ಯಾರದ್ದೋ ಒತ್ತಡಕ್ಕೆ ಮಣಿದರಾ ಪೇಜಾವರ ಶ್ರೀಗಳು?

ಡಿಜಿಟಲ್ ಕನ್ನಡ ಟೀಮ್:

ಉಡುಪಿಯ ಅಷ್ಟಮಠಗಳಲ್ಲಿ ಒಂದಾದ ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿ ಸಾಕಷ್ಟು ವಿಚಾರಗಳಲ್ಲಿ ಹಲವು ನಿಲುಗಳನ್ನು ತೆಗೆದುಕೊಳ್ಳುವ ಮೂಲಕ ನೇರವಂತಿಕೆ ಪ್ರದರ್ಶನ ಮಾಡ್ತಿದ್ರು. ಅದೇ ರೀತಿ ಇತ್ತೀಚಿಗೆ ಒಂದೆರಡು ವಿಚಾರಗಳ ಬಗ್ಗೆ ಮನಬಿಚ್ಚಿಉ ಮಾತನಾಡಿದ್ರು. ಅವುಗಳೆಂದರೆ ಪ್ರಧಾನಿ ಮೋದಿ ಸರ್ಕಾರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡ್ತಿಲ್ಲ ಎಂದಿದ್ರು. ಜೊತೆಗೆ ಕುಮಾರಸ್ವಾಮಿ ಅವರೊಗೆ ಉತ್ತಮ ಅನುಭವ ಇದೆ ಅವರು ಐದು ವರ್ಷ ಆಡಳಿತ ಪೂರೈಸಲಿ ಎಂದಿದ್ದರು. ಇವೆರಡರ ಜೊತೆಗೆ ಪೇಜಾವರ ಶ್ರೀಗಳು ಹೇಳಿದ್ದ ಮತ್ತೊಂದು ಮಾತು ಅಂದ್ರೆ ಕಳೆದ ಬಾರಿಯಂತೆ ಈ ಬಾರಿಯೂ ನಾನು ರಂಜಾನ್ ಪ್ರಯುಕ್ತ ಇಫ್ತಿಯಾರ್ ಆಯೋಜನೆ ಮಾಡಬೇಕಿತ್ತು. ಆದ್ರೆ ನಾನು ಪ್ರವಾಸದಲ್ಲಿ ಇರುವ ಕಾರಣ ಇಫ್ತಾರ್ ಆಯೋಜನೆ ಮಾಡ್ತಿಲ್ಲ, ಅದೂ ಅಲ್ಲದೆ ಇಫ್ತಾರ್ ಆಯೋಜನೆಯಲ್ಲಿ ಮುಸ್ಲಿಂ ಮುಖಂಡರಿಗೆ ಕಳೆದ ಬಾರಿಯ ರೀತಿ ಆಸಕ್ತಿ ಇಲ ಎಂದಿದ್ದರು. ಇದೀಗ ಶ್ರೀಗಳು ಯಾಕಿಗೆ ಸುಳ್ಳು ಹೇಳುತ್ತಿದ್ದಾರೆ ಎನಿಸಲು ಶುರುವಾಗಿತ್ತು.. ಇದೀಗ ಅದಕ್ಕೊಂದು ಪೂರಕ ಎನಿಸುವ ಉತ್ತರ ಸಿಕ್ಕಿದೆ.

