ಜೆಡಿಎಸ್‌ಗೆ ಚಿನ್ನ, ಕಾಂಗ್ರೆಸ್‌ಗೆ ಬೆಳ್ಳಿ!

ಡಿಜಿಟಲ್ ಕನ್ನಡ ಟೀಮ್:

ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಯಾರಿಗೂ ಬಹುಮತ ಬಾರದ ಹಿನ್ನೆಲೆಯಲ್ಲಿ ಭಾರೀ ಕಸರತ್ತು ಮಾಡಿ ಸರ್ಕಾರ ರಚನೆ ಮಾಡಿದ ಜೆಡಿಎಸ್, ಕಾಂಗ್ರೆಸ್ ನಾಯಕರು, ಕೊನೆಗೂ ಸಂಪುಟ ವಿಸ್ತರಣೆಗೆ ಕೈ ಹಾಕಿದ್ದಾರೆ. ಇಂದು ಬೆಳಗ್ಗೆ ದೇವೇಗೌಡರ ನಿವಾಸದಲ್ಲಿ ನಡೆದ ಮಹತ್ವದ ಸಭೆಯಲ್ಲಿ ಖಾತೆ ಹಂಚಿಕೆ ಬಗ್ಗೆ ಚರ್ಚೆ ನಡೆಸಿ ಅಂತಿಮ ಪಟ್ಟಿಯನ್ನು ಮಾಧ್ಯಮಗಳ ಎದುರು ಪ್ರಕಟಿಸಿದ್ದಾರೆ. ಒಟ್ಟು 22 ಖಾತೆಗಳು ಕಾಂಗ್ರೆಸ್ ಪಾಲಾಗಿದ್ದು, 12 ಖಾತೆಗಳನ್ನು ಜೆಡಿಎಸ್ ಪಡೆದುಕೊಂಡಿದೆ. ಮೈತ್ರಿ ಸರ್ಕಾರದಲ್ಲಿ ಅತಿ ದೊಡ್ಡ ಪಕ್ಷವಾಗಿರುವ ಕಾಂಗ್ರೆಸ್ ಸಹಜವಾಗಿಯೇ ಹೆಚ್ಚು ಮಂತ್ರಿ ಸ್ಥಾನಗಳನ್ನು ಪಡೆದಿದ್ದರೂ ಕಾಂಗ್ರೆಸ್ ಪಾಲಿಗೆ ಜೆಡಿಎಸ್ ಮೈತ್ರಿ ಸರ್ಕಾರದ ಕಂಚಿನ ಕೋಟೆ ಎನಿಸುತ್ತಿದೆ. ಈ ಬಗ್ಗೆ ನಾಯಕರು ಬಹಿರಂಗವಾಗಿ ಅಳಲು ತೋಡಿಕೊಳ್ಳದೇ ಇದ್ದರು ಒಡಲಾಳದಲ್ಲಿ ಅಸಮಾಧಾನದ ಬೆಂಕಿ ಕಾರುತ್ತಿದ್ದಾರೆ.

ಜೆಡಿಎಸ್ ಪಾಲಾದ ಖಾತೆಗಳು!

ಮಾಹಿತಿ & ಗುಪ್ತಚರ
ಹಣಕಾಸು, ಅಬಕಾರಿ
ಲೋಕೋಪಯೋಗಿ
ಇಂಧನ
ಸಹಕಾರ
ಪ್ರವಾಸೋದ್ಯಮ
ಶಿಕ್ಷಣ (ವೈದ್ಯಕೀಯ ಬಿಟ್ಟು)
ಪಶುಸಂಗೋಪನೆ & ಮೀನುಗಾರಿಕೆ
ತೋಟಗಾರಿಕೆ & ರೇಷ್ಮೆ
ಸಣ್ಣ ಕೈಗಾರಿಕೆ
ಸಾರಿಗೆ
ಸಣ್ಣ ನೀರಾವರಿ

ಕಾಂಗ್ರೆಸ್ ಪಾಲಾದ ಖಾತೆ..!

