ಕುಮಾರಸ್ವಾಮಿ ಆತ್ಮವಿಶ್ವಾಸ ಉಡುಗಿಸುತ್ತಿರುವವರು ಯಾರು?

ಎರಡು ಪಕ್ಷಗಳು ಸೇರಿ ಮಾಡುವ ಮೈತ್ರಿ ಸರಕಾರ ಅಂದ್ರೆ ಮೂರು ಕಾಲಿನ ಓಟ ಇದ್ದಂತೆ. ಇಬ್ಬರು ವ್ಯಕ್ತಿಯ ಒಂದೊಂದು ಕಾಲು ಸೇರಿಸಿ ಹಗ್ಗದಿಂದ ಕಟ್ಟಿಹಾಕಿ, ನೂರು ಕಿ.ಮೀ. ವೇಗದಲ್ಲಿ ಓಡಿ ಅಂತಂದ್ರೆ ಹೇಗೆ ತಾನೇ ಓಡಲು ಸಾಧ್ಯ? ಒಂದೋ ಮುಗ್ಗರಿಸಿ ಬೀಳ್ತಾಾರೆ, ಇಲ್ಲ ಅಂದ್ರೆ ಆಮೆ ವೇಗಕ್ಕೆ ಇಳೀತಾರೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರದ್ದು ಇದೇ ಕತೆ ಆಗಿದೆ. ಅದಕ್ಕೂ ಈಗೊಂದು ಹೊಸ ಬ್ರೇಕ್ ಬಿದ್ದಿದೆ. ‘ನೀವೇ ಮುಖ್ಯಮಂತ್ರಿ ಆಗಿ, ನೀವೇ ಸರಕಾರ ಮಾಡಿ’ ಅಂತ ಕುಮಾರಸ್ವಾಮಿ ಅವರ ಬೆನ್ತಟ್ಟಿ ಮುಂದಕ್ಕೆ ತಳ್ಳಿದ ಕಾಂಗ್ರೆಸ್, ಇದೀಗ ಅವರ ಎರಡೂ ಕಾಲನ್ನು ಕಟ್ಟಿಹಾಕಿ ಓಡಿ, ಓಡಿ ಅಂತಿದೆ. ಎರಡೂ ಕಾಲನ್ನು ಗೋಣಿಚೀಲದೊಳಗೆ ಸೇರಿಸಿಕೊಂಡು ಕಪ್ಪೆಯಂತೆ ಕುಪ್ಪಳಿಸುತ್ತಾ ಸಾಗಬೇಕಾದ ಸ್ಥಿತಿ ಮುಟ್ಟಿರುವ ಕುಮಾರಸ್ವಾಮಿ ಅವರನ್ನು ಓಡಿ ಅಂದರೆ ಎಲ್ಲಿಗೆ ಓಡುತ್ತಾರೆ? ಹೇಗೆ ಓಡುತ್ತಾರೆ? ಎಷ್ಟು ಅಂತಾ ಓಡುತ್ತಾರೆ?

ಮುಂದಿನ ಐದು ವರ್ಷ ನೀವೇ ಮುಖ್ಯಮಂತ್ರಿ ಅಂತ ಕಾಂಗ್ರೆಸ್ ರಾಷ್ಟ್ರೀಯ ಮುಖಂಡರು ಹೇಳಿರುವುದೇನೋ ನಿಜ. ಆದರೆ ರಾಜ್ಯ ಮುಖಂಡರು ದಿನಕ್ಕೊಂದು ಷರತ್ತು ಹಾಕುತ್ತಿದ್ದಾರೆ, ಸರಕಾರ ಹೀಗೇ ನಡೆಯಬೇಕು ಎಂದು ಗೀಟು ಎಳೆಯುತ್ತಿದ್ದಾರೆ. ಇದು ಕುಮಾರಸ್ವಾಮಿ ಅವರಿಗೆ ನಿತ್ಯ ಕಿರುಕುಳವಾಗಿ(ಟಾರ್ಚರ್) ಪರಿಣಮಿಸಿದೆ. ಅವರು ನಿಜಕ್ಕೂ ಬೇಗುದಿಯ ಪಾತ್ರೆಯಲ್ಲಿ ಬೇಯುತ್ತಿದ್ದಾರೆ. ಮಿತ್ರಪಕ್ಷದವರು ಬಟ್ಟೆಯಲ್ಲಿ ಮುಚ್ಚಿಟ್ಟುಕೊಂಡ ಸೂಜಿಯಲ್ಲಿ ಚುಚ್ಚುವುದು ಒಂದು ಕಡೆಯಾದರೆ, ಜೇನುಹುಳುಗಳಿಂದ ಮುಸುಡಿ ಕಚ್ಚಿಸಿಕೊಂಡ ಕರಡಿಯಂತೆ, ಕಂಡ ಕಂಡ ಇಲಾಖೆಗಳಿಗೆ ನುಗ್ಗಿ ರಾದ್ಧಾಂತ ಎಬ್ಬಿಸುತ್ತಿರುವ ಸಹೋದರ ರೇವಣ್ಣನವರ ಉಪಟಳ ಮತ್ತೊಂದು ಕಡೆ. ಇವೆಲ್ಲ ಕುಮಾರಸ್ವಾಮಿ ಅವರ ಆತ್ಮವಿಶ್ವಾಸವನ್ನು ಕುಗ್ಗಿಸಿವೆ. ಕೆಲಸ ಮಾಡಬೇಕೆನ್ನುವ ಉತ್ಸಾಹ ಇದ್ದರೂ ಅನ್ಯರು ಕುಗ್ಗಿಸುತ್ತಿರುವ ಆತ್ಮವಿಶ್ವಾಸ ಅದಕ್ಕೆ ಆಸ್ಪದ ನೀಡುತ್ತಿಲ್ಲ. ಹೀಗಾಗಿಯೇ ತಮ್ಮ ನೇತೃತ್ವದ ಸರಕಾರಕ್ಕೆ ಅವರು ಕನಿಷ್ಠ ಒಂದು ವರ್ಷದ ಆಯುಷ್ಯ ಬರೆದಿರುವುದು!

