ದೇವೇಗೌಡರು ಮಂಡ್ಯದಿಂದ ಸ್ಪರ್ಧಿಸಲ್ಲ! ಯಾಕೆ ಗೊತ್ತಾ?

ಡಿಜಿಟಲ್ ಕನ್ನಡ ಟೀಮ್:

ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರು ಕಳೆದ ಲೋಕಸಭಾ ಚುನಾವಣೆ ವೇಳೆ, ಇದು ನನ್ನ ಕೊನೆಯ ಚುನಾವಣೆ ಎಂದೇ ಪ್ರಚಾರ ಮಾಡಿದ್ರು. ಜೊತೆಗೆ ಇನ್ಮುಂದೆ ಹಾಸನ ಲೋಕಸಭಾ ಕ್ಷೇತ್ರವನ್ನು ಸಚಿವ ಎಚ್.ಡಿ ರೇವಣ್ಣ ಪುತ್ರ ಪ್ರಜ್ವಲ್ ರೇವಣ್ಣ ಪ್ರತಿನಿಧಿಸಲಿದ್ದಾರೆ ಎಂದೂ ಕೂಡ ಘೋಷಣೆ ಮಾಡಿದ್ರು. ಇದೀಗ ಆಡಿದ ಮಾತಿನಂತೆ ದೇವೇಗೌಡರು ಗೌರವಯುತವಾಗಿ ಹಾಸನ ಬಿಟ್ಟು ಕೊಡಬೇಕಾದ ಸ್ಥಿತಿಯಲ್ಲಿದ್ದಾರೆ. ಅದಕ್ಕೆ ಅವರು ಬದ್ಧವಾಗಿಯೂ ಇದ್ದಾರೆ. ಆದ್ರೆ ಕಳೆದೆರಡು ದಿನದಿಂದ ಒಂದು ಸುದ್ದಿ ಶುರುವಾಗಿದೆ. ಅದೇನೆಂದ್ರೆ ಮಾಜಿ ಪ್ರಧಾನಿ ದೇವೇಗೌಡರು ಮುಂದಿನ ವರ್ಷ ಎದುರಾಗಲಿರುವ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡ್ತಾರೆ, ಅದೂ ಕೂಡ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಅಖಾಡಕ್ಕೆ ಧುಮುಕಲಿದ್ದು, ಹಾಸನವನ್ನು ಪ್ರಜ್ವಲ್ ರೇವಣ್ಣ ಅವರಿಗೆ ಬಿಟ್ಟುಕೊಡಲಿದ್ದಾರೆ ಅನ್ನೋದು ಸುದ್ದಿ.. ಈ ಸುದ್ದಿಗೆ ಪೂರಕವಾಗಿ ಸಣ್ಣ ನೀರಾವರಿ ಸಚಿವ ಸಿ.ಎಸ್ ಪುಟ್ಟರಾಜು ಮಾತನಾಡಿರುವುದು, ಮತ್ತಷ್ಟು ಕುತೂಹಲ ಮೂಡಿಸಿದೆ.

