ಬಿಜೆಪಿ ಮೈತ್ರಿಗೂ ಕಾಂಗ್ರೆಸ್ ಮೈತ್ರಿಗೂ ವ್ಯತ್ಯಾಸ ಏನು?

ಡಿಜಿಟಲ್ ಕನ್ನಡ ಟೀಮ್:

ರಾಜ್ಯ ರಾಜಕಾರಣ ತಾನು ಅಂದುಕೊಂಡಷ್ಟು ಸುಲಭವಲ್ಲ ಅನ್ನೋದು ಮುಖ್ಯಮಂತ್ರಿ ಕುಮಾರಸ್ವಾಮಿಗೆ ಅರಿವಿಗೆ ಬರುತ್ತಿದೆ. ಈಗಾಗಲೇ ಬಿಜೆಪಿ ಜೊತೆ ಸೇರಿ 20 ತಿಂಗಳು ಮುಖ್ಯಮಂತ್ರಿ ಆಗಿ ಕೆಲಸ ಮಾಡಿದ ಅನುಭವ ಇದ್ದರೂ ಕಾಂಗ್ರೆಸ್ ಜೊತೆಗಿನ ಮೈತ್ರಿ ಮ್ಯಾನೇಜ್ ಮಾಡೋದು ಕುಮಾರಸ್ವಾಮಿಗೆ ಹೈರಾಣಾಗುವಂತೆ ಮಾಡುತ್ತಿದೆ. ಇದೇ ಕಾರಣಕ್ಕೆ ಹೈಕಮಾಂಡ್ ಜೊತೆ ನೇರ ಸಂಪರ್ಕ ಇಟ್ಟುಕೊಂಡಿರುವ ಮುಖ್ಯಮಂತ್ರಿ, ರಾಜ್ಯದಲ್ಲಿ ನಡೆಯುತ್ತಿರುವ ಎಲ್ಲಾ ಬೆಳವಣಿಗೆ ಬಗ್ಗೆ ವಿವರವಾಗಿ ರಾಹುಲ್‌ ಜೊತೆ ಚರ್ಚೆ ನಡೆಸಿದ್ದಾರೆ. ಭಾನುವಾರ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ನೀತಿ ಆಯೋಗದ ಸಭೆಯಲ್ಲಿ ಪಾಲ್ಗೊಂಡಿದ್ದ ಕುಮಾರಸ್ವಾಮಿ, ಸೋಮವಾರ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ. ಮುಖ್ಯವಾಗಿ ಬಜೆಟ್ ಮಂಡನೆ ವಿಚಾರದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತೆಗೆದಿರುವ ಅಪಸ್ವರದ ಬಗ್ಗೆ ರಾಹುಲ್ ಜೊತೆ ಮಾತನಾಡಿದ್ದು, ಸಿದ್ದರಾಮಯ್ಯ ಅವರನ್ನು ಸುಮ್ಮನಾಗಿಸುವಂತೆ ಒತ್ತಾಯ ಮಾಡಿದ್ದಾರೆ ಎನ್ನಲಾಗಿದೆ. ಜೊತೆಗೆ ಶೀಘ್ರವಾಗಿ ಬಾಕಿ ಇರುವ ಸಚಿವ ಸ್ಥಾನಗಳನ್ನು ಭರ್ತಿ ಮಾಡುವ ಮೂಲಕ ಬಂಡಾಯ ಬೇಗುದಿ ಭುಗಿಲೇಳದಂತೆ ನೋಡಿಕೊಳ್ಳಿ ಎನ್ನುವ ಅಂಶವನ್ನೂ ಮುಂದಿಟ್ಟಿದ್ದಾರೆ ಎನ್ನಲಾಗಿದೆ.

