ಕರ್ನಾಟಕ ಫಲಿತಾಂಶದ ಬಳಿಕ ಬಿಜೆಪಿ ಅಲರ್ಟ್! ಮೈತ್ರಿ ಪಕ್ಷಗಳ ಮನವೊಲಿಸಲು ಶಾ ಕಸರತ್ತು!

ಡಿಜಿಟಲ್ ಕನ್ನಡ ಟೀಮ್:

ಕರ್ನಾಟಕ ಚುನಾವಣೆ ಮೇಲೆ ಬಾರೀ ನಿರೀಕ್ಷೆ ಇಟ್ಟುಕೊಂಡಿದ್ದ ಕಮಲ ನಾಯಕರಿಗೆ ನಿರೀಕ್ಷಿತ ಸ್ಥಾನ ಗಳಿಸೋದು ಕಷ್ಟ ಎನ್ನುವುದು ತಮ್ಮದೇ ಸಮೀಕ್ಷೆಗಳಲ್ಲಿ ಪಕ್ಕಾ ಆಗಿತ್ತು. ಕ್ಷಣ ಮಾತ್ರವೂ ಹಿಂದೆ ಮುಂದೆ ನೋಡದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಪ್ರಧಾನಿ ನರೇಂದ್ರ ಮೋದಿ ಅವರನ್ನು ಚುನಾವಣಾ ಅಖಾಡಕ್ಕೆ ಕರೆತಂದರು. ನಿಗದಿಗಿಂತಲೂ ಹೆಚ್ಚು ಪ್ರಚಾರ ಮಾಡಿಸಿದ ಅಮಿತ್ ಶಾ, 80 ಆಸುಪಾಸಿನಲ್ಲಿ ನಿಲ್ಲಬೇಕಿದ್ದ ಶಾಸಕರ ಸಂಖ್ಯೆಯನ್ನು 104ಕ್ಕೆ ತಂದು ನಿಲ್ಲಿಸುವಲ್ಲಿ ಯಶಸ್ವಿಯಾದ್ರು. ಆದ್ರೆ ಸರ್ಕಾರ ರಚನೆ ಮಾಡಲು ಮಾಡಿದ ಪ್ಲಾನ್ ಫ್ಲಾಪ್ ಆಯ್ತು. ಇದಕ್ಕೆ ಬಹುಮುಖ್ಯ ಕಾರಣ ಅಂದ್ರೆ ಮುಂದಿನ ವರ್ಷ ಎದುರಾಗಲಿರುವ ಲೋಕಸಭಾ ಚುನಾವಣೆ. ಉಳಿದ ರಾಜ್ಯಗಳಲ್ಲಿ ಸರ್ಕಾರ ರಚನೆಯಲ್ಲಿ ವಿಳಂಬ ಅನುಸರಿಸಿದ್ದ ಕಾಂಗ್ರೆಸ್ ಪಕ್ಷ, ಕರ್ನಾಟಕದಲ್ಲಿ‌ ಮೋದಿ‌ ಅಮಿತ್ ಶಾ ಜೋಡಿ ಸರ್ಕಾರ ರಚನೆ ಮಾಡಲು ಬಿಡುವುದೇ ಇಲ್ಲ ಎನ್ನುವ ಹಠಕ್ಕೆ ಬಿದ್ದು, ಚುನಾವಣಾ ಫಲಿತಾಂಶ ಪೂರ್ಣ ಪ್ರಕಟವಾಗುವ ಮೊದಲೇ ಜೆಡಿಎಸ್‌ಗೆ ಬೇಷರತ್‌ ಬೆಂಬಲ ಘೋಷಣೆ ಮಾಡುವ ಮೂಲಕ ಅಧಿಕಾರದ ಚುಕ್ಕಾಣಿ ಹಿಡಿಯಿತು. ಅಷ್ಟೇ ಅಲ್ಲದೆ ಕರ್ನಾಟಕ ಸಿಎಂ ಆಗಿ ಕುಮಾರಸ್ವಾಮಿ ಪ್ರಮಾಣ ಸ್ವೀಕಾರ ಮಾಡುವ ಸಮಾರಂಭಕ್ಕೆ ದೇವೇಗೌಡರು ಪ್ರಾದೇಶಿಕ ಪಕ್ಷಗಳ ಮುಖ್ಯಮಂತ್ರಿಗಳಿಗೆ ಆಹ್ವಾನ ನೀಡುವ ಮೂಲಕ ತೃತೀಯ ರಂಗದ ಕನಸಿಗೆ ಬಿತ್ತನೆ ಬಿತ್ತುವ ಕೆಲಸ ಮಾಡಿದ್ರು. ಅದು ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದೆ. ಇದರಿಂದ ಕಮಲ ಪಾಳಯ ಕಂಗೆಟ್ಟಿದ್ದು, ಮೈತ್ರಿ ಪಕ್ಷದ ನಾಯಕ ಮನವೊಲಿಕೆ ಕೆಲಸಕ್ಕೆ ಕೈ ಹಾಕಿದೆ.

