ಜೆಡಿಎಸ್​ ಸಚಿವರಿಂದ ರಾಜೀನಾಮೆ ನಿರ್ಧಾರ?

ಡಿಜಿಟಲ್ ಕನ್ನಡ ಟೀಮ್:

ಕಾಂಗ್ರೆಸ್​ನಲ್ಲಿ ಸಚಿವ ಸ್ಥಾನ ಸಿಗದೆ ಬಂಡಾಯ ಎದ್ದಿದ್ದಾರೆ ಅನ್ನೋದು ಹಳೇ ಸುದ್ದಿ. ಇದೀಗ ಜೆಡಿಎಸ್​ನಲ್ಲೂ ಬಂಡಾಯದ ಬಿಸಿ ಜೋರಾಗಿದೆ. ನಿನ್ನೆಯಷ್ಟೇ ಸಚಿವರಿಗೆ ಖಾತೆ ಹಂಚಿಕೆ ಮಾಡಲಾಗಿತ್ತು. ಇಷ್ಟಪಟ್ಟ ಖಾತೆ ನೀಡಲಿಲ್ಲ ಎಂದು ಬೇಸರ ಮಾಡಿಕೊಂಡಿರುವ ಸಚಿವರಾದ ಜಿ.ಟಿ ದೇವೇಗೌಡ ಹಾಗೂ ಸಿ.ಎಸ್​ ಪುಟ್ಟರಾಜು ರಾಜೀನಾಮೆ ನೀಡಲು ತಯಾರಾಗಿದ್ದಾರೆ ಎನ್ನಲಾಗ್ತಿದೆ. ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದಿಂದ ಆಯ್ಕೆಯಾಗಿರುವ ಜಿ.ಟಿ ದೇವೇಗೌಡ ಹಾಗೂ ಮಂಡ್ಯದ ಮೇಲುಕೋಟೆಯಿಂದ ಆಯ್ಕೆಯಾಗಿರುವ ಸಿ.ಎಸ್​ ಪುಟ್ಟರಾಜು, ನಿನ್ನೆ ರಾತ್ರಿಯೇ ಸರ್ಕಾರಿ ಕಾರು ವಾಪಸ್​ ಮಾಡಿದ್ದು, ರೈಲಿನಲ್ಲಿ ಸ್ವಕ್ಷೇತ್ರಗಳತ್ತ ಪ್ರಯಾಣ ಬೆಳಸಿದ್ದಾರೆ ಅನ್ನೋ ಮಾಹಿತಿ ಲಭ್ಯವಾಗಿದೆ. ಈ ಸುದ್ದಿ ಸಿಎಂ ಕುಮಾರಸ್ವಾಮಿಗೆ ತಲುಪುತ್ತಿದ್ದ ಹಾಗೆ ಎಚ್ಚೆತ್ತ ಜೆಡಿಎಸ್​, ಸಚಿವರನ್ನು ಸಂಪರ್ಕ ಮಾಡಲು ಯತ್ನಿಸಿದೆ. ಆದ್ರೆ ಮೊಬೈಲ್​ ಕೂಡ ಸ್ವಿಚ್ಡ್​ ಆಫ್​ ಆಗಿರೋದ್ರಿಂದ ಆತಂಕಕ್ಕೆ ಕಾರಣವಾಗಿದೆ.

ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದು, ಸಂಪುಟ ಸಚಿವರಿಗೆ ಖಾತೆ‌ ಹಂಚಿಕೆ ಮಾಡುವ ಜವಾಬ್ದಾರಿ ಅವರ ಮೇಲಿದೆ. ಆದರೆ ಇಲ್ಲಿ ದೇವೇಗೌಡರೇ ಎಲ್ಲಾ ಉಸ್ತುವಾರಿ ನೋಡಿಕೊಂಡರೂ ಯಾವುದೇ ಶಾಸಕ ಅಥವಾ ಸಚಿವರು ಉಸಿರು ಬಿಡ್ತಿಲ್ಲ. ಇದಕ್ಕೆ ಕಾರಣ ಅಂದ್ರೆ ದೇವೇಗೌಡರ ಮೇಲಿನ ಅಭಿಮಾನ. ಆದ್ರ ಜೊತೆಗೆ ದೇವೆಗೌಡರ ಪುತ್ರ ಹೆಚ್.ಡಿ ರೇವಣ್ಣ ಮೊದಲು ಒಪ್ಪಿ ತೆಗೆದುಕೊಳ್ಳುವ ಖಾತೆಯನ್ನು ಹಂಚಿಕೊಳ್ಳಲು ಎಲ್ಲಾ ಸಚಿವರು ಸಿದ್ಧರಿದ್ದಾರೆ. ಹೀಗಿದ್ದರೂ ಕುಲ ಗೋತ್ರ ಗೊತ್ತಿರದ ಖಾತೆಗಳನ್ನು ಕೊಟ್ಟರೆ ನಿಭಾಯಿಸುವುದು ಹೇಗೆ ಅನ್ನೋದು ಸಚಿವರ ಪ್ರಶ್ನೆಯಾಗಿದೆ. ಯಾಕಂದ್ರೆ ಜಿ.ಟಿ ದೇವೇಗೌಡರು ಓದಿರುವುದು ಕೇವಲ ಎಂಟನೇ ತರಗತಿ ಅವರಿಗೆ ಹಂಚಿಕೆಯಾಗಿರುವುದು ಉನ್ನತ ಶಿಕ್ಷಣ ಖಾತೆ, ಪುಟ್ಟರಾಜು ಬೇಡಿಕೆ ಇಟ್ಟಿದ್ದು ಸಾರಿಕರ ಖಾತೆ, ಆದ್ರೆ ಅವರಿಗೆ ನಿಯೋಜನೆ ಆಗಿರೋದು ಸಣ್ಣ ನೀರಾವರಿ ಇಲಾಖೆ. ಇವರ ಬೇಗುದಿಗೆ ಮತ್ತೊಂದು ಕಾರಣ ಅಂದ್ರೆ ರಾಜಕೀಯದಲ್ಲಿ ಚಲನಶೀಲರಾಗಿ ಇಲ್ಲದ ಮದ್ದೂರು ಕ್ಷೇತ್ರದಿಂದ ಆಯ್ಕೆಯಾಗಿ ಸಚಿವ ಸ್ಥಾನ ಗಿಟ್ಟಿಸಿತುವ ಡಿ.ಸಿ ತಮ್ಮಣ್ಣ ಅವರಿಗೆ ಸಾರಿಗೆ ಇಲಾಖೆ ಜವಾಬ್ದಾರಿ ನೀಡಿರೋದು. ಕೇವಲ ಸಂಬಂಧಿಕರು ಅನ್ನೋ ಏಕೈಕ ಕಾರಣಕ್ಕೆ ಉತ್ತಮ ಖಾತೆ ನೀಡಿ, ಪಕ್ಷ ನಿಷ್ಠರನ್ನು ಕಡೆಗಣಿಸಿದ್ದಾರೆ ಅಂತಾ ಆಪ್ತರ ಬಳಿ ಅಳಲು ತೋಡಿಕೊಂಡಿದ್ದಾರೆ.