ಇನ್ನೊಂದು ವರ್ಷ, ಅಂದರೆ ಮುಂದಿನ ಲೋಕಸಭೆ ಚುನಾವಣೆವರೆಗೂ ಯಾರೂ ನನ್ನನ್ನು ಏನೂ ಮಾಡಲು ಸಾಧ್ಯವಿಲ್ಲ ಎಂದು ಕುಮಾರಸ್ವಾಮಿ ಹೇಳಿರುವುದು ಅನೇಕ ವ್ಯಾಖ್ಯಾನ, ಸಂಶಯಗಳಿಗೆ ಕಾರಣವಾಗಿವೆ. ಮಿತ್ರಪಕ್ಷ ಕಾಂಗ್ರೆಸ್ ಐದು ವರ್ಷ ನೀವೇ ಸಿಎಂ ಅಂದಿದ್ದರೂ ಕುಮಾರಸ್ವಾಮಿ ವರ್ಷದ ಮಾತನಾಡುವ ಅಗತ್ಯವಾದರೂ ಏನಿತ್ತು? ಈ ಸರಕಾರ ಅಸ್ತಿತ್ವಕ್ಕೆ ಬಂದ ಕಳೆದ ಇಪ್ಪತ್ತೈದು ದಿನಗಳಲ್ಲಿ ಆಗಿರುವ ಅನುಭವ ಅವರನ್ನೇನಾದರೂ ಹತಾಶೆಯ ಕೂಪಕ್ಕೆ ದೂಡಿದೆಯೇ? ಕಾಂಗ್ರೆಸ್ ಅಡಿಗಡಿಗೂ ಹಾಕುತ್ತಿರುವ ಷರತ್ತು, ಒಡ್ಡುತ್ತಿರುವ ಆಕ್ಷೇಪ ಅವರ ನಂಬಿಕೆಯ ನಿಕ್ಷೇಪವನ್ನು ಬರಿದು ಮಾಡಿದೆಯೇ? ಮಂತ್ರಿ-ಮಂಡಲ ರಚನೆಯಲ್ಲೂ ಅಪಸ್ವರ, ವಿಸ್ತರಣೆಯಲ್ಲೂ ವಿರೋಧಾಭಾಸ, ಖಾತೆ ಹಂಚಿಕೆಯಲ್ಲೂ ಕ್ಯಾತೆ, ರೈತರ ಸಾಲಮನ್ನಾ ಭರವಸೆ ಈಡೇರಿಸುವಲ್ಲಿಯೂ ನಿರಾಸೆ, ಬಜೆಟ್ ಮಂಡನೆಯಲ್ಲೂ ಭಿನ್ನರಾಗ, ಜತೆಗೆ ಪಕ್ಷದ ಒಳಗೆ ಮತ್ತು ಹೊರಗೆ ಬೂದಿ ಮುಚ್ಚಿದ ಕೆಂಡದಂತಿರುವ ಬಂಡಾಯ ಮತ್ತಿತರ ಸಂಗತಿಗಳು ಅವರನ್ನು ಹೈರಾಣರನ್ನಾಗಿಸಿವೆ? – ಇವೇ ಮೊದಲಾದ ಪ್ರಶ್ನೆಗಳಿಗೆ ಸಿಗುವ ಉತ್ತರ ‘ಹೌದು’ ಎಂದೇ. ಇದನ್ನು ಬೇರೇ ಯಾರೂ ಅಲ್ಲ, ಕುಮಾರಸ್ವಾಮಿ ಅವರ ಪಕ್ಷದ ಹಿರಿಯ ಮುಖಂಡರೂ ಆಗಿರುವ ಬಸವರಾಜ ಹೊರಟ್ಟಿ ಅವರೇ ಹೇಳಿದ್ದಾರೆ. ಸರಕಾರ ಮಾಡಿ ಎಂದು ಕುಮಾರಸ್ವಾಮಿ ಅವರಿಗೆ ಹೇಳಿ, ಕಾಂಗ್ರೆಸ್ ಮುಖಂಡರು ದಿನಕ್ಕೊಂದು ಹಿಂಸೆ ನೀಡುತ್ತಿದ್ದಾರೆ. ಹೀಗಾದರೆ ಈ ಸರಕಾರ ಹೆಚ್ಚು ಕಾಲ ಉಳಿಯುವುದಿಲ್ಲ ಎಂದು. ಅಂದರೆ ಬಸವರಾಜ ಹೊರಟ್ಟಿಯವರ ಮಾತು ಕುಮಾರಸ್ವಾಮಿ ಅವರು ಅನುಭವಿಸುತ್ತಿರುವ ಯಾತನೆಗೆ ಕನ್ನಡಿ ಹಿಡಿದಿದೆ. ಕುಮಾರಸ್ವಾಮಿ ಅವರು ಸುಖಾಸುಮ್ಮನೆ ಸರಕಾರಕ್ಕೆ ಒಂದು ವರ್ಷದ ಆಯುಷ್ಯ ಬರೆದಿಲ್ಲ, ಅದಕ್ಕೆ ಸಾಕಷ್ಟು ಕಾರಣಗಳಿವೆ ಎಂಬುದನ್ನು ಸಾಬೀತು ಪಡಿಸಿದೆ.

