ಭಾರತದ ಮೇಲೆ ದಾಳಿ ಮಾಡಲು ಉಗ್ರರಿಗೆ ಏಳು ಹಂತದ ತರಬೇತಿ, ಬಂಧಿತ ಉಗ್ರ ಬಾಯ್ಬಿಟ್ಟ ಸತ್ಯ ಏನು?

ಡಿಜಿಟಲ್ ಕನ್ನಡ ಟೀಮ್:
ಭಾರತವನ್ನು ನೇರವಾಗಿ ಎದುರಿಸಲು ಸಾಧ್ಯವಾಗದ ಕಾರಣ ಪಾಕಿಸ್ತಾನ ಉಗ್ರರ ಮೂಲಕ ಪರೋಕ್ಷ ದಾಳಿ ನಡೆಸುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ಭಾರತದ ವಿರುದ್ಧದ ಈ ಪರೋಕ್ಷ ದಾಳಿಗೆ ಪಾಕಿಸ್ತಾನದ ಭಯೋತ್ಪಾದಕ ಸಂಘಟನೆಗಳು ಹೇಗೆ ಯುವಕರನ್ನು ಸೆಳೆದು ತರಬೇತಿ ನೀಡುತ್ತಿದೆ ಎಂಬುದು ಈಗ ಬಹಿರಂಗವಾಗಿದೆ!
ಹೌದು,  ಮಾರ್ಚ್ 20ರಂದು ಜಮ್ಮು ಮತ್ತು ಕಾಶ್ಮೀರದ ಕುಪ್ವಾರ ಜಿಲ್ಲೆಯಲ್ಲಿ ಭಾರತೀಯ ಸೇನೆ ಉಗ್ರರ ವಿರುದ್ಧ ಕಾರ್ಯಾಚರಣೆ ನಡೆಸಿತ್ತು. ಈ ಕಾರ್ಯಾಚರಣೆಯಲ್ಲಿ ಐವರು ಉಗ್ರರನ್ನು ಹತ್ಯೆ ಮಾಡಿ ಓರ್ವ ಉಗ್ರ ಜಬೀವುಲ್ಲಾ ಅವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿತ್ತು. ಸೆರೆ ಸಿಕ್ಕ ಉಗ್ರನ ವಿಚಾರಣೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ಸಂಸ್ಥೆ ಪಾಕಿಸ್ತಾನದ ಉಗ್ರ ಸಂಘಟನೆ ಹೇಗೆ ಭಾರತದ ವಿರುದ್ಧ ಸಮರ ಸಾರಲು ಉಗ್ರರನ್ನು ಹುಟ್ಟುಹಾಕಿ ತರಬೇತಿ ನೀಡುತ್ತಿದೆ ಎಂಬುದನ್ನು ಪತ್ತೆ ಹಚ್ಚಿದೆ.
ಭಾರತದ ವಿರುದ್ಧದ ಉಗ್ರ ದಾಳಿಯ ಮಾಸ್ಟರ್ ಮೈಂಡ್ ಬೇರಾರೂ ಅಲ್ಲ ಅದು ಮುಂಬೈ ದಾಳಿ ರೂವಾರಿ ಲಷ್ಕರ್ ಹಾಗೂ ಜಮಾತ್ ಉದ್ ದವಾ ಸಂಘಟನೆಯ ಮುಖ್ಯಸ್ಥ ಹಫೀಜ್ ಸಯೀದ್ ಹಾಗೂ ಜಾಕಿರ್ ಉಲ್ ರಹಮಾನ್ ಲಖ್ವಿ. ಇವರು ಭಾರತ ವಿರುದ್ಧದ ಹೋರಾಟಕ್ಕೆ ಉಗ್ರರನ್ನು ಹೇಗೆ ತಯಾರುಮಾಡುತ್ತಾರೆ. ಇವರ ಉಗ್ರರ ಕಾರ್ಖಾನೆ ಸ್ವರೂಪ ಹೇಗಿದೆ ನೋಡೋಣ ಬನ್ನಿ.
 • ಈ ಸಂಘಟನೆಯು ಧರ್ಮದ ಯುದ್ಧಕ್ಕಾಗಿ ಜಿಹಾದಿಗಳಾಗಿ ತಮ್ಮ ಪ್ರಾಣವನ್ನು ತ್ಯಾಗಮಾಡಲು ಯಾರೆಲ್ಲ ಸಿದ್ಧರಿದ್ದೇರೋ ಅವರು ನಮ್ಮ ಜತೆ ಕೈಜೋಡಿಸಬಹುದು ಎಂದು ಮುಕ್ತ ಆಹ್ವಾನ ನೀಡುತ್ತಾರೆ.
 • 15-20 ವರ್ಷದ ಯುವಕರನ್ನು ಸಂಘಟನೆಗೆ ಸೇರಿಸಿಕೊಳ್ಳುವುದು ಇವರ ಪ್ರಮುಖ ಆದ್ಯತೆ.
 • ಜಿಲ್ಲಾ, ನಗರ, ಪ್ರದೇಶವಾರು ಹಂತಗಳಲ್ಲಿ ಯುವಕರನ್ನು ಆರಿಸಲಾಗುತ್ತದೆ.
