ಬಾಲಗ್ರಹ ಪೀಡೆಯಿಂದ ನರಳುತ್ತಿರುವ ಮೈತ್ರಿ ಸರ್ಕಾರ!

 ರಾಜ್ಯದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ರಚನೆಯಲ್ಲಿ ಕಾಣಿಸಿಕೊಂಡಿದ್ದ ಉಮೇದಿ, ಅದನ್ನು ಮುನ್ನಡೆಸುವುದರಲ್ಲಿ ಕಾಣುತ್ತಿಲ್ಲ. ಹಿಂದಿನ ಅನುಭವವನ್ನು ಇಂದಿನ ಪರಿಸ್ಥಿತಿಗೆ ತಾಳೆ ಮಾಡಿಕೊಂಡು ಭವಿಷ್ಯದ ಬಗ್ಗೆ ಸ್ಪಷ್ಟ ರೇಖೆ ಎಳೆಯದೇ ಹೋಗಿ ರುವುದರಿಂದ ಮೈತ್ರಿ ಸರಕಾರ ‘ಬಾಲಗ್ರಹ’ ಪೀಡಿತವಾಗಿದೆ. ಹುಟ್ಟುತ್ತುಟ್ಟುತ್ತಲೇ ವೃದ್ಧಾಪ್ಯ ಆವರಿಸಿಕೊಂಡಿದೆ. ಮಿತ್ರಪಕ್ಷಗಳ ನಡುವೆ ಸಮನ್ವಯದ ಮಾತು ಪಕ್ಕಕ್ಕಿರಲಿ, ಆಯಾ ಪಕ್ಷದೊಳಗೇ ನಾಯಕರು ಮತ್ತು ಶಾಸಕರ ನಡುವೆ ಸಮನ್ವಯ ಹೀಗಾಗಿ ಬಂಡಾಯ ಕಾಯಿಲೆ ಉಲ್ಬಣವಾಗಿದೆ. ನಾಯಕರು ಕಾಯಿಲೆ ಉಲ್ಬಣ ಆಗಲು ಬಿಟ್ಟು, ನಂತರ ಮದ್ದು ಅರಸುತ್ತಿರುವುದರಿಂದ ರೋಗಿ (ಸರಕಾರ) ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾನೆ. ಔಷಧ ಯಾವಾಗ ಸಿಗುತ್ತದೆ ಎನ್ನುವುದರ ಮೇಲೆ ರೋಗಿ ಆಯುಷ್ಯ ನಿಂತಿದೆ.

ಈಗಿನ ಪರಿಸ್ಥಿತಿ ನಿವಾರಣೆಗಾದರೂ ಪ್ರಾಮಾಣಿಕ ಪ್ರಯತ್ನಗಳು ನಡೆದಿವೆಯೇ? ಖಂಡಿತಾ ಇಲ್ಲ. ತೀವ್ರ ಬಂಡಾಯ ಎದುರಿಸು ತ್ತಿರುವ ಕಾಂಗ್ರೆಸ್‌ನಲ್ಲಂತೂ ಹೇಳುವವರು, ಕೇಳುವವರು ಯಾರೂ ಇಲ್ಲ ಎಂಬಂಥ ದುಸ್ಥಿತಿ. ಸಮಸ್ಯೆ ಬಗೆಹರಿಸಲು ರಾಹುಲ್ ಗಾಂಧಿ ಅವರಂಥ ನಾಯಕರಿಗೆ ಶಕ್ತಿ, ಯುಕ್ತಿ ಎರಡೂ ಇಲ್ಲ. ಅವರದೇನಿದ್ದರೂ ಏಕಮುಖ ಚಿಂತನೆ, ನಿರ್ಣಯ. ‘ಎತ್ತು ಈಯಿತು ಎಂದರೆ ಗೂಟಕ್ಕೆ ಕಟ್ಟಿಹಾಕು’ ಎಂದು ಹೇಳುವವರು. ಎತ್ತು ಕರು ಹಾಕುವುದಿಲ್ಲ, ಹಸು ಮಾತ್ರ ಈಯುತ್ತದೆ ಎಂದು ಯೋಚಿಸು ವಷ್ಟು ಬುದ್ಧಿ, ತಾಳ್ಮೆ ಎರಡೂ ಇಲ್ಲದವರು.