ಒಬ್ಬ ವ್ಯಕ್ತಿಗೆ ಉತ್ಸಾಹ ಇದ್ದರಷ್ಟೇ ಸಾಲದು. ಆ ಉತ್ಸಾಹ ಕಾರ್ಯರೂಪಕ್ಕೆ ಬರಲು ಆತ್ಮವಿಶ್ವಾಸ ಇರಬೇಕು. ಆತ್ಮವಿಶ್ವಾಸ ಇಲ್ಲದ ಉತ್ಸಾಹ ಕಾಲಕಳೆದಂತೆ ಬತ್ತಿ ಹೋಗುತ್ತದೆ. ಅದೃಷ್ಟ ಎಲ್ಲ ಕಾಲಕ್ಕೂ ಕೈ ಹಿಡಿಯುವುದಿಲ್ಲ. ಅದು ಕೈ ಹಿಡಿದಾಗ ಕಾಲು ಜಾಡಿಸಿದರೆ ಓಡಿ ಹೋಗುತ್ತದೆ. ಕುಮಾರಸ್ವಾಮಿ ಅವರೇ ಹೇಳಿಕೊಂಡಿರುವಂತೆ ಅವರಿಗೆ ಮುಖ್ಯಮಂತ್ರಿ ಪಟ್ಟ ಬಂದಿರುವುದು ಪರಿಸ್ಥಿತಿಯ ಕೂಸಾಗಿ. ಆದರೆ ಅದನ್ನು ಸಾಕಿ, ಸಲಹಲು ಸರಕಾರದ ಅರ್ಧಾಂಗಿ ಕಾಂಗ್ರೆಸ್ ಸಹಕರಿಸುತ್ತಿಲ್ಲ. ಅಧಿಕಾರ ಕೊಟ್ಟಂತೆ ಮಾಡಿ ಅಡಿಗಡಿಗೂ ಅಡ್ಡಗಾಲು ಹಾಕುತ್ತಿದೆ. ಕಾಂಗ್ರೆಸ್ ರಾಷ್ಟ್ರೀಯ ನಾಯಕರು ನೀವು ಆರಾಮವಾಗಿ ಸರಕಾರ ಮಾಡಿ ಅನ್ನುತ್ತಾರೆ. ಆದರೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೊಸ ಬಜೆಟ್ ಬೇಡ, ಪೂರಕ ಬಜೆಟ್ ಮಂಡಿಸಿ ಸಾಕು, ತಮ್ಮ ಸರಕಾರದ ಯೋಜನೆಗಳನ್ನು ಮುಂದುವರಿಸಿ ಅನ್ನುತ್ತಾರೆ. ಡಿಸಿಎಂ ಡಾ.ಜಿ. ಪರಮೇಶ್ವರ ರೈತರ ಸಾಲ ಮನ್ನಾಕ್ಕೆ ದುಡ್ಡೆೆಲ್ಲಿಂದ ತರುವುದು ಎಂದು ಪ್ರಶ್ನಿಸುತ್ತಾರೆ? ನಮ್ಮನ್ನು ಕೇಳದೆ ವರ್ಗಾವಣೆ ಮಾಡಿದರೆ ಪರಿಸ್ಥಿತಿ ನೆಟ್ಟಗಿರುವುದಿಲ್ಲ ಎಂದು ಡಿ.ಕೆ.ಶಿವಕುಮಾರ್ ಹೇಳುತ್ತಾರೆ. ನಮ್ಮನ್ನು ಮಂತ್ರಿ ಮಾಡಲಿಲ್ಲ ಅಂದ್ರೆ ಈ ಸರಕಾರನಾ ಏನು ಮಾಡಬೇಕು ಅಂತ ಗೊತ್ತಿದೆ ಎಂದು ಡಜನ್‌ಗೂ ಹೆಚ್ಚು ಕಾಂಗ್ರೆಸ್ ಶಾಸಕರೇ ಬೆದರಿಕೆ ಹಾಕುತ್ತಾರೆ. ಸೊಂಟದವರೆಗೂ ಚೀಲ ಏರಿಸಿಕೊಂಡು ಕುಪ್ಪಳಿಸುತ್ತಿರುವ ವ್ಯಕ್ತಿಗೆ ಹೀಗೆಲ್ಲ ಅಡ್ಡಗಾಲು ಬೇರೆ ಹಾಕಿದರೆ ಪರಿಸ್ಥಿತಿ ಏನಾಗಬೇಡ? ಬೀಳಬೇಕು, ಏಳಲಾಗದೆ ತೆವಳಬೇಕು. ಈಗ ಆಗುತ್ತಿರುವುದು ಅದೇ!

