ಆತಂಕದಲ್ಲೇ ಅರಳಿದೆ ಮೈತ್ರಿ ಮಲ್ಲಿಗೆ!

ಡಿಜಿಟಲ್ ಕನ್ನಡ ಟೀಮ್:

ಕಾಂಗ್ರೆಸ್ ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಕೊನೆಗೂ ಸಚಿವ ಸಂಪುಟ ವಿಸ್ತರಣೆಯಾಗಿದೆ.

ಜೆಡಿಎಸ್‌ನಲ್ಲಿ ಹೇಳಿಕೊಳ್ಳುವಂತಹ ಭಿನ್ನಮತ ಇಲ್ಲದೇ ಇದ್ದರೂ ಕಾಂಗ್ರೆಸ್‌ನಲ್ಲಿ ಭಿನ್ನಮತದ ಹೊಗೆ ಕಾಣಿಸಿಕೊಂಡಿದೆ. ಸಾಕಷ್ಟು ಮಂದಿ ಸಚಿವಾಕಾಂಕ್ಷಿಗಳಾಗಿದ್ದು, ಮೈತ್ರಿ ಸರ್ಕಾರದಲ್ಲಿ ಸಚಿವ ಸ್ಥಾನವನ್ನು ಹಂಚಿಕೊಂಡಿದ್ರಿಂದ ಎಲ್ಲರನ್ನೂ ಸಮಾಧಾನ ಮಾಡಲು ಸಾಧ್ಯವಾಗಿಲ್ಲ. ಕಾಂಗ್ರೆಸ್ ಅಸಮಾಧಾನಿತ ಶಾಸಕರುಗಳನ್ನು ಸ್ವತಃ ಸಿಎಂ ಕುಮಾರಸ್ವಾಮಿಯೇ ವಿಶ್ವಾಸಕ್ಕೆ ತೆಗೆದುಕೊಳ್ಳುವಂತೆ ಸೂಚನೆ ಕೊಟ್ಟಿದ್ದಾರೆ. ಆದ್ರೆ ಉತ್ತರ ಕರ್ನಾಟಕ ಭಾಗದ ಪ್ರಬಲ ಲಿಂಗಾಯತ ನಾಯಕ ಎಂಬಿ ಪಾಟೀಲ್ ಸೇರಿದಂತೆ ಹಲವು ಶಾಸಕರಿಗೆ ಸಚಿವ ಸ್ಥಾನ ಸಿಗದಿರುವ ಕಾರಣಕ್ಕೆ ಆಕ್ರೋಶ ಭುಗಿಲೆದ್ದಿದ್ದು, ಇಂದು ಸಂಜೆ ಶಾಂಘ್ರಿಲಾ ಹೋಟೆಲ್‌ನಲ್ಲಿ ಅತೃಪ್ತರ ಸಭೆ ನಡೆಸಲು ಸಿದ್ಧತೆ ನಡೆಸಿದ್ದಾರೆ.

ಶುಭ ಕನ್ಯಾ ಲಗ್ನದಲ್ಲಿ ನಡೆದ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಮೊದಲು ಸಂಪುಟ ದರ್ಜೆ ಸಚಿವರಾಗಿ ಹೆಚ್.ಡಿ ರೇವಣ್ಣ ಅವರಿಂದ ಪ್ರಾರಂಭವಾದ ಪ್ರಮಾಣ ವಚನ ಕಾರ್ಯಕ್ರಮ, ಬಳಿಕ ಕಾಂಗ್ರೆಸ್, ಜೆಡಿಎಸ್‌ನ ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ರು. ಎಲ್ಲರೂ ಕನ್ನಡದಲ್ಲೇ ಪ್ರಮಾಣವಚನ ಸ್ವೀಕರಿಸಿದ್ರು. ಆದ್ರೆ ಚಾಮರಾಜಪೇಟೆ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ಮಾತ್ರ ಇಂಗ್ಲಿಷ್‌ನಲ್ಲಿ ಪ್ರಮಾಣ ಸ್ವೀಕರಿಸಿದ್ರು.