ಗುಲಾಂ ನಬಿ ಆಜಾದ್, ಅಹಮದ್ ಪಟೇಲ್ ಅವರಂಥವರು ಹೇಳಿದ್ದೇ ಅವರಿಗೆ ವೇದ ವಾಕ್ಯ. ಹೀಗಾಗಿ ಪ್ರಮುಖ ನಿರ್ಣಯ ತೆಗೆದುಕೊಳ್ಳುವಾಗಲೂ ರಾಜ್ಯ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕೆಂಬ ಕನಿಷ್ಠ ಪ್ರಜ್ಞೆಯನ್ನು ಅವರು ಮೆರೆದಿಲ್ಲ. ಸೌಜನ್ಯ ಎಂಬುದೆಲ್ಲ ಬಹಳ ಬೆಲೆ ಬಾಳುವ ಮಾತು. ರಾಷ್ಟ್ರಮಟ್ಟದಲ್ಲಿ ಪ್ರಧಾನಿ ಮೋದಿ ಅವರನ್ನು ತಡೆಯಬೇಕು, ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಬೇಕು ಎನ್ನುವ ಕಾರಣಕ್ಕೆ ಬೇಷರತ್ತಾಗಿ ಜೆಡಿಎಸ್ ಬೆಂಬಲಿಸುವ ನಿರ್ಣಯ ಕೈಗೊಂಡ ರಾಷ್ಟ್ರೀಯ ನಾಯಕರು, ಪರಿಪಾಠಕ್ಕಾದರೂ ಈ ಬಗ್ಗೆ ರಾಜ್ಯ ಮುಖಂಡರ ಜತೆ ಚರ್ಚಿಸಬೇಕಿತ್ತು. ತಾವು ಕೈಗೊಂಡ ನಿರ್ಣಯ, ಅದಕ್ಕೆ ಕಾರಣ, ಸರಕಾರದ ಹೂರಣ ಎಲ್ಲವನ್ನೂ ವಿವರಿಸಬೇಕಿತ್ತು. ಅವರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಿತ್ತು. ಆದರೆ ಹಿಂದೆ-ಮುಂದೆ ನೋಡದೆ ತಾವು ಕೈಗೊಂಡ ಏಕಮುಖ ರಾಜ್ಯ ಮುಖಂಡರ ಮೇಲೆ ಹೇರಿದರು. ಅದರ ಪರಿಣಾಮವೇ ಈಗಿನ ದುಸ್ಥಿತಿ!

ರಾಷ್ಟ್ರ ರಾಜಕಾರಣದ ಬಗ್ಗೆ ರಾಷ್ಟ್ರೀಯ ಮುಖಂಡರಿಗೆ ಇರುವಷ್ಟು ಬದ್ಧತೆ ರಾಜ್ಯ ನಾಯಕರಿಗೂ ಇರಬೇಕಲ್ಲ? ರಾಷ್ಟ್ರ ಹಾಗೂ ರಾಜ್ಯ ರಾಜಕಾರಣದ ನಡುವೆ ಸಾಕಷ್ಟು ‘ವಿಷಯ ವ್ಯತ್ಯಾಸ’ ಇರುತ್ತದೆ. ಒಂದಕ್ಕೊಂದು ಪೂರಕವೇ ಆದರೂ ಆದ್ಯತೆಗಳ ವಿಚಾರ ಬಂದಾಗ ಭಿನ್ನತೆ ಮೆರೆಯುತ್ತದೆ. ರಾಜ್ಯ ನಾಯಕರಿಗೆ ಪ್ರತಿಷ್ಠೆ, ಗೌರವ, ಸ್ವಾಭಿಮಾನ, ಅಧಿಕಾರ ಮುಖ್ಯವೆನಿಸುತ್ತದೆ. ಸ್ಥಳೀಯ ರಾಜಕಾರಣದ ರೀತಿ-ರಿವಾಜುಗಳು ಬೇರೇಯದೆ ಛಾಪು ಬೇಡುತ್ತದೆ. ಈಗ ಮುಖಂಡರು ಹಾಗೂ ಮೈತ್ರಿ ಸರಕಾರಕ್ಕೆ ಹಸಿಮೆಣಸಿ ಕಾಯಿ ಖಾರದಂತೆ ಪರಿಣಮಿಸಿರುವ ಮಾಜಿ ಸಚಿವ ಎಂ.ಬಿ.ಪಾಟೀಲ್ ಅವರ ವಿಷಯವನ್ನೇ ತೆಗೆದುಕೊಳ್ಳೋಣ. ಅವರೇ ಹೇಳಿರುವಂತೆ ಪಕ್ಷಕ್ಕೆ ಅವರು ‘ತನು, ಮನ, ಧನ’ ಎಲ್ಲ ಸಹಾಯವನ್ನೂ ಮಾಡಿದ್ದಾರೆ.