ಕರ್ನಾಟಕದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ಅಸ್ತಿತ್ವಕ್ಕೆ ಬಂದಿರುವುದು ಮೋದಿ ಮತ್ತು ಬಿಜೆಪಿ ಹವಾ ತಡೆಯಲು. ಅದಕ್ಕೆ ಸಿಗುವ ಶೀಘ್ರ ಕಾರಣ ಮತ್ತು ಸಮರ್ಥನೆ ಎಂದರೆ ಮುಂದಿನ ವರ್ಷ ಬರುವ ಲೋಕಸಭೆ ಚುನಾವಣೆ. ಬಿಜೆಪಿಗೆ ತಡೆಗೋಡೆ ಹಾಕಲು ಏನೆಲ್ಲ ಕಸರತ್ತು ಮಾಡುತ್ತಿರುವ ಕಾಂಗ್ರೆಸ್ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಒಟ್ಟು 545 ಸ್ಥಾನಗಳ ಪೈಕಿ 250 ರಲ್ಲಿ ಮಾತ್ರ ಸ್ಪರ್ಧಿಸಲು ತೀರ್ಮಾನಿಸಿದೆ. ಅಂದರೆ ಅರ್ಧಕ್ಕೂ ಹೆಚ್ಚು ಅಂದರೆ 295 ಸ್ಥಾನಗಳನ್ನು ಮಿತ್ರಪಕ್ಷಗಳಿಗೆ ಬಿಟ್ಟುಕೊಡುವ ‘ಮಹಾತ್ಯಾಗ’ಕ್ಕೆ ಮುಂದಾಗಿದೆ. ಒಟ್ಟಾರೆ ಬಿಜೆಪಿಯನ್ನು ಕಟ್ಟಿಹಾಕಬೇಕು ಎಂಬುದಷ್ಟೇ ಅದರ ಒಂದಂಶದ ಕಾರ್ಯಕ್ರಮ. ಈ ಯೋಜನೆಯ ಪೂರ್ವ ತಯಾರಿ ರಾಜ್ಯದಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಮೂಲಕ ಅತಿದೊಡ್ಡ ಪಕ್ಷ ಬಿಜೆಪಿಯನ್ನು ಅಧಿಕಾರದಿಂದ ದೂರ ಇಟ್ಟಿರುವುದು. ಜತೆಗೆ ಮುಂದಿನ ಲೋಕಸಭೆ ಚುನಾವಣೆಯಲ್ಲೂ ಈ ಮೈತ್ರಿ ವಿಸ್ತರಣೆಗೆ ಮುಂದಾಗಿರುವುದು.

