ಅಖಾಡದೊಳಗೇ ಖೆಡ್ಡಾ ತೋಡುವ ಜಗಜಟ್ಟಿಗಳು!

 ಈ ರಾಜಕಾರಣ ಅನ್ನೋದು ಯಾರನ್ನು ಎಲ್ಲಿಗೆ ಎತ್ತಿ ಒಗಾಯಿಸುತ್ತದೋ, ಯಾರನ್ನು ಹೇಗೆ ಕುಕ್ಕಿ ಬಿಸಾಡುತ್ತದೋ, ಯಾರನ್ನು ಕೈಹಿಡಿದು ಮುನ್ನಡೆಸುತ್ತದೋ ಎಂದು ಊಹಿಸಲು ಅಸಾಧ್ಯ. ಮೇಲಿದ್ದವರು ದೊಪ್ಪನೆ ಕೆಳಗೆ ಬೀಳುತ್ತಾರೆ. ಕೆಳಗಿದ್ದವರು ರೊಯ್ಯನೆ ಮೇಲೇರುತ್ತಾರೆ. ಎಲ್ಲ ಮುಗಿದೇ ಹೋಯಿತು ಎಂದುಕೊಂಡವರು ಫೀನಿಕ್‌ಸ್ನಂತೆ ಬೂದಿಯಿಂದ ಮೇಲೆದ್ದು ಹಾರುತ್ತಿರುತ್ತಾರೆ. ಇನ್ನು ಭುವಿಗೂ ತಮಗೂ ಸಂಬಂಧವೇ ಇಲ್ಲವೆಂಬಂತೆ ಬಾನಲ್ಲಿ ತೇಲಾಡುತ್ತಿದ್ದವರು ರಾವಣನ ಕತ್ತಿಯೇಟಿಗೆ ಸಿಕ್ಕ ಜಟಾಯುವಿನಂತೆ ರೆಕ್ಕೆಪುಕ್ಕ ಕಳೆದುಕೊಂಡು ನೆಲದ ಬಿದ್ದು ಒದ್ದಾಡುತ್ತಿರುತ್ತಾರೆ.

ಬೆನ್ನು ಹುಣ್ಣಿನಿಂದ ನರಳುತ್ತಿರುವವರಿಗೆ ಏಕಮಗ್ಗಲು ಅಸಹನೀಯ. ಜಪ್ಪಯ್ಯ ಅಂದರೂ ಒಂದು ಕಡೆ ಮಗ್ಗಲಿಡಲು ಆಗುವುದಿಲ್ಲ. ಈ ರಾಜಕೀಯ ವ್ರಣವೂ ಹಾಗೇ. ಅಸ್ಥಿರತೆಯೇ ಅದರ ಸ್ಥಿರತೆ. ಕ್ಷಣಕ್ಷಣಕ್ಕೂ ಮಗ್ಗಲು ತಿರುಗಿಸುವ ಅನಿವಾರ್ಯ ಕರ್ಮ. ಬಣ್ಣ ಬದಲಿಸುವಲ್ಲಿ ಗೋಸುಂಬೆಯನ್ನು ಬಡಿದು ಮಲಗಿಸುವುದೇ ಅದರ ಮರ್ಮ. ಹೀಗಾಗಿ ಇಲ್ಲಿ ನಿಖರತೆಗೆ ಆಸ್ಪದವಿಲ್ಲ. ಘಟಿಸುವ ಸಂಗತಿಗಳಿಗೆ ಕಡಿವಾಣವಿಲ್ಲ. ಏನೋ ಎಣಿಸಿರುತ್ತಾರೆ, ಮತ್ತಿನ್ನೇನೋ ನಡೆದು ಹೋಗಿರುತ್ತದೆ. ಬಂದದನ್ನು ಅನುಭವಿಸುವುದು ಬಿಟ್ಟು ಗತ್ಯಂತರವಿಲ್ಲ. ತಂತ್ರ, ಕುಲುಮೆಯೊಳಗೆ ಸದಾ ಬೇಯುವ ಅವಕಾಶಗಳ ಸವಾರಿಯೇ ರಾಜಕಾರಣ ಎನಿಸಿಕೊಂಡಿರುವುದರಿಂದ ಯಾರ್ಯಾರ ತಟ್ಟೆಯಲ್ಲಿ ಏನೇನೋ ಬೀಳುತ್ತದೋ ಹೇಳಲು ಆಗುವುದಿಲ್ಲ.

