ಸಿದ್ದರಾಮಯ್ಯ ಅತೃಪ್ತ ಶಾಸಕರ ಲೀಡರ್?

ಡಿಜಿಟಲ್ ಕನ್ನಡ ಟೀಮ್:

ರಾಜ್ಯದಲ್ಲಿ ಕಾಂಗ್ರೆಸ್ ಜೆಡಿಎಸ್ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬರಲು ಸ್ವತಃ ಸಿಎಂ ಆಗಿದ್ದ ಸಿದ್ದರಾಮಯ್ಯ ಅವರೇ ಜೆಡಿಎಸ್‌ಗೆ ಬೇಷರತ್ ಬೆಂಬಲ ಘೋಷಣೆ ಮಾಡಿದ್ರು. ಆದ್ರೀಗ ಸಂಪುಟ ರಚನೆ ಬಳಿಕ ಮಾಜಿ ಸಿಎಂ ಸಿದ್ದರಾಮಯ್ಯ ಅವರೇ ಅಸಮಾಧಾನಗೊಂಡಿರುವ ಶಾಸಕರ ಲೀಡರ್ ಆಗಿದ್ದಾರೆ ಅನ್ನೋ ಮಾತುಗಳು ಸುಳಿದಾಡ್ತಿವೆ. ಸಿಎಂ ಆಗಿದ್ದವರು ಅನ್ನೋ ಒಂದೇ ಕಾರಣಕ್ಕೆ ಅಸಮಾಧಾನವನ್ನು ಮನಸ್ಸಿನಲ್ಲಿ ಹಿಡಿದಿಟ್ಟುಕೊಂಡಿರುವ ಸಿದ್ದರಾಮಯ್ಯ, ತಮ್ಮ ಬೆಂಬಲಿಗರ ಮೂಲಕ ಭಾವನೆಗಳನ್ನು ವ್ಯಕ್ತಪಡಿಸುತ್ತಿದ್ದಾರೆ ಅನ್ನೋ ಅನುಮಾನ ಕಾಂಗ್ರೆಸ್ ನಾಯಕರಲ್ಲೇ ಕಾಡುತ್ತಿದೆ.

ಸಚಿವ ಸ್ಥಾನ ಸಿಗದೆ ರೆಬಲ್ ಆಗಿರೋ ಟೀಂನಲ್ಲಿ ಪ್ರಮುಖ ನಾಯಕ ಅಂದ್ರೆ ಮಾಜಿ ಜಲಸಂಪನ್ಮೂಲ ಸಚಿವ ಎಂ.ಬಿ ಪಾಟೀಲ್‌. ಸಚಿವ ಸಂಪುಟ ವಿಸ್ತರಣೆ ಆಗ್ತಿದ್ದ ದಿನವೇ ಬೇಸರ ವ್ಯಕ್ತಪಡಿಸಿದ್ದ ಪಾಟೀಲ್, ಸಿದ್ದರಾಮಯ್ಯ ಅವರ ಜೊತೆ ಚರ್ಚಿಸಿ‌ ಮುಂದಿನ ಹೆಜ್ಜೆ ಇಡುವುದಾಗಿ ಹೇಳಿದ್ರು, ಅದರಂತೆ ಗುರುವಾರ ಮಧ್ಯಾಹ್ನ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಸಚಿವ ಸ್ಥಾನ ಕೈತಪ್ಪಿದರ ಬಗ್ಗೆ ಚರ್ಚೆ ಮಾಡಿದ್ರು. ಸಿದ್ದರಾಮಯ್ಯ ಭೇಟಿಗೂ ಮುನ್ನ ಮಾತನಾಡಿದ ಪಾಟೀಲ್, ಕಾಂಗ್ರೆಸ್ ಬಿಡ್ತೇನೆ, ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡ್ತೇನೆ ಅನ್ನೋದು ಸುಳ್ಳು, ನಮ್ಮ ನಾಯಕರು ಹಾಗೂ ಹೈಕಮಾಂಡ್ ಜೊತೆ ಚರ್ಚೆ ಮಾಡ್ತೇನೆ ಎಂದಿದ್ರು.. ಆದ್ರೆ ಸಿದ್ದರಾಮಯ್ಯ ಭೇಟಿ ಬಳಿಕ ಅವರ ವರಸೆ ಬದಲಾಗಿತ್ತು.. ನಾನು ಸಕೆಂಡ್ ಕ್ಲಾಸ್ ಸಿಟಿಜನ್ ಅಲ್ಲ. ಎರಡನೇ ಹಂತದಲ್ಲಿ ಸಚಿವ ಸ್ಥಾನ ಕೊಟ್ಟರೆ ಒಪ್ಪಿಕೊಳ್ಳಲ್ಲ ಎಂದಿರುವ ಅವರು ಶುಕ್ರವಾರ ಬಬಲೇಶ್ವರಕ್ಕೆ ಹೋಗಲಿದ್ದು ಮತದಾರರೊಂದಿಗೆ ಚರ್ಚಿಸುತ್ತೇನೆ. ಅವರ ನಿರ್ಧಾರದಂತೆ ಮುಂದಿನ ನಡೆ ಎಂದಿದ್ದಾರೆ.