ಈಗೇನಾದರೂ ಯಡವಟ್ಟು ಮಾಡಿಕೊಂಡು ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ಬಿದ್ದು ಹೋದರೆ ಅದರ ಲಾಭ ಸಹಜವಾಗಿಯೇ ಬಿಜೆಪಿಗೆ ಆಗುತ್ತದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಜನ ಬಿಜೆಪಿಯನ್ನು ಅಧಿಕಾರಕ್ಕೆ ತರಲಿಲ್ಲ ಎಂದರೆ ಅದರ ಅರ್ಥ ಕಾಂಗ್ರೆಸ್-ಜೆಡಿಎಸ್ ಪರ ಒಲವು ಹೊಂದಿದ್ದರು ಎಂದೇನೂ ಅಲ್ಲ. ಬಿಜೆಪಿ ಅಧಿಕಾರದ ಹೊಸ್ತಿಲಲ್ಲಿ ಮುಗ್ಗರಿಸಿದೆ, ಪರಿಸ್ಥಿತಿಯ ಲಾಭ ಪಡೆದು ಮೈತ್ರಿ ಸರಕಾರ ಅಧಿಕಾರಕ್ಕೆ ಬಂದಿದೆ ಅಷ್ಟೇ. ಒಂದೊಮ್ಮೆ ಈ ಸರಕಾರ ಬಿದ್ದು ಹೋದರೆ ಬಿಜೆಪಿಗೆ ಅದರ ಲಾಭವಾಗುತ್ತದೆ. ಜನ ಮುಂದಿನ ಲೋಕಸಭೆ ಚುನಾವಣೆಯಲ್ಲಿರಲಿ, ವಿಧಾನಸಭೆ ಚುನಾವಣೆಯಲ್ಲೂ ತಮ್ಮನ್ನು ಮೂಸಿ ನೋಡುವುದಿಲ್ಲ ಎಂಬ ಭಯ ಎರಡೂ ಪಕ್ಷಕ್ಕೂ ಇದೆ. ಹೀಗಾಗಿ ಏನೇ ಕಿತ್ತಾಡಿಕೊಂಡರೂ ಲೋಕಸಭೆ ಚುನಾವಣೆವರೆಗಾದರೂ ಸರಕಾರ ಕಳೆದುಕೊಳ್ಳಲು ಹೋಗುವುದಿಲ್ಲ. ಸರಕಾರ ಕಳೆದುಕೊಂಡರೆ ಮುಂದೇನು ಎಂಬ ಪ್ರಶ್ನೆಗೆ ಇಬ್ಬರ ಬಳಿಯೂ ಉತ್ತರವಿಲ್ಲ. ತಿಂಗಳ ಹಿಂದಷ್ಟೇ ಕೋಟ್ಯಂತರ ರುಪಾಯಿ ಸುರಿದು ಚುನಾವಣೆ ಎದುರಿಸಿ ಸುಸ್ತಾಗಿರುವ ಶಾಸಕರಿಗೆ ಮತ್ತೆ ಚುನಾವಣೆಗೆ ಹೋಗುವ ಧೈರ್ಯವಿಲ್ಲ. ಹೋದರೂ ಮತ್ತೆ ಗೆದ್ದು ಬರುತ್ತೇವೆ ಎಂಬ ನಂಬಿಕೆ ಇಲ್ಲ. ಹೀಗಾಗಿ ಕನಿಷ್ಠ ಪಕ್ಷ ಲೋಕಸಭೆ ಚುನಾವಣೆವರೆಗಾದರೂ ಯಡವಟ್ಟು ಮಾಡಿಕೊಳ್ಳಲು ಹೋಗುವುದಿಲ್ಲ. ಕಿತ್ತಾಡಿಕೊಂಡೋ, ಬಡೆದಾಡಿಕೊಂಡು, ಜನರ ಬಳಿ ಬೈಸಿಕೊಂಡೋ ವರ್ಷ ತಳ್ಳುವುದು ಗ್ಯಾರಂಟಿ ಎಂದೇ ಕುಮಾರಸ್ವಾಮಿ ‘ಅಧಿಕಾರ ವರ್ಷ’ದ ಮಾತನಾಡಿರುವುದು.

ಇನ್ನೊಂದೆಡೆ ಬಿಜೆಪಿ ಲೆಕ್ಕಾಚಾರವೂ ಇದೇ ಆಗಿದೆ. ಆದರೆ ಸ್ವರೂಪ ಮಾತ್ರ ಬೇರೆ. ಅವಸರಕ್ಕೆ ಬಿದ್ದು ಸರಕಾರ ಮಾಡಲು ಹೋಗಿ ಅವಾಂತರ ಮಾಡಿಕೊಂಡ ಯಡಿಯೂರಪ್ಪನವರು ಕೆಟ್ಟ ಮೇಲೆ ಬುದ್ಧಿ ಬಂತು ಎಂಬಂತೆ ಇನ್ನೇನಿದ್ದರೂ ವಿರೋಧ ಪಕ್ಷದ ಸ್ಥಾನದಲ್ಲೇ ಕೂತು ಕೆಲಸ ಮಾಡುವುದಾಗಿ ಹೇಳುತ್ತಿದ್ದಾರೆ. ಮೈತ್ರಿ ಸರಕಾರದ ರಗಳೆ ನೋಡಿ ಅವರಿಗೂ ಅನ್ನಿಸಿರಬೇಕು, ಆಪರೇಷನ್ ಕಮಲ ಮಾಡಿ ಒಂದತ್ತೋ, ಹದಿನೈದೋ ಶಾಸಕರನ್ನು ತಂದಿಟ್ಟುಕೊಂಡು ಸರಕಾರ ಮಾಡಿದ್ದರೆ ತಾವು ಕೂಡ ನಿತ್ಯ ಆತಂಕದಲ್ಲೇ ಕಾಲ ಕಳೆಯಬೇಕಾಗಿತ್ತು ಎಂದು. ಪ್ರತಿ ಆಪರೇಷನ್ ನಡೆದರೆ ಸರಕಾರ ಕಳೆದುಕೊಳ್ಳಬೇಕಾಗುತ್ತದೆ. ಸರಕಾರ ಮುಂದುವರಿದರೆ ಟೀಕೆ ಅವಕಾಶ ಕಾಂಗ್ರೆಸ್-ಜೆಡಿಎಸ್‌ದ್ದಾಗುತ್ತದೆ ಎಂದು. ಅದರ ಬದಲು ಈಗ ಅಧಿಕಾರಕ್ಕೆ ಬಂದಿರುವ ಮೈತ್ರಿ ಸರಕಾರ ಒಂದೊಮ್ಮೆ ಆಂತರಿಕ ಕಲಹದಿಂದ ಲೋಕಸಭೆ ಚುನಾವಣೆಗೆ ಮೊದಲೇ ಬಿದ್ದು ಹೋದರೆ ಅಥವಾ ಈಗಿನ ಸ್ಥಿತಿಯಲ್ಲೇ ಮುಂದುವರಿದರೆ ಅದರಿಂದ ತನಗೇ ಲಾಭ ಎಂದು ಬಿಜೆಪಿ ಬಗೆದಿದೆ. ಮೈತ್ರಿ ಸರಕಾರದಲ್ಲಿ ಈಗ ಕಾಣಿಸಿಕೊಂಡಿರುವ ಕ್ಷಣಕ್ಷಣದ ಗೊಂದಲ, ಗೋಜಲು, ಒಳಜಗಳ ಲೋಕಸಭೆ ಚುನಾವಣೆಯಲ್ಲಿ ತನ್ನ ಪರ ಮತಗಳನ್ನಾಗಿ ಪರಿವರ್ತಿಸಿಕೊಳ್ಳಲು ಅನುಕೂಲವಾಗುತ್ತದೆ. ಸರಕಾರದ ವೈಫಲ್ಯಗಳನ್ನು ಜನರ ಮುಂದಿಟ್ಟು ಮತ ಕೇಳಬಹುದು. ಸರಕಾರ ಬಿದ್ದು ಹೋದರೂ ಅದೇ ಕೆಲಸ ಮಾಡಬಹುದು. ಇದರಿಂದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಅನುಕೂಲವಾಗುತ್ತದೆ. ಅದೃಷ್ಟ ನೆಟ್ಟಗಿದ್ದು ಲೋಕಸಭೆ ಜತೆಯಲ್ಲೇ ಕರ್ನಾಟಕ ವಿಧಾನಸಭೆ ಚುನಾವಣೆ ನಡೆಯುವ ಪ್ರಮೇಯ ಒದಗಿ ಬಂದರೆ ಅದರಿಂದಲೂ ತನಗೇ ಲಾಭವಾಗುತ್ತದೆ. ಎರಡೂ ಚುನಾವಣೆಯಲ್ಲೂ ಮೇಲುಗೈ ಸಾಧಿಸಬಹುದು. ಅನಾಯಾಸವಾಗಿ ಅಧಿಕಾರ ಹಿಡಿಯಬಹುದು. ಅದನ್ನು ಬಿಟ್ಟು ಸರಕಾರ ಉರುಳಿಸುವ ಸಾಹಸಕ್ಕೆ ಕೈ ಹಾಕಿದರೆ ಮತ ಕರೆವ ಕೆಚ್ಚಲು ಕೊಯ್ದಂತೆ ಆಗುತ್ತದೆ. ಮೈತ್ರಿ ಸರಕಾರದ ವೈಫಲ್ಯಗಳನ್ನು ಸಾರುವ ಅವಕಾಶ ಕಳೆದುಕೊಳ್ಳಬೇಕಾಗುತ್ತದೆ. ಒಂದೊಮ್ಮೆ ಸರಕಾರ ಬಿದ್ದರೆ ರಾಷ್ಟ್ರಪತಿ ಆಳ್ವಿಕೆ ಹೇರಿ, ಲೋಕಸಭೆ ಚುನಾವಣೆ ಜತೆಜತೆಗೆ ವಿಧಾನಸಭೆ ಚುನಾವಣೆಯೂ ಆಗುವಂತೆ ನೋಡಿಕೊಂಡರೆ ‘ಡಬಲ್ ಧಮಾಕಾ’ ಆಗುತ್ತದೆ ಎಂದು ಭಾವಿಸಿದೆ. ಇದು ಪ್ರಮುಖವಾಗಿ ಪಕ್ಷದ ರಾಷ್ಟ್ರೀಯ ನಾಯಕರು ತೆಗೆದುಕೊಂಡಿರುವ ನಿರ್ಣಯ. ಬಿಜೆಪಿಯ ಈ ಮನಸ್ಥಿತಿ ಅರಿತೇ ಕಾಂಗ್ರೆಸ್ ಬಂಡಾಯ ನಾಯಕರೂ ಶಸ್ತ್ರತ್ಯಾಗ ಮಾಡಿದ್ದಾರೆ. ಬದಲಿಗೆ ಸಂಪುಟ ಸೇರುವ ಕಸರತ್ತಿಗಷ್ಟೇ ಅದನ್ನು ಸೀಮಿತಗೊಳಿಸಿಕೊಂಡಿದ್ದಾರೆ. ಹೀಗಾಗಿ ಬಿಜೆಪಿ ಕಡೆಯಿಂದಲೂ ಲೋಕಸಭೆ ಚುನಾವಣೆವರೆಗೂ ಸರಕಾರ ಬೀಳಿಸುವ ಪ್ರಯತ್ನಗಳು ನಡೆಯುವ ಸಂಭವ ಕಡಿಮೆ. ಒಂದು ವರ್ಷ ತಮ್ಮನ್ನು ಯಾರೂ ಏನೂ ಮಾಡಲು ಆಗವುದಿಲ್ಲ ಎಂಬ ಕುಮಾರಸ್ವಾಮಿ ಅವರ ನಂಬಿಕೆ ಹಿಂದೆ ಈ ಅಂಶವೂ ಅಡಗಿದೆ.