ಕರ್ನಾಟಕದ ಅತಂತ್ರ ವಿಧಾನಸಭೆಯ ಅನಿವಾರ್ಯ ಕೂಸಾದ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ಸರಕಾರ ರಚನೆ ಪ್ರಕ್ರಿಯೆ ಸುತ್ತಮುತ್ತಲಿನ ಬೆಳವಣಿಗೆಗಳನ್ನು ಅವಲೋಕಿಸಿದಾಗ ವ್ಯಕ್ತಿತ್ವವನ್ನು ಅವಕಾಶಗಳು ಮರೆಸುತ್ತದೆ, ಅವಕಾಶಗಳನ್ನು ಅದೃಷ್ಟ ಮೆರೆಸುತ್ತದೆ, ಮೀರಿಸುತ್ತದೆ ಮತ್ತು ಆಪೋಶನ ತೆಗೆದುಕೊಳ್ಳುತ್ತದೆ ಎಂಬುದು ಮುಳ್ಳಿನ ಮೊನೆಯಷ್ಟು ಅನುಮಾನಕ್ಕೂ ಆಸ್ಪದವಿಲ್ಲದಂತೆ ಸಾಬೀತಾಗಿದೆ. ಗುಪ್ತಗಾಮಿನಿಯಂತೆ ಹರಿದ ಆಡಳಿತವಿರೋಧಿ ಅಲೆಯಲ್ಲಿ ಮುಳುಗೇ ಹೋದರೆಂದು ಭಾವಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮೈತ್ರಿ ಸರಕಾರದ ಸಮನ್ವಯ ಸಮಿತಿ ಅಧ್ಯಕ್ಷರಾಗುವ ಮೂಲಕ ತಾವಿನ್ನೂ ಸಬಲ ಎಂಬುದನ್ನು ಬಿಂಬಿಸಿದ್ದಾರೆ.

37 ಕುದುರೆಗಳನ್ನು ಇಟ್ಟುಕೊಂಡೇ ತಮಗಿಂತಲೂ ಎರಡು ಪಟ್ಟು ಅಶ್ವದಳ ಹೊಂದಿರುವ ಕಾಂಗ್ರೆಸ್‌ನ ಬೇಷರತ್ ಬೆಂಬಲ ಗಿಟ್ಟಸಿ ಮುಖ್ಯಮಂತ್ರಿ ಆಗಿರುವ ಎಚ್.ಡಿ. ಕುಮಾರಸ್ವಾಮಿ ಅವರು ತಾವು ಇನ್ನೂ ಸ್ಟ್ರಾಂಗ್ ಎಂದು ನಿರೂಪಿಸಿದ್ದಾರೆ. ಆದರೆ ಕಾಂಗ್ರೆಸ್‌ನ ಒಂದೂ ಕುದುರೆಯು ಬಿಜೆಪಿ ಮೇವಿನ ಮೆದೆ ಬಳಿ ಹೋಗದಂತೆ ಹಿಡಿದಿಟ್ಟುಕೊಂಡು ಮೈತ್ರಿ ಸರಕಾರವನ್ನು ದಡಕ್ಕೆ ತಂದು ನಿಲ್ಲಿಸಿದ ಪವರ್ ಮಿನಿಸ್ಟರ್ ಡಿ.ಕೆ. ಶಿವಕುಮಾರ್ ಮಾತ್ರ ಕಳೆದು ಹೋಗಿದ್ದಾರೆ. ಕಾಂಗ್ರೆಸ್ ಹಾಗೂ ಮೈತ್ರಿ ಸರಕಾರ ಉಳಿಸಲು ಮೈಮೇಲೆ ಎಳೆದುಕೊಂಡ ಕೇಂದ್ರ ಸರಕಾರದ ಸುಪಾರಿ ತನಿಖಾ ಸಂಸ್ಥೆಗಳಾದ ಐಟಿ ಹಾಗೂ ಸಿಬಿಐ ದಾಳಿ ಎಂಬ ಹೆಬ್ಬಂಡೆಗಳ ನಡುವೆ!