ಎಲ್ಲರನ್ನೂ ಸಚಿವರನ್ನಾಗಿ ಮಾಡಿಯೇ ಸಮಾಧಾನ ಮಾಡಲು ಕಷ್ಟ ಸಾಧ್ಯ ಅನ್ನೋದು ಎಲ್ಲರಿಗೂ ಗೊತ್ತಿರುವ ವಿಚಾರ. ಆದ್ರೆ ಇದೀಗ ಅತೃಪ್ತರು ಅನ್ನೋ ಹಣೆಪಟ್ಟಿಯಲ್ಲಿ ಸಭೆ ನಡೆಸಲು ಮುಂದಾಗಿರೋದು, ಉಳಿದಿರುವ ಸಚಿವ ಸ್ಥಾನ ವಿಸ್ತರಣೆ ವೇಳೆ ಸ್ಥಾನ ಪಡೆಯೋದು ಅಥವಾ ಒಳ್ಳೆಯ ನಿಗಮ ಮಂಡಳಿಗಳಲ್ಲಿ ಸ್ಥಾನ ಪಡೆಯುವುದು ಆಗಿದೆ. ಲಿಂಗಾಯತ ಸಮುದಾಯಕ್ಕೆ ಮಾನ್ಯತೆ ನೀಡಿಲ್ಲ ಅನ್ನೋದು ಎಂಬಿ ಪಾಟೀಲ್, ವಿನಯ್ ಕುಲಕರ್ಣಿ ಅವರ ಆಕ್ರೋಶಕ್ಕೆ ಕಾರಣವಾಗಿದ್ದು, ಮುಂದಿನ ವಿಸ್ತರಣೆ ವೇಳೆ ಸಚಿವರಾಗುವ ಎಲ್ಲಾ ಸಾಧ್ಯತೆಗಳಿವೆ. ಈಗಾಗಲೇ ಕಾಂಗ್ರೆಸ್ ಹೈಕಮಾಂಡ್ ನೇರವಾಗಿಯೇ ಸಮಾಧಾನ ಮಾಡಿದ್ದು, ಉಳಿದವರುನ್ನು ಸಮಾಧಾನ ಮಾಡುವ ಹೊಣೆಗಾರಿಕೆ ಸ್ಥಳೀಯ ಕಾಂಗ್ರೆಸ್ ನಾಯಕರು ಹಾಗೂ ಸರ್ಕಾರ ಮಾಡಬೇಕಿದೆ.

ಮೈತ್ರಿ ಮಲ್ಲಿಗೆ ಅರಳುತ್ತಾ? ಮುದುಡುತ್ತಾ?

ಮೈತ್ರಿ ಸರ್ಕಾರದ ಸಂಪುಟ ವಿಸ್ತರಣೆ ಬೆನ್ನಲ್ಲೇ ಮೂಡಿರುವ ಭಿನ್ನಮತದ ಲಾಭ ಪಡೆಯಲು ಕಮಲ ಪಡೆ ಕೂಡ ಯೋಜನೆ ರೂಪಿಸುತ್ತಿದ್ದು, ಸಂಜೆ ಶಾಂಘ್ರಿಲಾ ಹೋಟೆಲ್‌ನಲ್ಲಿ ನಡೆಯುವ ಸಭೆಗೆ ಎಷ್ಟು ನಾಯಕರು ಸೇರುತ್ತಾರೆ ಅನ್ನೋದರ ಮೇಲೆ ಭಿನ್ನಮತದ ಸ್ವರೂಪ ಗೊತ್ತಾಗಲಿದೆ. ಸೋತ ನಾಯಕರು ಸಭೆ ಸೇರುವ ಮೂಲಕ ಒತ್ತಡ ತಂತ್ರ ಅನುಸರಿಸಲಿದ್ದಾರೆ ಅನ್ನೋ ಮಾಹಿತಿ ಇದೆ. ಸೋತ ನಾಯಕರು ಮಾತ್ರ ಸಭೆ ಸೇರಿ ಇಂಥವರನ್ನು ಸಚಿವರನ್ನಾಗಿ ಮಾಡಬೇಕಿತ್ತು, ಮಾಡಿಲ್ಲದ ಕಾರಣಕ್ಕೆ ನಮಗೆ ಅಸಮಾಧಾನವಿದೆ ಎಂದರೆ ಯಾವುದೇ ಪ್ರಯೋಜನವಾಗುವುದಿಲ್ಲ. ಮೈತ್ರಿ ಮಲ್ಲಿಗೆ ಮುದುಡುವುದಿಲ್ಲ.

Leave a Reply