ಕಾಂಗ್ರೆಸ್‌ ಬೆಂಬಿಡದೆ ಕಾಡುತ್ತಿದ್ದಾನೆ ಟಿಪ್ಪು!

ಡಿಜಿಟಲ್ ಕನ್ನಡ ಟೀಮ್:

ಟಿಪ್ಪು ಸುಲ್ತಾನ್ ಜಯಂತಿ ಆಚರಣೆ ಮಾಡಿ ವಿವಾದ ಸೃಷ್ಟಿಸಿದ್ದ ಹಿಂದಿನ ಕಾಂಗ್ರೆಸ್ ಸರ್ಕಾರ ಅದರಿಂದ ಸಾಕಷ್ಟು ಹಿನ್ನಡೆಯನ್ನೂ ಅನುಭವಿಸಿತು. ಇದೀಗ ಜೆಡಿಎಸ್ ಜೊತೆ ಸಮ್ಮಿಶ್ರ ಸರ್ಕಾರ ಮಾಡಿಕೊಂಡಿರುವ ಕಾಂಗ್ರೆಸ್ ಮತ್ತೊಮ್ಮೆ ಟಿಪ್ಪು ವಿವಾದ ಎಳೆದುಕೊಳ್ಳಲು ಮುಂದಾಗಿದೆ. ವಿಕಾಸಸೌಧದಲ್ಲಿ ಮಾತನಾಡಿದ ಅಲ್ಪಸಂಖ್ಯಾತ ಕಲ್ಯಾಣ ಸಚಿವ ಜಮೀರ್ ಅಹ್ಮದ್, ಹಜ್ ಭವನಕ್ಕೆ ಟಿಪ್ಪು ಹೆಸರಿಡುವ ವಿಚಾರ ಕಳೆದ ವರ್ಷವೇ ಪ್ರಸ್ತಾಪ ಆಗಿತ್ತು. ಇದೊಂದು ಸ್ವತಂತ್ರ್ಯ ಸಂಸ್ಥೆ ಆಗಿದ್ದು ಟಿಪ್ಪು ಸುಲ್ತಾನ್ ಹಜ್ ಘರ್ ಹೆಸರು ಇಡುವಂತೆ ಮನವಿ‌ ಮಾಡಿದ್ದಾರೆ. ಹಜ್ ಕಮಿಟಿ ಪರಿಶೀಲನಾ‌ ಸಭೆಯಲ್ಲಿ ಮತ್ತೆ ಪ್ರಸ್ತಾಪ ಮಾಡಿದ್ದು, ಇದು ನಾನೊಬ್ಬನೇ ಮಾಡುವ ತೀರ್ಮಾನ ಅಲ್ಲ, ಮುಖ್ಯಮಂತ್ರಿಗಳ ಜೊತೆ ಚರ್ಚೆ ಮಾಡುತ್ತೇನೆ, ಎಲ್ಲಾ ಮುಖಂಡರ ಜೊತೆ ಚರ್ಚೆ ಮಾಡ್ತೇವೆ, ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರನ್ನ ಭೇಟಿ ಅವರ ಸಲಹೆ ಕೇಳ್ತೀನಿ ಎನ್ನುತ್ತಿದ್ದ ಹಾಗೆ ವಿವಾದ ಹುಟ್ಟಿಕೊಂಡಿದೆ.

