ಕುಮಾರಸ್ವಾಮಿಗೆ ಕಾಂಗ್ರೆಸ್‌ನಿಂದ ಶುರುವಾಯ್ತಾ ಕಿರುಕುಳ?

ಡಿಜಿಟಲ್ ಕನ್ನಡ ಟೀಮ್:

ಕುಮಾರಸ್ವಾಮಿ ರಾಜ್ಯದ ಮುಖ್ಯಮಂತ್ರಿ ಆಗುವ ತನಕ ಮೈತ್ರಿ ಪಕ್ಷದಲ್ಲಿ ಇದ್ದ ಒಗ್ಗಟ್ಟು ಬಹುಮತ ಸಾಬೀತು ಮಾಡಿದ ಬಳಿಕ ಮಾಯವಾಗಿದೆ. ಸಚಿವ ಸ್ಥಾನಕ್ಕಾಗಿ ಪೈಪೋಟಿ ನಡೆಸಿದ ಬಳಿಕ ಸಂಪುಟಕ್ಕೆ ಸೇರಲಾರದವರು ಬಂಡಾಯ ಸಾರಿದ್ರು. ಅದನ್ನು ಹೇಗೋ ಕಾಂಗ್ರೆಸ್ ಹೈಕಮಾಂಡ್ ಪರಿಹಾರ ಕಂಡುಕೊಂಡು ಬಂಡಾಯವನ್ನು ತಾತ್ಕಾಲಿಕವಾಗಿ ಶಮನ ಮಾಡುವ ಮೂಲಕ, ಆ ಸಮಸ್ಯೆಯಿಂದ ಹೊರಬರುವಂತೆ ಮಾಡಿತ್ತು. ಅದರಲ್ಲೂ‌ ಮಾಜಿ ಸಿಎಂ ಸಿದ್ದರಾಮಯ್ಯ, ತಮ್ಮ ಆಪ್ತರಿಗೆ ಸೂಕ್ತ ಸ್ಥಾನಮಾನ ಸಿಗಲಿಲ್ಲ ಹಾಗೂ ನಾನು ಸಚಿವ ಸ್ಥಾನ ಕೊಡಲಿಲ್ಲ ಅನ್ನೋ ಕಾರಣಕ್ಕೆ ಪಕ್ಷದೊಳಗೆ ಸಣ್ಣ ಬೆಂಕಿ ಹಾಕಿ ಬಾದಾಮಿಯಲ್ಲಿ ಹೋಗಿ ಜನರಿಗೆ ಧನ್ಯವಾದ ಹೇಳುವ ನಾಟಕ ಮಾಡ್ತಿದ್ದಾರೆ ಅನ್ನೋ ಮಾತು ಕೇಳಿ ಬಂದಿತ್ತು. ಇದೀಗ ಓಲ್ಡ್ ಪ್ಲಾನ್ ವರ್ಕೌಟ್ ಆಗಲಿಲ್ಲ ಅಂತಾ ಸ್ವತಃ ಸಿದ್ದರಾಮಯ್ಯ ಅವರೇ ಅಖಾಡಕ್ಕೆ ಇಳಿದಿದ್ದಾರೆ.

ಕುಮಾರಸ್ವಾಮಿ ಪೂರ್ಣ ಬಜೆಟ್ ಮಂಡಿಸಬೇಕಿಲ್ಲ!