ನಿಜ, ಚಾಮುಂಡೇಶ್ವರಿಯಲ್ಲಿ ಸೋತು ಸುಣ್ಣವಾಗಿ, ಬಾದಾಮಿಯಲ್ಲಿ ಕುಟುಕುಜೀವ ಹಿಡಿದುಕೊಂಡ ಮಾಜಿ ಸಿಎಂ ಸಿದ್ದರಾಮಯ್ಯನವರ ರಾಜಕೀಯ ಕತೆ ಮುಗಿದೇ ಹೋಯಿತು ಎಂದು ಎಲ್ಲರೂ ಬಗೆದಿದ್ದರು. ಅದೂ ಅಲ್ಲದೆ, ಒಂದೂವರೇ ದಶಕದಿಂದ ತಾವು ಕಡುವಾಗಿ ಬಂದಿದ್ದ ಮಾಜಿ ಪ್ರಧಾನಿ ದೇವೇಗೌಡರ ಕುಟುಂಬದ ಕುಡಿ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಲು ಕಾಂಗ್ರೆಸ್ ಬೇಷರತ್ ಬೆಂಬಲ ವ್ಯಕ್ತಪಡಿಸಿದಾಗಲಂತೂ ಸಿದ್ದರಾಮಯ್ಯನವರ ಸ್ಥಿತಿ ಯಾರಿಗೂ ಬೇಡ ಎಂಬ ಭಾವನೆ ವ್ಯಾಪಿಸಿತ್ತು. ಆದರೆ ಇದೀಗ ಅದೇ ಸಿದ್ದರಾಮಯ್ಯನವರು ಮೈತ್ರಿ ಸರಕಾರದ ಲಗಾಮು ಹಿಡಿದು ಕೂತಿದ್ದಾರೆ; ಕಾಂಗ್ರೆಸ್-ಜೆಡಿಎಸ್ ಸರಕಾರದ ಸಮನ್ವಯ ಸಮಿತಿ ಅಧ್ಯಕ್ಷರಾಗುವ ಮೂಲಕ. ಸಿದ್ದರಾಮಯ್ಯನವರ ಅಣತಿ ಇಲ್ಲದೆ ಈ ಸರಕಾರದಲ್ಲಿ ಗರಿಕೆ ಕೂಡ ಅಲುಗಾಡುವಂತಿಲ್ಲ. ನೀತಿ-ನಿರೂಪಣೆ ವಿಚಾರಗಳಲ್ಲಂತೂ ಈ ಸಮಿತಿಯದೇ ಪಾರುಪತ್ಯ. ಮತ್ತಿತರ ವಿಚಾರದಲ್ಲಿ ಸಿಎಂ ಕುಮಾರಸ್ವಾಮಿ ಅವರದೇ ಪರಮಾಧಿಕಾರ ಎಂದು ಒಪ್ಪಂದ ಪತ್ರದಲ್ಲಿ ಇದ್ದರೂ ಅದರ ಕೆಲ ಅಂಶಗಳನ್ನು ಸಮನ್ವಯ ಸಮಿತಿ ವ್ಯಾಪ್ತಿಗೆ ತರಲು ಒತ್ತಡ ತರುತ್ತಿದ್ದಾರೆ. ದೇವೇಗೌಡರ ರಾಜಕೀಯ ಗರಡಿಯಲ್ಲೇ ಪೈಲ್ವಾನ್ ಆಗಿರುವ ಸಿದ್ದರಾಮಯ್ಯ ಅವರನ್ನು ಅಖಾಡದಲ್ಲಿಟ್ಟು ಕಾಂಗ್ರೆಸ್‌ಗೆ ಜೆಡಿಎಸ್ ಖೆಡ್ಡಾ ತೋಡದಂತೆ ನೋಡಿಕೊಳ್ಳುವುದು ಹೈಕಮಾಂಡ್ ಈ ನಿರ್ಣಯದ ಹಿಂದಿರುವ ಇರಾದೆ.

ಹಾಗೇ ನೋಡಿದರೆ ಜೆಡಿಎಸ್ ಮುಖಂಡರಿಗೆ ಇದು ಇಷ್ಟವಿರಲಿಲ್ಲ. ಆದರೂ ಒಪ್ಪಿಕೊಳ್ಳಲೇಬೇಕಾದ ಅನಿವಾರ್ಯತೆ. ಮೊದಲೇ ಎರಡು ದೋಣಿ ಪಯಣ. ಸುಮ್ಮನೆ ಯಾಕೆ ಯಡವಟ್ಟು ಮಾಡಿಕೊಳ್ಳುವುದು ಅಂತಾ. ಏಕೆಂದರೆ ತರಾತುರಿಯಲ್ಲಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಯಡಿಯೂರಪ್ಪನವರು ವಿಶ್ವಾಸಮತ ಯಾಚನೆ ಪ್ರಸ್ತಾವನೆಯನ್ನೇ ಕೈಬಿಟ್ಟ ಸಂದರ್ಭದಲ್ಲಿ ಸಿದ್ದರಾಮಯ್ಯನವರ ಪರ ಅಗಾಧ ಅನುಕಂಪ ಸ್ಫುರಿಸಿದ್ದರು. ಸಿಎಂ, ಡಿಸಿಎಂ ಪ್ರಮಾಣ ಸ್ವೀಕಾರ ಸಂದರ್ಭದಲ್ಲಿ ಮೂಲೆ ಸೇರಿದ್ದ ಸಿದ್ದರಾಮಯ್ಯನವರನ್ನು ನೋಡಿ ಕರಳು ಚುರುಕ್ಕೆಂತು ಅಂತೆಲ್ಲ ಗೋಳಾಡಿದ್ದರು. ತಮ್ಮ ಹೋರಾಟ ಏನಿದ್ದರೂ ಅಪ್ಪ-ಮಕ್ಕಳ (ದೇವೇಗೌಡರ ಕುಟುಂಬ) ವಿರುದ್ಧವೇ ಹೊರತು ಕಾಂಗ್ರೆಸ್ ಅಥವಾ ಸಿದ್ದರಾಮಯ್ಯನವರ ವಿರುದ್ಧ ಅಲ್ಲ ಎಂದೂ ಯಡಿಯೂರಪ್ಪನವರಿಗೆ ಚೆನ್ನಾಗಿ ಗೊತ್ತಿತ್ತು. ತಾವು ಮುಖ್ಯಮಂತ್ರಿ ಆಗುವುದು ತಮ್ಮ ಪಕ್ಷದ ಅನೇಕ ಮುಖಂಡರಿಗೆ ಹೇಗೆ ಇಷ್ಟವಿಲ್ಲವೋ ಅದೇ ರೀತಿ ಕುಮಾರಸ್ವಾಮಿ ಮುಖ್ಯಮಂತ್ರಿ ಆಗುವುದು ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್‌ನ ಬಹುತೇಕ ರಾಜ್ಯ ನಾಯಕರಿಗೆ ಇಷ್ಟವಿಲ್ಲ ಎನ್ನುವುದು.