ಚಾಮರಾಜಪೇಟೆ ಆರ್‌ಎಸ್‌ಎಸ್ ಕಚೇರಿ ಕೇಶವಕೃಪಾದಲ್ಲಿ ಮಾತನಾಡಿದ ಮಾಜಿ ಡಿಸಿಎಂ ಆರ್. ಅಶೋಕ್, ಯಡಿಯೂರಪ್ಪನವರು ಸಿಎಂ ಆಗಿದ್ದಾಗ, ಬೆಜೆಪಿ ಸರ್ಕಾರದ ಅವಧಿಯಲ್ಲಿ 50 ಕೋಟಿ ರೂಪಾಯಿ ಅನುದಾನ ಕೊಟ್ಟಿದ್ದು, ಬಿಜೆಪಿ ಪಕ್ಷ ಮಾಡಿದ್ದ ಅಭಿವೃದ್ಧ ಕೆಲಸವನ್ನು ಹೈಜಾಕ್ ಮಾಡಿ ಈಗ ಟಿಪ್ಪು ಸುಲ್ತಾನ್ ಹೆಸರಿಡುತ್ತಿರುವುದು ತಪ್ಪು ಎಂದಿದ್ದಾರೆ. ಟಿಪ್ಪು ಸ್ವಾತಂತ್ರ್ಯ ಹೋರಾಟಗಾರನಲ್ಲ, ಲಕ್ಷಾಂತರ ಹಿಂದೂಗಳನ್ನ ಮತಾಂತರ, ಕೊಲೆ ಮಾಡಿದ್ದು, ಅಂಥವರ ಹೆಸರನ್ನ ಭವನಕ್ಕೆ ಇಡೋದ್ರಿಂದ ಆ ಭವನಕ್ಕೆ ಕೆಟ್ಟ ಹೆಸರು, ಕಳಂಕ ಬರುತ್ತದೆ ಇದನ್ನು ನಾವು ವಿರೋಧಿಸುತ್ತೇವೆ ಎಂದರು.

ಈ ಬಗ್ಗೆ ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಮಾತನಾಡಿದ್ದು, ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಟಿಪ್ಪು ಹೆಸರಲ್ಲಿ ರಾಜಕಾರಣ ಮಾಡಿದ್ದಕ್ಕೆ, 130 ಸ್ಥಾನಗಳನ್ನು ಹೊಂದಿದ್ದ ಕಾಂಗ್ರೆಸ್ 80 ಸ್ಥಾನಕ್ಕೆ ಬಂದಿದೆ. ಈಗ ಮತ್ತೆ ಟಿಪ್ಪು ಹೆಸರಲ್ಲಿ ರಾಜಕಾರಣ ಮಾಡಿದ್ರೆ ನಿರ್ನಾಮ ಆಗಲಿದೆ ಎಂದಿದ್ದಾರೆ. ಯಾರು ಯಾರು ಟಿಪ್ಪು‌ಹೆಸರಲ್ಲಿ ರಾಜಕಾರಣ ಮಾಡಿದ್ರೋ ಅವರೆಲ್ಲ ನಾಶ ಆಗಿದ್ದಾರೆ. ಜಮೀರ್ ಅಹಮದ್ ಕೂಡ ಈಗ ಅದೇ ರಾಜಕಾರಣ ಮಾಡೋಕೆ ಹೋದ್ರೆ ಜಮೀರ್ ಮೂಲಕ ಕಾಂಗ್ರೆಸ್ ಸರ್ವನಾಶ ಆಗುತ್ತೆ. ಒಂದು ವೇಳೆ ಟಿಪ್ಪು ಹೆಸರಿಡಲು ಸರ್ಕಾರ ಮುಂದಾದರೆ ಉಗ್ರ ಹೋರಾಟ ಮಾಡಲಾಗುತ್ತದೆ ಎಂದಿದ್ದಾರೆ.