ಇದು ಒಂದು ವರ್ಷ ಅಧಿಕಾರ ಗ್ಯಾರಂಟಿ ಎಂಬ ವಿಶ್ವಾಸದ ಹಿಂದಿರುವ ಲೆಕ್ಕಾಚಾರಗಳ ಮಾತಾಯಿತು. ಆದರೆ ಈ ಲೆಕ್ಕಾಚಾರಗಳು ನಿಜವಾಗಬೇಕು ಎಂದೇನೂ ಇಲ್ಲ. ರಾಜಕೀಯ ಬೆಳವಣಿಗೆಗಳಿಗೆ ಇತಿಮಿತಿ ಎಂಬುದು ಇರುವುದಿಲ್ಲ. ಯಾರು, ಯಾವಾಗ, ಯಾಕಾಗಿ ಕಂಟಕಪ್ರಾಯರಾಗುತ್ತಾಾರೆ ಎಂದು ಹೇಳಲು ಬರುವುದಿಲ್ಲ. ಉದಾಹರಣೆಗೆ ಕುಮಾರಸ್ವಾಮಿ ಅವರ ಸಹೋದರ ರೇವಣ್ಣನವರು ಮಾಡುತ್ತಿರುವ ಭಾನಗಡಿಗಳ ಬಗ್ಗೆ ಕಾಂಗ್ರೆಸ್ ಮಾತು ಪಕ್ಕಕ್ಕಿರಲಿ ಸ್ವತಃ ಕುಮಾರಸ್ವಾಮಿ ಅವರಿಗೇ ಬೇಸರ, ಮುಜುಗರ ಆಗುತ್ತಿರುವುದು ಸುಳ್ಳಲ್ಲ. ಅಧಿಕಾರ ವ್ಯಾಪ್ತಿ ಮೀರಿ ಅಧಿಕಾರಿಗಳ ವರ್ಗಾವಣೆ, ಅನ್ಯರ ಖಾತೆಗಳಲ್ಲಿ ಹಸ್ತಕ್ಷೇಪ ಮಾಡುತ್ತಿರುವುದು ‘ನಿತ್ಯರೇಜಿಗೆ’ಗೆ ಕಾರಣವಾಗಿದೆ. ರೇವಣ್ಣ ಅವರನ್ನು ರೇವಣ್ಣ ಅವರಿಗೆ ಕೆಲಸ ಮಾಡುವ ಅತ್ಯುತ್ಸಾಹ ಇರುವುದು ನಿಜ. ಹಾಗೆಂದು ಬೇರೆಯವರ ಇಲಾಖೆಯಲ್ಲಿ ಕೈ ಹಾಕಿದರೆ ಯಾರು ತಾನೇ ಸುಮ್ಮನಿರುತ್ತಾರೆ? ಈಗಾಗಲೇ ಡಿ.ಕೆ.ಶಿವಕುಮಾರ್ ಅವರು ರೇವಣ್ಣ ಕಾರ್ಯ ವೈಖರಿಗೆ ಕೆಂಡಮಂಡಲರಾಗಿದ್ದಾರೆ. ಮೈತ್ರಿ ಸರಕಾರ ಅಸ್ತಿತ್ವಕ್ಕೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿರುವ ಬಿಜೆಪಿ ಆಮಿಷಗಳಿಗೆ ಬಲಿಯಾಗದಂತೆ ಕಾಂಗ್ರೆಸ್ ಶಾಸಕರನ್ನು ಹಿಡಿದಿಟ್ಟುಕೊಂಡ ಶಿವಕುಮಾರ್‌ಗೆ ಈ ಸರಕಾರ ಉರುಳಿಸುವುದು ದೊಡ್ಡ ವಿಷಯವೇನೂ ಅಲ್ಲ. ಅವರಿಗೆ ಉಳಿಸುವುದೂ ಗೊತ್ತು, ಉರುಳಿಸುವುದು ಗೊತ್ತು. ಹಾಗೆಂದು ಗೊತ್ತಿದ್ದರೂ ರೇವಣ್ಣ ಹಠಕ್ಕೆ ಬಿದ್ದವರಂತೆ ಮೈಮೇಲೆ ಬಿದ್ದು ಗೊಂದಲ ಸೃಷ್ಟಿಸುತ್ತಿರುವುದು