ಈಗಾಗಲೇ ಮುಖ್ಯಮಂತ್ರಿ ಕುಮಾರಸ್ವಾಮಿ ಬಜೆಟ್ ಪೂರ್ವ ತಯಾರಿ ಸಭೆ ನಡೆಸುತ್ತಿದ್ದಾರೆ. ಎಲ್ಲಾ ಇಲಾಖಾ ಅಧಿಕಾರಿಗಳ ಜೊತೆ ಬಜೆಟ್ ತಯಾರಿ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ. ಹೀಗಿರುವಾಗ ಮಾಜಿ ಸಿಎಂ ಸಿದ್ದರಾಮಯ್ಯ ಅಡ್ಡಿ ಮಾಡುವ ಮಾತನಾಡಿದ್ದಾರೆ. ಈಗಾಗಲೇ ನಮ್ಮ ಸರ್ಕಾರವಿದ್ದಾಗ ಪೂರ್ಣ ಬಜೆಟ್ ಮಂಡಿಸಿ ಆಗಿದೆ. ಹಾಗಾಗಿ ಕುಮಾರಸ್ವಾಮಿ ಅವರು ಪೂರ್ಣ ಬಜೆಟ್ ಮಂಡಿಸುವ ಅವಶ್ಯಕತೆ ಇಲ್ಲ. ಅವರು ಪೂರಕ ಬಜೆಟ್ ಮಂಡಿಸಿದರೆ ಸಾಕು ಎಂದಿದ್ದಾರೆ. ಒಂದು ವೇಳೆ ಜೆಡಿಎಸ್ ಪಕ್ಷದ ಪ್ರಣಾಳಿಕೆ ಜಾರಿ ಮಾಡಬೇಕೆಂದರೆ ಪೂರಕ ಬಜೆಟ್‌ನಲ್ಲಿ ಸೇರಿಸಬಹುದು ಎಂದಿದ್ದಾರೆ. ಈ ಮೂಲಕ ಬಜೆಟ್ ಮಂಡಿಸು ಮುಖ್ಯಮಂತ್ರಿ ಕುಮಾರಸ್ವಾಮಿ ನಿರ್ಧಾರವನ್ನು ಸಿದ್ದರಾಮಯ್ಯ ವಿರೋಧಿಸಿದ್ದಾರೆ. ಇದೇ ಸಿದ್ದರಾಮಯ್ಯ ಕಳೆದ ಬಾರಿ ಬಿಜೆಪಿ ಮಣಿಸಿ ಅಧಿಕಾರದ ಚುಕ್ಕಾಣಿ ಹಿಡಿದಾಗ ಅಂದಿನ ಸಿಎಂ ಜಗದೀಶ್ ಶೆಟ್ಟರ್ ಮಂಡಿಸಿದ್ದ ಬಜೆಟ್ ಬಿಟ್ಟು ಪೂರ್ಣ ಪ್ರಮಾಣದ ಬಜೆಟ್ ಮಂಡನೆ ಮಾಡಿದ್ದರು. ಆದರೆ ಈಗ ಕುಮಾರಸ್ವಾಮಿ ಸರ್ಕಾರದಲ್ಲಿ ಪ್ರಮುಖ ಪಾತ್ರ ವಹಿಸಿರುವ ಕಾಂಗ್ರೆಸ್, ಸಂಪೂರ್ಣವಾಗಿ ಕುಮಾರಸ್ವಾಮಿ ಅವರ ಆಡಳಿತಕ್ಕೆ ಲಗಾಮು ಹಾಕಲು ಯತ್ನಿಸುತ್ತಿದ್ದು, ಪ್ರತಿಯೊಂದು ಯೋಜನೆಗೂ ಅಡ್ಡಗಾಲು ಹಾಕಲು ಮುಂದಾಗ್ತಿದೆ. ರೈತರ ಸಾಲ ಮನ್ನಾ ಬಗ್ಗೆ ಮಾತನಾಡಿದ್ದ ಸಿದ್ದರಾಮಯ್ಯ, ಅಷ್ಟೊಂದು ಪ್ರಮಾಣದಲ್ಲಿ ಸಾಲ ಮನ್ನಾ ಮಾಡಿದರೆ ಸರ್ಕಾರಿ ನೌಕರರಿಗೆ ಸಂಬಳ ಕೊಡಲು ಆಗುವುದಿಲ್ಲ ಎನ್ನುವ ಮೂಲಕ ಅಪಸ್ವರ ಎತ್ತಿದ್ದರು. ಇದೀಗ ಬಜೆಟ್ ಮಂಡನೆಗೆ ಅಪಸ್ವರ ಎತ್ತುವ ಮೂಲಕ ಕುಮಾರಸ್ವಾಮಿ ಸರ್ಕಾರ ಸಂಪೂರ್ಣವಾಗಿ ಕೆಲಸ ಮಾಡಲು ಅಡ್ಡಿ ತರುತ್ತಿದ್ದಾರೆ ಅನ್ನೋ ಸಂದೇಶ ರವಾನೆಯಾಗುವಂತೆ ಮಾಡ್ತಿದ್ದಾರೆ. ಇದೀಗ ಈ ಹೇಳಿಕೆ ನೀಡಿ ಧರ್ಮಸ್ಥಳದ ಪ್ರಕೃತಿ ಚಿಕಿತ್ಸಾಲಯ ಸೇರಿರುವ ಸಿದ್ದರಾಮಯ್ಯ, ರಾಜ್ಯದಲ್ಲಿ ನಡೆಯುವ ಬೆಳವಣಿಗೆ ಗ್ರಹಿಸಲಿದ್ದಾರೆ.

