ಕಾಂಗ್ರೆಸ್ ಟ್ರಬಲ್ ಶೂಟರ್‌ ಡಿಕೆಶಿಗೆ ಗುದ್ದು ಕೊಡ್ತಿರೋದು ಯಾರು?

ಡಿಜಿಟಲ್ ಕನ್ನಡ ಟೀಮ್:

ಕಾಂಗ್ರೆಸ್‌ನಲ್ಲಿ ಒಕ್ಕಲಿಕ ಸಮುದಾಯದ ಪ್ರಬಲ ನಾಯಕ ಎಂದೇ ಗುರುತಿಸಿಕೊಂಡಿರುವ ಡಿಕೆ ಶಿವಕುಮಾರ್‌‌, ಸೂಕ್ತ ಸ್ಥಾನಮಾನ ಸಿಗದೆ ಕಂಗೆಟ್ಟಿದ್ದಾರೆ. ಹೀಗಾಗಿ ಸಮಸ್ಯೆಗಳ ನಿವಾರಣೆಗಾಗಿ ತಮಿಳುನಾಡಿನ ತಿರುವಳ್ಳೂರಿನ ವಿಷ್ಣು ದೇವಾಲಯದಲ್ಲಿ ವಿಶೇಷ ಪೂಜೆ, ಹೋಮ ಹವನ ಮಾಡಿಸುವ ಸಲುವಾಗಿ ನಿನ್ನೆಯೇ ತಮಿಳುನಾಡು ಪ್ರವಾಸ ಕೈಗೊಂಡಿದ್ದಾರೆ ಎನ್ನಲಾಗಿದೆ. ಹಾಗಿದ್ರೆ ಸಿಎಂ ಕುಮಾರಸ್ವಾಮಿ ಜೊತೆಗೂ ಉತ್ತಮ ಬಾಂಧವ್ಯ ಹೊಂದಿರುವ ಡಿ.ಕೆ ಶಿವಕುಮಾರ್‌ಗೆ ಪಕ್ಷದೊಳಗೆ ಉತ್ತಮ ಸ್ಥಾನಮಾನ ಪಡೆಯಲು ಅಡ್ಡಿ ಆಗಿರೋದು ಯಾರು ಅನ್ನೋ ಪ್ರಶ್ನೆ ಇದೀಗ ಉತ್ತರ ಸಿಕ್ಕಿದೆ.

ಕೆಪಿಸಿಸಿ ಅಧ್ಯಕ್ಷ ಸ್ಥಾನ ಡಿ.ಕೆ ಶಿವಕುಮಾರ್‌ಗೆ ವಹಿಸಲು ಕಾಂಗ್ರೆಸ್ ಹೈಕಮಾಂಡ್ ಉತ್ಸುಕತೆ ತೋರಿದೆ. ಆದ್ರೆ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳು ಹೆಚ್ಚಾಗಿದ್ದು ದೆಹಲಿ ಮಟ್ಟದಲ್ಲಿ ಲಾಬಿ ನಡೆಸಲು ಶುರು ಮಾಡಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಬೇಕಾಗಿರುವ ಟಾನಿಕ್ ಕೊಡಲು ಡಿ.ಕೆ ಶಿವಕುಮಾರ್‌ಗೆ ಮಾತ್ರ ಸಾಧ್ಯ ಎಂಬುದನ್ನು ಮನಗಂಡಿರುವ ಹೈಕಮಾಂಡ್, ಡಿಕೆಶಿ ಹೆಗಲಿಗೆ ಹೊಣೆಗಾರಿಗೆ ನೀಡಲು ಮುಂದಾಗಿದೆ. ಇದೀಗ ಆಟ ಶುರು ಮಾಡಿರುವ ಡಿಕೆ ಶಿವಕುಮಾರ್, ನನಗೆ ಮಂತ್ರಿ ಸ್ಥಾನದ ಜೊತೆಗೆ ಕೆಪಿಸಿಸಿ ಸ್ಥಾನ ಕೊಟ್ಟರೆ ನಿಭಾಯಿಸಲು ಸಿದ್ಧ. ಇಲ್ಲದಿದ್ರೆ ನನಗೆ ಯಾವುದೇ ಸ್ಥಾನಮಾನ ಬೇಕಿಲ್ಲ, ಓರ್ವ ಸಾಮಾನ್ಯ ಕಾರ್ಯಕರ್ತನಾಗಿ ಇರಲು ಸಿದ್ಧ ಎಂದಿರೋದು ಹೈಕಮಾಂಡ್‌ಗೆ ತಲೆನೋವು ತರಿಸಿದೆ. ಈ ನಡುವೆ ಮಾಜಿ ಸಿಎಂ ಸಿದ್ದರಾಮಯ್ಯ ಡಿಕೆಶಿ ಅಸ್ತ್ರಕ್ಕೆ ಪ್ರತ್ಯಾಸ್ತ್ರ ರೆಡಿ ಮಾಡ್ತಿದ್ದಾರೆ.