ಪೇಜಾವರ ಶ್ರೀಗಳಿ ವಯಸ್ಸಾಗಿದೆ, ಅವರು ಟಿವಿ ನೋಡುವುದಿಲ್ಲ ಹಾಗಾಗಿ ಪ್ರಧಾನಿ ಮೋದಿ ಅವರ ಸಾಧನೆಗಳು ತಿಳಿದಿಲ್ಲ ಎಂದು ಸಂಸದೆ ಶೋಭಾ ಕರಂದ್ಲಾಜೆ ನೇರವಾಗಿಯೇ ತರಾಟೆಗೆ ತೆಗೆದುಕೊಂಡಿದ್ರು. ಆ ಬಳಿಕ ಏಕಾಏಕಿ ಉಲ್ಟಾ ಹೇಳಿಕೆ ಕೊಡಲು ಶುರು ಮಾಡಿದ್ರು. ನಾನು ಮೋದಿ‌ ಸರ್ಕಾರವನ್ನು ಟೀಕಿಸಿಲ್ಲ, ಕೇವಲ ಸಲಹೆ ನೀಡಿದ್ದೆ, ಆದರೆ ಕಪ್ಪು ಹಣದ ವಿಚಾರದಲ್ಲಿ ನಿರೀಕ್ಷೆ ಮಾಡಿದಷ್ಟು ಫಲಿತಾಂಶ ಬಂದಿಲ್ಲ ಎಂದಷ್ಟೇ ನಾನು ಹೇಳಿದ್ದು, ಅಸಮಾಧಾನ ಹೊರ ಹಾಕಿಲ್ಲ, ಟೀಕಿಸಿಯೂ ಇಲ್ಲ, ಇದೆಲ್ಲಾ ಮಾಧ್ಯಮಗಳ ಸೃಷ್ಟಿ, ಮಾಧ್ಯಮಗಳು ನನ್ನ ಮಾತನ್ನು ಅರ್ಥ ಮಾಡಿಕೊಳ್ಳಲು ಆಗಿಲ್ಲ ಎಂದಿದ್ದು, ಅದೂ ಕೂಡ ಮೈಸೂರಿನಲ್ಲಿ ತುರ್ತು ಸುದ್ದಿಗೋಷ್ಟಿ ನಡೆಸಿ ಹೇಳಿದ್ರು. ಆ ಬಳಿಕ ಮಾಧ್ಯಮಗಳ ಮೈಕ್ ಕಂಡ ಕಂಡಾಗಲೆಲ್ಲಾ ಇದೇ ಮಾತನ್ನು ಹೇಳುತ್ತಾ ಬಂದರು. ಕೊನೆಗೆ ಪೇಜಾವರ ಶ್ರೀಗಳು ಒತ್ತಡಕ್ಕೆ ಸಿಲುಕಿದ್ದಾರೆ ಅನ್ನೋ ಅನುಮಾನ ಇವರ ಹೇಳಿಕೆಗಳಿಂದಲೇ ಬಂದಿತ್ತು. ಇದೀಗ ಆ ಅನುಮಾನ ಸತ್ಯ ಎನ್ನುವ ಮಾತುಗಳು ಕೇಳಿ ಬಂದ್ವು.

ರಂಜಾನ್ ಪ್ರಯುಕ್ತ ಇಫ್ತಾರ್ ಕೂಟ ಆಯೋಜನೆಗೆ ಮುಸ್ಲಿಂ ಮುಖಂಡರಿಗೆ ಆಸಕ್ತಿ ಇಲ್ಲ ಎಂದು ಪೇಜಾವರ ಶ್ರೀಗಳು ಹೇಳಿದ್ದಾರೆ. ಆದರೆ ಶ್ರೀಗಳ ಮಾತಿನಲ್ಲಿ ಯಾವುದೇ ಸತ್ಯಾಂಶವಿಲ್ಲ. ಪೇಜಾವರ ಶ್ರೀಗಳಿಗೆ ಇಫ್ತಾರ್ ಕೂಟ ಮಾಡಬೇಕೆಂಬ ಮನಸ್ಸಿದ್ದರೂ ಕೆಲವರು ಅವರನ್ನು ಮಾಡದಂತೆ ತಡೆದಿದ್ದಾರೆ ಎಂದು ಹೇಳುವ ಮೂಲಕ ಎಲ್ಲಾ ಅನುಮಾನಗಳಿಗೂ ತೆರೆ ಎಳೆದರು. ಕೆಲವು ಸಂಘಟನೆಗಳು ಕಳೆದ ಬಾರಿಯ ಇಫ್ತಾರ್ ಕಾರ್ಯಕ್ರಮವನ್ನು ವಿರೋಧ ಮಾಡಿದ್ರು. ಅದೇ ಸಂಘಟನೆಗಳು ಇದೀಗ ಪೇಜಾವರ ಶ್ರೀಗಳ ಮೇಲೆ ಒತ್ತಡ ಹೇರುವ ಮೂಲಕ ತಮ್ಮ ಸೀಕ್ರೆಟ್ ಅಜೆಂಡ ಸಾಧಿಸಿದ್ದಾರೆ ಎಂದು ಉಡುಪಿಯ ಮುಸ್ಲಿಂ ಮುಖಂಡರೇ ಪ್ರತಿಪಾದಿಸಿದ್ದಾರೆ.