5 ವರ್ಷ ಆಡಳಿತ ಅನುಮಾನ!

ಸಿದ್ದರಾಮಯ್ಯ ಅವರ ಈ ಹೇಳಿಕೆ ಹೊರ ಬೀಳ್ತಿದ್ದ ಹಾಗೆ ಧಾರವಾಡದಲ್ಲಿ ಮಾತನಾಡಿದ ಜೆಡಿಎಸ್ ಮುಖಂಡ, ಎಂಎಲ್‌ಸಿ ಬಸವರಾಜ ಹೊರಟ್ಟಿ, ಕಾಂಗ್ರೆಸ್‌ನಿಂದ ಹೀಗೇ ಕಿರುಕುಳ ಮುಂದುವರಿದರೆ ಈ ಸರ್ಕಾರ 5 ವರ್ಷ ಆಡಳಿತ ನೀಡುವುದಿಲ್ಲ ಎಂದು ನೇರವಾಗಿಯೇ ಚಾಟಿ ಬೀಸಿದ್ರು. ಜೊತೆಗೆ ಕಾಂಗ್ರೆಸ್ ಕಿರುಕುಳದಿಂದ ಬೇಸತ್ತು ಮುಖ್ಯಮಂತ್ರಿ ಒಂದು ವರ್ಷ ನನ್ನನ್ನು ಯಾರೂ ಮುಟ್ಟಲು ಆಗುವುದಿಲ್ಲ ಎಂದಿದ್ದಾರೆ ಎನಿಸುತ್ತದೆ. ಒಂದು ಸರ್ಕಾರವನ್ನು ನಡೆಸುವಾಗ ಮುಖ್ಯಮಂತ್ರಿ ಆದವರಿಗೆ ಮುಕ್ತ ನಿರ್ಧಾರ ಕೈಗೊಳ್ಳಲು ಅವಕಾಶ ನೀಡಬೇಕು. ಇಲದಿದ್ದರೆ ಆಡಳಿತ ನಡೆಸಲು ಕಷ್ಟವಾಗುತ್ತೆ. ಒಂದು ವೇಳೆ ಇದನ್ನು ಕಾಂಗ್ರೆಸ್ ಅರ್ಥ ಮಾಡಿಕೊಳ್ಳಲು ವಿಫಲವಾದರೆ ಸರ್ಕಾರ ಬಿದ್ದು ಹೋಗಲಿದೆ ಎಂದು ಕಾಂಗ್ರೆಸ್ ನಾಯಕರಿಗೆ ಸೂಕ್ಷ್ಮವಾಗಿ ಎಚ್ಚರಿಕೆಯನ್ನೂ ನೀಡಿದ್ರು. ಬಸವರಾಜ ಹೊರಟ್ಟಿ ಈ ಹೇಳಿಕೆಯನ್ನು ನೀಡಿದ್ದಾರೆ ಎಂದ ಮೇಲೆ ಅದಕ್ಕೆ ಪ್ರತ್ಯೇಕವಾದ ಘನತೆ ಇರುತ್ತದೆ. ಯಾಕಂದ್ರೆ ಮುಖ್ಯಮಂತ್ರಿ ಕುಮಾರಸ್ವಾಮಿ ಕಾಂಗ್ರೆಸ್ ನಾಯಕರ ಮಾತಿನಿಂದ ಕಂಗಾಲಾಗಿರಬಹುದು ಇದೇ ಮಾತು ಹೊರಟ್ಟಿ ಮೂಲಕ ಬಹಿರಂಗವಾಗಿದೆ ಎಂದೆನಿಸುತ್ತದೆ. ಒಂದು ವೇಳೆ ಎಲ್ಲವೂ ಸರಿ ಇದ್ದರೆ ಬಜೆಟ್‌ಗೆ ವಿರೋಧವೂ ಇರುತ್ತಿರಲಿಲ್ಲ, ಜೆಡಿಎಸ್‌ನಿಂದ ಈ ಮಾತು ಬರುತ್ತಿರಲಿಲ್ಲ.

Leave a Reply