ರಾಜ್ಯ ಸರ್ಕಾರದಲ್ಲಿ ಅಸ್ಥಿರತೆ? ಮುಖ್ಯಮಂತ್ರಿ ಮಾತಿನ ಅರ್ಥವೇನು?

ಡಿಜಿಟಲ್ ಕನ್ನಡ ಟೀಮ್:

ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಯಾರಿಗೂ ಬಹುಮತ ಬಾರದೆ ಇರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮೈತ್ರಿಯೊಂದಿಗೆ ಜೆಡಿಎಸ್ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಆದ್ರೆ ಈ ಸರ್ಕಾರ ಅನೈತಿಕವಾಗಿದ್ದು‌ ಕೆಲವೇ ದಿನಗಳಲ್ಲಿ ಬಿದ್ದು ಹೋಗಲಿದೆ, ಚುನಾವಣೆಗೆ ಸಜ್ಜಾಗಿ ಎಂದು ಬಿಜೆಪಿ ನಾಯಕರು ಬಂದಲ್ಲಿ ಹೋದಲ್ಲಿ ಕಾರ್ಯಕರ್ತರಲ್ಲಿ ಹೇಳುತ್ತಿದ್ದಾರೆ.

ಆದ್ರೆ ಕಾಂಗ್ರೆಸ್ ನಾಯಕರು ಹಾಗೂ ಜೆಡಿಎಸ್ ನಾಯಕರು ಈ ಸರ್ಕಾರ ಐದು ವರ್ಷ ಒಮ್ಮತದಿಂದ ಪೂರ್ಣಗೊಳಿಸಲಿದೆ ಎನ್ನುತ್ತಿದ್ದಾರೆ. ಆದರೆ ಅಲ್ಲೊಮ್ಮೆ ಇಲ್ಲೊಮ್ಮೆ ಕಾಂಗ್ರೆಸ್ ನಾಯಕರೇ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಿರುವುದಕ್ಕೆ ಅಪಸ್ವರವನ್ನೂ ಎತ್ತುತ್ತಿದ್ದಾರೆ. ಇಂಧನ ಖಾತೆ ಜೆಡಿಎಸ್ ಪಾಲಾಗಿದ್ದಕ್ಕೆ ಮುನಿಸಿಕೊಂಡಿದ್ದ ಡಿ.ಕೆ ಶಿವಕುಮಾರ್, ನಾನು ಪಕ್ಷದ ಸಾಮಾನ್ಯ ಕಾರ್ಯಕರ್ತ, ಸರ್ಕಾರ ರಚನೆ, ಸಂಪುಟ ವಿಸ್ತರಣೆ ಅವುಗಳನ್ನು ದೊಡ್ಡವರು ನೋಡಿಕೊಳ್ತಾರೆ ಅಂದಿದ್ದರು. ಆ ಬಳಿಕ ಪರಮೇಶ್ವರ್ ಕೂಡ ಪಕ್ಷದ ನಾಯಕರ ಸಭೆಯಲ್ಲಿ ನಾವು ಜೆಡಿಎಸ್‌ ಜೊತೆ ಸೇರಿ ಅಧಿಕಾರ ನಡೆಸುತ್ತಿರೋದು ಬೇಸರ ಎಂದಿದ್ದಾರೆ ಅಂತ ಸುದ್ದಿಯಾಗಿತ್ತು.

