ಜಸ್ಟ್ ಪಾಸ್ ಸೌಮ್ಯಾ ರೆಡ್ಡಿಗೆ ಜೆಡಿಎಸ್ ಕಾಪಿ ಚೀಟಿ!

ಡಿಜಿಟಲ್ ಕನ್ನಡ ಟೀಮ್:

ರಾಜ್ಯದ ಮೈತ್ರಿ ಸರ್ಕಾರಕ್ಕೆ ಮತ್ತೊಂದು ಹಿರಿಮೆ ಸೇರಿಕೊಂಡಿದೆ. ಸಾರ್ವತ್ರಿಕ ಚುನಾವಣೆ ಬಳಿಕ ನಡೆದ ಎರಡು ಕ್ಷೇತ್ರಗಳ ಚುನಾವಣೆಯಲ್ಲಿ ಸಮ್ಮಿಶ್ರ ಸರ್ಕಾರದ ಅಭ್ಯರ್ಥಿಗಳೇ ಗೆಲ್ಲುವ ಮೂಲಕ ಬಿಜೆಪಿ ಅಭ್ಯರ್ಥಿಗಳನ್ನು ಬಗ್ಗು ಬಡಿದಿದ್ದಾರೆ. ಈ ಮೂಲಕ ಬಿಜೆಪಿ ನಾಯಕರು ಸರ್ಕಾರದ ವಿರುದ್ಧ ವಾಗ್ದಾಳಿ ಮಾಡೋದನ್ನು ತಪ್ಪಿಸಿದ್ದಾರೆ. ಜೊತೆಗೆ ಸರ್ಕಾರದ ಬಹುಮತವನ್ನು ಹೆಚ್ಚಿಸಿಕೊಂಡು ಸಮ್ಮಿಶ್ರ ಸರ್ಕಾರ ಜನತೆ ಬೆಂಬಲಿಸುತ್ತಿದ್ದಾರೆ ಎನ್ನುವುದನ್ಮು ಸಾಬೀತು‌ ಮಾಡ್ತಿದೆ. ರಾಜರಾಜೇಶ್ವರಿ ನಗರ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮುನಿರತ್ನ ಭರ್ಜರಿ ಜಯ ದಾಖಲಿಸುವ ಮೂಲಕ ಬಿಜೆಪಿ ಅಭ್ಯರ್ಥಿ ಗೆಲುವಿಗೆ ಆಸ್ಪದವನ್ನೇ ನೀಡಿರಲಿಲ್ಲ. ಆದರೆ ಜಯನಗರ ಕ್ಷೇತ್ರದಲ್ಲಿ ರಾಮಲಿಂಗ ರೆಡ್ಡಿ ಮಗಳು ಸೌಮ್ಯಾ ರೆಡ್ಡಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಗೆಲುವು ದಾಖಲಿಸಿದ್ದಾರೆ. ಆದ್ರೆ ಜಸ್ಟ್ ಪಾಸ್. ಇದಕ್ಕೂ ಜೆಡಿಎಸ್‌ನವರು ಕಾಪಿ ಚೀಟಿ ಕೊಡಬೇಕಾಯ್ತು. ಇಲ್ಲದಿದ್ರೆ ಸೋಡ ಚೀಟಿ ಗ್ಯಾರಂಟಿ ಎನ್ನುವಂತಿದೆ ಫಲಿತಾಂಶ.

