ಲೋಕಸಭೆಯಲ್ಲಿ ಸರಳ ಬಹುಮತ ಕಳೆದುಕೊಂಡ ಬಿಜೆಪಿ!

ಡಿಜಿಟಲ್ ಕನ್ನಡ ಟೀಮ್:

ಹೆಡ್‌ಲೈನ್ ಓದುತ್ತಿದ್ದ ಹಾಗೆ ನಿಮಗೆ ಅಚ್ಚರಿ ಎದುರಾಗಿದ್ರೆ ಆಶ್ಚರ್ಯವಿಲ್ಲ. ಯಾಕಂದ್ರೆ 2014ರಲ್ಲಿ ಭರ್ಜರಿ ಬಹುಮತದಿಂದ ಸರ್ಕಾರ ರಚನೆ ಮಾಡಿದ್ದ ಬಿಜೆಪಿ, ಇದೀಗ ಲೋಕಸಭೆಯಲ್ಲಿ ಬಹುಮತ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. ಇದು ಅಕ್ಷರಶಃ ಸತ್ಯ. 2014 ರಲ್ಲಿ 282 ಸ್ಥಾನಗಳನ್ನು ಗಳಿಸಿದ್ದ ಬಿಜೆಪಿ ಲೋಕಸಭೆಯಲ್ಲಿ ಅತೀ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿತ್ತು. ಒಟ್ಟು 543 ಕ್ಷೇತ್ರಗಳು ಹಾಗೂ 2 ಆಂಗ್ಲೋ ಇಂಡಿಯನ್ ಸ್ಥಾನಗಳು ಸೇರಿ ಒಟ್ಟು 545 ಸ್ಥಾನಗಳಿವೆ. ಅದರಲ್ಲಿ ಅರ್ಧಕ್ಕಿಂತ ಹೆಚ್ಚು ಅಂದ್ರೆ 272 ಸ್ಥಾನಗಳನ್ನು ಗಳಿಸಿದ ಪಕ್ಷ ಸರಳ ಬಹುಮತದಿಂದ ಅಧಿಕಾರಕ್ಕೆ ಬರುತ್ತದೆ. ಹೀಗಾಗಿ 282 ಸ್ಥಾನ ಪಡೆದಿದ್ದ ಬಿಜೆಪಿ ಸಹಜವಾಗಿಯೇ ಸರಳ ಬಹುಮತ ಪಡೆದು ಅಧಿಕಾರಕ್ಕೆ ಬಂದಿತ್ತು. ಎನ್‌ಡಿಎ ಒಕ್ಕೂಟ ಸೇರಿ 336 ಸ್ಥಾನ ಗಳಿಸುವ ಮೂಲಕ ಪ್ರಚಂಡ ಬೆಂಬಲ ಪಡೆದಿತ್ತು. ಆದ್ರೀಗ ಬಿಜೆಪಿ ಪಕ್ಷ ತನ್ನ ಸರಳ ಬಹುಮತ ಕಳೆದುಕೊಂಡಿದೆ.

ಗುರವಾರ ನಾಲ್ಕು ಲೋಕಸಭಾ ಕ್ಷೇತ್ರಗಳ ಉಪಚುನಾವಣಾ ಫಲಿತಾಂಶ ಹೊರ ಬಿದ್ದಿದ್ದು, ಬಿಜೆಪಿಯಿಂದಲೇ ತೆರವಾಗಿದ್ದ ನಾಲ್ಕು ಕ್ಷೇತ್ರಗಳಲ್ಲಿ ಒಂದನ್ನು ಮಾತ್ರ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿ. ಉಳಿದ ಮೂರು ಕ್ಷೇತ್ರಗಳಲ್ಲಿ ಬೇರೆ ಪಕ್ಷಗಳು ಗೆಲ್ಲುವ ಮೂಲಕ ಮೋದಿ ಸರ್ಕಾರಕ್ಕೆ ಬೆದರಿಕೆ ಹುಟ್ಟುವಂತೆ ಮಾಡಿವೆ. ಇಂದಿನ ಫಲಿತಾಂಶ ನೋಡೋದಾದ್ರೆ,