ಸಮ್ಮಿಶ್ರ ಸರ್ಕಾರ ರಚನೆ ಮಾಡಿದ ಬಳಿಕ ಕಾಂಗ್ರೆಸ್, ಜೆಡಿಎಸ್‌ ನಾಯಕರು ಯಾಕೆ ಹೀಗೆ ಮಾತನಾಡ್ತಿದ್ದಾರೆ ಅನ್ನೋ ಗೊಂದಲದಲ್ಲಿ ಇದ್ದರು. ಕಾಂಗ್ರೆಸ್ ರಾಜ್ಯ ಉಸ್ತುವಾರಿ ವೇಣುಗೋಪಾಲ್ ಘೋಷಣೆ ಬಳಿಕವೂ ನಾಯಕರು ಸರಿ ದಾರಿಗೆ ಬರುತ್ತಿಲ್ಲವಲ್ಲ ಎಂದು ಮಾತನಾಡಿಕೊಳ್ತಿರುವಾಗ ಇಂದು ಸಿಎಂ ಕುಮಾರಸ್ವಾಮಿ ಕೂಡ ಅದನ್ನೇ ಪುನರುಚ್ಛಾರ ಮಾಡಿದ್ದಾರೆ. ನಾನು ಎಷ್ಟು ದಿನ‌ ಮುಖ್ಯಮಂತ್ರಿಯಾಗಿ ಇರುತ್ತೇನೆ ಅನ್ನೋದು ಗೊತ್ತಿಲ್ಲ, ನನಗೆ ಎಷ್ಟು ದಿನ ಕಾಂಗ್ರೆಸ್‌ನವರು ಬೆಂಬಲ‌ ಕೊಡ್ತಾರೆ ಅನ್ನೋದು ಗೊತ್ತಿಲ್ಲ. ಆದ್ರೆ ಈ‌ ಸರ್ಕಾರವನ್ನ‌ ಮುನ್ನಡೆಸುವುದು ಗೊತ್ತಿದೆ. ಮೈತ್ರಿ ಸರ್ಕಾರವನ್ನು, ನಾಯಕರನ್ನು ಹೇಗೆ ನಿಭಾಯಿಸಬೇಕು ಎಂಬುದೂ‌ ಗೊತ್ತಿದೆ ಎಂದಿದ್ದಾರೆ. ಅಂದರೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರಿಗೂ ಈ ಸರ್ಕಾರ ಎಷ್ಟು ದಿನ ಉಳಿಯುತ್ತೆ ಅನ್ನೋ ಆಲೋಚನೆ ಹುಟ್ಟಿಕೊಂಡಿರಬೇಕು ಎನಿಸುವುದು ಸಹಜ.. ಆದ್ರೆ ನಿಮ್ಮ ಅನಿಸಿಕೆ ಈಗಿನ ರಾಜಕೀಯದಲ್ಲಿ ನಿಜ ಎನಿಸುವುದಿಲ್ಲ.. ಹಾಗಿದ್ರೆ ನಿಜ ಕಾರಣ ಏನು..? ಅನ್ನೋದು ನಿಮ್ಮ ಪ್ರಶ್ನೆ.. ಅಲ್ಲವೇ..?