ನಾಳೆ ಸಂದರ್ಭವೇನಾದರೂ ಒದಗಿ ಬಂದರೆ ಸಿದ್ದರಾಮಯ್ಯನವರು ಒಂದು ಕಣ್ಸನ್ನೆ ಮಾಡಿದರೂ ಸಾಕು ಕಾಂಗ್ರೆಸ್‌ನ ಒಂದಷ್ಟು ಶಾಸಕರು ತಮ್ಮ ತೆಕ್ಕೆಗೆ ಬಿದ್ದು ಬಿಜೆಪಿ ಸರಕಾರ ಬರಬಹುದು, ಆಗ ತಾವೇ ಮತ್ತೊಮ್ಮೆ ಮುಖ್ಯಮಂತ್ರಿ ಆಗಬಹುದು ಎನ್ನುವುದು ‘ಕಲ್ಪನಾ ಲೆಕ್ಕಾಚಾರ’. ರಾಜಕೀಯ ಗರಡಿಯಲ್ಲಿ ಸಾಕಷ್ಟು ಕರಡಿಗಳನ್ನು ಪಳಗಿಸಿರುವ ದೇವೇಗೌಡರಿಗೆ ಇದು ಅರ್ಥವಾಗದ ವಿಚಾರವೇನೂ ಅಲ್ಲ. ಹೀಗಾಗಿ ಸಿದ್ದರಾಮಯ್ಯ ಸಮನ್ವಯ ಸಮಿತಿ ಅಧ್ಯಕ್ಷರಾಗುವುದಕ್ಕೆ ಹೆಚ್ಚಿನ ತಗಾದೆ ತೆಗೆಯಲು ಹೋಗಿಲ್ಲ. ಅಷ್ಟರ ಮಟ್ಟಿಗೆ ಸಿದ್ದರಾಮಯ್ಯ ಸ್ಟ್ರಾಂಗ್ ಆಗಿದ್ದಾರೆ.

ಇನ್ನೂ ಕುಮಾರಸ್ವಾಮಿ ಅವರ ವಿಚಾರಕ್ಕೆ ಬರುವುದಾದರೆ ಅವರ ಶಕ್ತಿಯನ್ನು ಅದೃಷ್ಟ ಹಿಗ್ಗಿಸಿದೆ. ಕಾಂಗ್ರೆಸ್ ಹೈಕಮಾಂಡ್ ಒಂದಿನಿತೂ ಚರ್ಚೆಗೆ ಆಸ್ಪದ ಇಲ್ಲದಂತೆ ಅವರನ್ನು ಸಿಎಂ ಮಾಡಲು ಬೇಷರತ್ ನೀಡಿದ್ದೆ ಅಲ್ಲದೇ, ಮುಂದಿನ ಐದು ಅವರೇ ಪೂರ್ಣಾವಧಿ ಸಿಎಂ ಎಂದು ಘೋಷಿಸಿರುವುದು ಇದಕ್ಕೆ ಸಾಕ್ಷಿ. ರಾಷ್ಟ್ರ ರಾಜಕಾರಣದಲ್ಲಿ ಮೋದಿಯವರನ್ನು ಕಟ್ಟಿಹಾಕಲು ಕಾಂಗ್ರೆಸ್ ಹೈಕಮಾಂಡ್‌ಗೆ ಇದು ಅನಿವಾರ್ಯವಾಗಿತ್ತು ಎಂಬುದು ಸರಿ. ಆದರೆ ಬೇಷರತ್ ಬೆಂಬಲ ಕೊಟ್ಟದ್ದು ಅನೇಕ ರಾಜ್ಯ ನಾಯಕರಿಗೆ ಇಷ್ಟವಿರಲಿಲ್ಲ. ಹೀಗಾಗಿ 30:30 ತಿಂಗಳ ಅವಧಿಗೆ ಮುಖ್ಯಮಂತ್ರಿ ಪದವಿ ಹಂಚಿಕೆ ಮಾಡಿಕೊಳ್ಳಲು ಹವಣಿಸಿದರೂ ಹೈಕಮಾಂಡ್ ಮಾತ್ರ ಇದಕ್ಕೆ ಸೊಪ್ಪು ಹಾಕಿಲ್ಲ. ಬದಲಿಗೆ 60 ತಿಂಗಳ ಅವಧಿಗೂ ಅವರೇ ಸಿಎಂ ಎಂದು ಘೋಷಿಸಿದೆ. ರಾಜ್ಯ ಕಾಂಗ್ರೆಸ್ ತೀವ್ರ ಅಡೆತಡೆಗಳ ನಡುವೆಯೂ ಹಣಕಾಸು, ಇಂಧನ, ಲೋಕೋಪಯೋಗಿಯಂಥ ಪ್ರಮುಖ ಖಾತೆ ಕಸಿದುಕೊಳ್ಳುವಲ್ಲಿಯೂ ಕುಮಾರಸ್ವಾಮಿ ಯಶಸ್ವಿಯಾಗಿರುವುದು ಅವರೆಷ್ಟು ಪವರ್‌ಫುಲ್ ಎಂಬುದಕ್ಕೆ ನಿದರ್ಶನ.