ಧರ್ಮಸಿಂಗ್ ಸರ್ಕಾರಕ್ಕೆ ಬೆಂಬಲ ನೀಡಿದ್ದ ದೇವೇಗೌಡರು, ಎಲ್ಲಾ ಕೆಲಸ ಕಾರ್ಯಗಳು ತನ್ನ ಇಚ್ಛೆ ಪ್ರಕಾರ ನಡೆಯುವಂತೆ ನೋಡಿಕೊಂಡಿದ್ದರು. ಆ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿಯಾಗಿ ಕೆಲಸ ಮಾಡುತ್ತಿದ್ದ ಸಿದ್ದರಾಮಯ್ಯ ಕೂಡ ದೇವೇಗೌಡರ ಅಣತಿಯಂತೆ ಕೆಲಸ ಮಾಡ್ತಿದ್ರು. ಆದ್ರೆ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಬಿ.ಎಸ್ ಯಡಿಯೂರಪ್ಪ, ಕುಮಾರಸ್ವಾಮಿ ಅವರ ಜೊತೆ 40 ಶಾಸಕರನ್ನು ಹೈಜಾಕ್ ಮಾಡಿಕೊಂಡು ಸರ್ಕಾರ ರಚನೆ ಮಾಡಿದರು. ಆಗಲೂ ಈಗಿನಂತೆಯೇ ಕುಮಾರಸ್ವಾಮಿ ಅವರಿಗೆ ಮುಖ್ಯಮಂತ್ರಿ ಪಟ್ಟ ಒಲಿದು ಬಂದಿತ್ತು. ರಾಜ್ಯದಲ್ಲಿ ಅಧಿಕಾರದ ರುಚಿಯನ್ನೇ ಕಾಣದ ಬಿಜೆಪಿ ಅಂದು ಅಧಿಕಾರಕ್ಕಾಗಿ ಕುಮಾರಸ್ವಾಮಿ ಜೊತೆ ಹೊಂದಾಣಿಕೆ ಮಾಡಿಕೊಂಡಿತ್ತು. ಆ ಬಳಿಕ ಅಧಿಕಾರ ಬಿಟ್ಟುಕೊಡದೆ ಮತದಾರನ ಕೆಂಗಣ್ಣಿಗೆ ಜೆಡಿಎಸ್ ಗುರಿಯಾಗಿದ್ದು ಇತಿಹಾಸ. ಅದೇ ರೀತಿ ಈಗಲೂ ಕೂಡ ಕಾಂಗ್ರೆಸ್‌ಗೆ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡುವುದು, ಜೊತೆಗೆ ಐದು ವರ್ಷಗಳ ಕಾಲ ನಡೆಸಿದ ಅಧಿಕಾರವನ್ನು ಉಳಿಸಿಕೊಳ್ಳೋದು ಅನಿವಾರ್ಯವಾಗಿದೆ. ಜೊತೆಗೆ ದೇಶದ ಎಲ್ಲಾ ರಾಜ್ಯಗಳಲ್ಲೂ ಅಧಿಕಾರ ಕಳೆದುಕೊಳ್ಳುತ್ತಾ ಬಂದಿದ್ದು, ದೊಡ್ಡ ರಾಜ್ಯ ಕರ್ನಾಟಕದಲ್ಲಿ ಅಧಿಕಾರ ಬಿಟ್ಟುಕೊಟ್ಟರೆ ಕಮಲ ಬಲಿಷ್ಠವಾಗಲಿಗೆ ಅನ್ನೋ ಆತಂಕವೂ ಕಾಡುತ್ತಿದೆ.

