ಬಂಡಾಯ, ಅಸಮಾಧಾನದ ನಡುವೆ ಕುಮಾರಸ್ವಾಮಿ ಸಂಪುಟ ವಿಸ್ತರಣೆಗೆ ಮುಹೂರ್ತ ಫಿಕ್ಸ್!

ಡಿಜಿಟಲ್ ಕನ್ನಡ ಟೀಮ್:

ಬಂಡಾಯ, ಅಸಮಾಧಾನದ ನಡುವೆಯೇ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ನೇತೃತ್ವದ ಮಂತ್ರಿಮಂಡಲದ ಮೊದಲ ವಿಸ್ತರಣೆ ನಾಳೆ ನಡೆಯಲಿದೆ. ರಾಜಭವನದ ಗಾಜಿನ ಮನೆಯಲ್ಲಿ ನಾಳೆ ಮ.2 ಗಂಟೆ 16 ನಿಮಿಷಕ್ಕೆ ನಡೆಯಲಿರುವ ಸರಳ ಸಮಾರಂಭದಲ್ಲಿ ಮೈತ್ರಿ ಪಕ್ಷ ಜೆಡಿಎಸ್-ಕಾಂಗ್ರೆಸ್‍ನ 24 ಸದಸ್ಯರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ರಾಜ್ಯಪಾಲ ವಜೂಭಾಯ್ ವಾಲಾ, ಸಂಪುಟದ ನೂತನ ಸದಸ್ಯರಿಗೆ ಪ್ರಮಾಣವಚನ ಭೋದಿಸಲಿದ್ದು, ಕೆಲ ಹೊಸ ಮುಖಗಳು ಮೊದಲ ಬಾರಿಗೆ ಕುಮಾರಸ್ವಾಮಿ ಸಂಪುಟ ಸೇರ್ಪಡೆಗೊಳ್ಳಲಿದ್ದಾರೆ. ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ 12 ದಿನಗಳ ನಂತರ ಪೂರ್ಣ ಪ್ರಮಾಣದಲ್ಲಿ ಅಲ್ಲದಿದ್ದರೂ ಕೆಲವರನ್ನು ಸಂಪುಟಕ್ಕೆ ಸೇರ್ಪಡೆಗೊಳಿಸಲಿದ್ದಾರೆ. ಇದರಲ್ಲಿ ಕಾಂಗ್ರೆಸ್‍ನ 16, ಜೆಡಿಎಸ್‍ನ 8 ಮಂದಿ ಸಚಿವರಾಗಲಿದ್ದು, ಇವರಿಗೆ ನಾಳೆ ಸಂಜೆ ವೇಳೆಗೆ ಖಾತೆಗಳ ಹಂಚಿಕೆಯೂ ಆಗಲಿದೆ.

ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡ, ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ನಿನ್ನೆ ರಾತ್ರಿ ಸಮಾಲೋಚನೆ ಮಾಡಿ, ತಮ್ಮ ಪಕ್ಷದ ವತಿಯಿಂದ ಮಂತ್ರಿಮಂಡಲಕ್ಕೆ ಯಾರನ್ನು ಸೇರ್ಪಡೆ ಮಾಡಿಕೊಳ್ಳಬೇಕೆಂಬ ಬಗ್ಗೆ ಪಟ್ಟಿ ಅಂತಿಮಗೊಳಿಸಿದ್ದಾರೆ.  ಕಾಂಗ್ರೆಸ್‍ನಲ್ಲಿ ಸಂಜೆವರೆಗೂ ಗೊಂದಲ ಮುಂದುವರೆದಿದ್ದು, 16 ಸಚಿವ ಸ್ಥಾನಕ್ಕೆ 56 ಮಂದಿ ಆಕಾಂಕ್ಷಿಗಳಿದ್ದು, ಪೈಪೋಟಿ ನಡೆಸಿದ್ದಾರೆ. ಇದು ಪಕ್ಷದ ರಾಜ್ಯ ನಾಯಕರಿಗೆ ತೀವ್ರ ತಲೆ ನೋವಾಗಿ ಪರಿಣಮಿಸಿ, ವರಿಷ್ಠರ ಮೊರೆ ಹೋದರು. ವಿದೇಶ ಪ್ರವಾಸದಿಂದ ಇಂದಷ್ಟೇ ಹಿಂದಿರುಗಿದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ರಾಜ್ಯದ ಉಸ್ತುವಾರಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಹಾಗೂ ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ ಗುಲಾಂ ನಬೀ ಅಜಾದ್ ಅವರೊಂದಿಗೆ ಸಮಾಲೋಚನೆ ನಡೆಸಿದರು.

ಉಭಯ ಪಕ್ಷಗಳಲ್ಲೂ ಹಲವು ಸಚಿವಾಕಾಂಕ್ಷಿಗಳು ಮಂತ್ರಿಮಂಡಲ ಸೇರಲು ಕಳೆದ ಮೂರು ದಿನಗಳಿಂದ ಭಾರಿ ಕಸರತ್ತು ನಡೆಸಿದ್ದಾರೆ. ಅದರಲ್ಲಿ ಕೆಲವರಿಗೆ ಸ್ಥಾನ ದೊರೆಯುವುದಿಲ್ಲ ಎಂಬುದು ಮನವರಿಕೆ ಆಗುತ್ತಿದ್ದಂತೆ, ರಾಜ್ಯ ನಾಯಕರು ಹಾಗೂ ಸರ್ಕಾರದ ವಿರುದ್ಧ ಅಪಸ್ವರ ಎತ್ತಿದ್ದಾರೆ. ಮಂತ್ರಿಮಂಡಲ ವಿಸ್ತರಣೆ ನಂತರ ಬಂಡಾಯಕ್ಕೆ ತಿರುಗುವ ಸಾಧ್ಯತೆ ಇದೆ. ಇದನ್ನು ಮನಗಂಡ ನಾಯಕರು, ಇವರನ್ನು ತೃಪ್ತಿಗೊಳಿಸಲು ಪರ್ಯಾಯ ಮಾರ್ಗ ಅನುಸರಿಸುತ್ತಿದ್ದಾರೆ.

ಈ ಮಧ್ಯೆ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಕುಮಾರಸ್ವಾಮಿ, ಪ್ರಥಮ ಹಂತದಲ್ಲಿ ತಮ್ಮ ಪಕ್ಷದ 8 ರಿಂದ 9 ಶಾಸಕರು ಸಚಿವರಾಗಿ ಪ್ರಮಾಣವಚನ ಸ್ಚೀಕರಿಸಲಿದ್ದಾರೆ. ಇನ್ನು ಮೂರು-ನಾಲ್ಕು ಸಚಿವ ಸ್ಥಾನಗಳ ಬಗ್ಗೆ ಆಯ್ಕೆ ನಡೆಯಲಿದೆ. ಸಂಪುಟದಲ್ಲಿ ಸ್ಥಾನ ಮತ್ತು ಖಾತೆಗಳ ಹಂಚಿಕೆ ಬಗ್ಗೆ ಜೆಡಿಎಸ್ ಶಾಸಕರಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎಂದು ಸ್ಪಷ್ಟಪಡಿಸಿದರು.

 

Leave a Reply