ಕಾಂಗ್ರೆಸ್ ಪಾಲಿಗೆ ಬಂದಿರುವ ಯಾವುದೇ ಖಾತೆ ಮಂತ್ರಿ ಇರಲಿ, ಅವರು ಎಷ್ಟೇ ಯೋಜನೆಗಳನ್ನು ರೂಪಿಸಲಿ ಅದಕ್ಕೆ ಅಂತಿಮವಾಗಿ ಅನುದಾನ ಮಂಜೂರು ಮಾಡುವುದು ಹಣಕಾಸು ಖಾತೆಯನ್ನು ಹೊಂದಿರುವ ಕುಮಾರಸ್ವಾಮಿ ಅವರೇ. ಜೆಡಿಎಸ್ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿರುವಂತೆ ರೈತರ ಸಾಲ ಮನ್ನಾ ವಿಚಾರದಲ್ಲಿಯೂ ಪ್ರಮುಖ ಪಾತ್ರ ವಹಿಸುವುದು ಹಣಕಾಸು ಖಾತೆಯೇ. ಮನ್ನಾ ಮಾಡಿದರೆ ಅದರ ಪೂರ್ಣ ಹೆಸರು ಮತ್ತು ಲಾಭ ಎರಡೂ ಜೆಡಿಎಸ್ ಪಾಲಾಗುತ್ತದೆ. ಇವೆಲ್ಲವನ್ನೂ ಪರಾಮರ್ಶಿಯೇ ಕುಮಾರಸ್ವಾಮಿಗೆ ಹಣಕಾಸು ಖಾತೆ ಕೊಡುವುದು ಬೇಡ ಎಂದು ಸಿದ್ದರಾಮಯ್ಯನವರು ಹೈಕಮಾಂಡ್‌ಗೆ ಒತ್ತಡ ಹಾಕಿದ್ದರು. ಆದರೆ ಹಣಕಾಸು ಖಾತೆ ಕೊಡದಿದ್ದರೆ ಮೈತ್ರಿಯೇ ಬೇಡ ಎಂದು ಕುಮಾರಸ್ವಾಮಿ ಅವರ ಖಡಾಖಂಡಿತ ನಿಲುವಿಗೆ ಕಾಂಗ್ರೆಸ್ ಹೈಕಮಾಂಡ್ ಮಣಿದಿದ್ದರಿಂದ ಆ ಒತ್ತಡ ಕರಗಿ ನೀರಾಗಿದೆ. ಇನ್ನು ಈ ಹಿಂದೆ ತಾವು ನಿರ್ವಹಿಸಿದ್ದ ಪ್ರಬಲ ಇಂಧನ ಖಾತೆ ದಕ್ಕಿಸಿಕೊಳ್ಳಲು ಹಿರಿಯ ಮುಖಂಡ ಡಿ.ಕೆ. ಶಿವಕುಮಾರ್ ಏನೆಲ್ಲ ಪಟ್ಟು ಹಿಡಿದರೂ ಅತ್ತ ಜೆಡಿಎಸ್ ನಾಯಕರು ಹಿಡಿತ ಸಡಿಲ ಮಾಡಲಿಲ್ಲ, ಇತ್ತ ಕಾಂಗ್ರೆಸ್ ಮುಖಂಡರೂ ಶಿವಕುಮಾರ್ ಬೆಂಬಲಕ್ಕೆ ನಿಲ್ಲಲಿಲ್ಲ.