ಇನ್ನು ನನಗೆ ವಿಷಯವೇ ಗೊತ್ತಿಲ್ಲ ಎಂದಿದ್ದಾರೆ ಸಿಎಂ ಕುಮಾರಸ್ವಾಮಿ. ಹಿರಿಯ ಪೊಲೀಸ್ ಅಧಿಕಾರಿಗಳ ಸಭೆಯಿಂದ ಹೊರಗೆ ಬರುತ್ತಿದ್ದ ಹಾಗೆ ಎದುರಾದ ಪ್ರಶ್ನೆಗೆ ಉತ್ತರಿಸಿದ ಸಿಎಂ, ಈ ವಿಚಾರವೇ ನನಗೆ ಗೊತ್ತಿಲ್ಲ ಎನ್ನುವ ಮೂಲಕ ಸಚಿವ ಜಮೀರ್ ಹೇಳಿಕೆ ಸರ್ಕಾರದ್ದಲ್ಲ ಎಂದು ಪರೋಕ್ಷವಾಗಿ ತಿಳಿಸಿದ್ದಾರೆ. ಇನ್ನು ಈಗಾಗಲೇ ಟಿಪ್ಪು ವಿವಾದದಿಂದ ಸಾಕಷ್ಟು ನಷ್ಟ ಅನುಭವಿಸಿರುವ ಕಾಂಗ್ರೆಸ್ ಪಕ್ಷ, ಮತ್ತೆ ಟಿಪ್ಪು ವಿವಾದಕ್ಕೆ ಕೈ ಹಾಕುವ ದುಸ್ಸಾಹಸ ಮಾಡುವುದು ತೀರಾ ಕಡಿಮೆ. ಸಮ್ಮಿಶ್ರ ಸರ್ಕಾರದಲ್ಲಿ ಭಾರೀ ಕನಸು ಕಟ್ಟಿಕೊಂಡು ಅಧಿಕಾರ ಹಿಡಿದಿರುವ ಕುಮಾರಸ್ವಾಮಿ ಅವರಿಗೆ ವಿವಾದ ಮಾಡಿಕೊಳ್ಳುವ ಯಾವುದೇ ಆಸಕ್ತಿ ಇಲ್ಲದಂತೆ ಕಾಣಿಸುತ್ತಿದ್ದು, ಈಗಾಗಲೇ ಜಮೀರ್ ಜೊತೆ ಗರಂ ಆಗಿ ಮಾತನಾಡಿದ್ದಾರೆ ಎನ್ನಲಾಗಿದ್ದು, ನಾಳೆ ಈ ಬಗ್ಗೆ ಅಧಿಕೃತ ಹೇಳಿಕೆ ನೀಡಲಿದ್ದಾರೆ ಎನ್ನಲಾಗಿದೆ. ಜೊತೆಗೆ ಜೆಡಿಎಸ್ ಶಾಸಕರಾಗಿದ್ದ ಜಮೀರ್ ಅಹ್ಮದ್ ಖಾನ್, ಜೆಡಿಎಸ್‌ನಿಂದ ಬಂಡಾಯ ಎದ್ದು ಹೊರ ಹೋಗಿದ್ದು ಇದೀಗ ಕಾಂಗ್ರೆಸ್ ಪಕ್ಷದಿಂದ ಗೆಲುವು ಸಾಧಿಸಿ ಸಚಿವನಾಗಿ ಮತ್ತೆ ಸಮಸ್ಯೆ ಸೃಷ್ಟಿಸಲು ಯತ್ನಿಸುತ್ತಿರುವ ಜಮೀರ್ ಅಹ್ಮದ್ ಖಾನ್‌ಗೆ ಕಡಿವಾಣ ಹಾಕಲು ಜೆಡಿಎಸ್ ಮುಖಂಡರು ಒತ್ತಾಯ ಮಾಡ್ತಿದ್ದಾರೆ ಎನ್ನುವುದು ಗೊತ್ತಾಗಿದೆ. ಒಟ್ಟಾರೆ ಪ್ರತಿಷ್ಟೆಗೆ ಬಿದ್ದು, ಹಿರಿಯ ಮುಸ್ಲಿಂ ನಾಯಕರಿದ್ದರೂ ವಿವಾದ ಸೃಷ್ಟೊಸುವ ಜಮೀರ್‌ಗೆ ಮಣೆ ಹಾಕಿರುವ ಕಾಂಗ್ರೆಸ್‌ಗೆ ಟಿಪ್ಪು ಬೆಂಬಿಡದೆ ಕಾಡುತ್ತಿದ್ದಾನೆ ಅಂದ್ರೆ ಸುಳ್ಳಲ್ಲ. ಮುಂದೇನಾಗುತ್ತೆ ನೋಡಬೇಕಿದೆ. ವಿವಾದ ಜೋರಾದ್ರೆ ಸರ್ಕಾರಕ್ಕೂ ಸಂಕಷ್ಟ ಗ್ಯಾರಂಟಿ.

Leave a Reply