ಸಿದ್ದರಾಮಯ್ಯ ರಾಜ್ಯ ಸರ್ಕಾರದಲ್ಲಿ ಇದೇ ರೀತಿ ಪದೇ ಪದೇ ಬೆಂಬಲಿಗರ ಮೂಲಕ ಜೊತೆಗೆ ನೇರ ವಾಗ್ದಾಳಿಯಿಂದ ಸರ್ಕಾರಕ್ಕೆ ಮುಜುಗರ ಉಂಟು ಮಾಡಿದ್ರೆ ಸರ್ಕಾರ ನಡೆಸೋದು ಕಷ್ಟ. ಜೆಡಿಎಸ್ ಹೇಳಬೇಕಿದ್ದ ಹೇಳಿಕೆಯನ್ನು ಈಗಾಗಲೇ ಬಸವರಾಜ ಹೊರಟ್ಟಿ ಹೇಳಿದ್ದಾರೆ. ಸಿದ್ದರಾಮಯ್ಯ ಅನುಭವದ ಆಧಾರದಲ್ಲಿ ಹಾಗೆ ಹೇಳಿದ್ದಾರೆ. ನನ್ನ ಹಾಗೂ ಸಿದ್ದರಾಮಯ್ಯ ನಡುವೆ ಯಾವುದೇ ಭಿನ್ನಾಭಿಪ್ರಾಯಗಳು ಇಲ್ಲ ಎಂದು ಸಿಎಂ ಕುಮಾರಸ್ವಾಮಿ ಹೇಳಿರಬಹುದು. ಆದರೆ ಸಮನ್ವಯ ಸಮಿತಿ ಅಧ್ಯಕ್ಷನಾಗಿರೋದು ನಾನು, ಅಧಿಕಾರ ತನ್ನದೇ ನಡೆಯಬೇಕೆಂದು ಸಿದ್ದರಾಮಯ್ಯ ಏನಾದರೂ ಅಧಿಕಾರ ಚಲಾಯಿಸಲು ಮುಂದಾದ್ರೆ ಕುಮಾರಸ್ವಾಮಿ ಕ್ಷಣ ಮಾತ್ರವೂ ಮುಖ್ಯಮಂತ್ರಿ ಆಗಿ ಇರುವುದಿಲ್ಲ. ಈ ಮಾತನ್ನು ಆಪ್ತ ವಲಯದಲ್ಲಿ ಹೇಳಿಕೊಂಡಿದ್ದಾರಂತೆ. ಲೋಕಸಭಾ ಚುನಾವಣೆ ನಡೆಯುವ ತನಕ ಕಾಂಗ್ರೆಸ್ ಯಾವುದೇ ಕಾರಣಕ್ಕೂ ಸರ್ಕಾರ ಬೀಳಿಸಲು ಸಾಧ್ಯವಿಲ್ಲ. ಅದೇ ರೀತಿ ಲೋಕಸಭೆ ಚುನಾವಣೆಯ ತನಕ ಬಿಜೆಪಿ ಕೂಡ ಸರ್ಕಾರವನ್ನು ಉರುಳಿಸಲು ಅಸಾಧ್ಯ. ಒಂದು ವೇಳೆ ಕಾಂಗ್ರೆಸ್, ಬಿಜೆಪಿ ಯಾವುದೇ ಪಕ್ಷ ಸರ್ಕಾರ ಉರುಳಿಸಿದ್ರೆ ಆ ಪಕ್ಷವನ್ನು ಮತದಾರ ಮನೆಗೆ ಕಳಿಸುತ್ತಾನೆ. ಇದೇ ಧೈರ್ಯದ ಮೇಲೆ ಒಂದು ವರ್ಷ ನನ್ನನ್ನು ಯಾರೂ ಏನೂ ಮಾಡಲು ಆಗಲ್ಲ ಎಂದು ಕುಮಾರಸ್ವಾಮಿ ಎದೆತಟ್ಟಿ ಹೇಳಿದ್ದು. ಅಂದಿನ ಬಿಜೆಪಿಗೂ ಅಧಿಕಾರ ಬೇಕಿತ್ತು, ಇಂದಿನ ಕಾಂಗ್ರೆಸ್‌ಗೂ ಅಧಿಕಾರ ಬೇಕು. ಈ ಕಾರಣದಿಂದಾಗಿ ಎರಡೂ ರಾಷ್ಟ್ರೀಯ ಪಕ್ಷಗಳಲ್ಲಿ ಯಾವುದೇ ವ್ಯತ್ಯಾಸ ಕಾಣುವುದಿಲ್ಲ. ಎರಡೂ ಪಕ್ಷಗಳು ಕೂಡ ಒಂದೇ ನಾಣ್ಯದ ಎರಡು ಮುಖಗಳು.

Leave a Reply