 • ಮಸೂಲ್ (ತರಬೇತಚಿ ನೀಡುವವರು) ಅವರ ನಂತರ ಕಕ್ರೂನ್ (ಉಗ್ರ ಸಂಘಟನೆಗೆ ಸೂಕ್ತವಾದ ಯುವಕರ ಆಯ್ಕೆ ಮಾಡುವವರು)ಗಳು ಯುವಕರನ್ನು ಸಂಘಟನೆಗೆ ಸೇರುವಂತೆ ಪ್ರೇರಣೆ ನೀಡುತ್ತಾರೆ.
 • ಉಗ್ರ ಸಂಘಟನೆ ಸೇರಲು ಆಸಕ್ತಿ ವಹಿಸುವ ಯುವಕರ ಹೆಸರು, ದೂರವಾಣಿ ಸಂಖ್ಯೆ, ವಿಳಾಸ ದಾಖಲಿಸಿಕೊಳ್ಳುತ್ತಾರೆ.
 • ನಂತರ ಇವರನ್ನು ಏಕಾಏಕಿ ಪಾಕಿಸ್ತಾನಕ್ಕೆ ಕಳುಹಿಸಿ ಏಳು ಹಂತಗಳಲ್ಲಿ ವಿವಿಧ ಪ್ರದೇಶಗಳಲ್ಲಿ ತರಬೇತಿ ನೀಡುತ್ತಾರೆ.
ತರಬೇತಿ ಹಂತಗಳು ಹೇಗಿವೆ?
ಉಗ್ರ ಸಂಘಟನೆಗೆ ಆಯ್ಕೆಯಾದ ಯುವಕರಿಗೆ ಲಾಹೋರ್, ಪಾಕಿಸ್ತಾನದ ಪಂಜಾಬ್ ರಾಜ್ಯ ಹಾಗೂ ಮುಜಾಫರಾಬಾದಿನ ಹಲವು ಪ್ರದೇಶಗಳಲ್ಲಿ ತರಬೇತಿ ನೀಡಲಾಗುವುದು.
 • ಮೊದಲ ಹಂತ: ಪಾಕಿಸ್ತಾನದ ಪಂಜಾಬ್‌ನ ಮುರಿಡಿಕೆಯಲ್ಲಿರುವ ದೌರಾ ಬೈತ್-ಉಲ್ ರಿಜ್ವಾನ್ ಕೇಂದ್ರದಲ್ಲಿ ಸಮರ ಅಭ್ಯಾಸ.
 • ಎರಡನೇ ಹಂತ: ಹಬಿಬುಲ್ಲಾಾ ಕಾಡಿನಲ್ಲಿ ಶಸ್ತ್ರಾಸ್ತ್ರ ತರಬೇತಿ.
 • ಮೂರನೇ ಹಂತ: ಅಕ್ಸೆ ಮಸೂರ್ ಶುವೈ ನಾಲಾದಲ್ಲಿ, ನಕ್ಷೆ ಅಧ್ಯಯನ, ಜಿಪಿಎಸ್ ತಂತ್ರಜ್ಞಾನಗಳ ಕುರಿತು ಮಾಹಿತಿ.
 • ನಾಲ್ಕನೇ ಹಂತ: ಮುಜಾಫರಾಬಾದಿನ ಕರಾಚಿ ಫುಡ್ ಸೆಂಟರ್ ದಾಳಿಯ ಸಂದರ್ಭದಲ್ಲಿ ಆಹಾರ ಹೊಂದಿಸಿಕೊಳ್ಳುವ ಕುರಿತು ಮಾರ್ಗದರ್ಶನ.
 • ಐದನೇ ಹಂತ: ಡೈಕೆನ್ ಪ್ರದೇಶದಲ್ಲಿ ಗಡಿ ಹಾಗೂ ಭದ್ರತಾ ಉದ್ದೇಶದಿಂದ ಕಟ್ಟಲಾಗಿರುವ ದೊಡ್ಡ ಗೋಡೆಗಳನ್ನು ಹತ್ತುವುದು ಹೇಗೆ ಎಂಬುದರ ತರಬೇತಿ.
 • ಆರನೇ ಹಂತ: ಮಸ್ಕರ್ ಖೈಬಲ್ ಕೇಂದ್ರದಲ್ಲಿ ಆತ್ಮಹತ್ಯಾ ಬಾಂಬ್ ದಾಳಿಯ ಬಗ್ಗೆ ತರಬೇತಿ.
 • ಏಳನೇ ಹಂತ: ಜಮಾತ್ ಉದ್ ದವಾ ಸಂಘಟನೆಯ ಮುಖ್ಯ ಕಚೇರಿಯಲ್ಲಿ ಮದ್ದುಗುಂಡು ಮತ್ತು ಶಸ್ತ್ರಾಸ್ತ್ರ ಹಾಗೂ ಬಟ್ಟೆಗಳನ್ನು ಸರಬರಾಜು ಮಾಡುವ ತಾಲೀಮು.

Leave a Reply