ಪ್ರಬಲ ಲಿಂಗಾಯತ ಸಮುದಾಯಕ್ಕೆ ಸೇರಿದ, ಸರಕಾರಿ ಪ್ರಾಯೋಜಿತ ಪ್ರತ್ಯೇಕ ಲಿಂಗಾ ಯತ ಧರ್ಮ ಹೋರಾಟಕ್ಕೆ ನೂರು ಕೋಟಿ ರುಪಾಯಿಗೂ ಅಧಿಕ ಹಣ ವೆಚ್ಚ ಮಾಡಿರುವ, ಪಕ್ಷದ ನಿಧಿಗೆಂದು ಕಾಲಕಾಲಕ್ಕೆ ದಿಲ್ಲಿಗೆ ಕಪ್ಪಕಾಣಿಕೆ ರವಾನಿಸಿರುವ, ಎಲ್ಲಕ್ಕಿಂತ ಮಿಗಿಲಾಗಿ ವಿಧಾನಸಭೆ ಚುನಾವಣೆ ಖರ್ಚನ್ನೂ ಗಣನೀಯ ಪ್ರಮಾಣದಲ್ಲಿ ಭರಿಸಿರುವ ಪಾಟೀಲರು ಸಂಪುಟದಲ್ಲಿ ಸ್ಥಾನ ಬಯಸಿದ್ದರಲ್ಲಿ ತಪ್ಪೇನೂ ಇಲ್ಲ. ಋಣ ಮುಕ್ತಿಗಾದರೂ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಬೇಕಿತ್ತು. ಇಲ್ಲವೇ ಅವರ ಋಣಕ್ಕೆ ಬೀಳಬಾರದಿತ್ತು. ‘ಅಟ್ಟಿಕ್ಕಿದ್ದವರ ಜುಟ್ಟಿಡಿದರು’ ಎಂಬಂತೆ ಅವರಿಂದ ಎಲ್ಲವನ್ನೂ ಪಡೆದು ಹೀಗೆ ‘ಕೈ’ ಎತ್ತಿರುವುದರಲ್ಲಿ ‘ಕೈ’ ಪಕ್ಷದ ನಿಯತ್ತು ಏನೆಂಬುದು ರಾರಾಜಿಸುತ್ತಿದೆ. ಕೊಟ್ಟವರು ಸುಮ್ಮನಿರುತ್ತಾರೆಯೇ, ಹಾಕಿಕೊಂಡು ಗುಮ್ಮುತ್ತಿದ್ದಾರೆ.

ಹಾಗೆ ನೋಡಿದರೆ ಸಾಮಾಜಿಕ ನ್ಯಾಯ ಪರಿಪಾಲನೆಗೆ ಕಾಂಗ್ರೆಸ್ ಬುದ್ಧಿವಂತಿಕೆ ಹೆಜ್ಜೆ ಇಡಬಹುದಿತ್ತು. ಹೇಗಿದ್ದರೂ ಒಕ್ಕಲಿಗ ಕುಮಾರಸ್ವಾಮಿ ಸಿಎಂ, ಪರಿಶಿಷ್ಟ ಸಮುದಾಯದ ಡಾ.ಜಿ.ಪರಮೇಶ್ವರ ಡಿಸಿಎಂ ಆಗಿದ್ದಾರೆ. ಮತ್ತೊಂದು ಪ್ರಬಲ ಸಮುದಾಯ ಲಿಂಗಾಯತರಿಗೆ ಇನ್ನೊಂದು ಡಿಸಿಎಂ ಹುದ್ದೆ ಕೊಟ್ಟು ಕಾಂಗ್ರೆಸ್ ತನ್ನ ಕೈಯನ್ನು ತಾನೇ ಬಲಪಡಿಸಿಕೊಳ್ಳಬಹುದಿತ್ತು. ಎಂ.ಬಿ. ಪಾಟೀಲ್ ಅಥವಾ ಶಾಮನೂರು ಶಿವಶಂಕರಪ್ಪ ಅವರಲ್ಲೊಬ್ಬರನ್ನು ಈ ಸ್ಥಾನಕ್ಕೆ ಪರಿಗಣಿಸಬಹುದಿತ್ತು. ಆದರೆ ಮಂಕುದಿಣ್ಣೆ ಗಳಂತೆ ವರ್ತಿಸಿರುವ ನಾಯಕರು ಬಂಡಾಯವೆಂಬ ಬಂಡೆಯನ್ನು ಮೈಮೇಲೆ ಎಳೆದುಕೊಂಡಿದ್ದಾರೆ.

