ಲೋಕಸಭೆಗೆ ಸಜ್ಜಾಯ್ತು ಮೈತ್ರಿ ಯೋಜನೆ!

ಡಿಜಿಟಲ್ ಕನ್ನಡ ಟೀಮ್:

ರಾಜ್ಯ ಸರ್ಕಾರ ಅಸ್ತಿತ್ವಕ್ಕೆ ಬರುವಾಗಲೇ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳ ನಡುವೆ ಹೊಂದಾಣಿಕೆ ಆಗಿತ್ತು. ಅದೇನಂದ್ರೆ ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆಗೆ ಮೈತ್ರಿ ಮಾಡಿಕೊಂಡು ಹೋಗುವುದು. ಈ ಮೂಲಕ ಬಿಜೆಪಿ ಪಕ್ಷ ಕರ್ನಾಟಕದಲ್ಲಿ ಗಟ್ಟಿಯಾಗಿ ನೆಲೆಯೂರದಂತೆ ಬುಡಸಮೇತ ಕಿತ್ತುಹಾಕಬೇಕು. ಭಾರತ ದೇಶವನ್ನು ಕಾಂಗ್ರೆಸ್ ಮುಕ್ತ ಮಾಡ್ತೇನೆ ಅನ್ನೋ ಘೋಷವಾಕ್ಯದೊಂದಿಗೆ ಮುಂದಡಿ ಇಡುತ್ತಿರುವ ಕಮಲ ಆರ್ಭಟಕ್ಕೆ ತಡೆಯೊಡ್ಡುವ ಯೋಜನೆ ಸಿದ್ಧವಾಗಿತ್ತು. ಕ್ರಮೇಣ ಸೀಟು ಹೊಂದಾಣಿಕೆ ಲೆಕ್ಕಾಚಾರ ಅಂತಿಮ ಆಗುವ ಲಕ್ಷಣ ಕಾಣಿಸುತಿದ್ದು, ಹಳೇ ಮೈಸೂರು ಪ್ರಾಂತ್ಯದಲ್ಲಿ ಜೆಡಿಎಸ್ ಪಾರಮ್ಯ ಮೆರೆಯುವುದು ಖಚಿತವಾಗ್ತಿದೆ.

11 ಮಂತ್ರಿ ಸ್ಥಾನ, 11 ಸಂಸತ್ ಸ್ಥಾನ!

ಸರ್ಕಾರದಲ್ಲಿ 11 ಮಂತ್ರಿ ಸ್ಥಾನಗಳನ್ನು ಹೊಂದಿರುವ ಜೆಡಿಎಸ್ 11 ಸಂಸತ್ ಸ್ಥಾನಗಳನ್ನು ಕೇಳುವುದು ಪಕ್ಕಾ ಆಗಿದೆ.. ದಕ್ಷಿಣ ಕರ್ನಾಟಕದಲ್ಲಿ ಪ್ರಬಲ ಪಕ್ಷವಾಗಿರುವ ಜೆಡಿಎಸ್, ಬಹುತೇಕ ಎಲ್ಲಾ ಜಿಲ್ಲೆಗಳಲ್ಲೂ ಸರ್ಧೆ ಮಾಡುವ ಇಂಗಿತ ವ್ಯಕ್ತಪಡಿಸಿದೆ.. ಪ್ರಮುಖವಾಗಿ ಮಂಡ್ಯ, ಮೈಸೂರು, ಹಾಸನ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಶಿವಮೊಗ್ಗ, ಬೀದರ್, ರಾಯಚೂರು, ವಿಜಯಪುರದಲ್ಲಿ ಸ್ಪರ್ಧೆ ಮಾಡಲು ಆಸಕ್ತಿ ತೋರಿಸಿದ್ದು, ಕೆಲವೊಂದು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ನಿಂದಲೂ ವಿರೋಧ ವ್ಯಕ್ತವಾಗಿದೆ.

*ದಕ್ಷಿಣಕ್ಕೆ ಜೆಡಿಎಸ್.. ಉತ್ತರಕ್ಕೆ ಕೈ-ಕಮಲ..!*

ದಕ್ಷಿಣ ಕರ್ನಾಟಕಕ್ಕೆ ನಾವು ಉತ್ತರ ಕರ್ನಾಟಕಕ್ಕೆ ನೀವು ಅನ್ನೋ ಸೂತ್ರ ಅನುಸರಿಸಲು ಮುಂದಾಗಿರುವ ಜೆಡಿಎಸ್, ಭಾರೀ ಲೆಕ್ಕಾಚಾರ ಮಾಡಿಕೊಂಡಿದೆ. ಹಳೇ ಮೈಸೂರು ಭಾಗದಲ್ಲಿ ಭಾರಿ ಜನಬೆಂಬಲ ಹೊಂದಿರುವ ಜೆಡಿಎಸ್, ಬಹುತೇಕ ಕ್ಷೇತ್ರಗಳನ್ನು ಗೆದ್ದು ಬಿಡುತ್ತೆ. ಜೊತೆಗೆ ಉತ್ತರ ಕರ್ನಾಟಕದಲ್ಲಿ ಮೂರು ಕ್ಷೇತ್ರಗಳನ್ನು ಪಡೆಯಲು ಮುಂದಾಗಿದ್ದು, ಅಲ್ಲಿ ಕಾಂಗ್ರೆಸ್ ಕಾರ್‍ಯಕರ್ತರು ಕೈ ಜೋಡಿಸಿದ್ರೆ ಅಲ್ಲೂ ಗೆಲುವು ಕಷ್ಟವೇನಲ್ಲ. ಉಳಿದಂತೆ 20 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಲಿರುವ ಕಾಂಗ್ರೆಸ್ ನೇರವಾಗಿ ಬಿಜೆಪಿಯನ್ನೇ ಎದುರಿಸಬೇಕಿದ್ದು, ಜೆಡಿಎಸ್ ಶಕ್ತಿ ಉತ್ತರದಲ್ಲಿ ಅತ್ಯಲ್ಪವಾಗಿದೆ. ಹಾಗಾಗಿ ರಾಜ್ಯ ಸರ್ಕಾರದ ಕೆಲಸ ನೋಡಿ ಮತ ಹಾಕಿದ್ರೆ ಮಾತ್ರ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಅನುಕೂಲ ಆಗಲಿದೆ ಅನ್ನೋದು ಕಾಂಗ್ರೆಸ್ ಸಂದರ ಮಾತಾಗಿದೆ. ಒಟ್ಟಾರೆ ಕಾಂಗ್ರೆಸ್ ಜೆಡಿಎಸ್ ಮೈತ್ರಿಯಿಂದ ಕಮಲಪಾಳಯಕ್ಕೆ ದೊಡ್ಡ ತಲೇನೋವು ತರಿಸಿದ್ದು ಮುಂದೇನು ಮಾಡುವುದು ಅನ್ನೋ ಸ್ಥಿತಿಗೆ ತಲುಪಿದೆ.

