ಸರ್ಕಾರ ರಚನೆಗೆ ಬಿಜೆಪಿಯಲ್ಲಿ ವೇದಿಕೆ ರೆಡಿಯಾಗ್ತಿದ್ಯಾ?

ಡಿಜಿಟಲ್ ಕನ್ನಡ ಟೀಮ್:

ಕಾಂಗ್ರೆಸ್ ಪಕ್ಷದೊಳಗೆ ಒಂದು ಹಂತವನ್ನು ಮೀರಿದ ಭಿನ್ನಮತ ನಡೆಯುತ್ತಿದ್ದು, ಈಗಾಗಲೇ ರಾಜ್ಯ ಸರ್ಕಾರ ಹಾಗೂ ಕಾಂಗ್ರೆಸ್ ನಾಯಕರನ್ನು ದಂಗು ಬಡಿಸಿದೆ. ಮಾಜಿ ಜಲಸಂಪನ್ಮೂಲ ಸಚಿವ‌ ಎಂ.ಬಿ ಪಾಟೀಲ್ ಜೊತೆ 15 ರಿಂದ 20 ಮಂದಿ ಶಾಸಕರು ಒಗ್ಗೂಡಿಕೊಂಡು ಸಭೆ ಮೇಲೆ ಸಭೆ ಮಾಡ್ತಿರೋದು ಸರ್ಕಾರಕ್ಕೆ ನುಂಗಲಾರದ ತುತ್ತಾಗಿದೆ. ಎಂ.ಬಿ ಪಾಟೀಲ್ ಕೂಡ ನಾನೇನು ಒಂಟಿಯಲ್ಲ, ನಮ್ಮ ಜೊತೆ ಒಂದು ಗುಂಪೇ ಇದೆ ಎಂದು ಬಹಳ ಆತ್ಮ ವಿಶ್ವಾಸದಿಂದ ಮಾತನಾಡಿದ್ದಾರೆ. ಅಂದರೆ ಅರ್ಥ ತುಂಬಾ ಸಿಂಪಲ್, ಅತೃಪ್ತರ ಸಭೆಗೆ ಆಗಮಿಸಿದ ಶಾಸಕರುಗಳು ನೀವು ಮುಂದೆ ನಡಿಯಿರಿ, ನೀವು ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧ ಎನ್ನುವ ಭರವಸೆಯನ್ನು ಪಾಟೀಲ್‌ಗೆ ನೀಡಿದ್ದಾರೆ. ಒಟ್ಟಾರೆ 20 ಶಾಸಕರು ಒಟ್ಟಾಗಿರೋದ್ರಿಂದ ಮುಂದೇನು ಮಾಡುವುದು ಎಂದು ಗೊತ್ತಾಗದ ರಾಜ್ಯ ಕಾಂಗ್ರೆಸ್ ನಾಯಕರು ಹೈಕಮಾಂಡ್ ಎದುರು ಕೈ ಚಾಚಿದ್ದಾರೆ. ಕೂಡಲೇ ಎಚ್ಚೆತ್ತುಕೊಂಡಿರುವ ಹೈಕಮಾಂಡ್ ಕೂಡ ಕಾರ್ಯೋನ್ಮುಖವಾಗಿದೆ.

ಈ ನಡುವೆ ಬಿಜೆಪಿ ಕೂಡ ತೆರೆಮೆರೆಯಲ್ಲಿ ತನ್ನ ಕೈಚಳಕ ತೋರಿಸಲು ಸಜ್ಜಾಗಿದೆ. ಈಗ ಬಂಡಾಯದ ಬಾವುಟ ಹಾರಿಸಿರುವ 20 ಶಾಸಕರು ರಾಜೀನಾಮೆ ನೀಡಿ ಬಿಜೆಪಿಗೆ ಬರುವುದಾದರೆ ಸೂಕ್ತ ಸ್ಥಾನಮಾನ ನೀಡುತ್ತೇವೆ ಅನ್ನೋ ಭರವಸೆ ರವಾನಿಸಲಾಗಿದೆ. ಈ ಬಗ್ಗೆ ಮಾತನಾಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ, ನಾನು ಈಗಲೇ ಆ ಬಗ್ಗೆ ಮಾತನಾಡುವುದಿಲ್ಲ, ಏನೆನೆಲ್ಲಾ ನಡೆಯುತ್ತದೆ ನಡೆಯಲಿ ಎನ್ನುವ ಮೂಲಕ ಆಗುವುದೆಲ್ಲಾ ಒಳ್ಳೆಯದಕ್ಕೆ ಅನ್ನೋ ಮುನ್ಸೂಚನೆ ರವಾನಿಸಿದ್ದಾರೆ. ಇನ್ನೊಂದು ಕಡೆ ಸಾಕಷ್ಟು ಶಾಸಕರು ಈಗಾಗಲೇ ನಮ್ಮ ಸಂಪರ್ಕದಲ್ಲಿ ಇದ್ದಾರೆ. ಬರುವುದಾದರೆ ನಮ್ಮ ಅಭ್ಯಂತರವಿಲ್ಲ. ಆದರೆ ಯಾರೆಲ್ಲಾ ಸಂಪರ್ಕ ಮಾಡಿದ್ದಾರೆ‌ ಎಂದು ಹೇಳಲು ಸಾಧ್ಯವಿಲ್ಲ ಎಂದು ಹೇಳುವ ಮೂಲಕ ಸರ್ಕಾರವನ್ನು ಅಲ್ಪಮತಕ್ಕೆ ಕುಸಿಯಲು ಬೇಕಾದ ಎಲ್ಲಾ ತಂತ್ರಗಾರಿಕೆಯನ್ನು ಪ್ರಯೋಗ ಮಾಡ್ತಿದ್ದೇವೆ ಎಂಬುದನ್ನು ಈಶ್ವರಪ್ಪ ಒಪ್ಪಿಕೊಂಡಿದ್ದಾರೆ.