ಹಾಗೆ ನೋಡಿದರೆ ಈಗಿನ ಬಂಡಾಯ ಶಮನ ಮಾಡುವ ತಾಕತ್ತು ರಾಜ್ಯ ನಾಯಕರಿಗೆ ಇಲ್ಲವೆಂದೇನೂ ಆದರೆ ಅದನ್ನು ನಿವಾರಿಸುವಲ್ಲಿ ಅಸ್ಥೆ ಇಲ್ಲ. ಕೆಲವರಿಗಂತೂ ತಮ್ಮನ್ನು ಸೂಕ್ಷ್ಮ ಸಂದರ್ಭದಲ್ಲಿ ಲೆಕ್ಕಕ್ಕಿಟ್ಟುಕೊಳ್ಳದೇ ಪಕ್ಕಕ್ಕಿಟ್ಟ ರಾಷ್ಟ್ರೀಯ ನಾಯಕರಿಗೆ ಪಾಠ ಕಲಿಸುವ ಇರಾದೆಯೂ ಇದೆ. ಈಗಿನ ಪರಿಸ್ಥಿತಿ ರಾಷ್ಟ್ರೀಯ ನಾಯಕರ ಕೂಸು. ಅವರ ಕೂಸನ್ನು ಅವರೇ ಎತ್ತಿ ಆಡಿಸಿಕೊಳ್ಳಲಿ. ತಾವು ತಟಸ್ಥ ರಾಗಿ ಉಳಿಯುವುದು ಒಳಿತು ಎಂದೆನಿಸಿಬಿಟ್ಟಿದೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರದ ಸಮನ್ವಯ ಸಮಿತಿ ಅಧ್ಯಕ್ಷರೂ ಆಗಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮನಸ್ಸು ಮಾಡಿದರೆ ಈಗಿನ ಪರಿಸ್ಥಿತಿಯನ್ನು ನಿವಾರಣೆ ಮಾಡುವುದು ಎಷ್ತೊತ್ತಿನ ಮಾತು.

ಅವರು ಚಿಟಿಕೆ ಹೊಡೆದರೂ ಸಾಕು ಬಂಡಾಯಗಾರರು ಸುಮ್ಮನಾಗುತ್ತಾರೆ. ಆದರೆ ಇಂಥ ವಿಷಮ ಸಂದರ್ಭದಲ್ಲೇ ಮತದಾರರಿಗೆ ಕೃತಜ್ಞತೆ ಹೇಳುವ ನೆಪದಲ್ಲಿ ಬದಾಮಿಗೆ ಹೋಗಿ ಕೂತಿರುವ ಸಿದ್ದರಾಮಯ್ಯನವರ ನಡೆ ಅನೇಕ ಅನುಮಾನಗಳಿಗೆ ಎಡೆಮಾಡಿ ಕೊಟ್ಟಿದೆ. ಇದು ಪೂರ್ವ ನಿಗದಿತ ಕಾರ್ಯಕ್ರಮವೇ ಆಗಿದ್ದರೂ ಸರಕಾರದ ಬುಡ ಹೊತ್ತಿಕೊಂಡು ಉರಿಯುತ್ತಿರುವ ಸಂದರ್ಭದಲ್ಲಿ ಆದ್ಯತೆಯನ್ನು ಬದಲಿಸಿಕೊಳ್ಳಬಹುದಿತ್ತು. ಕಾರ್ಯಕ್ರಮವನ್ನು ಮುಂದಕ್ಕೆ ಹಾಕಬಹುದಿತ್ತು, ಇಲ್ಲವೇ ಮೊಟಕುಗೊಳಿಸ ಬಹುದಿತ್ತು. ಆದರೆ ತಮಗೂ ಇದಕ್ಕೂ ಸಂಬಂಧವೇ ಇಲ್ಲವೆಂಬಂತೆ ವರ್ತಿಸುತ್ತಿರುವ ಅವರ ನಿಲು ವನ್ನು ರಾಜ್ಯ ನಾಯಕರು ಮೂಲಕ ದಿಲ್ಲಿಗೆ ಮುಟ್ಟಿಸಿದ್ದಾರೆ.

ಈಗ ಸಂಪುಟದಲ್ಲಿ ಅವಕಾಶ ಸಿಗದೆ ಬಂಡಾಯ ಎದ್ದಿರುವ 15-20 ಮಂದಿ ಪೈಕಿ ಬಹುತೇಕರು ಸಿದ್ದರಾಮಯ್ಯನವರ ಜತೆ ಗುರುತಿಸಿ ಕೊಂಡವರು. ಅವರಿಗೆ ಸ್ಥಾನ ಸಿಗದ ಬಗ್ಗೆ ಸಿದ್ದರಾಮಯ್ಯನವರಿಗೂ ಕೋಪ ಇರಬಹುದು. ತಮ್ಮ ತಾಕತ್ತು ಏನೆಂಬುದು ಎಲ್ಲರಿಗೂ ಗೊತ್ತಾಗಲಿ ಎಂದು ಅವರನ್ನು ಸಿದ್ದರಾಮಯ್ಯನವರೇ ಎತ್ತಿಕಟ್ಟಿರಬಹುದು. ತಮ್ಮನ್ನು ಉಪೇಕ್ಷೆ ಮಾಡಿದರೆ ಏನಾಗುತ್ತದೆ ನೋಡಿ ಎಂದು ಪಾಠ ಕಲಿಸುವ ಇರಾದೆ ಇರಬಹುದು. ಸ್ವತಃ ಉಪಮುಖ್ಯಮಂತ್ರಿ ಪರಮೇಶ್ವರ ಬಣದ ಪ್ರಕಾರ ಈಗಿನ ಬಂಡಾಯದ ರೂವಾರಿ ಸಿದ್ದರಾಮಯ್ಯನವರೇ. ಅದೇ ರೀತಿ ಸಿದ್ದರಾಮಯ್ಯನವರ ಬಣದ ಪ್ರಕಾರ ಅವರ ಬೆಂಬಲಿಗರಿಗೆ ಸಂಪುಟದಲ್ಲಿ ಸ್ಥಾನ ಸಿಗದೇ ಹೋಗಲು ಪರಮೇಶ್ವರ ಅವರೇ ಕಾರಣ.