ಒಡಕಿನ ಸೂತ್ರ ಯಶಸ್ವಿಯಾದರೆ ಕಮಲ!

ಬಿಜೆಪಿಯೂ ಈಗಾಗಲೇ ಲೋಕಸಭಾ ಚುನಾವಣೆಯ ಪೂರ್ವ ತಯಾರಿ ಮಾಡಿಕೊಳ್ಳುತ್ತಿದ್ದು, ಇರುವ ಕ್ಷೇತ್ರಗಳನ್ನು ಕಳೆದುಕೊಳ್ಳದಿದ್ದರೆ ಸಾಕು ಎನ್ನುವ ಸ್ಥಿತಿಯಲ್ಲಿದೆ. ಇದಕ್ಕಾಗಿ ಕಾಂಗ್ರೆಸ್, ಜೆಡಿಎಸ್ ಮೈತ್ರಿ ಹಾಳು ಮಾಡಬೇಕು. ಅದು ಸದ್ಯಕ್ಕೆ ಆಗುವ ಕೆಲಸವಲ್ಲ. ಆದ್ರೆ ಸೀಟು ಹಂಚಿಕೆ ವಿಚಾರವಾಗಿ ಇಬ್ಬರಲ್ಲೂ ಭಿನ್ನಾಭಿಪ್ರಾಯ ಮೂಡುವಂತೆ ಮಾಡುವುದು, ಅದರಿಂದ ಕ್ಷೇತ್ರದಲ್ಲಿ ಮೈತ್ರಿ ನಾಯಕರು ತಟಸ್ಥವಾಗಿ ಇರುವಂತೆ ನೋಡಿಕೊಳ್ಳುವುದು ಕಮಲ ಪಡೆಯ ತಂತ್ರ. ಅಂದ್ರೆ, ಮೈಸೂರಿನಲ್ಲಿ ಜೆಡಿಎಸ್ ಟಿಕೆಟ್ ಪಡೆದುಕೊಂಡರೆ ಸಿದ್ದರಾಮಯ್ಯ ಅಂಡ್ ಟೀಂಗೆ ಗಾಳ ಹಾಕುವುದು, ರಾಮನಗರದಲ್ಲಿ ಡಿಕೆಶಿ ಅಂಡ್ ಬ್ರದರ್ ಎತ್ತಿಕಟ್ಟುವುದು, ಚಿಕ್ಕಬಳ್ಳಾಪುರದಲ್ಲಿ ವೀರಪ್ಪ ಮೊಯ್ಲಿ ಸಪೋರ್ಟ್ ಮಾಡದಂತೆ ಮಾಡುವುದು, ತುಮಕೂರು, ಕೋಲಾರದಲ್ಲೂ ತನ್ನ ಆಟ ಶುರು ಮಾಡಲು ಯೋಜನೆ ಸಿದ್ಧವಾಗಿದೆ. ಅದೇ ರೀತಿ ಉತ್ತರದಲ್ಲಿ ಕಾಂಗ್ರೆಸ್ ವಿರುದ್ಧ ಜೆಡಿಎಸ್ ನಾಯಕರನ್ನು ಸೆಳೆದುಕಕೊಂಡು ಒಡಕಿನ ಲಾಭ ಪಡೆಯಲು ಕಾರ್‍ಯತಂತ್ರ ಮಾಡುತ್ತಿದೆ. ಆದರೆ ದಕ್ಷಿಣಕ್ಕೆ ನಾವು. ಉತ್ತರಕ್ಕೆ ನೀವು ಅನ್ನೋ ಸೂತ್ರ ಯಶಸ್ವಿಯಾದರೆ ಕಮಲ ಕಳೆಗುಂದುವುದರಲ್ಲಿ ನೋ ಡೌಟ್. ಇನ್ನೂ ಈ ಬಾರಿಯ ಬಜೆಟ್‌ನಲ್ಲಿ ಸಿಎಂ ಕುಮಾರಸ್ವಾಮಿ ವಚನ ಕೊಟ್ಟಂತೆ ಅನ್ನದಾತರ ಸಾಲ ಮನ್ನಾ ಮಾಡಿದರೆ ಇಡೀ ದೇಶದಲ್ಲಿ ಕಾಂಗ್ರೆಸ್ ಅದನ್ನೇ ಚುನಾವಣಾ ಅಸ್ತ್ರ ಮಾಡಿಕೊಂಡು ಚುನಾವಣೆ ಎದುರಿಸಿದರೂ ಅಚ್ಚರಿ ಏನೂ ಇಲ್ಲ.

Leave a Reply