ಈ ಸರ್ಕಾರ ಅಸ್ಥಿರತೆ ಬರೋದಕ್ಕೆ ಕನಕಪುರದ ಕಾಂಗ್ರೆಸ್ ನಾಯಕ ಡಿ.ಕೆ ಶಿವಕುಮಾರ್ ಪ್ರಮುಖ ಕಾರಣಕರ್ತ. ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ ಡಿಕೆ ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡ್ತೇನೆ ಅನ್ನೋ ಆಶ್ವಾಸನೆಗೆ ತೃಪ್ತರಾಗದೆ ಸಚಿವ ಸ್ಥಾನಕ್ಕಾಗಿ ಪೈಪೋಟಿ ನಡೆಸುತ್ತಿದ್ದಾರೆ. ಹಾಗಾಗಿ ಕಾಂಗ್ರೆಸ್ ಹೈಕಮಾಂಡ್ ಕೂಡ ಡಿಕೆ ಶಿವಕುಮಾರ್ ಬೇಡಿಕೆಗೆ ಅಸ್ತು‌ ಅಂದರೂ ಅಚ್ಚರಿಯಿಲ್ಲ. ಇದರಿಂದ ಕಂಗಾಲಾದ ಪರಮೇಶ್ವರ್, ಡಿಸಿಎಂ ಆಗಿದ್ದರೂ ಉತ್ತಮ ಖಾತೆ ಕೈ ತಪ್ಪುವ ಮುನ್ಸೂಚನೆ ಸಿಕ್ಕಿದೆಯಂತೆ. ಡಿಕೆಶಿ ಬಳಸಿದ ಮಾರ್ಗವನ್ನೇ ಪರಮೇಶ್ವರ್ ಕೂಡ ಮಾನದಂಡವಾಗಿ ಇಟ್ಟುಕೊಂಡು ಜೆಡಿಎಸ್ ಜೊತೆ ಸೇರಿ ಸರ್ಕಾರ ರಚನೆ ಮಾಡಿರೋದಕ್ಕೆ ಅಸಮಾಧಾನದ ಮಾತುಗಳನ್ನು ಆಡಿದ್ದಾರೆ ಅನ್ನೊ ಮಾತುಗಳನ್ನು ಕಾಂಗ್ರೆಸ್ ಶಾಸಕರೇ ಹೇಳುತ್ತಿದ್ದಾರೆ. ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೂ ಅಸಮಾಧಾನ ಇದೆ ಎಂದು ಹೇಳಲಾಗ್ತಿತ್ತು. ಈ ಬಗ್ಗೆ ಮಾತನಾಡಿರುವ ಖರ್ಗೆ, ಕುಮಾರಸ್ವಾಮಿ ಅವರು ಐದು ವರ್ಷ ಮುಖ್ಯಮಂತ್ರಿ ಆಗಿ ಇರಬೇಕು ಅನ್ನೋದು ಹೈಕಮಾಂಡ್ ಮಾಡಿರುವ ನಿರ್ಣಯ, ಈ ನಿರ್ಣಯವನ್ನು ನಾನೂ ಸೇರಿದಂತೆ ಪಕ್ಷದ ಯಾವೊಬ್ಬ ನಾಯಕನೂ ವಿರೋಧಿಸಿಲ್ಲ. ನಾನು ಈ ಬಗ್ಗೆ ಯಾರನ್ನೂ ಭೇಟಿಯಾಗಿಲ್ಲ, ಯಾರ ಜೊತೆಯೂ ಚರ್ಚಿಸಿಲ್ಲ ಎಂದಿದ್ದಾರೆ. ಖರ್ಗೆಯವರು ಇಷ್ಟು ಹೇಳಿದ ಮೇಲೆ ಜನರಿಗೆ ಗೊತ್ತಾಗೋದು ಏನಂದ್ರೆ ಒಳ್ಳೆಯ ಖಾತೆ ಮೇಲೆ ಕಣ್ಣಿಟ್ಟಿರುವ ಕಾಂಗ್ರೆಸ್ ಈ ರೀತಿಯಲ್ಲಾ ಹೇಳಿಕೆ ಕೊಡ್ತಿದ್ದಾರೆ, ಕಾಂಗ್ರೆಸ್ ನಾಯಕರನ್ನೇ ಘಾಸಿಗೊಳಿಸಲು ಮುಖ್ಯಮಂತ್ರಿ ಕೂಡ ತಿರುಬಾಣ ಮಾಡುತ್ತಿದ್ದಾರೆ.

ಇವರಿಬ್ಬರ ಮೈತ್ರಿ ಸಾಕಷ್ಟು ದಿನ ಇರುತ್ತೆ.. ಯಾಕಂದ್ರೆ 10 ವರ್ಷ ಅಧಿಕಾರಕ್ಕೆ ಬಾರದೆ ಜೆಡಿಎಸ್ ಕೂಡ ಉಸಿಗಟ್ಟಿದೆ. ದೇಶದಲ್ಲಿ ಎಲ್ಲಾ ಕಡೆ ಅಧಿಕಾರ ಕಳೆದುಕೊಂಡಿರುವ ಕಾಂಗ್ರೆಸ್ ಕೂಡ ಕಂಗಾಲಾಗಿದೆ.

Leave a Reply