ಒಂದು ವೇಳೆ ಪೇಜಾವರ ಶ್ರೀಗಳ ಮೇಲೆ ಯಾವುದೇ ಒತ್ತಡ ಇಲ್ಲ ಎನ್ನುವುದಾಗಿದ್ದರೆ, ಪ್ರಧಾನಿ ಮೋದಿ ಹಾಗುಇ ಸರ್ಕಾರವನ್ನು ಟೀಕಿಸಿದ ಮೇಲೆ ಆ ವಿಚಾರದಲ್ಲಿ ಬದ್ಧತೆ ಕಾಯ್ದುಕೊಳ್ಳಬೇಕಿತ್ತು. ಇಲ್ಲ ಮಾಧ್ಯಮಗಳಲ್ಲಿ ತಮ್ಮ ಹೇಳಿಕೆ ಪ್ರಸಾರವಾದ ಬಳಿಕ ಅಥವಾ ಪತ್ರಿಕೆಗಳಲ್ಲಿ ಸವಿಸ್ತಾರವಾಗಿ ಬಂದ ಬಳಿಕ, ನಾನು ಮಾತನಾಡುವ ಭರದಲ್ಲಿ ಕೆಲವೊಂದಿಷ್ಟು ಮಾತುಗಳನ್ನಿ ತುಂಬಾ ತೀಕ್ಷ್ಣವಾಗಿ ಹೇಳಿದ್ದೇನೆ, ಅಷ್ಟೊಂದು ಪ್ರಮಾಣದಲ್ಲಿ ಮೋದಿ ಸರ್ಕಾರ ತೆಗಳಿಕೆಗೆ ಅರ್ಹವಲ್ಲ ಎಂದು ಮತ್ತೊಂದು ಸುದ್ದಿಗೋಷ್ಟಿ ಕರೆದು ಹೇಳಬಹುದಿತ್ತು. ಆ ಬಗ್ಗೆ ಚರ್ಚೆ ಆದ ಬಳಿಕ ಬಿಜೆಪಿ ನಾಯಕರು ಹಿಗ್ಗಾಮುಗ್ಗ ಜಾಡಿಸಿದ ಬಳಿಕ ಹೇಳಿಕೆಯೇ ಆ ರೀತಿ ಇಲ್ಲ ಎನ್ನುವುದು ಸಮಾಜ ತಿದ್ದುವ ಗುರುವಿನ ಸ್ಥಾನಕ್ಕೆ ಸರಿಬರುವುದಿಲ ಎನ್ನುವುದು ಅನುಯಾಯಿಗಳ ಮಾತು. ಜೊತೆಗೆ ಇಫ್ತಾರ್ ಆಯೋಜನೆಗೆ ಮುಸ್ಲಿಂ ಮುಖಂಡರಿಗೆ ಆಸಕ್ತಿಯಿಲ್ಲ ಎಂದಿದ್ಸರು. ಆದರೆ ಇಂದು ಮುಸ್ಲಿಂ ಮುಖಂಡರು ನಮಗೆ ಆಸಕ್ತಿ ಇದೆ ಶ್ರೀಗಳಿಗೆ ಒತ್ತಡವಿದೆ ಎಂದಿದ್ದಾರೆ. ಇದೀಗ ಶ್ರೀಗಳು ಇಫ್ತಾರ್ ಕೂಟ ಆಯೋಜನೆ ಮಾಡುವ ಮೂಲಕ ನನಗೆ ಯಾವುದೇ ಒತ್ತಡವಿಲ್ಲ ಎಂಬುದನ್ನು ಸಾಬೀತು ಮಾಡಬಹುದು. ಆದ್ರೀಗ ಅದನ್ನು ಮಾಡ್ತಾರಾ ಇಲ್ವಾ ಗೊತ್ತಿಲ್ಲ. ಮಾಡಿದರೆ ಶ್ರೀಗಳು ಸುಳ್ಳು ಹೇಳಲಿಲ್ಲ ಎನ್ನಬಹುದು. ಒಂದು ವೇಳೆ ಮಾಡದೇ ಹೋದಲ್ಲಿ ಶ್ರೀಗಳಿಗೆ ಒತ್ತಡವಿದೆ ಅನ್ನೋದನ್ನು ಒಪ್ಪಿಕೊಂಡಂತೆಯೇ ಸರಿ.

Leave a Reply