ರೇವಣ್ಣ ದಾರಿ ತಪ್ಪಿದ ಮಗನಾಗಿದ್ದು ಯಾಕೆ?

ಮಾಜಿ ಸಚಿವ, ಹಾಸನ ಜಿಲ್ಲೆಯ ಪ್ರಬಲ ನಾಯಕ ಹೆಚ್.ಡಿ ರೇವಣ್ಣ, ತಂದೆ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ಹಾಕಿದ ಗೆರೆ ದಾಟುವುದಿಲ್ಲ, ರೇವಣ್ಣ ತಂದೆಗೆ ತಕ್ಕ ಮಗ ಎನ್ನುವ ಕಾಲವೊಂದಿತ್ತು. ದೇವೇಗೌಡರು ಹೇಳಿದ ಮಾತಿಗೆ ರೇವಣ್ಣ ಕಮಕ್ ಕಿಮಕ್ ಅನ್ನದೆ ಒಪ್ಪಿಕೊಳ್ತಾರೆ, ತಂದೆಯ ಮಾತಿಗೆ ಅಷ್ಟೊಂದು ಮಹತ್ವ ಕೊಡ್ತಾ ಇದ್ರು. ಆದ್ರೀಗ ಮಾಜಿ ಸಚಿವ ರೇವಣ್ಣ ದಾರಿ ತಪ್ಪಿದ ಮಗ ಅನ್ನೋ ಅಪಕೀರ್ತಿ ತೆಗೆದುಕೊಳ್ಳುವ ಸ್ಥಿತಿಯಲ್ಲಿ ಇದ್ದಾರೆ. ಅದಕ್ಕೆ ಕಾರಣವಾಗಿರೋದು ಅಧಿಕಾರ.

ಹೌದು ಕಳೆದ ಬಾರಿ ಲೋಕೋಪಯೋಗಿ ಸಚಿವರಾಗಿದ್ದ ಹೆಚ್.ಡಿ ರೇವಣ್ಣ ಉತ್ತಮ ಕೆಲಸ ಮಾಡಿದ್ದರು. ಈ ಬಾರಿಯೂ ಕಾಂಗ್ರೆಸ್ ಜೊತೆಗೆ ಮೈತ್ರಿ ಮಾಡಿಕೊಂಡು ಅಧಿಕಾರಕ್ಕೆ ಬಂದಿರುವ ಜೆಡಿಎಸ್‌ನಲ್ಲಿ ರೇವಣ್ಣ ಸೆಕೆಂಡ್ ಸಿಎಂ ಎಂದರೂ ತಪ್ಪೇನಿಲ್ಲ. ಆದ್ರೆ ರೇವಣ್ಣ ಎರಡು ಖಾತೆಗಳು ನನಗೇ ಬೇಕು ಎಂದು ಪಟ್ಟು ಹಿಡಿದು ಕುಳಿತಿದ್ದಾರೆ. ಉತ್ತಮ ಕೆಲಸಗಾರ ಆಗಿರೋದ್ರಿಂದ ಒಳ್ಳೆಯ ಖಾತೆಯೇ ಸಿಗಬೇಕು ಅನ್ನೋದ್ರಲ್ಲಿ ಯಾವುದೇ ಗೊಂದಲವಿಲ್ಲ. ಆದ್ರೆ ಎರಡೆರಡು ಖಾತೆ ಬೇಕೆನ್ನುತ್ತಿರೋದು‌ ಸಂಕಷ್ಟಕ್ಕೆ ದೂಡಿದೆ. ಅದರ ಬಗ್ಗೆ ಸೋಮವಾರ ಇಡೀ ದಿನ ದೇವೇಗೌಡರು ತಲೆ ಬಿಸಿ ಮಾಡಿಕೊಂಡು ಚರ್ಚೆ ನಡೆಸಿದ್ದಾರೆ. ಆದರೂ ರೇವಣ್ಣರನ್ನು ಹಿಡಿತಕ್ಕೆ ತರಲು ಗೌಡರಿಗೆ ಸಾಧ್ಯವಾಗಿಲ್ಲ. ಸಂಜೆ ದೇವೇಗೌಡರ ನಿವಾಸದಲ್ಲಿ ನಡೆದ ಜೆಡಿಎಸ್ ಶಾಸಕಾಂಗ ಪಕ್ಷದ ಸಭೆಯಿಂದಲೂ ರೇವಣ್ಣ ಮಧ್ಯದಲ್ಲೇ ಎದ್ದು ಹೋಗಿರುವುದರಿಂದ ಇನ್ನು ತಲೆ ಬಿಸಿ ಹಾಗೇ ಇದೆ. ಯಾವುದಾದರೂ‌ ಒಂದು ಖಾತೆಯನ್ನು ವಹಿಸಿಕೋ ಅದರಲ್ಲಿ ಒಳ್ಳೆಯ ಕೆಲಸಗಳನ್ನು ಮಾಡು ಎಂದಿದ್ದಾರೆ ದೊಡ್ಡ ಗೌಡರು.

