್ಚರಿಕೆ ನೀಡಿದ್ದಾರೆ.
ಅದೆಲ್ಲಾ ಸರಿ ಮಂಗಳೂರಿಗೆ ಹೋಗ್ತೇನೆ ಎಂದಿದ್ದ ಯಡಿಯೂರಪ್ಪ, ಮಂಗಳೂರಿಗೂ ಹೋಗದೇ ಸಭೆಗೂ ಹೋಗದೆ ಮನೆಯಲ್ಲೇ ಉಳಿದಿದ್ದು ಯಾಕೆ ಅನ್ನೋ ಪ್ರಶ್ನೆ ಬಿಜೆಪಿ ಕಾರ್ಯಕರ್ತರ ಪಾಲಿಗೆ ಯಕ್ಷಪ್ರಶ್ನೆಯಾಗಿದೆ. ಜೊತೆಗೆ ಹೀಗೊಂದು ಮಾತು ಕಮಲ ಕಚೇರಿಯಲ್ಲೇ ಕೇಳಿಬಂದಿದ್ದು, ಸಭೆ ಹೋಗಿದ್ದ ವಿಪಕ್ಷ ಉಪನಾಯಕ ಗೋವಿಂದ ಕಾರಜೋಳ ಮಾತನಾಡುವಾಗ ರೈತರು ಅಡ್ಡಿಪಡಿಸಿದ್ದು, ಮೊದಲು ಕೇಂದ್ರ ಸರ್ಕಾರದ ನಿಲುವು ಸ್ಪಷ್ಟ ಪಡಿಸಿ ಎಂದು ಗೋವಿಂದ ಕಾರಜೋಳಗೆ ತರಾಟೆ‌ ತೆಗೆದುಕೊಂಡಿದ್ದಾರೆ. ಕೇಂದ್ರದ ಜೊತೆ ಚರ್ಚೆ ಮಾಡಿ ನಂತ್ರ ನಮ್ಮ ಅಭಿಪ್ರಾಯ ತಿಳಿಸ್ತೀನಿ ಎಂದು ಕಾರಜೋಳ ಕಾಲ್ಕಿತ್ತಿದ್ದಾರೆ. ಇದೇ ಪರಿಸ್ಥಿತಿ ತನಗೆ ಎದುರಾಗಲಿದೆ ಅನ್ನೋ ಸುಳಿವು ಅರಿತ ಯಡಿಯೂರಪ್ಪ, ಮಂಗಳೂರಿನ ಪ್ರವಾಹ ನೆಪ ಮಾಡಿಕೊಂಡು ಸಾಲ ಮನ್ನಾ ಮಾಡುವ ಬಗ್ಗೆ ಸಿಎಂ ನಡೆಸಿದ ಸಭೆಯಿಂದ ದೂರ ಉಳಿದರೂ ಎನ್ನಲಾಗ್ತಿದೆ. ಇನ್ನೂ ಕೆಲವರು ರೈತರ ಬಗ್ಗೆ ತೋರಿಕೆಯ ಪ್ರೀತಿ ತೋರುವ ಯಡಿಯೂರಪ್ಪ, ರೈತರ ಸಭೆಗೆ ಹೋಗದೆ ತಮ್ಮ ನಿಜರೂಪ ಹೊರ ಹಾಕಿದ್ದಾರೆ ಎನ್ನುತ್ತಿದ್ದಾರೆ. ನಿಜವಾದ ಕಾರ ಏನು ಅನ್ನೋದನ್ನು ಅವರೇ ಹೇಳಬೇಕಿದೆ.

Leave a Reply