ರಾಜರಾಜೇಶ್ವರಿ ನಗರ ಮುನಿರತ್ನ ಕೋಟೆ ಎಂದ ಮತದಾರ!

ಡಿಜಿಟಲ್ ಕನ್ನಡ ಟೀಮ್:
ಬೆಂಗಳೂರಿನ ರಾಜರಾಜೇಶ್ವರಿ ನಗರ ಕ್ಷೇತ್ರದ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮುನಿರತ್ನ ಅವರು ಭರ್ಜರಿ ಅಂತರದ ಜಯ ದಾಖಲಿಸಿದ್ದಾರೆ. ಮತ ಏಣಿಕೆ ಬಹುತೇಕ ಮುಕ್ತಾಯ ಹಂತಕ್ಕೆ ಬಂದಿದ್ದು ಕಾಂಗ್ರೆಸ್ ಅಭ್ಯರ್ಥಿ ಮುನಿರತ್ನ ಅವರು 82,282 ಮತಗಳನ್ನು ಪಡೆದುಕೊಂಡಿದ್ದು, ಬಿಜೆಪಿಯ ಅಭ್ಯರ್ಥಿ ತುಳಸಿ ಮುನಿರಾಜು 34,064 ಮತಗಳನ್ನು ಪಡೆದುಕೊಂಡಿದ್ದಾರೆ.
ಮೇ 12 ರಂದು ನಡೆಯಬೇಕಿದ್ದ ಮತದಾನ ಒಂದೇ ಪ್ಲ್ಯಾಟ್‌ನಲ್ಲಿ ಸುಮಾರು 10 ಸಾವಿರ ವೋಟರ್ ಐಡಿ ಪತ್ತೆಯಾದ ಹಿನ್ನೆಲೆಯಲ್ಲಿ ಚುನಾವಣೆ ಮುಂದೂಡಲು ಆಯೋಗ ನಿರ್ಧಾರ ಮಾಡಿತ್ತು. ಬಳಿಕ ಮೇ 28 ರಂದು ಮತದಾನ ನಡೆದು ಇಂದು ಫಲಿತಾಂಶ ಹೊರ ಬಿದ್ದಿದೆ. ಚುನಾವಣಾ ಪೂರ್ವದಲ್ಲಿ ಎದುರಾಳಿಗಳಾಗಿದ್ದ ಕಾಂಗ್ರೆಸ್, ಜೆಡಿಎಸ್ ಚುನಾವಣೋತ್ತರವಾಗಿ ಮೈತ್ರಿ ಮಾಡಿಕೊಂಡು ಸರ್ಕಾರ ರಚನೆ ಮಾಡಿದ್ದರೂ, ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿ ಒಮ್ಮತದ ನಿರ್ಧಾರಕ್ಕೆ ಬಂದು ಹೊಂದಾಣಿಕೆ ಮಾಡಿಕೊಳ್ಳುವಲ್ಲಿ ವಿಫಲವಾಗಿದ್ದು, ಎದುರಾಳಿಗಳಾಗಿಯೇ ಅಖಾಡದಲ್ಲಿದ್ದಾರೆ.  ಕಾಂಗ್ರೆಸ್‌ನಿಂದ ಹಾಲಿ ಶಾಸಕನಾಗಿದ್ದ ಮುನಿರತ್ನ, ಜೆಡಿಎಸ್‌ನಿಂದ ರಾಮಚಂದ್ರ, ಬಿಜೆಪಿಯಿಂದ ತುಳಸಿ ಮುನಿರಾಜು ಅಭ್ಯರ್ಥಿಗಳಾಗಿದ್ದರು. ಈ ಮೂವರಲ್ಲಿ ರಾಜರಾಜೇಶ್ವರಿ ನಗರ ಕ್ಷೇತ್ರದ ಜನನಾಯಕನಾಗಿ ಮುನಿರತ್ನ ಆಯ್ಕೆಯಾಗಿದ್ದಾರೆ.
ಮುನಿರತ್ನ ಗೆಲುವಿನ ಸಾಧ್ಯತೆ ಹೆಚ್ಚಾಗಿದೆ ಎಂದು ವಿಶ್ಲೇಷಿಸಲಾಗಿತ್ತು. ಆದರೆ ಕಳೆದ ಬಾರಿ ಮುನಿರತ್ನ ಪರವಾಗಿ ಕೆಲಸ ಮಾಡಿದ ಕಾರ್ಪೊರೇಟರ್‌ಗಳು ಈ ಬಾರಿ ಬಿಜೆಪಿ ಅಭ್ಯರ್ಥಿ ಪರವಾಗಿ ಕೆಲಸ ಮಾಡಿದ್ದರು. ಜೊತೆಗೆ ಕಾಂಗ್ರೆಸ್ ಅಭ್ಯರ್ಥಿ ಮುನಿರತ್ನ ವಿರುದ್ಧ ಸಾಕಷ್ಟು ಗಂಭೀರ ಆರೋಪಗಳನ್ನು ಹೊರಿಸಿದ್ದು, ಜನರ ಮನಸ್ಸಿನ ಮೇಲೆ ಏನಾದರೂ ಪರಿಣಾಮ ಬೀರಿದೆಯೇ ಮುನಿರತ್ನ ಅಖಾಡದಲ್ಲಿ ಅಂಗಾತ ಮಲಗುತ್ತಾರಾ ಎಂಬ ಪ್ರಶ್ನೆಗಳು ಮೂಡಿದ್ದವು ಆದರೆ ಇವೆಲ್ಲವೂ ಸುಳ್ಳಾಗಿವೆ. ಇಷ್ಟೆಲ್ಲಾ ಆರೋಪಗಳ ನಡುವೆಯೂ ಮುನಿರತ್ನ ಇಷ್ಟು ಭಾರಿ ಅಂತರದ ಗೆಲುವು ದಾಖಲಿಸಿರುವುದು ರಾಜರಾಜೇಶ್ವರಿ ನಗರ ಮುನಿರತ್ನ ಅವರ ಭದ್ರಕೋಟೆ ಎಂಬುದನ್ನು ಮತದಾರ ಸಾಬೀತುಪಡಿಸಿದ್ದಾನೆ.

Leave a Reply