ಸಿದ್ದರಾಮಯ್ಯ ಭೇಟಿಗೂ ಮುನ್ನ ಇದ್ದ ಹೇಳಿಕೆ ಭೇಟಿ ಬಳಿಕ ಈ ರೀತಿ ಬದಲಾಯ್ತು ಎಂದಾಗ, ಸಿದ್ದರಾಮಯ್ಯ ಎಂ.ಬಿ ಪಾಟೀಲ್‌ಗೆ ಸಾಂತ್ವನ ಹೇಳಿದ್ರೋ ಅಥವಾ ಬೆಂಕಿ ಹಚ್ಚಿದ್ರೋ ಅನ್ನೋ ಅನುಮಾನದಲ್ಲಿ‌ ಕಾಂಗ್ರೆಸ್ ಕಾರ್ಯಕರ್ತರಿದ್ದಾರೆ. ಹಾಗಾದ್ರೆ ಸಿದ್ದರಾಮಯ್ಯ ಕಾಂಗ್ರೆಸ್ ಹೈಕಮಾಂಡ್ ವಿರುದ್ಧ ಮುನಿಸಿಕೊಳ್ಳಲು ಕಾರಣ ಏನಿರಬಹುದು ಅಂತಾ ಮಾಹಿತಿ‌ಕಲೆ ಹಾಕಿದ್ರೆ ಸಿಗೋದು ಹೈಕಮಾಂಡ್ ಮಾಡಿದ ಎಡವಟ್ಟು. ಅಂದು ಮಂಗಳವಾರ ಸಂಪುಟ ವಿಸ್ತರಣೆ ಹಿಂದಿನ ದಿನ ದೆಹಲಿಯಲ್ಲಿ ಬೀಡು ಬಿಟ್ಟಿದ್ದ ಪರಮೇಶ್ವರ್, ಡಿ.ಕೆ ಶಿವಕುಮಾರ್, ಸಿದ್ದರಾಮಯ್ಯ, ಖರ್ಗೆ ಅವರ ಜೊತೆ ರಾಹುಲ್ ಗಾಂಧಿ ಸಭೆ ನಡೆಸಿದ್ರು. ಸಚಿವರಾಗುವ ಶಾಸಕರ ವಿಚಾರದ ಬಗ್ಗೆ ಸಮಗ್ರವಾಗಿ ಚರ್ಚೆಯಾಗಿ ಒಂದು‌ ಪಟ್ಟಿಯೂ ಫೈನಲ್ ಆಯ್ತು. ಆ ಬಳಿಕ ಮತ್ತೆ ಪರಮೇಶ್ವರ್ ಜೊತೆ ಮತ್ತೊಂದು ಸುತ್ತಿನ ಸಭೆ ನಡೆಸಿದ ರಾಹುಲ್ ಗಾಂಧಿ ಕೆಲವರ ಸಭೆ ನಡೆಸಿ, ಒಂದಿಷ್ಟು ಜನರ ಹೆಸರು ಕೈಬಿಟ್ಟು ಬೇರೆ ಹೆಸರು ಸೇರ್ಪಡೆ ಮಾಡಿದ್ದಾರೆ ಎನ್ನಲಾಗಿದೆ. ಅದೇ ಕಾರಣಕ್ಕೆ ಸಿದ್ದರಾಮಯ್ಯ ಉರಿದು ಬೀಳ್ತಿದ್ದಾರೆ. ಬಿಸಿ ತುಪ್ಪ ಬಾಯಲ್ಲಿ ಇದೆ ಉಗುಳುವ ಆಗೂ ಇಲ್ಲ ನುಂಗುವ ಆಗೂ ಇಲ್ಲ ಎನ್ನುವಂತಾಗಿದೆ ಸಿದ್ದರಾಮಯ್ಯ ಪರಿಸ್ಥಿತಿ.

ಇದೇ ಮಾತನ್ನು ಎಂ.ಬಿ ಪಾಟೀಲ್ ಕೂಡ ಹೇಳಿದ್ರು. ಅದೇನಂದ್ರೆ ಕಳೆದ ರಾತ್ರಿ ತನಕ ಲಿಸ್ಟ್‌ನಲ್ಲಿ ನನ್ನ ಹೆಸರಿತ್ತು. ಆದ್ರೆ ಆ ಬಳಿಕ ಯಾರು ಹೋಗಿದ್ರು, ಏನನ್ನು ಹೇಳಿ ನನ್ನ ಹೆಸರು ತೆಗೆಸಿದ್ರು ಅನ್ನೋದು ಗೊತ್ತಾಗ್ಬೇಕು ಎಂದಿದ್ರು. ಕಾಂಗ್ರೆಸ್ ಜೆಡಿಎಸ್ ಸಮ್ಮಿಶ್ರ ಸರ್ಕಾರಕ್ಕೆ ಕೈಕಟ್ಟಿಕೊಂಡು ಬೇಷರತ್ ಬೆಂಬಲ ಘೋಷಣೆ ಮಾಡಿದ್ದ ಸಿದ್ದರಾಮಯ್ಯ, ಒಂದು ವೇಳೆ ಕಾಂಗ್ರೆಸ್ ಮೂಲಗಳ ಮಾಹಿತಿಯಂತೆ ಸಚಿವ ಸ್ಥಾನ ಸಿಗದೆ ಅತೃಪ್ತರಾಗಿರುವ ಶಾಸಕರ ಲೀಡರ್ ಆಗಿದ್ದರೆ ನಾಯಕತ್ವಕ್ಕೆ ಮಾಡುತ್ತಿರೋ ಅವಮಾನವೇ ಸರಿ.

Leave a Reply