ಸರ್ವನಾಶದ ಮಾತುಗಳನ್ನಾಡುತ್ತಿದ್ದ ಕಿಮ್-ಟ್ರಂಪ್ ಈಗ ಬಯಸಿರೋದು ಸ್ನೇಹದ ಬಂಧ!

ಡಿಜಿಟಲ್ ಕನ್ನಡ ಟೀಮ್:

ಇಡೀ ಜಗತ್ತೇ ಕಾದು ಕುಳಿತಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಜೊಂಗ್ ಉನ್ ಅವರ ಭೇಟಿಗೆ ಸಿಂಗಾಪುರದ ಚಾಂಗಿಯಲ್ಲಿರುವ ಸೆಂತೊಸಾ ದ್ವೀಪ ವೇದಿಕೆಯಾಗಿದೆ.

ಕಳೆದ ವರ್ಷ ಹಾವು ಮುಂಗುಸಿಯಂತೆ ಕಚ್ಚಾಡುತ್ತಿದ್ದ ಟ್ರಂಪ್ ಹಾಗೂ ಕಿಮ್ ಇಂದು ಪರಸ್ಪರ ಕೈ ಕುಲುಕಿದ್ದನ್ನು ಕಂಡು ಇಡೀ ಜಗತ್ತೇ ನಿಬ್ಬೆರಗಾಗಿ ನೋಡಿದೆ. ಹೌದು, ಜಾಗತಿಕ ಮಟ್ಟದಲ್ಲಿ ತೀವ್ರ ವಿರೋಧದ ನಡುವೆಯೂ ಅಣ್ವಸ್ತ್ರ ಕ್ಷಿಪಣಿ ಪ್ರಯೋಗ ಮಾಡಿ ವಿಶ್ವದ ದೊಡ್ಡಣ್ಣ ಅಮೆರಿಕಕ್ಕೆ ತೊಡೆ ತಟ್ಟಿ ನಿಂತಿದ್ದ ಕಿಮ್ ಹಾಗೂ ಉತ್ತರ ಕೊರಿಯಾವನ್ನು ನಿರ್ಣಾಮ ಮಾಡುತ್ತೀನಿ ಎಂದು ಎಚ್ಚರಿಕೆ ನೀಡಿದ್ದ ಟ್ರಂಪ್ ಈಗ ಆತ್ಮೀಯವಾಗಿ ಚರ್ಚೆ ನಡೆಸುತ್ತಾರೆ ಎಂದು ಯಾರೊಬ್ಬರೂ ಊಹಿಸಿರಲಿಲ್ಲ.

ಇಲ್ಲಿ ನಡೆಯುತ್ತಿರುವ ಶೃಂಗ ಸಭೆಯಲ್ಲಿ ಭಾಗವಹಿದ ಕಿಮ್ ಹಾಗೂ ಟ್ರಂಪ್ ದ್ವಿಪಕ್ಷೀಯ ಮಾತುಕತೆ ನಡೆಸಿರುವುದು ಜಾಗತಿಕ ಮಟ್ಟದಲ್ಲಿ ಭಾರಿ ಪ್ರಶಂಸೆ ಪಡೆದುಕೊಂಡಿದೆ.

‘ನನ್ನ ಮಟ್ಟಿಗೆ ಈ ಭೇಟಿ ಸುಲಭದ್ದಾಗಿರಲಿಲ್ಲ. ಎಲ್ಲ ಪೂರ್ವಗ್ರಹಗಳನ್ನೂ ಬಿಟ್ಟು ನಾವುಬ್ಬರು ಹೀಗೆ ಭೇಟಿಯಾಗುವುದು ಕಷ್ಟದ ಮಾತೇ ಆಗಿತ್ತು! ನಮ್ಮ ಸಂಬಂಧದ ಬಗ್ಗೆ ಇದ್ದ ಕೆಲವು ಪೂರ್ವಗ್ರಹ ಅಭಿಪ್ರಾಯಗಳು ನಮ್ಮಿಬ್ಬರ ಭೇಟಿಗೆ ತಡೆಯೊಡ್ಡಿದ್ದವು. ಆದರೆ ಅವೆಲ್ಲವನ್ನೂ ಮೀರಿ ಇಂದು ನಾವಿಲ್ಲಿದ್ದೇವೆ’ ಎಂದು ಕಿಮ್ ಹೇಳಿದರು. ಕಿಮ್ ಅವರ ಮಾತಿಗೆ ತಲೆಯಲ್ಲಾಡಿಸುತ್ತಲೇ ಟ್ರಂಪ್ ಸಮ್ಮತಿ ಸೂಚಿಸಿದರು.

ಇನ್ನು ಭೇಟಿಯ ಬಗ್ಗೆ ಮಾತನಾಡಿದ ಟ್ರಂಪ್, ‘ನಮ್ಮಿಬ್ಬರ ನಡುವಿನ ಮುಖಾಮುಖಿ ಭೇಟಿ ಅತ್ಯುತ್ತಮವಾಗಿತ್ತು. ನಾವಿಬ್ಬರು ಉತ್ತಮ ಬಾಂಧವ್ಯ ಹೊಂದಿದ್ದೇವೆ. ಉಭಯ ದೇಶಗಳು ಇನ್ನು ಮುಂದೆ ಆಪ್ತ ಸಂಬಂಧ ಹೊಂದಲಿವೆ. ಅದರಲ್ಲಿ ಯಾವುದೇ ಅನುಮಾನವಿಲ್ಲ’ ಎಂದರು.

ಒಬ್ಬರನ್ನೊಬ್ಬರು ಮುಗಿಸಿಬಿಡುವ ಮಾತುಗಳನ್ನಾಡುತ್ತಿದ್ದವರು ಈಗ ಆಪ್ತ ಸ್ನೇಹಿತರಾಗುವ ಇಂಗಿತ ವ್ಯಕ್ತಪಡಿಸುತ್ತಿದ್ದಾರೆ. ಕಿಮ್ ಅವರನ್ನು ಶ್ವೇತ ಭವನಕ್ಕೆ ಆಹ್ವಾನಿಸುವ ಬಗ್ಗೆ ಅಮೆರಿಕ ಚಿಂತನೆ ನಡೆಸಿದೆ. ಮುಂದಿನ ದಿನಗಳಲ್ಲಿ ಇದೇ ಸಕಾರಾತ್ಮಕ ಬೆಳವಣಿಗೆ ಮುಂದುವರಿದು, ಉತ್ತರ ಕೊರಿಯಾ ತನ್ನ ಅಣ್ವಸ್ತ್ರ ನಿಷ್ಕ್ರಿಯೆಗೊಳಿಸುವಂತೆ ಮಾಡುವಲ್ಲಿ ಅಮೆರಿಕ ಯಶಸ್ವಿಯಾಗುವುದೇ ಎಂಬ ಕುತೂಹಲ ಮೂಡಿದೆ.

Leave a Reply