ಬಗೆಹರಿದ ಖಾತೆ ಕಸರತ್ತು

ಡಿಜಿಟಲ್ ಕನ್ನಡ ಟೀಮ್:

ಸಮ್ಮಿಶ್ರ  ಸರ್ಕಾರದ ಖಾತೆ ಹಂಚಿಕೆ ವಿವಾದ ಬಗೆ ಹರಿದಿದ್ದು, ಹಣಕಾಸು, ಇಂಧನ, ಲೋಕೋಪಯೋಗಿಯಂತಹ ಪ್ರಮುಖ ಖಾತೆಗಳು ಜೆಡಿಎಸ್‍ಗೆ ದಕ್ಕಿವೆ. ಗೃಹ, ಬೃಹತ್ ನೀರಾವರಿ, ಬೆಂಗಳೂರು ನಗರಾಭಿವೃದ್ಧಿ, ಬೃಹತ್ ಕೈಗಾರಿಕೆ, ಕಂದಾಯ ಸೇರಿದಂತೆ ಪ್ರಮುಖ ಖಾತೆಗಳು ಕಾಂಗ್ರೆಸ್ ಪಾಲಾಗಿವೆ.

ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಡಾ|| ಜಿ. ಪರಮೇಶ್ವರ್ ಹಾಗೂ ಪಕ್ಷದ ಮುಖಂಡರ ಸಮ್ಮುಖದಲ್ಲಿ ನಡೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ರಾಜ್ಯದ ಕಾಂಗ್ರೆಸ್ ಉಸ್ತುವಾರಿ ಹೊಣೆ ಹೊತ್ತ ಕೆ.ಸಿ. ವೇಣುಗೋಪಾಲ್ ಮೈತ್ರಿ ಪಕ್ಷಗಳ ಒಪ್ಪಂದ ಹಾಗೂ ಖಾತೆ ಹಂಚಿಕೆ ಅಲ್ಲದೆ, ಸಮನ್ವಯ ಸಮಿತಿ ರಚನೆ ಕುರಿತಂತೆ ಮಾಹಿತಿ ನೀಡಿದರು.

ಕುಮಾರಸ್ವಾಮಿ ಅವರೇ ಐದು ವರ್ಷಗಳ ಅವಧಿಗೆ ಮುಖ್ಯಮಂತ್ರಿಯಾಗಿ ಕಾಯ್ನಿರ್ವಹಿಸಲಿದ್ದು, ಅವರ ನಾಯಕತ್ವದಲ್ಲೇ ಮೈತ್ರಿ ಸರ್ಕಾರದ ಸಾಮಾನ್ಯ ಕನಿಷ್ಠ ಕಾರ್ಯಕ್ರಮಗಳು ಜಾರಿಗೆ ಬರಲಿವೆ ಎಂದರು. ಸಮನ್ವಯ ಸಮಿತಿ ಅಧ್ಯಕ್ಷರಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇರಲಿದ್ದು, ಸದಸ್ಯರಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಡಾ|| ಜಿ. ಪರಮೇಶ್ವರ್, ಜೆಡಿಎಸ್‍ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡ್ಯಾನಿಷ್ ಅಲಿ ಹಾಗೂ ತಾವು ಇರುತ್ತೇವೆ. ಸರ್ಕಾರಕ್ಕೆ ಬಲ ನೀಡಲು ಈ ಸಮಿತಿ ಪ್ರತಿ ತಿಂಗಳು ಸಭೆ ಸೇರುವುದಲ್ಲದೆ, ಎಲ್ಲಾ ಪ್ರಮುಖ ನಿರ್ಧಾರಗಳನ್ನು ಸಮಿತಿಯಲ್ಲೇ ನಿರ್ಧರಿಸಲಾಗುವುದು. ಮಂತ್ರಿಮಂಡಲ ಸದಸ್ಯರು ಹಾಗೂ ಖಾತೆ ಹಂಚಿಕೆ ಆಗಿರುವಂತೆ ನಿಗಮ-ಮಂಡಳಿಗಳಲ್ಲೂ ಮೂರನೇ ಎರಡು ಭಾಗವನ್ನು ಕಾಂಗ್ರೆಸ್, ಉಳಿದ ಮೂರನೇ ಒಂದು ಭಾಗವನ್ನು ಜೆಡಿಎಸ್ ಪಡೆದುಕೊಳ್ಳಲಿದೆ ಎಂದು ವಿವರಸಿದರು.