ಬಾದಾಮಿ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿರುವ ಮಾಜಿ ಸಿಎಂ ಸಿದ್ದರಾಮಯ್ಯ, ಹೀಗೊಂದು ತಂತ್ರಗಾರಿಕೆ ಮಾಡುತ್ತಿದ್ದಾರೆ ಎನ್ನಲಾಗ್ತಿದೆ. ಡಿ.ಕೆ ಶಿವಕುಮಾರ್‌ಗೆ ಕೆಪಿಸಿಸಿ ಪಟ್ಟ ಕೊಡಲು ಹೈಕಮಾಂಡ್ ಮನಸ್ಸು ಮಾಡಿದ್ರೂ ಮಾಜಿ ಸಿಎಂ ಮಾತ್ರ ತಮ್ಮ ಗೆಲುವಿನಲ್ಲಿ ಪ್ರಮುಖ ಪಾತ್ರ ನಿಭಾಯಿಸಿದ ಪರಿಷತ್ ಸದಸ್ಯ ಎಸ್.ಆರ್ ಪಾಟೀಲ್‌ಗೆ ಕೆಪಿಸಿಸಿ ಪಟ್ಟ ಕೊಡಿಸಲು ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ. ಇದರ ಭಾಗವಾಗಿ ಒತ್ತಡ ಸೃಷ್ಟಿಸಲು ಕೆಪಿಸಿಸಿ ಕಾರ್ಯಾಧ್ಯಕ್ಷ ಸ್ಥಾನಕ್ಕೂ ರಾಜೀನಾಮೆ ಕೊಡಿಸಿದ್ದಾರೆ. ಒಂದು ವೇಳೆ ಸಿದ್ದರಾಮಯ್ಯ ಅವರ ತಂತ್ರಗಾರಿಕೆ ಇದರಲ್ಲಿ ಇಲ್ಲ ಎನ್ನುವುದಾದರೆ, ಈ ಅಂಶಕ್ಕೆ ಉತ್ತರ ಕೊಡಬೇಕಿದೆ. ಇಂದು ರಾಜೀನಾಮೆ ಬಗ್ಗೆ ಮಾತನಾಡಿರುವ ಎಸ್.ಆರ್ ಪಾಟೀಲ್, ನಾನು ರಾಹುಲ್ ಗಾಂಧಿ ಅವರಿಗೆ ಮೇ 25 ರಂದೇ ರಾಜೀನಾಮೆ ನೀಡಿದ್ದೇನೆ. ಉತ್ತರ ಕರ್ನಾಟಕದಲ್ಲಿ ನೀರಿಕ್ಷಿತ ಮಟ್ಟದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲು ಸಾಧ್ಯವಾಗದ್ದಕ್ಕೆ ಹೊಣೆ ಹೊತ್ತು ರಾಜೀನಾಮೆ ನೀಡಿದ್ದೇನೆ ಎಂದಿದ್ದಾರೆ. ಜೊತೆಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಪ್ರಬಲ ಆಕಾಂಕ್ಷಿ ಅಂತಾನೂ ಹೇಳಿಕೊಂಡಿದ್ದಾರೆ. ಆದರೆ ವಿಧಾನಸಭಾ ಚುನಾವಣೆಯಲ್ಲಿ ಸಮರ್ಥವಾಗಿ ಕೆಲಸ ಮಾಡಿ ಗೆಲ್ಲಿಸಲು ಆಗಲಿಲ್ಲ ಎಂದು ರಾಜೀನಾಮೆ ಕೊಟ್ಟವರ ಕೈಯಲ್ಲಿ ಇಡೀ ಪಕ್ಷವನ್ನೇ ಕೊಡಲು ಸಾಧ್ಯವೇ ಅನ್ನೋದು ಕೆಲವು ಕಾಂಗ್ರೆಸ್ ಮುಖಂಡರ ಮಾತು. ಇದಕ್ಕೆ ಅವರೇ ಉತ್ತರಿಸಬೇಕಿದೆ. ಈಗಾಗಲೇ ಕಾಂಗ್ರೆಸ್ ಬಳಗ ದೆಹಲಿಗೆ ತೆರಳುತ್ತಿದ್ದು, ನಾಳೆ ಹೈಕಮಾಂಡ್ ಜೊತೆ ಚರ್ಚೆ ನಡೆಸಲಿದ್ದಾರೆ. ತಮಿಳುನಾಡಿನ ತಿರುವಳ್ಳೂರಿಗೆವತೆರಳಿರುವ ಡಿಕೆ ಶಿವಕುಮಾರ್ ಕೂಡ ದೆಹಲಿ ತಲುಪಲಿದ್ದಾರೆ. ಹೈಕಮಾಂಡ್ ಕೃಪೆ ಯಾರಿಗೆ ಒಲಿಯಲಿದೆ ಕಾದು ನೋಡ್ಬೇಕು.

Leave a Reply