ಬಿಜೆಪಿ ಬಂಡಾಯ ಎದ್ದಿರುವ 20 ಶಾಸಕರಲ್ಲಿ ಕನಿಷ್ಠ 10 ಮಂದಿಯನ್ನು ರಾಜೀನಾಮೆ ಕೊಡಿಸಲು ಸಫಲ ಆಗಬಹುದು. ಈಗಿನ ಸ್ಥಿತಿ‌ ನೋಡಿದರೆ 10 ಶಾಸಕರು ಕೋಪದಲ್ಲಿ ಬಿಜೆಪಿ ಆಹ್ವಾನ ಹಾಗೂ ಆಮೀಷವನ್ನು ಒಪ್ಪಿಕೊಳ್ಳಬಹುದು. ಆದರೆ ಬಿಜೆಪಿ ನಾಯಕರಿಗೆ ಕಾಡುತ್ತಿರುವ ಆತಂಕ ಎಂದರೆ ಈ ಕಾಂಗ್ರೆಸ್ ಶಾಸಕರು ಸಚಿವ ಸ್ಥಾನ ಸಿಗಲಿಲ್ಲ ಎಂದು ಪಕ್ಷ ತೊರೆಯುವುದಕ್ಕೆ ಸಿದ್ಧರಾಗಿದ್ದಾರೆ. ಒಂದು ವೇಳೆ ಬಿಜೆಪಿ ಸರ್ಕಾರವೇ ಅಸ್ತಿತ್ವಕ್ಕೆ ಬಂದರೂ ಈಗ ಪಕ್ಷಾಂತರ ಮಾಡಿದ 10 ಮಂದಿಗೂ ಸಚಿವ ಸ್ಥಾನ ನೀಡುವುದು ಸಾಧ್ಯವಿಲ್ಲ. ಒಂದು ವೇಳೆ ಅಧಿಕಾರದ ಲಾಲಸೆಗಾಗಿ ಬಂಡಾಯವೆದ್ದ 10 ಮಂದಿಗೂ ಸಚಿವ ಸ್ಥಾನ ನೀಡಿದರೆ ಬಿಜೆಪಿಯಲ್ಲಿರುವ ಉಳಿದ ಶಾಸಕರು ಬಂಡೇಳುವುದಿಲ್ಲ ಎನ್ನಲಾಗದು. ಹಾಗಾಗಿ ಈ ವಿಚಾರದಲ್ಲಿ ಯಾವುದೇ ಹೆಜ್ಜೆ ಇಡಬೇಕಾದರೂ ಅಳೆದು ತೂಗಿ ನಿರ್ಧಾರ ತೆಗೆದುಕೊಳ್ಳಲು‌ ನಿರ್ಧರಿಸಲಾಗಿದೆ. ಕಮಲ ಹೈಕಮಾಂಡ್ ಕೂಡ ಲೋಕಸಭೆ ಚುನಾವಣೆ ಹೊಸ್ತಿಲಲ್ಲಿ ಯಾವುದೇ‌ ಕೆಟ್ಟ ಹೆಸರು ಬರದಂತೆ ನೋಡಿಕೊಳ್ಳಲು‌ ಸೂಚನೆ ಕೊಟ್ಟಿರೋದ್ರಿಂದ ಬಿಜೆಪಿ ನಾಯಕರ ಆಪರೇಷನ್‌ಗೆ ಅಡ್ಡಿಯಾಗಿದೆ. ಅಧಿಕಾರಕ್ಕಾಗಿ ಪಕ್ಷಾಂತರ ಮಾಡುವ ನಾಯಕರು ಯಾವುದೇ‌ ಕಾರಣಕ್ಕೂ ಪಕ್ಷ ನಿಷ್ಠೆ ತೋರುವುದಿಲ್ಲ ಅನ್ನೋದು‌ ಈಗಾಗಲೇ ಬಟಾಬಯಲಾಗಿದೆ. ಬಿಜೆಪಿ ನಾಯಕರು ಇದೆಲ್ಲಾ ಅಡೆತಡೆಗಳನ್ನು ಮೀರಿ‌ ಬೇರೆ ಯಾವ ರೀತಿ ವೇದಿಕೆ ಸಜ್ಜು ಮಾಡ್ತಾರೆ ನೋಡ್ಬೇಕು..

Leave a Reply