ಉಳಿದಂತೆ ಜೆಡಿಎಸ್‍ಗೆ ಹಣಕಾಸು, ಲೋಕೋಪಯೋಗಿ, ಇಂಧನ, ವಾರ್ತಾ, ಗುಪ್ತಚರ, ಯೊಜನಾ ಮತ್ತು ಅಂಕಿ-ಅಂಶ, ಸಹಕಾರ, ಪ್ರವಾಸೋದ್ಯಮ, ಉನ್ನತ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ. ರೇಷ್ಮೆ, ತೋಟಗಾರಿಕೆ, ಮಾಹಿತಿ-ತಂತ್ರಜ್ಞಾನ, ಸಣ್ಣ ನೀರಾವರಿ, ಸಣ್ಣ ಕೈಗಾರಿಕೆ, ಪಶುಸಂಗೋಪನೆ, ಅಬಕಾರಿ ಹಾಗೂ ಸಾರಿಗೆ ಇಲಾಖೆ ನಿರ್ವಹಣೆಯನ್ನು ಆ ಪಕ್ಷದ ಸಚಿವರು ನೋಡಿಕೊಳ್ಳಲಿದ್ದಾರೆ.
ನಮ್ಮ ಪಕ್ಷದ ಪಾಲಿಗೆ ಗೃಹ, ಬೃಹತ್ ನೀರಾವರಿ, ಬೃಹತ್ ಬೆಂಗಳೂರು ಅಭಿವೃದ್ಧಿ, ಬೃಹತ್ ಕೈಗಾರಿಕೆ, ಕಂದಾಯ ಹಾಗೂಮುಜರಾಯಿ, ನಗರಾಭಿವೃದ್ಧಿ, ಗ್ರಾಮೀಣಾಭಿವೃದ್ಧಿ. ಕೃಷಿ, ವಸತಿ, ಸಮಾಜ ಕಲ್ಯಾಣ, ವೈದ್ಯಕೀಯ ಶಿಕ್ಷಣ, ಗಣಿ, ಕಾನೂನು ಮತ್ತು ಸಂಸದೀಯ ವ್ಯವಹಾರ, ಯುವಜನ ಮತ್ತು ಕ್ರೀಡೆ, ವಿಜ್ಞಾನ ಮತ್ತು ತಂತ್ರಜ್ಞಾನ, ವಕ್ಫ್, ಸಕ್ಕರೆ ಖಾತೆಗಳು ನಮ್ಮ ಪಕ್ಷದ ಸಚಿವರು ನಿರ್ವಹಣೆ ಮಾಡಲಿದ್ದಾರೆ. ಯಾರಿಗೆ ಯಾವ ಖಾತೆ ನೀಡಬೇಕು ಎಂಬುದನ್ನು ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳು ನಿರ್ಧರಿಸುತ್ತಾರೆ ಎಂದರು.

ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಚುನಾವಣಾ ಪೂರ್ವ ಮೈತ್ರಿಯೊಂದಿಗೆ ಲೋಕಸಭಾ ಚುನಾವಣೆಯನ್ನು ಎದುರಿಸಲಿವೆ. ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಪತ್ರಿಕಾಗೋಷ್ಠಿಯಲ್ಲಿಂದು ಈ ವಿಷಯ ಸ್ಪಷ್ಟಪಡಿಸಿ, ಸ್ಥಾನಗಳ ಹಂಚಿಕೆ ಕುರಿತು ಚುನಾವಣಾ ಪೂರ್ವದಲ್ಲಿ ನಿರ್ಧರಿಸಲಾಗುವುದು. ವಿಧಾನಸಭಾ ಚುನಾವಣೆಯಲ್ಲಿ ಯಾವುದೇ ಒಂದು ರಾಜಕೀಯ ಪಕ್ಷಕ್ಕೆ ಬಹುಮತ ಲಭ್ಯವಾಗದ ಹಿನ್ನೆಲೆಯಲ್ಲಿ ಜಾತ್ಯತೀತ ಪಕ್ಷಗಳು ಒಂದಾಗಿ ಸರ್ಕಾರ ರಚಿಸಲಾಗಿದೆ. ಇದೇ ಮೈತ್ರಿ ಮತ್ತು ಒಗ್ಗಟ್ಟು ಮುಂಬರುವ ಲೋಕಸಭಾ ಚುನಾವಣೆಗೂ ಇರಲಿದೆ ಎಂದರು

ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ತಮ್ಮ ಮಂತ್ರಿಮಂಡಲವನ್ನು ಬುಧವಾರ ಮಧ್ಯಾನ್ಹ 2 ಗಂಟೆಗೆ ವಿಸ್ತರಿಸಲಿದ್ದಾರೆ. ಸರ್ಕಾರ ರಚನೆ ಮಾಡಿ 12 ದಿನಗಳ ನಂತರ ಮೈತ್ರಿ ಪಕ್ಷಗಳು ಮಂತ್ರಿಮಂಡಲಕ್ಕೆ ತಮ್ಮ ಸದಸ್ಯರ ಆಯ್ಕೆ ಮತ್ತು ಖಾತೆ ಹಂಚಿಕೆ ವಿಷಯದಲ್ಲಿ ಸಫಲರಾಗಿದ್ದಾರೆ. ಉಭಯ ಪಕ್ಷಗಳ ಮುಖಂಡರು ಸುಧೀರ್ಘ ಸಭೆಯ ನಂತರಸಂಜೆ ಮೈತ್ರಿ ಪಕ್ಷದ ಮುಖಂಡರು ಜಂಟಿ ಪತ್ರಿಕಾಗೋಷ್ಠಿಯಲ್ಲಿ ಸಂಪುಟ ವಿಸ್ತರಣೆ, ಖಾತೆ ಹಂಚಿಕೆ, ಸಾಮಾನ್ಯ ಕನಿಷ್ಠ ಕಾರ್ಯಕ್ರಮ ರೂಪುರೇಷೆ ಹಾಗೂ ಸಮನ್ವಯ ಸಮಿತಿ ಕುರಿತಂತೆ ಮಾಹಿತಿ ನೀಡಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಕುಮಾರಸ್ವಾಮಿ ಮಂತ್ರಿಮಂಡಲವನ್ನು ಬುಧವಾರ ವಿಸ್ತರಣೆ ಮಾಡಲಿದ್ದೇವೆ ಎಂದರು. ದೆಹಲಿಯಲ್ಲಿ ನಡೆಯಲಿರುವ ರಾಜ್ಯಪಾಲರ ಸಮ್ಮೇಳನದಲ್ಲಿ ಭಾಗವಹಿಸಲು ರಾಜ್ಯಪಾಲ ವಜೂ ಭಾಯ್ ವಲಾ ಅವರುತೆರಳುತ್ತಿರುವುದರಿಂದ ಭಾನುವಾರ ನಡೆಯಬೇಕಿದ್ದ ಸಂಪುಟ ವಿಸ್ತರಣೆಯನ್ನು ಬುಧವಾರಕ್ಕೆ ಮುಂದೂಡಿದ್ದೇವೆ ಎಂದರು. ಇದು ಪೂರ್ಣ ಪ್ರಮಾಣದ ಸಂಪುಟ ರಚನೆ ಅಲ್ಲ ಎಂಬ ಸುಳಿವು ನೀಡಿದ ಮುಖ್ಯಮಂತ್ರಿ ಅವರು, ಎಷ್ಟು ಮಂದಿ ಮಂತ್ರಿಗಾಳಗಿ ಪ್ರಮಾಣ ವಚನ ಸ್ವೀಕರಿಸುತ್ತಾರೆ ಎಂಬುದನ್ನು ನಂತರ ಉಭಯ ಪಕ್ಷದ ನಾಯಕರು ತೀರ್ಮಾನಿಸಲಿದ್ದಾರೆ ಎಂದು ಹೇಳಿ, ಇದಕ್ಕೆ ಸಂಬಂಧಿಸಿದ ಯಾವುದೇ ಪ್ರಶ್ನೆಗಳಿಗೆ ಉತ್ತರಿಸದೆ ಪತ್ರಿಕಾಗೋಷ್ಠಿ ಕೊನೆಗೊಳಿಸಿದರು.

Leave a Reply