ಗೃಹ
ನೀರಾವರಿ
ಬೆಂಗಳೂರು ಅಭಿವೃದ್ಧಿ
ಕೈಗಾರಿಕೆ & ಸಕ್ಕರೆ
ಆರೋಗ್ಯ
ಕಂದಾಯ/ಮುಜರಾಯಿ
ನಗರಾಭಿವೃದ್ಧಿ
ಗ್ರಾಮೀಣಾಭಿವೃದ್ಧಿ
ಕೃಷಿ
ವಸತಿ
ವೈದ್ಯಕೀಯ ಶಿಕ್ಷಣ
ಸಮಾಜಕಲ್ಯಾಣ
ಅರಣ್ಯ & ಪರಿಸರ
ಕಾರ್ಮಿಕ
ಗಣಿ & ಭೂ ವಿಜ್ಞಾನ
ಆಹಾರ
ಹಜ್ & ವಕ್ಫ್ ಬೋರ್ಡ್, ಹಿಂದುಳಿದ ವರ್ಗ
ಕಾನೂನು & ಸಂಸದೀಯ
ವಿಜ್ಞಾನ & ತಂತ್ರಜ್ಞಾನ, ಐಟಿಬಿಟಿ
ಯುವಜನ ಕ್ರೀಡೆ, ಕನ್ನಡ ಸಂಸ್ಕೃತಿ
ಬಂದರು& ಒಳ ಸಾರಿಗೆ ಅಭಿವೃದ್ಧಿ

ಖಾತೆಗಳ ಲೆಕ್ಕದಲ್ಲಿ ಕಾಂಗ್ರೆಸ್‌ಗೆ ಹೆಚ್ಚು ಸ್ಥಾನಗಳನ್ನೇ ಬಿಟ್ಟುಕೊಡಲು ಒಪ್ಪಿರುವ ಜೆಡಿಎಸ್‌, ಪ್ರಮುಖ ಖಾತೆಗಳಾದ ಹಣಕಾಸು, ಅಬಕಾರಿ, ಲೋಕೋಪಯೋಗಿ, ಸಾರಿಗೆ, ಇಂಧನ, ಸಹಕಾರ ಖಾತೆಗಳು ಜೆಡಿಎಸ್ ಪಾಲಾಗಿದ್ದು, ಕೆಲಸಕ್ಕೆ ಬಾರದ ಖಾತೆಗಳನ್ನು ಕಾಂಗ್ರೆಸ್ ಪಡೆದುಕೊಂಡಿದೆ ಅನ್ನೋ ಮಾತುಗಳು ಕೇಳಿ ಬಂದಿದೆ. ಆದ್ರೆ ಈ ಬಗ್ಗೆ ಮಾತನಾಡಿರುವ ಡಿಸಿಎಂ ಪರಮೇಶ್ವರ್, ಜೆಡಿಎಸ್‌ಗೆ ಪ್ರಮುಖ ಕಾಂಗ್ರೆಸ್‌ಗೆ ಕಳಪೆ ಖಾತೆ ಅನ್ನೋದನ್ನು ಹೇಳುವುದು ಸರಿಯಲ್ಲ. ನಮ್ಮ ಉದ್ದೇಶ ಬಿಜೆಪಿ ಸರ್ಕಾರ ರಚನೆ ತಡೆಯುವುದಾಗಿತ್ತು ಅದನ್ನು ಮಾಡಿದ್ದೇವೆ ಎಂದಿದ್ದಾರೆ. ಆದ್ರೆ ಜಲಸಂಪನ್ಮೂಲ ಖಾತೆಗೂ ಮುಖ್ಯಮಂತ್ರಿ ಕುಮಾರಸ್ವಾಮಿ ಪಟ್ಟು ಹಿಡಿದಿದ್ದರು ಎನ್ನಲಾಗಿತ್ತು. ಆದ್ರೆ ಪಟ್ಟು ಬಿಡದ ಕಾಂಗ್ರೆಸ್, ಎಲ್ಲಾ ಖಾತೆಗಳೂ ನಿಮ್ಮ ಬಳಿ ಸೇರಿಕೊಂಡರೆ ಜನರಿಗೆ ಕೆಟ್ಟ ಸಂದೇಶ ರವಾನೆಯಾಗಲಿದೆ ಎಂದು ಮನವೊಲಿಕೆ ಮಾಡಿದರು ಎನ್ನಲಾಗ್ತಿದೆ.