ಪಕ್ಷದಲ್ಲಿ ಸಿದ್ದರಾಮಯ್ಯನವರ ಬಲ ತಗ್ಗಿಸಲು ಅವರು ಹುನ್ನಾರ ನಡೆಸಿದ್ದಾರೆ. ಹೀಗೆ ಒಬ್ಬರ ಮೇಲೊಬ್ಬರು ಕೆಸರು ಎರಚಿ ಕೊಳ್ಳುತ್ತಿದ್ದು, ಇದರ ಒಟ್ಟಾರೆ ಪರಿಣಾಮ ಸರಕಾರದ ಅಸ್ತಿತ್ವದ ಮೇಲಾಗುತ್ತಿದೆ. ಚುನಾವಣೆ ಫಲಿತಾಂಶ ಬಂದು ಇಪ್ಪತ್ತೈದು ದಿನ ಕಳೆದರೂ, ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರಕಾರ ಅಸ್ತಿತ್ವಕ್ಕೆ ಬಂದು ಹದಿನೈದು ದಿನ ಕಳೆದರೂ ಮೇಲೇಳುವ ಲಕ್ಷಣಗಳೇ ಕಾಣಿಸುತ್ತಿಲ್ಲ. ಸಂಪುಟ ರಚನೆ, ವಿಸ್ತರಣೆ, ಖಾತೆ ಹಂಚಿಕೆ – ಹೀಗೆ ಪ್ರತಿ ಹಂತದಲ್ಲಿಯೂ ಚಕಮಕಿ ಕಲ್ಲು ಉಜ್ಜಿದಂತೆಲ್ಲ ಬೆಂಕಿ ಯೇಳುವ ಹಾಗಿನ ಪರಿಸ್ಥಿತಿ.

ಇಷ್ಟೆಲ್ಲ ಆದರೂ ಕಾಂಗ್ರೆಸ್ ರಾಷ್ಟ್ರೀಯ ಹಾಗೂ ರಾಜ್ಯ ನಾಯಕರು ಈ ಬೆಂಕಿ ಆರಿಸುವ ಕೆಲಸಕ್ಕೇ ಕೈ ಹಾಕಿಲ್ಲ. ಪ್ರತಿಯೊಬ್ಬರ ಕೈಯಲ್ಲೂ ಕೈಯಲ್ಲೂ ಬಕೆಟ್ ಇದೆ. ಆದರೆ ಅದರಲ್ಲಿ ನೀರಿನ ಬದಲು ಪೆಟ್ರೋಲ್ ಇದ್ದಂತೆ ಭಾಸವಾಗುತ್ತಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಉಸ್ತುವಾರಿ ಹೊತ್ತಿರುವ ವೇಣುಗೋಪಾಲ್ ಯಾಕೋ, ತಣ್ಣಗಾಗಿ ಬಿಟ್ಟಿದ್ದಾರೆ. ಅವರು ಪಕ್ಷದ ಒಳಿತನ ಉಸ್ತುವಾರಿ ಹೊತ್ತಿದ್ದಾರೋ, ಕೆಡುಕಿನ ಒಡೆತನ ವಹಿಸಿಕೊಂಡಿದ್ದಾರೋ ಗೊತ್ತಾಗುತ್ತಿಲ್ಲ. ಇಷ್ಟೆಲ್ಲ ರಾದ್ಧಾಂತ ಆಗುತ್ತಿದ್ದರೂ ತುಟಿಕ್-ಪಿಟಿಕ್ ಎನ್ನುತ್ತಿಲ್ಲ. ಮಲ್ಲಿಕಾರ್ಜುನ ಖರ್ಗೆ ಅವರು ಒಂದು ಸಾರಿ ಹೈಕಮಾಂಡ್ ತೀರ್ಮಾನವೇ ಅಂತಿಮ, ಎಲ್ಲರೂ ಅದನ್ನು ಪಾಲಿಸಲೇ ಬೇಕು, ಬೇರೆ ದಾರಿಯೇ ಇಲ್ಲ ಎನ್ನುತ್ತಾರೆ.