ನೋಡಿದರೆ ಅವರಿಗೇ ಈ ಸರಕಾರ ಇರುವುದು ಬೇಕಿಲ್ಲವೇನೋ ಎಂಬ ಅನುಮಾನ ಮೂಡಿಸುವುದು ಸುಳ್ಳಲ್ಲ. ಇನ್ನೂ ಉಸ್ತುವಾರಿ ಸಚಿವರ ನೇಮಕ ಆಗಿಲ್ಲ. ಆದರೆ ರೇವಣ್ಣ ಹಾಸನದಲ್ಲಿ ಪ್ರೈಮರಿ ಸ್ಕೂಲ್ ಮೇಷ್ಟ್ರುಗಳಿಂದ ಹಿಡಿದು ನಾನಾ ಇಲಾಖೆ ಹಿರಿಯ ಅಧಿಕಾರಿಗಳವರೆಗೂ ಕರೆದು ಪಾಠ ಮಾಡುತ್ತಿರುವುದು, ತಮ್ಮ ಮಾತು ಕೇಳದಿದ್ದರೆ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ಬೆದರಿಕೆ ಹಾಕುತ್ತಿರುವುದು ಕುಮಾರಸ್ವಾಮಿ ಅವರನ್ನು ಮುಜುಗರಕ್ಕೆ ತಳ್ಳಿದೆ. ಹೇಳುವಂತೆಯೂ ಇಲ್ಲ, ಅನುಭವಿಸುವಂತೆಯೂ ಇಲ್ಲ.

ಪರಿಶ್ರಮ, ಆತ್ಮವಿಶ್ವಾಸ, ಉತ್ಸಾಹ ಹಾಗೂ ಅದೃಷ್ಟ – ಈ ನಾಲ್ಕೂ ಅಂಶಗಳು ಮೇಳೈಸಿದರೆ ಮಾತ್ರ ಒಬ್ಬ ವ್ಯಕ್ತಿ ಏನನ್ನೂ ಬೇಕಾದರೂ ಸಾಧಿಸಬಹುದು. ಆದರೆ ಒಂದರ ಜತೆ ಮತ್ತೊಂದು ನಕಾರಾತ್ಮಕ ಪೈಪೋಟಿಗೆ ಇಳಿದರೆ ಭವಿಷ್ಯ ಕಷ್ಟವಾಗುತ್ತದೆ. ಸ್ವಯಂಕೃತ ಅಪರಾಧವಾದರೆ ಅದರ ಫಲ ಅನುಭವಿಸುವವರಿಗೆ ಹೆಚ್ಚಿನ ವೇದನೆ ಇರುವುದಿಲ್ಲ. ಆದರೆ ಬೇರೆಯವರ ಅಪರಾಧಕ್ಕೆ ಶಿಕ್ಷೆ ಅನುಭವಿಸಬೇಕಾಗಿ ಬಂದರೆ ಮನುಷ್ಯ ಭೂಮಿಗಿಳಿದು ಹೋಗುತ್ತಾನೆ. ಈಗ ಅನ್ಯರ ಅಡಚಣೆಗಳನ್ನು ಇನ್ನಿಲ್ಲದಂತೆ ಕಾಡುತ್ತಿರುವುದರಿಂದ ಕುಮಾರಸ್ವಾಮಿ ಅವರ ಆತ್ಮವಿಶ್ವಾಸ ಅಧೋಃಮುಖವಾಗಿದೆ. ಅದು ಅವರ ಯಾತನಮಯ ಮಾತುಗಳಲ್ಲಿ ಪ್ರತಿಬಿಂಬಿಸುತ್ತಿವೆ. ಋಣಾತ್ಮಕ ರಾಜಕೀಯದಲ್ಲಿ ಇದು ಅನಿವಾರ್ಯವೂ ಹೌದು!

ಲಗೋರಿ: ತುರಿಕೆ ಸೊಪ್ಪು ಉಜ್ಜಿಕೊಂಡು ನವೆ ಆಗಬಾರದು ಎಂದರೆ ಹೇಗೆ?

(ವಿಶ್ವವಾಣಿಯಲ್ಲಿ ಪ್ರಕಟಿತ)

Leave a Reply