ಜಯನಗರ ಕ್ಷೇತ್ರದಲ್ಲಿ ಚುನಾವಣೆ ಘೋಷಣೆ ಆದಾಗ ಮೂರು ಪಕ್ಷಗಳೂ ಸೇರಿ‌ ಹಲವು ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಿದ್ದರು. ಆದ್ರೆ ಹೃದಯಾಘಾತದಿಂದ ಹಾಲಿ ಶಾಸಕರಾಗಿದ್ದ ವಿಜಯ್ ಕುಮಾರ್ ನಿಧನರಾದ ಕಾರಣಕ್ಕೆ ಚುನಾವಣೆ ಮುಂದೂಡಿಕೆಯಾಗಿತ್ತು. ಇದೀಗ ಕಾಂಗ್ರೆಸ್ ಅಭ್ಯರ್ಥಿ ಗೆಲುವು ದಾಖಲಿಸಿದ್ದು, ತೀರ ಕಡಿಮೆ ಹಂತದಲ್ಲಿ ಗೆಲುವಿನ ಕೇಕೆ ಹಾಕಿದ್ದಾರೆ. ಒಂದು ವೇಳೆ ಜೆಡಿಎಸ್ ಏನಾದರೂ ಕಾಂಗ್ರೆಸ್ ಬೆಂಬಲಕ್ಕೆ ನಿಲ್ಲದೇ ಇದ್ದರೆ ಕಾಂಗ್ರೆಸ್ ಅಭ್ಯರ್ಥಿ ಮನೆಯಲ್ಲೇ ಉಳಿಯಬೇಕಿತ್ತು. ಯಾಕಂದ್ರೆ ಜಯನಗರದಲ್ಲಿ ಆರ್‌ಎಸ್‌ಎಸ್ ಸಂಘಟನೆ ತುಂಬಾ ಚೆನ್ನಾಗಿ ಕೆಲಸ ಮಾಡಿದ್ದು ಸಮಬಲದ ಪೈಪೋಟಿ ನೀಡುವಲ್ಲಿ ಯಶಸ್ವಿಯಾಗಿದ್ದಾರೆ. ಕೇವಲ 2,889 ಮತಗಳ ಹಂತರದಿಂದ ಜಯಭೇರಿ ಬಾರಿಸಿ ಚೊಚ್ಚಲ ಶಾಸಕರಾಗಿ ವಿಧಾನಸೌಧದತ್ತ ಹೆಜ್ಜೆ ಇಟ್ಟಿದ್ದಾರೆ ಒಂದು ವೇಳೆ ಜೆಡಿಎಸ್ ಅಭ್ಯರ್ಥಿ ಕಾಳೆಗೌಡ ಸ್ಪರ್ಧೆ ಮಾಡಿದ್ದರೆ, ಅವರು ಗೆಲ್ಲುತ್ತಿದ್ದರೋ ಇಲ್ಲವೋ ಬೇಡವಾದ ವಿಚಾರ. ಆದರೆ 10 ರಿಂದ 15 ಸಾವಿರ ಮತಗಳನ್ನು ಕಬಳಿಸಿದ್ದರೂ ಬಿಜೆಪಿ ಅಭ್ಯರ್ಥಿಗೆ ವರದಾನ ಆಗುತ್ತಿತ್ತು. ಆದರೆ ಪರೀಕ್ಷೆ ಮುಗಿಯುವ ಕಡೇ ಗಳಿಗೆಯಲ್ಲಿ ವಿದ್ಯಾರ್ಥಿಗೆ ಕಾಪಿ ಚೀಟಿ ಸಿಕ್ಕ ಹಾಗೆ ಜೆಡಿಎಸ್ ಅಭ್ಯರ್ಥಿ ಸ್ವಯಂ ನಿವೃತ್ತಿಯಾಗುವ ಮೂಲಕ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸಲು ನಿರ್ಧಾರ ಮಾಡಿದ್ದು ಫೇಲ್ ಆಗುವ ವಿದ್ಯಾರ್ಥಿ ಸೌಮ್ಯಾ ರೆಡ್ಡಿ ಜಸ್ಟ್ ಪಾಸ್ ಆಗಿಬಿಟ್ರು.

