ರಾಜಕೀಯ ಚದುರಂಗದಲ್ಲಿ ರೇವಣ್ಣಗೆ ಚೆಕ್ ಕೊಟ್ಟು ಗೆದ್ದ ಡಿಕೆಶಿ!

ಡಿಜಿಟಲ್ ಕನ್ನಡ ಟೀಮ್:

‘ನಾನು ಫುಟ್ಬಾಲ್ ಆಟಗಾರನಲ್ಲ, ಚೆಸ್ ಪ್ಲೇಯೆರ್…’ ಇದು ಡಿ.ಕೆ ಶಿವಕುಮಾರ್ ತಮ್ಮ ನಿರೀಕ್ಷೆಗೆ ತಕ್ಕಂತೆ ಖಾತೆ ಸಿಗದಿದ್ದಾಗ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ ರೀತಿ. ಇಂಧನ ಖಾತೆ ವಿಚಾರವಾಗಿ ಹೆಚ್.ಡಿ ರೇವಣ್ಣ ಜತೆ ತೀವ್ರ ಪೈಪೋಟಿ ನಡೆಸಿದ್ದ ಕಾಂಗ್ರೆಸ್ ಟ್ರಬಲ್ ಶೂಟರ್ ಡಿಕೆಶಿ ಆರಂಭದಲ್ಲಿ ಹಿನ್ನಡೆ ಅನುಭವಿಸಿದರು ಈಗ ತಮ್ಮ ಖಾತೆ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಅದರೊಂದಿಗೆ ರಾಜಕೀಯ ಚದುರಂಗದಲ್ಲಿ ತಾನೊಬ್ಬ ಗ್ರಾಂಡ್ ಮಾಸ್ಟರ್ ಎಂಬುದನ್ನು ಸಾಬೀತು ಪಡಿಸಿದ್ದಾರೆ.

ದೇವೇಗೌಡರ ಮಾತನ್ನು ಶಿರಸಾವಹಿಸಿ ಪಾಲಿಸುವ ರೇವಣ್ಣ ಈ ಬಾರಿ ತಮ್ಮ ನೆಚ್ಚಿನ ಲೋಕೋಪಯೋಗಿ ಖಾತೆ ಜತೆಗೆ ಇಂಧನ ಖಾತೆಯೂ ಬೇಕು ಎಂದು ಪಟ್ಟು ಹಿಡಿದಿದ್ದರು. ಒಂದೆಡೆ ಅಣ್ಣ ರೀವಣ್ಣನನ್ನು ಮತ್ತೊಂದೆಡೆ ತಾನು ಮುಖ್ಯಮಂತ್ರಿಯಾಗುವಂತೆ ನೋಡಿಕೊಂಡ ಗೆಳೆಯ ಡಿಕೆಶಿ ಯನ್ನು ಬಿಟ್ಟುಕೊಡಲಾಗದೆ ಕುಮಾರಸ್ವಾಮಿ ಪರದಾಡಿದ್ದರು. ಇವರಿಬ್ಬರ ನಡುವಣ ಮುಸುಕಿನ ಗುದ್ದಾಟಕ್ಕೆ ಬ್ರೇಕ್ ಹಾಕಲು ಸ್ವತಃ ದೇವೇಗೌಡರೇ ಮುಂದೆಬರಬೇಕಾಯಿತು.

ಸೋಮವಾರ ರೇವಣ್ಣ ಜತೆ ಸುದೀರ್ಘವಾಗಿ ಚರ್ಚೆ ನಡೆಸಿದ ದೊಡ್ಡ ಗೌಡರು ಈ ವಿಚಾರದಲ್ಲಿ ಹಠ ಹಿಡಿದರೆ, ಡಿಕೇಶಿಯನ್ನು ಸಮಾಧಾನ ಪಡಿಸದಿದ್ದರೆ ತಮಗಾಗಬಹುದಾದ ತೊಂದರೆಗಳನ್ನು ವಿವರಿಸಿದರು.

ಮೈತ್ರಿ ಸರ್ಕಾರ ರಚನೆ ಮತ್ತು ಕುಮಾರಸ್ವಾಮಿ ಮುಖ್ಯಮಂತ್ರಿಯಾಗುವುದರಲ್ಲಿ ಡಿಕೆ ಶಿವಕುಮಾರ್ ಶ್ರಮ ಏನು ಎಂಬುದು ರಾಜ್ಯಕ್ಕೆ ತಿಳಿದಿದೆ. ಈ ಹಂತದಲ್ಲಿ ಡಿಕೆಶಿ ಸಾಮರ್ಥ್ಯವನ್ನು ಲಘುವಾಗಿ ಪರಿಗಣಿಸುವಂತಿಲ್ಲ. ಇನ್ನು ಎರಡು ಪ್ರಮುಖ ಖಾತೆಯನ್ನು ಒಬ್ಬರೇ ಇಟ್ಟುಕೊಂಡು ಮತ್ತೊಬ್ಬ ಒಕ್ಕಲಿಗನಿಗೆ ಅಸಮಾಧಾನವಾದರೆ ಸಮುದಾಯದ ಜನರ ಆಕ್ರೋಶಕ್ಕೆ ತುತ್ತಾಗುವ ಸಾಧ್ಯತೆ ಇದೆ. ಇನ್ನು ಎರಡೂ ಪ್ರಮುಖ ಖಾತೆಗಳನ್ನು ಇಟ್ಟುಕೊಂಡರೆ ಪಕ್ಷದ ಇತರೆ ನಾಯಕರಲ್ಲೇ ಅಸಮಾಧಾನ ಹೆಚ್ಚುವ ಸಾಧ್ಯತೆ ಇದೆ. ಬಯಸದೆ ಬಂದ ಭಾಗ್ಯದಂತೆ ಪಕ್ಷಕ್ಕೆ ಅಧಿಕಾರ ಸಿಕ್ಕಿರುವ ಹೊತ್ತಲ್ಲಿ ಅತಿಯಾಸೆ ಪಡುವುದಕ್ಕಿಂತ ಎಲ್ಲರನ್ನು ಸಮಾಧಾನಗೊಳಿಸಿ ಸರ್ಕಾರ ನಡೆಸಿಕೊಂಡು ಹೋಗುವುದು ಉತ್ತಮ ಎಂಬುದನ್ನು ಗೌಡರು ವಿವರಿಸಿದ್ದಾರೆ.

ಇತ್ತ ತಾನು ಬಯಸಿದ್ದು ಸಿಗದಿದ್ದ ಮೇಲೆ ತನಗೆ ಬೇರೆ ಖಾತೆಯೇ ಬೇಡ ಎಂದು ನಿರಾಕರಿಸಿದ್ದ ಡಿಕೆಶಿ ಪರೋಕ್ಷವಾಗಿಯೇ ಕಾಂಗ್ರೆಸ್ ಹೈ ಕಮಾಂಡ್ ಹಾಗೂ ಜೆಡಿಎಸ್ ಮೇಲೆ ಒತ್ತಡ ಹೇರಿದ ಡಿಕೆಶಿ, ತಮ್ಮ ಗುರಿ ಸಾಧಿಸಿಕೊಂಡಿದ್ದಾರೆ.

Leave a Reply