ರಾಜ್ಯ- ಕ್ಷೇತ್ರ – ಪಕ್ಷ – ಅಭ್ಯರ್ಥಿ

ಉತ್ತರ ಪ್ರದೇಶ – ಕೈರಾನ – ಆರ್​ಎಲ್​ಡಿ – ತಬಸಮ್​ ಹಸನ್​
ಮಹಾರಾಷ್ಟ್ರ – ಭಂಡಾರ-ಗೋಂಡಿಯಾ – ಎನ್​ಸಿಪಿ – ಮಧುಕರ್​ ಕುಕ್ಡೆ
ನಾಗಲ್ಯಾಂಡ್​ – ಎನ್​ಡಿಪಿಪಿ – ತೊಖೆಹೋ ಯೆಪ್ತೊಮಿ
ಮಹಾರಾಷ್ಟ್ರ – ಪಾಲ್​ಘರ್​ – ಬಿಜೆಪಿ – ರಾಜೇಂದ್ರ ಗಾವಿತ್​

ಮಹಾರಾಷ್ಟ್ರದ ಪಾಲ್‌ಘರ್‌ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸಿದ್ದು, ಕಳೆದ 2014 ರಿಂದ ಇಲ್ಲಿಯವರೆಗೂ ಒಟ್ಟು 10 ಸ್ಥಾನಗಳನ್ನು ಕಳೆದುಕೊಂಡಿದೆ. ಎನ್‌ಡಿಎ ಮೈತ್ರಿಕೂಟದಲ್ಲಿ ಒಟ್ಟು 336 ಸ್ಥಾನಗಳಲ್ಲಿ 32 ಕಳೆದುಕೊಂಡು 304 ಸ್ಥಾನಗಳನ್ನು ಉಳಿಸಿಕೊಂಡಿದೆ. 272 ಸ್ಥಾನಗಳಲ್ಲಿ ಒಂದು ಸ್ಥಾನ ಲೋಕಸಭಾ ಸ್ಪೀಕರ್ ಆಗಿರೋದ್ರಿಂದ ಬಿಜೆಪಿ ಸ್ಥಾನ 271 ಇಳಿದಿದ್ದು, ಬಿಜೆಪಿ ಪಕ್ಷ ಸರಳ ಬಹುಮತ ಹೊಂದಿಲ್ಲ. ಆದರೆ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರಕ್ಕೆ ಯಾವುದೇ ಅಡ್ಡಿಯಿಲ್ಲ. ಹಾಗಾಗಿ 2014 ರಲ್ಲಿ ಬಿಜೆಪಿ ಪಕ್ಷವೇ ಯಾವ ಸಪೋರ್ಟ್ ಇಲ್ಲದೆ ಸರ್ಕಾರ ರಚಿಸುವ ಹಾಗೆ ಬಹುಮತ ಪಡೆದಿತ್ತು. ಆ ಬಳಿಕ ನಡೆದ ಉಪ ಚುನಾವಣೆಯಲ್ಲಿ ಸ್ಥಾನಗಳನ್ನು ಕಳೆದುಕೊಂಡಿದ್ದು, ಸರಳ ಬಹುಮತ ಇಲ್ಲ. ಲೋಕಸಭಾ ಉಪ‌ಚುನಾವಣೆಯಲ್ಲಿ ಮೋದಿ ಸರ್ಕಾರ ಸಾಕಷ್ಟು ಹಿನ್ನಡೆ ಅನುಭವಿಸುತ್ತಿರೋದು ಬಿಜೆಪಿಯ ಅಗ್ರಗಣ್ಯ ನಾಯಕರಿಗೆ ನುಂಗಲಾರದ ತುತ್ತಾಗಿದ್ದು, 2019 ಕ್ಕೆ ಯಾವ ರೀತಿ ಚುನಾವಣೆ ಎದುರಿಸಬೇಕು ಅನ್ನೋ ಲೆಕ್ಕಾಚಾರ ಹಾಕಲಾಗ್ತಿದೆ.

Leave a Reply