ನಿನ್ನೆ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರನ್ನು ಭೇಟಿ ಮಾಡಿದ ಅಮಿತ್ ಶಾ, ಮುಂದಿನ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟ ಬಿಟ್ಟು ಪ್ರತ್ಯೇಕವಾಗಿ ಸ್ಪರ್ಧೆ ಮಾಡದಂತೆ ಮನವಿ ಮಾಡಿದ್ದಾರೆ. ಈಗಾಗಲೇ ಕೇಂದ್ರ ಸರ್ಕಾರದಿಂದ ಹೊರಬಂದಿರುವ ಶಿವಸೇನೆ, ಮಹಾರಾಷ್ಟ್ರ ಸರ್ಕಾರದಿಂದಲೂ ಹೊರಬಂದು, ಬಾಹ್ಯ ಬೆಂಬಲ ನೀಡುವುದಾಗಿ ಘೋಷಣೆ ಮಾಡಿತ್ತು. ಜೊತೆಗೆ ಭಾರತದಲ್ಲಿ ಪ್ರಜಾಪ್ರಭುತ್ವ ಅಪಾಯದ ಸ್ಥಿತಿಗೆ ತಲುಪಿದೆ ಎಂದು ಉದ್ಧವ್ ಠಾಕ್ರೆ ಹೇಳುವ ಮೂಲಕ ಸುದ್ದಿಗೋಷ್ಠಿಯಲ್ಲೇ ಬಹಿರಂಗವಾಗಿ ಮೋದಿ ಆಳಿತದ ವಿರುದ್ಧ ವಾಗ್ದಾಳಿ ಮಾಡಿದ್ರು. ಬಳಿಕ ಲೋಕಸಭೆ ಉಪ ಚುನಾವಣೆಯ ಸೋಲಿನ ಬಳಿಕ ಓಡೋಡಿ ಬಂದಿರುವ ಅಮಿತ್ ಶಾ, ಉದ್ಧವ್ ಠಾಕ್ರೆಗೆ ಉದ್ದುದ್ದ ನಮಸ್ಕಾರ ಹಾಕುತ್ತಿದ್ದಾರೆ. ಇಂದು ಶಿರೋಮಣಿ ಅಕಾಲಿ ದಳದ ಮುಖ್ಯಸ್ಥ ಪ್ರಕಾಶ್ ಸಿಂಗ್ ಬಾದಲ್‌ ಅವರನ್ನು ಅಮಿತ್ ಶಾ ಭೇಟಿ ಮಾಡಿ ಚರ್ಚೆ ನಡೆಸಲಿದ್ದಾರೆ.