ಅಷ್ಟಕ್ಕೂ ರೇವಣ್ಣ ಎರಡು ಖಾತೆಗಳಿಗೆ ಪಟ್ಟು ಹಿಡಿದಿರೋದು ಯಾಕೆ.?

ಅನ್ನೋದು ಜೆಡಿಎಸ್ ಶಾಸಕರ ಪ್ರಶ್ನೆಯಾಗಿದೆ. ಈಗಲೇ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡಿರೋದ್ರಿಂದ ಅಧಿಕಾರ ಸಿಕ್ಕಿದೆ. ಅದರಲ್ಲೂ ಜೆಡಿಎಸ್ ಪಾಲಿಗೆ ಬಂದಿರೋದು ಕೇವಲ 12 ಸಚಿವ ಸ್ಥಾನಗಳು, ಅದರಲ್ಲಿ ಎರಡು‌ ಪ್ರಮುಖ ಖಾತೆಗಳನ್ನು ರೇವಣ್ಣ ಕಬಳಿಸಿ ಬಿಟ್ರೆ ನಮ್ಮ ಗತಿ‌ಏನು ಅನ್ನೋ ಪ್ರಶ್ನೆಯನ್ನೂ ಮುಂದಿಟ್ಟಿದ್ದಾರೆ ಎನ್ನಲಾಗಿದೆ. ರೇವಣ್ಣ ಯಾವುದೇ ಖಾತೆಯನ್ನು ಕೇಳಲಿ, ಆ ಖಾತೆಯನ್ನು ಯಾರಾದರೂ ಬಿಟ್ಟು‌ಕೊಡೋಣ. ಆದರೆ ಎರಡೂ ಖಾತೆಗಳು ಒಟ್ಟೊಟ್ಟಿಗೆ ಬೇಕು ಅಂದ್ರೆ ಹೇಗೆ ಸಾಧ್ಯ ಎನ್ನುತ್ತಿದ್ದಾರೆ ಅಧಿಕಾರಿಗಳು. ಇಲ್ಲಿ ಇರುವ ವಿಚಾರ ಏನಂದ್ರೆ‌ ರೇವಣ್ಣ ಪುತ್ರ ಪ್ರಜ್ವಲ್ ರೇವಣ್ಣ ಕೂಡ ರಾಜಕೀಯದಲ್ಲಿ ಸಕ್ರಿಯ ಆಗಿರೋದ್ರಿಂದ ಅಪ್ಪನ ಖಾತೆಯಲ್ಲಿ ಮಗ ಕೈ ಆಡಿಸೋದು ಸಾಮಾನ್ಯ. ಹಾಗಾಗಿ ಎರಡು ಖಾತೆ ಪಡೆದುಕೊಂಡ್ರೆ, ಒಂದನ್ನು ಪ್ರಜ್ವಲ್‌ಗೆ ವಹಿಸಿ ಲೋಕಸಭಾ ಚುನಾವಣೆ ವೇಳೆಗೆ ಸಜ್ಜುಗೊಳಿಸೋ ಪ್ಲಾನ್ ನಡೆದಿದೆ ಎನ್ನಲಾಗಿದೆ. ಒಟ್ಟಾರೆ ರೇವಣ್ಣ ತಂದೆಗೆ ತಕ್ಕ ಮಗನಾಗಿದ್ದವರು, ದೇವೇಗೌಡರಿಗೆ ಅಧಿಕಾರ ಹಂಚಿಕೆ ನೋವು ಕೊಡುವ ಮೂಲಕ ದಾರಿ ತಪ್ಪಿದ ಮಗನಾಗಿ ಬದಲಾಗುವ ಸ್ಥಿತಿಯಲ್ಲಿದ್ದಾರೆ.

Leave a Reply