ಗೆಲುವಿನ ಶ್ರೇಯ ಪಡೆಯಲು ಸಿದ್ದು ಯತ್ನ

ರಾಮಲಿಂಗಾರೆಡ್ಡಿ ಮಗಳು ಸೌಮ್ಯಾ ರೆಡ್ಡಿ ಅವರಿಗೆ ಟಿಕೆಟ್ ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಸಿದ್ದರಾಮಯ್ಯ, ಇದು ಕಾಂಗ್ರೆಸ್ ಪಕ್ಷದ ಗೆಲುವು, ವಿಜಯ್ ಕುಮಾರ್ ಸ್ಪರ್ಧೆ ಮಾಡಿದ್ದರೂ ಜಯನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯೇ ಗೆಲುವು ಸಾಧಿಸುತ್ತಿದ್ರು ಎಂದಿದ್ದಾರೆ. ಇದಕ್ಕೆ ಕಾರಣ ತುಂಬಾ ಸರಳ, ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಿದ್ದರೂ ಕೆಲವೊಂದು ವಿಚಾರಗಳಲ್ಲಿ ಸಿದ್ದರಾಮಯ್ಯ ಅಸಮಾಧಾನ ಹೊಂದಿದ್ದಾರೆ. ಈ ಕಾರಣದಿಂದಾಗಿ ಅತೃಪ್ತರ ಜೊತೆ ಹೈಕಮಾಂಡ್ ಹೇಳಿದರೂ ಮಾತನಾಡುವ ಗೋಜಿಗೆ ಹೋಗಲಿಲ್ಲ. ಜೊತೆಗೆ ಜೆಡಿಎಸ್ ಬೆಂಬಲಿಸಿದ್ರಿಂದ ಸೌಮ್ಯಾ ರೆಡ್ಡಿ ಗೆಲುವು ದಾಖಲಿಸಿದ್ರು ಎಂದರೆ, ತಾನೂ ಆಯ್ಕೆ ಮಾಡಿದ ಅಭ್ಯರ್ಥಿ ದುರ್ಬಲರು, ಜೆಡಿಎಸ್ ಬೆಂಬಲಿದಿಂದ ಗೆಲುವು ಸಾಧ್ಯವಾಯ್ತು ಎಂದರೆ ಜೆಡಿಎಸ್‌ ಕೂಡ ಪ್ರಬಲ ಪಕ್ಷ ಎಂದು ಒಪ್ಪಿಕೊಂಡಂತೆ ಆಗಲಿದೆ ಅನ್ನೋ ಕಾರಣಕ್ಕೆ ಇದು ಕಾಂಗ್ರೆಸ್ ಪಕ್ಷದ ಗೆಲುವು, ಗೆಲುವಿನ ಶ್ರೇಯ ಕಾಂಗ್ರೆಸ್ ಪಕ್ಷಕ್ಕೇ ಸಿಗಲಿದೆ ಎಂದಿದ್ದಾರೆ. ಆದರೆ ನೂತನ ಶಾಸಕಿ ಸೌಮ್ಯಾ ರೆಡ್ಡಿ ಹಾಗೂ ಅವರ ತಂದೆ ಮಾಜಿ ಸಚಿವ ರಾಮಲಿಂಗ ರೆಡ್ಡಿ ಜೆಡಿಎಸ್‌ಗೆ ಧನ್ಯವಾದ ಅರ್ಪಿಸಿದ್ದಾರೆ. ನನ್ನ ಗೆಲುವಿನಲ್ಲಿ ಜೆಡಿಎಸ್ ಪಾತ್ರವೂ ಇದೆ ಎಂಬುದನ್ನು ಒಪ್ಪಿಕೊಂಡಿದ್ದಾರೆ. ಒಟ್ಟಾರೆ ರಾಜಕೀಯ ಕಾರಣಕ್ಕಾಗಿ ಯಾರು ಏನೇ ಹೇಳಿದ್ರು ಜಸ್ಟ್ ಕ್ಲಾಸ್ ಸ್ಟೂಡೆಂಟ್ ಸೌಮ್ಯಾ ರೆಡ್ಡಿ ಜೆಡಿಎಸ್ ಕಾಪಿ ಚೀಟಿ ಹಿಡ್ಕೊಂಡು ಪಾಸ್ ಆಗಿಬಿಟ್ಟಿದ್ದಾರೆ.

Leave a Reply