ಕುಮಾರಸ್ವಾಮಿ ಅವರೆಷ್ಟು ಸ್ಟ್ರಾಂಗ್ ಎಂಬುದಕ್ಕೆ ಇವು ಒಂದೆರಡು ಸ್ಯಾಂಪಲ್‌ಗಳು ಮಾತ್ರ. ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ಸರಕಾರದ ಅಸ್ತಿತ್ವ ಉಳಿಯುವಲ್ಲಿ ನಿಜಕ್ಕೂ ನಿರ್ಣಾಯಕ ಪಾತ್ರ ವಹಿಸಿದ್ದು ಡಿ.ಕೆ. ಶಿವಕುಮಾರ್. ಯಡಿಯೂರಪ್ಪನವರು ಸೇರಿದಂತೆ ಬಿಜೆಪಿಯ ಅನೇಕ ಮುಖಂಡರು ಕಾಂಗ್ರೆಸ್ ಶಾಸಕರ ಖರೀದಿಗೆ ಪ್ರಯೋಗಿಸಿದ ಎಲ್ಲ ಅಸ್ತ್ರಗಳನ್ನು ಇದೇ ಶಿವಕುಮಾರ್. ಶಿವಕುಮಾರ್ ಶಕ್ತಿ ಏನೆಂಬುದು ಗುಜರಾತ್ ಕಾಂಗ್ರೆಸ್ ಶಾಸಕರನ್ನು ಹಿಡಿದಿಟ್ಟುಕೊಂಡ ಸಂದರ್ಭದಲ್ಲೇ ಬಿಜೆಪಿ ರಾಜ್ಯ ನಾಯಕರಿಗಷ್ಟೇ ಅಲ್ಲ, ರಾಷ್ಟ್ರೀಯ ಮುಖಂಡರಿಗೂ ಅರ್ಥವಾಗಿತ್ತು. ಈಗ ಎಂಟು ಶಾಸಕರು ಕದಲಿದ್ದರೂ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರದಲ್ಲಿರುತ್ತಿತ್ತು. ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಿದ್ದರು. ಇದು ಗೊತ್ತಿದ್ದೇ ಬಿಜೆಪಿ ಮುಖಂಡರು ಡಿ.ಕೆ. ಶಿವಕುಮಾರ್ ಅವರಿಗೆ ಉಪಮುಖ್ಯಮಂತ್ರಿ ಸ್ಥಾನದ ಆಮಿಷವೊಡ್ಡಿದ್ದರು. ಆದರೆ ಶಿವಕುಮಾರ್ ಇದಕ್ಕೆ ಬಲಿಯಾಗಲಿಲ್ಲ. ತಮ್ಮ ಮೇಲಿರುವ ಸಿಬಿಐ ಪ್ರಕರಣಗಳಿಂದ ಪಾರಾಗಲು ಆನಂದ್‌ಸಿಂಗ್ ಹಾಗೂ ಪ್ರತಾಪ್‌ಗೌಡ ಮನಪಲ್ಲಟಕ್ಕೆ ಒಳಗಾಗಿದ್ದುದು ನಿಜ.

ಅಂಥವರನ್ನೂ ಹಿಡಿದಿಟ್ಟುಕೊಂಡ ಕೀರ್ತಿ ಶಿವಕುಮಾರ್ ಅವರದ್ದು. ಹೀಗಾಗಿ ಅವರನ್ನು ‘ಖಳನಾಯಕ’ ಎಂದು ಯಡಿಯೂರಪ್ಪನವರು ವಿಧಾನಸಭೆಯಲ್ಲಿ ಬಣ್ಣಿಸಿದ್ದರು. ಆದರೆ ರಾಜಕೀಯ ವಿಪರ್ಯಾಸ ಹೇಗಿದೆ ಎಂದರೆ ಯಾವ ಸರಕಾರವನು ಉಳಿಸಲು ಅಷ್ಟೆಲ್ಲ ಪ್ರಯತ್ನಪಟ್ಟರೋ ಆ ಸರಕಾರದಲ್ಲೇ ಶಿವಕುಮಾರ್ ಮೂಲೆಗುಂಪಾಗಿ, ಮೌನದ ಮೊರೆ ಹೋಗಿದ್ದಾರೆ. ಜತೆಗೆ ರಾಜಕೀಯ ವೈಷಮ್ಯ ಪ್ರೇರಿತ ಐಟಿ, ಸಿಬಿಐ ದಾಳಿಗಳಿಗೂ ಒಳಗಾಗಿ ಮಾನಸಿಕವಾಗಿಯೂ ಜರ್ಝರಿತರಾಗಿದ್ದಾರೆ. ಅದೃಷ್ಟ ಮತ್ತು ಶಕ್ತಿ ಈ ಎರಡರಲ್ಲಿ ಮೊದಲನೆಯದೇ ದೊಡ್ಡದು ಶಿವಕುಮಾರ್ ವಿಚಾರದಲ್ಲಿ ಋಜುವಾತಾಗಿದೆ. ಅವರೀಗ ದುರಂತ ನಾಯಕ!