ಮತ್ತೊಮ್ಮೆ ತಾವೇ ಹೈಕಮಾಂಡ್ ಜತೆ ಮಾತನಾಡಿ ಅತೃಪ್ತರಿಗೆ ಮಂತ್ರಿ ಸ್ಥಾನ ಕೊಡಿಸುವ ಭರವಸೆ ನೀಡುತ್ತಾರೆ. ಅವರು ಮಗುವನ್ನೂ ಚಿವುಟುತ್ತಿದ್ದಾರೆ, ತೊಟ್ಟಿಲನ್ನೂ ತೂಗುತ್ತಿದ್ದಾರೆ. ಐವತ್ತು ವರ್ಷ ರಾಜಕೀಯ ಪಕ್ಷಕ್ಕೆ ನಿಷ್ಠನಾಗಿ ದುಡಿದರೂ ತಮಗೆ ಮುಖ್ಯಮಂತ್ರಿ ಇರಲಿ, ಡಿಸಿಎಂ ಕೂಡ ಆಗಲಾಗಲಿಲ್ಲವಲ್ಲಾ ಎಂಬ ನೋವು ಒಂದು ಕಡೆ, ತಮಗಿಂಥ ಕಿರಿಯ ಡಾ.ಜಿ.ಪರಮೇಶ್ವರ ಡಿಸಿಎಂ ಆಗಿಬಿಟ್ಟರಲ್ಲಾ ಎಂಬ ಸಂಕಟ ಇನ್ನೊಂದು ಕಡೆ ಅವರನ್ನು ಇನ್ನಿಲ್ಲದಂತೆ ಕಾಡುತ್ತಿದೆ. ಹೀಗಾಗಿ ಈ ಸರಕಾರ ಇದ್ದರೆಷ್ಟು ಹೋದರೆಷ್ಟು ಎಂದು ಅವರಿಗೂ ಅನ್ನಿಸಿರಬಹುದು.

ಈಗಾಗಲೇ ಮುಖ್ಯಮಂತ್ರಿ ಪದವಿ ಅನುಭವಿಸಿರುವ ಸಿದ್ದರಾಮಯ್ಯನವರನ್ನೂ ಇದೇ ಭಾವ ಬೇರೆ ಸ್ವರೂಪದಲ್ಲಿ ಕಾಡುತ್ತಿರ ಬಹುದು. ಇನ್ನು ‘ಮಹಾಕವಿ’ ವೀರಪ್ಪ ಮೊಯ್ಲಿ ಮತ್ಯಾವ ‘ಮಹಾಕಾವ್ಯ’ ರಚನೆಗೆ ಕೈಹಾಕಿದ್ದಾರೋ ಗೊತ್ತಿಲ್ಲ. ರಾಜ್ಯ ಕಾಂಗ್ರೆಸ್‌ ನಲ್ಲಾಗುತ್ತಿರುವ ‘ರಾಮಾಯಣ’, ‘ಮಹಾಭಾರತ’ ಯಾವುದೂ ಅವರ ’ಏಕಾಗ್ರತೆ’ಗೆ ಭಂಗ ತಂದಿಲ್ಲ. ‘ಊರಮೇಲೆ ಊರು ಬೀಳಲಿ, ಶಾನುಭೋಗನ ಆಟ’ಕ್ಕೇನು ಎಂಬಂತೆ ತಣ್ಣಗೆ ಕುಳಿತ್ತಿದ್ದಾರೆ. ದುರಂತಗಳಿಗಷ್ಟೇ ಸಾಕ್ಷಿಯಾಗುವ ಶಾಶ್ವತ ದುರಂತ ನಾಯಕ ಏಐಸಿಸಿ ಪ್ರಧಾನ ಕಾರ್ಯದರ್ಶಿ ಬಿ.ಕೆ.ಹರಿಪ್ರಸಾದ್ ಅವರಂಥವರು ತಮಗಂಟಿರುವ ಶಾಪದಿಂದ ಹೊರಬರಲು ರಾಜ್ಯದ ಯಾವುದೇ ಪ್ರತಿಕೂಲ ಸನ್ನಿವೇಶವನ್ನು ಬಳಸಿಕೊಂಡಿಲ್ಲ. ಬದಲಿಗೆ ಆ ಸನ್ನಿವೇಶಕ್ಕೆ ತಮ್ಮನ್ನು ಜೋಡಿಸಿಕೊಂಡು ತಮ್ಮ ಬಿರು ದನ್ನು ಸಾರ್ಥಕಪಡಿಸಿಕೊಂಡಿದ್ದಾರೆ.