ಹಣಕಾಸು ಖಾತೆ ಜೆಡಿಎಸ್ ಪಾಲಾಗಿರೋದ್ರಿಂದ ಸಾಲ ಮನ್ನಾ ಯೋಜನೆ ಸೇರಿದಂತೆ ಕಾಂಗ್ರೆಸ್ ಪ್ರಣಾಳಿಕೆಯ ಭರವಸೆಗಳು ಈಡೇರಬೇಕಿದ್ದರೆ ಜೆಡಿಎಸ್‌ನ ಹಣಕಾಸು ಖಾತೆ ಮಹತ್ವದ ಕೆಲಸ ನಿರ್ವಹಿಸಲಿದೆ. ಲೋಕೋಪಯೋಗಿ ಖಾತೆಯನ್ನು ಹಿಂದೆ ನಿರ್ವಹಿಸಿದ್ದ ಹೆಚ್. ಡಿ ರೇವಣ್ಣ, ಈ ಬಾರಿ ಇಂದನ ಖಾತೆ ವಹಿಸಿಕೊಳ್ಳಲಿದ್ದಾರೆ ಎನ್ನಲಾಗಿದ್ದು, ಡಿಕೆ ಶಿವಕುಮಾರ್‌ಗೆ ಸೆಡ್ಡು ಹೊಡೆದಿದ್ದಾರೆ. ಕಡೇ ಕ್ಷಣದವರೆಗೂ ಇಂಧನ ಖಾತೆ ಉಳಿಸಿಕೊಳ್ಳಲು ಡಿಕೆಶಿ ನಡೆಸಿದ ಪ್ರಯತ್ನ ಕೈಗೂಡಲಿಲ್ಲ, ಕೊನೆಗೂ ಜೆಡಿಎಸ್ ತನ್ನಬುಟ್ಟಿಗೆ ಹಾಕಿಕೊಂಡಿದೆ.

ಕಾಂಗ್ರೆಸ್ ಗೃಹ, ಜಲಸಂಪನ್ಮೂಲ, ಬೆಂಗಳೂರು ಅಭಿವೃದ್ಧಿ, ಆರೋಗ್ಯ ಖಾತೆ ಪಡೆದುಕೊಂಡಿದ್ದು, ಒಲ್ಲದ ಮನಸ್ಸಿನಲ್ಲೇ ಒಪ್ಪಿಕೊಂಡಿದೆ ಎನ್ನಲಾಗಿದೆ. ಒಂದು ಬಾರಿ ಕಾಂಗ್ರೆಸ್ ನಾಯಕರೂ ಜೆಡಿಎಸ್‌ನ ಪ್ರಸ್ತಾವನೆಗೆ ಒಪ್ಪಿಕೊಳ್ಳದಿದ್ದಾಗ ದೇವೇಗೌಡರೂ ನೇರವಾಗಿ ಕಾಂಗ್ರೆಸ್ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಗೆ ಕರೆ ಮಾಡಿ ತನ್ನ ಖಡಕ್ ನಿರ್ಧಾರ ಹೇಳಿದ್ರು ಎನ್ನಲಾಗಿದೆ. ಆ ಬಳಿಕ ಹೈಕಮಾಂಡ್ ಆದೇಶಕ್ಕೆ ಒಪ್ಪಿಕೊಂಡ ನಾಯಕರು, ನಾವು ಬಿಜೆಪಿಗೆ ಅಧಿಕಾರ ಬಿಟ್ಟು ಕೊಡದೆ ಅಧಿಕಾರದಲ್ಲಿ ಇದ್ದುಕೊಂಡು ಲೋಕಸಭೆ ಚುನಾವಣೆ ಎದುರಿಸೋಣ ಎನ್ನುವ ನಿರ್ಧಾರಕ್ಕೆ ಬಂದರು ಎನ್ನಲಾಗಿದೆ. ಒಟ್ಟರೆ ವಿಧಾನಸಭಾ ಚುನಾವಣೆಯಲ್ಲಿ ಕಡಿಮೆ ಸ್ಥಾನಗಳನ್ನು ಪಡೆದುಕೊಂಡರೂ ಅಧಿಕಾರ ಹಿಡಿದ ಜೆಡಿಎಸ್ ಪಾಲಿಗೆ ದೇವೇಗೌಡರ ಕುಟುಂಬ ನಂಬಿರುವ ಆ ದೇವರೇ ದಯೆ ತೋರಿಸುತ್ತಿರಬಹುದು ಅನ್ನೋದು ಆಸ್ತಿಕರ ಅಭಿಪ್ರಾಯ. ಅದೆಲ್ಲಾ ಯಾವುದೂ ಅಲ್ಲ ದೇವೇಗೌಡರ ಬುದ್ಧಿವಂತಿಕೆ, ತಂತ್ರಗಾರಿಕೆ ಎನ್ನುತ್ತಾರೆ ರಾಜಕೀಯ ಪಂಡಿತರು. ಒಟ್ಟಾರೆ ಖಾತೆ ಹಂಚಿಕೆ ಬಳಿಕ ಜೆಡಿಎಸ್‌ಗೆ ಚಿನ್ನ ಗೆದ್ದರೆ. ಕಾಂಗ್ರೆಸ್‌ಗೆ ಬೆಳ್ಳಿ ಎನ್ನುವಂತಾಗಿದೆ.

Leave a Reply