ಹಾಗೇ ನೋಡಿದರೆ ಮೊದಲಿಂದಲೂ ದೇವೇಗೌಡರ ಕುಟುಂಬದ ಜತೆ ಕಡುವೈರ ಹೊಂದಿದ್ದ ಶಿವಕುಮಾರ್ ವಿಧಾನಸಭೆ ಚುನಾವಣೆಗೆ ಮೊದಲು ತಮ್ಮ ನಡೆ ಬದಲಿಸಿಕೊಂಡಿದ್ದರು. ಅದು ರಾಜಕೀಯ ದಾಳವೇ ಇರಬಹುದು. ಆದರೆ ಅವರ ವರ್ತನೆಯಲ್ಲಿ ಪರಿವರ್ತನೆ ಆಗಿದ್ದುದು ನಿಜ. ದೇವೇಗೌಡರ ಜತೆ ವೇದಿಕೆ ಹಂಚಿಕೊಂಡದ್ದು, ಕಾವೇರಿ ವಿವಾದ ಕುರಿತ ಸುಪ್ರೀಂ ಕೋರ್ಟ್‌ನ ಕರ್ನಾಟಕ ಮಾರಕ ತೀರ್ಪು ಸಂದರ್ಭದಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ದೇವೇಗೌಡರ ಮನೆಗೆ ಸಲಹೆ ಪಡೆಯುವಂತೆ ಮಾಡಿದ್ದು ಇದೇ ಶಿವಕುಮಾರ್. ಅಷ್ಟೇ ಅಲ್ಲದೆ, ಅನಾರೋಗ್ಯಪೀಡಿತರಾಗಿದ್ದ ಕುಮಾರಸ್ವಾಮಿ ಅವರನ್ನು ಮನೆಗೆ ಹೋಗಿ ಭೇಟಿ ಮಾಡಿ ಕುಶಲ ವಿಚಾರಿಸಿ ಬಂದಿದ್ದರು. ಆಗ ಇಬ್ಬರ ನಡುವೆ ರಾಜೀಯಾಗಿದೆ ಎಂಬ ಮಾತು ಚಾಲ್ತಿ ಪಡೆದಿತ್ತು.

ಚನ್ನಪಟ್ಟಣ ಹಾಗೂ ರಾಮನಗರ ಎರಡೂ ಕಡೆ ಸ್ಪರ್ಧಿಸಿದ್ದ ಕುಮಾರಸ್ವಾಮಿ ಅವರಿಗೆ ಡಿ.ಕೆ. ಶಿವಕುಮಾರ್ ಹಾಗೂ ಡಿ.ಕೆ. ಸುರೇಶ್ ನೀಡಿದ ಪರೋಕ್ಷ ಬೆಂಬಲ ಇದನ್ನು ಮತ್ತಷ್ಟು ಗಟ್ಟಿ ಮಾಡಿತ್ತು. ಮೈತ್ರಿ ಸರಕಾರ ಉಳಿಯಲು ಶ್ರಮಿಸಿದ್ದು, ಆಗಿ ಪ್ರಮಾಣ ವಚನ ಸ್ವೀಕರಿಸಿದ ಹಾಗೂ ವಿಶ್ವಾಸಮತ ಯಾಚನೆ ಗೆದ್ದ ಸಂದರ್ಭದಲ್ಲಿ ಕುಮಾರಸ್ವಾಮಿ ಅವರ ಕೈಗೆ ತಮ್ಮ ಕೈ ಜೋಡಿಸಿದ್ದು ಡಿ.ಕೆ. ಶಿವಕುಮಾರ್ ಅವರೊಂದಿಗೆ ಎಷ್ಟು ಅನ್ಯೋನ್ಯವಾಗಿದ್ದಾರೆ ಎಂಬ ಸಂದೇಶ ರವಾನೆ ಮಾಡಿತ್ತು. ಆದರೆ ಶಿವಕುಮಾರ್ ಅದೃಷ್ಟ ನೆಟ್ಟಗಿದ್ದಂತಿಲ್ಲ. ತಮ್ಮ ಅನುಭವ, ಸಾಮರ್ಥ್ಯ, ಪಕ್ಷನಿಷ್ಠೆ ಹಿನ್ನೆಲೆಯಲ್ಲಿ ಉಪಮುಖ್ಯಮಂತ್ರಿ ಸ್ಥಾನ ಬಯಸಿದ್ದರು. ಆದರೆ ಒಕ್ಕಲಿಗ ಸಮುದಾಯದ ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿರುವುದರಿಂದ ಅದೇ ಸಮುದಾಯದ ಶಿವಕುಮಾರ್ ಡಿಸಿಎಂ ಆಗುವುದು ಸಾಧ್ಯವಿರಲಿಲ್ಲ. ಮುಖ್ಯಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ದಲಿತ ಸಮುದಾಯದ ಡಾ. ಜಿ. ಪರಮೇಶ್ವರ ಅವರನ್ನು ಡಿಸಿಎಂ ಮಾಡಲಾಯಿತು.