ಮೈತ್ರಿ ಸರಕಾರದ ಭಾಗವಾಗಿರುವ ಡಿಸಿಎಂ ಪರಮೇಶ್ವರ ಅವರಾದರೂ ತಾವು ವಹಿಸಿಕೊಂಡಿರುವ ಅಧಿಕಾರ ನಿಮಿತ್ತಕ್ಕಾದರೂ ಪರಿಸ್ಥಿತಿ ತಿಳಿಗೊಳಿಸಲು ಯತ್ನಿಸಿದ್ದಾರೆಯೇ ಎಂದರೆ ಅದೂ ಇಲ್ಲ. ಅವರಿಗೆ ಈಗ ಡಿಸಿಎಂ ಆಗಿರುವುದಕ್ಕಿಂತ ಹಿಂದೆ ಸಿದ್ದ ರಾಮಯ್ಯ ತಮಗೆ ಡಿಸಿಎಂ ಹುದ್ದೆ ತಪ್ಪಿಸಿದ್ದರು ಎನ್ನುವುದೇ ಮುಖ್ಯವಾದಂತಿದೆ. ಹೀಗಾಗಿ ಅವರ ಬಣದ ವಿರುದ್ಧ ಸೇಡಿನ ರಾಜಕೀಯಕ್ಕೆ ಇಳಿದಿದ್ದಾರೆ. ಇನ್ನೊಂದೆಡೆ ತಾವೇ ಮುಖ್ಯಮಂತ್ರಿ ಆಗಬಹುದಿತ್ತು, ಆದರೆ ವರಿಷ್ಠರು ತಮಗೆ ಅನ್ಯಾಯ ಮಾಡಿ ಕುಮಾರಸ್ವಾಮಿ ಸಿಎಂ ಆಗುವಂತೆ ಮಾಡಿಬಿಟ್ಟರು ಎಂಬ ಅವರನ್ನು ಆ್ಯಸಿಡ್ ಕುಡಿದಂತೆ ಆಡಿಸುತ್ತಿದೆ.

ಇನ್ನು ಜೆಡಿಎಸ್ ಪಾಳೆಯದಲ್ಲೂ ಇದೇ ಸ್ಥಿತಿ. ಏಳನೇ ಬಾರಿ ವಿಧಾನ ಪರಿಷತ್ ಪ್ರತಿನಿಧಿಸುತ್ತಿರುವ ಬಸವರಾಜ ಹೊರಟ್ಟಿ, ಎರಡು ಬಾರಿ ಮಂತ್ರಿಯಾಗಿದ್ದ ಎಚ್.ವಿಶ್ವನಾಥ್ ಅವರಂಥವರನ್ನು ಸಂಪುಟಕ್ಕೆ ಪರಿಗಣಿಸಬಹುದಿತ್ತು. ಇದರಿಂದ ಸಂಪುಟದ ‘ತೂಕ’ವೂ ಹೆಚ್ಚುತ್ತಿತ್ತು. ಪಕ್ಷದ ಘನತೆಯೂ ಹಿಗ್ಗುತ್ತಿತ್ತು. ಸಜ್ಜನಿಕೆ ಹಾಗೂ ಹಿರಿತನದ ಮುಂದೆ ಬೇರೆಲ್ಲವೂ ಗೌಣವಾಗಬೇಕಿತ್ತು. ಗುಣ ಮೆರೆಯಬೇಕಿತ್ತು. ಸಿದ್ದರಾಮಯ್ಯ ಅವರನ್ನು ಎದಿರು ಹಾಕಿಕೊಂಡು ಕಾಂಗ್ರೆಸ್ ತೊರೆದು ಜೆಡಿಎಸ್‌ಗೆ ಬಂದ ವಿಶ್ವನಾಥ್ ಹಾಗೂ ಬೆದರಿಕೆ ಹಾಕಿದ ಕಾರಣಕ್ಕೆ ಅವಕಾಶ ಪಡೆದ ಎಂ.ಸಿ. ಮನಗೂಳಿ ಬದಲು ಹೊರಟ್ಟಿ ಅವರನ್ನು ಮಂತ್ರಿ ಮಾಡಬೇಕಿತ್ತು. ಆದರೆ ಹೊರಟ್ಟಿ, ವಿಶ್ವನಾಥ್ ಹೊರಗಿರುವುದು ಸಂಪುಟಕ್ಕೇ ನಷ್ಟ. ಅದೇ ರೀತಿ ಜಿ.ಟಿ. ದೇವೇಗೌಡ, ಸಿ.ಎಸ್.ಪುಟ್ಟರಾಜು ಅವರಿಗೆ ‘ಅರ್ಹತೆ, ಯೋಗ್ಯತೆ’ ನೋಡಿ ಖಾತೆ ನೀಡಬಹುದಾಗಿತ್ತು.