ಜಿ.ಟಿ ದೇವೇಗೌಡ ಹಾಗೂ ಪುಟ್ಟರಾಜು ಬೆಂಬಲಿಗರೂ ಕೂಡ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಬನ್ನಿ, ಈಗ ಕೊಟ್ಟಿರುವ ಖಾತೆಗಳನ್ನು ಇಟ್ಟುಕೊಂಡು ಸಚಿವರಾಗಿ ಕೆಲಸ ಮಾಡೋದು ಅಷ್ಟರಲ್ಲಿಯೇ ಇದೆ. ಕೇವಲ ಶಾಸಕರಾಗಿಯೇ ನಮ್ಮ ಕೆಲಸ ಮಾಡಿ ಸಾಕು ಎನ್ನುತ್ತಿದ್ದಾರೆ. ಇಂದು ಮಧ್ಯಾಹ್ನ ಮಹತ್ವದ ಸುದ್ದಿಗೋಷ್ಟಿ ಕರೆದಿದ್ದು, ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಶಾಸಕರಾಗಿ ಮುಂದುವರಿಯುತ್ತೇವೆ, ಸಿಎಂ ಕುಮಾರಸ್ವಾಮಿ ಅವರಿಗೆ ಯಾವುದೇ ತೊಂದರೆ ಕೊಡಲ್ಲ ಎನ್ನಲು ಸಜ್ಜಾಗಿದ್ದಾರೆ. ಕುಮಾರಸ್ವಾಮಿ ಸರ್ಕಾರಕ್ಕೆ ಧಕ್ಕೆ ತಂದರೆ ಕ್ಷೇತ್ರದಲ್ಲಿ ಮುಂದಿನ ದಿನಗಳಲ್ಲಿ ತೊಂದರೆ ಆಗಬಹುದು, ಆದರೆ ನಮಗೆ ಕೊಟ್ಟಿರುವ ಖಾತೆಗಳಲ್ಲಿ ಕೆಲಸ ಮಾಡುವ ಯೋಗ್ಯತೆ ನಮಗಿಲ್ಲ. ಹೀಗಾಗಿ ನಾವು ರಾಜೀನಾಮೆ ನೀಡುತ್ತಿದ್ದೇವೆ. ಕ್ಷೇತ್ರದಲ್ಲಿ ಶಾಸಕರಾಗಿ ನಮ್ಮ ಜನರ ಋಣ ತೀರಿಸುತ್ತೇವೆ ಎನ್ನಲಿದ್ದು, ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಸಜ್ಜಾಗಿದ್ದಾರೆ. ಈಗ ತೆಗೆದುಕೊಂಡಿರುವ ನಿರ್ಧಾರದಿಂದ ಸರ್ಕಾರಕ್ಕೆ ಆತಂಕವಿಲ್ಲ, ಆದರೆ ಮುಜುಗರ ಆಗಲಿದೆದೆ.. ಕುಮಾರಸ್ವಾಮಿ ಈಗ ಯಾವ ನಿಲುವು ಕೈಗೊಳ್ತಾರೆ ಅನ್ನೊದನ್ನು ಕಾದು ನೋಡ್ಬೇಕು. ಗೌಡರ ಮನೆ ಜಗಳ ಬೀದಿಗೆ ಬರುತ್ತಾ..? ಮನೆಯೊಳಗೆ ಕುಳಿತು ಬಗೆಹರಿಸಿಕೊಳ್ತಾರಾ ಅನ್ನೋದು ಅವರಿಗೇ ಬಿಟ್ಟ ವಿಚಾರ.

Leave a Reply