ಅದು ಹೋಗಲಿ ಎಂದು ತಾವು ಹಿಂದೆ ನಿರ್ವಹಿಸಿದ್ದ ಇಂಧನ ಖಾತೆಯನ್ನು ಅವರು ಮರುಬಯಸಿದ್ದರು. ಆದರೆ ಧರ್ಮಸಿಂಗ್ ನೇತೃತ್ವದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರದಲ್ಲಿ ಲೋಕೋಪಯೋಗಿ ಜತೆಗೆ ಇಂಧನ ಖಾತೆಯನ್ನೂ ನಿರ್ವಹಿಸಿದ್ದ ಎಚ್.ಡಿ. ರೇವಣ್ಣ ಅವರು ಇಂಧನ ಖಾತೆಗೆ ಬಿಗಿಪಟ್ಟು ಹಿಡಿದಿದ್ದರಿಂದ, ಜತೆಗೆ ಹೈಕಮಾಂಡ್ ಮಧ್ಯಸ್ಥಿಕೆ ಪರಿಣಾಮ ಶಿವಕುಮಾರ್ ಈ ಬಯಕೆಯಿಂದಲೂ ವಂಚಿತರಾಗಿದ್ದಾರೆ. ಇದು ಮಾನಸಿಕವಾಗಿ ತೀರಾ ಘಾಸಿಗೊಳಿಸಿದೆ. ಈ ಆಘಾತ ತಾಳಲಾರದೆ ತೀರ್ಥಯಾತ್ರೆ ಮೊರೆ ಹೋಗಿದ್ದಾರೆ. ಖಾತೆ ಹಂಚಿಕೆ ಘೋಷಣೆಗೆ ಕಾಂಗ್ರೆಸ್-ಜೆಡಿಎಸ್ ಮುಖಂಡರು ನಡೆಸಿದ ಜಂಟಿ ಪತ್ರಿಕಾಗೋಷ್ಠಿ ನಂತರ ಕುಮಾರಸ್ವಾಮಿ ಅವರು ಶಿವಕುಮಾರ್ ಜತೆಗೆ ಒಂದೆರಡು ನಿಮಿಷ ‘ಕಿವಿಮಾತುಕತೆ’ ನಡೆಸಿ, ಇಂಧನ ಖಾತೆ ಖೋತಾಗೆ ಪ್ರತಿಯಾಗಿ ಸಾಂತ್ವನ ಹೇಳುವ ಪ್ರಯತ್ನ ಮಾಡಿದ್ದಾರೆ. ಇದರರ್ಥ ಕುಮಾರಸ್ವಾಮಿ ಅವರಿಗೆ ಶಿವಕುಮಾರ್ ಬೇಸರ ಮನದಟ್ಟಾಗಿದೆ ಎಂದೇ.

ಇಲ್ಲಿ ಒಂದು ವಿಚಾರ. ಈ ಮೈತ್ರಿ ಸರಕಾರ ಉಳಿಸಿದಷ್ಟೇ ತಾಕತ್ತು ಅವರಿಗೆ ಕಳೆಯುವುದರಲ್ಲಿಯೂ ಇದೆ. ಈ ವಿಚಾರದಲ್ಲಿ ಸಿದ್ದರಾಮಯ್ಯ ಮತ್ತು ಶಿವಕುಮಾರ್ ಇಬ್ಬರೂ ಒಂದೇ. ಅಧಿಕಾರ, ಲಾಭ ಮತ್ತು ಗೌರವಕ್ಕಾಗಿಯೇ ಎಲ್ಲರೂ ರಾಜಕಾರಣ ಮಾಡುವುದು. ಇದಕ್ಕೆ ಚ್ಯುತಿ ಬಂದರೆ ಯಾರೂ ಸಹಿಸುವುದಿಲ್ಲ. ಮೈತ್ರಿ ಸರಕಾರದಲ್ಲಿ ಒಂದೊಂದು ಹೆಜ್ಜೆಯೂ ಮುಖ್ಯ ಮತ್ತು ಸೂಕ್ಷ್ಮ. ತಪ್ಪು ಯಾವ ಕಡೆಯಿಂದ ಆದರೂ ಅದರ ನೇರ ಪರಿಣಾಮ ಸರಕಾರದ ಅಸ್ತಿತ್ವದ ಮೇಲಾಗುತ್ತದೆ. ಪರ್ಯಾಯ ಅವಕಾಶಗಳು ಏನಿವೆ ಎಂಬುದು ಬೇರೆ ವಿಚಾರ. ಆದರೆ ಒಂದು ಸರಕಾರದ ಅಳಿವು, ಈ ಪರ್ಯಾಯ ಅವಕಾಶ ಉತ್ತರವಾಗುವುದಿಲ್ಲ. ಕಳೆದದ್ದು ಕಳೆದು ಹೋದಂತೆಯೇ. ಬಂದದ್ದರಲ್ಲಿ ಕಳೆದು ಹೋದದ್ದು ಸಿಕ್ಕುವುದಿಲ್ಲ. ಸಿಗಲು ಸಾಧ್ಯವೂ ಇಲ್ಲ!

ಲಗೋರಿ : ಆಟ ಮುಗಿದ ಮೇಲೆ ‘ಅಧಿಕಾರದ ಅಳಗುಳಿ ಮನೆ’ ಖಾಲಿ, ಖಾಲಿಯೇ!

(ವಿಶ್ವವಾಣಿಯಲ್ಲಿ ಪ್ರಕಟಿತ)

Leave a Reply