ಎಂಟನೇ ತರಗತಿಯಷ್ಟೇ ಓದಿರುವ ತಮಗೆ ಉನ್ನತ ಶಿಕ್ಷಣ ಖಾತೆ ನೀಡಿ ರುವುದು ಶಿಕ್ಷಣ ಕ್ಷೇತ್ರಕ್ಕೇ ಅವಮಾನ ಎಂದು ಆ ಖಾತೆಗೆ ನಿಯೋಜಿತರಾಗಿರುವ ಸ್ವತಃ ಜಿ.ಟಿ.ದೇವೇಗೌಡರೇ ಹೇಳಿರುವಾಗ ಹೇಗೆತಾನೇ ಸಮರ್ಥಿಸಿಕೊಳ್ಳಲು ಸಾಧ್ಯ? ಆಗಬಾರದ್ದು ಆಗಿದೆ. ಕಾಲ ಓಡುತ್ತಿದೆ. ಪಾಪ, ಎರಡೂ ಪಕ್ಷಗಳ ನಾಯಕರು ಒದ್ದಾಡುತ್ತಿದ್ದಾರೆ. ಮೈತ್ರಿ ಸರಕಾರದ ಸೀಮಿತ ಅವಕಾಶದಲ್ಲಿ ಅತೃಪ್ತಿ, ಮುನಿಸು ‘ಪಕ್ಷಹಾಳು’ ಕೆಲಸಕ್ಕೆ ಪ್ರೇರಣೆ ನೀಡುತ್ತದೆ ಎಂಬುದು ಅವರಿಗೆ ಗೊತ್ತಿಲ್ಲದ ವಿಚಾರವೇನೂ ಆಗಿರಲಿಲ್ಲ. ಇಬ್ಬರಿಗೂ ಇಂಥ ಸಾಕಷ್ಟು ಅನುಭವಗಳು ಆಗಿವೆ.

ಆದರೂ ಬಂಡಾಯ ಏಳುವವರೆಗೂ, ಆ ಪರಿಸ್ಥಿತಿ ನಿರ್ಮಾಣ ಆಗುವವರೆಗೂ ಸುಮ್ಮನಿದ್ದು, ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದು ಕೊಳ್ಳದೇ ಹೋದದ್ದು ಉಡಾಫೆಯ ಪರಮಾವಧಿ. ಈಗ ಎಲ್ಲರನ್ನೂ ಕರೆದು ಬದಲು ಸಂಪುಟ ರಚನೆ, ವಿಸ್ತರಣೆ, ಖಾತೆ ಹಂಚಿಕೆ ಪ್ರಕ್ರಿಯೆಗೆ ಮೊದಲು ವಿಶ್ವಾಸಕ್ಕೆ ತೆಗೆದುಕೊಳ್ಳಬಹುದಿತ್ತು. ಸೀಮಿತ ಚೌಕಟ್ಟಿನಲ್ಲಿ ಇರುವ ಅವಕಾಶಗಳು ಹಾಗೂ ಅನಿವಾರ್ಯ ಪರಿಸ್ಥಿತಿ ಬಗ್ಗೆ ವಿವರಿಸಬಹುದಿತ್ತು. ಲಭ್ಯವಿರುವ ನಾನಾ ನಿಗಮ-ಮಂಡಳಿ, ಅಕಾಡೆಮಿಗಳ ಅಧ್ಯಕ್ಷ ಸ್ಥಾನದಂಥ ಪರ್ಯಾಯ ಅವಕಾಶಗಳನ್ನು ಒಪ್ಪಿಕೊಳ್ಳುವಂತೆ ಮನವೊಲಿಸಬಹುದಿತ್ತು.

ಜತೆಗೆ ಈ ಪ್ರಕ್ರಿಯೆಯಲ್ಲಿ ದ್ವೇಷಾಸೂಯೆ, ಪ್ರತೀಕಾರ, ಮಿತಿಮೀರಿದ ತಂತ್ರಗಾರಿಕೆ ಇಣುಕದಂತೆ ನೋಡಿಕೊಂಡಿದ್ದರೆ ಬಂಡಾಯ ನಿವಾರಿಸಿಕೊಳ್ಳಬಹುದಿತ್ತು, ಇಲ್ಲವೇ ಅದರ ಪ್ರಮಾಣವನ್ನು ತಗ್ಗಿಸಬಹುದಾಗಿತ್ತು. ಆದರೆ ಇದ್ದ ಎಲ್ಲ ಅವಕಾಶಗಳನ್ನು ಕೈಚೆಲ್ಲಿ ಹುಚ್ಚೆದ್ದು ಕುಣಿಯುತ್ತಿರುವ ಅತೃಪ್ತರನ್ನು ಸಮಾಧಾನಪಡಿಸಲು ಬೇಕಾಬಿಟ್ಟಿ ಯತ್ನಿಸುತ್ತಿರುವ ನಾಯಕರ ಸ್ಥಿತಿ ನೋಡಿದರೆ ಅವರ ಬಗ್ಗೆಯೇ ಅನುಕಂಪ ಮೂಡುವಂತಿದೆ.

ಲಗೋರಿ: ಶತಾಯುಷಿ ಎಂದು ಜ್ಯೋತಿಷಿ ಹೇಳಿದ ಮಾತ್ರಕ್ಕೆ ರೈಲಿಗೆ ತಲೆ ಕೊಟ್ಟು ಪರೀಕ್ಷಿಸಬಾರದು!

(ವಿಶ್ವವಾಣಿಯಲ್ಲಿ ಪ್ರಕಟಿತ)

Leave a Reply