ದೇಶಭಕ್ತಿ, ಹಿಂದುತ್ವವನ್ನೇ ಅಜೆಂಡಾ ಮಾಡಿಕೊಂಡಿರುವ ಬಿಜೆಪಿ ಹಲವು ರಾಜ್ಯಗಳಲ್ಲಿ‌ ಪ್ರಾದೇಶಿಕ ಪಕ್ಷಗಳ ಜೊತೆ ಹೊಂದಾಣಿಕೆ ಮಾಡಿಕೊಂಡಿದೆ. ಇದರ ಮೈತ್ರಿಕೂಟ ಎನ್‌ಡಿಎ ಇದೀಗ ಮುಳುಗುವ ಹಡಗಿನ ರೀತಿ ಆಗಿದೆ. ಅಟಲ್ ಬಿಹಾರಿ ವಾಜಪೇಯಿ ಅವರು ನೇತೃತ್ವ ವಹಿಸಿದ್ದಾಗ ಹಲವಾರು ಪಕ್ಷಗಳು ಬೆಂಬಲ ಸೂಚಿಸಿದ್ದವು. ಪ್ರಧಾನಿ ಮೋದಿ ಸರ್ಕಾರದ ಆರಂಭದಲ್ಲೂ ಅದೇ ರೀತಿ ಬೆಂಬಲ ನೀಡಿದ್ರು. ಆದ್ರೆ ಮೋದಿ ಆಡಳಿತ ನೀತಿ ನೋಡುತ್ತಿದ್ದ ಹಾಗೆ ಒಬ್ಬೊಬ್ಬರೇ ಮೈತ್ರಿಯಿಂದ ಹಿಂದೆ ಸರಿಯಲು ಆರಂಭಿಸಿದ್ರು. ಮೊದಲಿಗೆ ಬಿಹಾರದಲ್ಲಿ ಜೆಡಿಯು ಎನ್‌ಡಿಎ ಮೈತ್ರಿಕೂಟ ಬಿಟ್ಟು ಹೊರಬಂತು, ಆರ್‌ಜೆಡಿ ಜೊತೆ ಸೇರಿ ಅಧಿಕಾರ ಹಿಡಿಯಿತು. ಇದೀಗ ಮತ್ತೆ ಆರ್‌ಜೆಡಿಗೆ ಕೈಕೊಟ್ಟು ಮತ್ತೆ ಮೋದಿ ಮೋಡಿಗೆ ಒಳಗಾಗಿದೆ. ಮೈತ್ರಿಯಲ್ಲಿ ಮುಂದುವರಿಯಲೂ ಆಗದೆ ಇರಲೂ ಆಗದೆ ಪರದಾಡುತ್ತಿದೆ. ಅದೆ ರೀತಿ ಆಂಧ್ರಪ್ರದೇಶದಲ್ಲಿ ಚಂದ್ರಬಾಬು ನಾಯ್ಡು, ಮೋದಿ ಜೊತೆ ಸೇರಿಕೊಂಡು ಸರ್ಕಾರ ರಚನೆ ಮಾಡಿದ್ರು, ಕೇಂದ್ರದಲ್ಲೂ ಇಬ್ಬರು ಸಂಸದರು ಸಚಿವರಾಗಿ ಅಧಿಕಾರ ಸ್ವೀಕಾರ ಮಾಡಿದ್ರು. ಆ ಬಳಿಕ ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುವ ವಿಚಾರದಲ್ಲಿ ಅಸಮಾಧಾನಗೊಂಡು ಮೈತ್ರಿ ಕಡಿದುಕೊಂಡರು. ಇದೀಗ ಶಿವಸೇನೆ, ತನ್ನ ಸಂಸದನನ್ನೇ ಹೈಜಾಕ್ ಮಾಡಿಕೊಂಡು ಹೋಗಿ ರಾಜೀನಾಮೆ ಕೊಡಿಸಿದರೂ ಮೈತ್ರಿಗೆ ಭಂಗ ಬಂದಿರಲಿಲ್ಲ. ಆದ್ರೆ ದಿನಗಳು ಉರುಳಿದಂತೆ ಮೋದಿ ಆಡಳಿತ ವೈಖರಿಗೆ ಅಸಮಾಧಾನಗೊಂಡು ಮೈತ್ರಿ ಕಡಿದುಕೊಳ್ಳುವ ಮನಸ್ಸು ಮಾಡಿದೆ. ಮೊದಲಿಗೆ ಶಿವಸೇನೆಗೆ ಮೈತ್ರಿ ಬೇಡ ಎಂದಾದರೇ ನಮಗೂ ಮೈತ್ರಿ ಬೇಕಿಲ್ಲ ಎಂದಿದ್ದ ಅಮಿತ್ ಶಾ, ಕೊನೆಗೆ ಸರಿರಾತ್ರಿ ಮನೆ ಬಾಗಿಲಿಗೆ ಹೋಗಿ ಉದ್ಧವ್ ಠಾಕ್ರೆಗೆ ಉದ್ದಂಡ ನಮಸ್ಕಾರ ಹಾಕಿ ಬಂದಿದ್ದಾರೆ. ಮುಂದೆ ಇನ್ಯಾವ ಪಕ್ಷ ಎನ್‌ಡಿಎ ಮೈತ್ರಿ ಕೂಟದಿಂದ ಹೊರಹೋಗಲಿದೆಯೋ ಅನ್ನೊ ಆತಂಕ ಕಮಲ ನಾಯಕರನ್ನು ಕಾಡುತ್ತಿದೆ. ಕರ್ನಾಟಕ ಚುನಾವಣೆ ಬಳಿಕ ಕಮಲದ ಬುಡವೇ ಅದುರುತ್ತಿದೆ. ಕಮಲ ಸ್ನೇಹ ಕೆಸರಲ್ಲಿ ಸಿಕ್ಕ ಮೀನಿನಂತೆ ಎನ್ನುತ್ತಿವೆ ಮೈತ್ರಿ ಪಕ್ಷಗಳು.

Leave a Reply