ದೇವೇಗೌಡರು ಮಂಡ್ಯ ಕ್ಷೇತ್ರದಿಂದ ಸ್ಪರ್ಧೆ ಮಾಡ್ತಾರೆ, ಅವರನ್ನು ನಾವು ಒಗ್ಗಟ್ಟಿನಿಂದ ಮನವೊಲಿಸುತ್ತೇವೆ. ಮಂಡ್ಯವನ್ನು ಕಾಂಗ್ರೆಸ್‌ಗೆ ಬಿಟ್ಟುಕೊಡುವ ಯಾವುದೇ ಸಾಧ್ಯತೆಯೂ ಇಲ್ಲ. ಏಳಕ್ಕೆ ಏಳೂ ಕ್ಷೇತ್ರಗಳಲ್ಲಿ ಜಯ ಸಾಧಿಸಿರುವ ನಾವು ನಮ್ಮದೇ ಅಭ್ಯರ್ಥಿಯಾಗಿ ದೇವೇಗೌಡರನ್ನು ನಿಲ್ಲಿಸಿ ಗೆಲ್ಲಿಸುತ್ತೇವೆ ಎಂದಿದ್ದಾರೆ. ಈಗ ಶುರುವಾಗಿರುವ ಲೋಕಲ್ ಟಾಕ್ ಏನಂದ್ರೆ ಯಾವುದೇ ರಾಜಕಾರಣಿ ತನ್ನ ಮನಸ್ಸಿನಲ್ಲಿ ಇರೋದನ್ನು ನೇರವಾಗಿ ಬಹಿರಂಗ ಮಾಡುವ ಮೊದಲು ತನ್ನ ಆಪ್ತರ ಮೂಲಕ ಹೇಳಿಸುತ್ತಾರೆ. ಅದಕ್ಕೆ ಜನರ ರೆಸ್ಪಾನ್ಸ್ ಹೇಗೆ ಬರುತ್ತದೆ ಅನ್ನೋದನ್ನು ನೋಡಿಕೊಂಡು ಅಖಾಡಕ್ಕೆ ಇಳಿತ್ತಾರೆ. ಅದೇ ರೀತಿ ದೇವೇಗೌಡರು, ತನ್ನ ಮನಸ್ಸಿನಲ್ಲಿರುವ ಮಾತನ್ನು ಸಚಿವರ ಮೂಲಕ ರವಾನಿಸಿದ್ದಾರೆ ಎನ್ನಲಾಗ್ತಿದೆ.

ಇದೇ ವೇಳೆ ಇನ್ನು ಒಂದು ಮಾತು ಪ್ರಚಲಿತದಲ್ಲಿದೆ. ಅದೇನಂದ್ರೆ ದೇವೇಗೌಡರಿಗೆ ಚುನಾವಣಾ ರಾಜಕಾರಣ ಸಾಕಾಗಿದೆ. ಅವರು ಮಂಡ್ಯದಲ್ಲಿ ಸ್ಪರ್ಧಿಸಿ ಅಭಿವೃದ್ಧಿ ಮಾಡಬೇಕಿರುವುದು ಏನೂ ಇಲ್ಲ. ಸಚಿವರು ಗೌಡರ ಕುಟುಂಬವನ್ನು ಹತ್ತಿರ ಮಾಡಕೊಳ್ಳಬೇಕಿದೆ. ಅವರ ಆಶೀರ್ವಾದ ಸಿಕ್ಕರೆ ಸಚಿವರಾಗಿ ಕೆಲವೊಂದು ಉದ್ದೇಶಗಳನ್ನು ಪೂರೈಸಿಕೊಳ್ಳಬಹುದು ಅನ್ನೋ ಯೋಜನೆ ಅಡಗಿದೆ ಎನ್ನಲಾಗ್ತಿದೆ. ಈ ಅಂಶವನ್ನು ನಾವು ತೆಗೆದು ಹಾಕುವಂತಿಲ್ಲ. ಯಾಕಂದ್ರೆ ಕೆಲವೊಂದು ವಿಚಾರಗಳು ಕೆಲವೊಮ್ಮೆ ಮಾತ್ರವೇ ಬಹಿರಂಗ ಆಗೋದು. ಅದಕ್ಕೂ ಮೊದಲು ಅಂತರ್‌ಮುಖಿ ಆಗಿ ಇರುತ್ತವೆ.

ದೇವೇಗೌಡರು ಮಾಡಬೇಕಿರೋದು ಏನೂ ಅನ್ನೋ ಬಗ್ಗೆಯ ಭಾರೀ ಚರ್ಚೆ ಆರಂಭ ಆಗಿದೆ. ಮಂಡ್ಯ ಜಿಲ್ಲೆಯಲ್ಲಿ ಏಳಕ್ಕೆ ಏಳೂ ಕ್ಷೇತ್ರಗಳಲ್ಲೂ ಭಾರೀ ಅಂತರದಲ್ಲಿ ಜೆಡಿಎಸ್ ಅಭ್ಯರ್ಥಿಗಳು ಜಯಶಾಲಿಗಳಾಗಿದ್ದಾರೆ. ಜಿಲ್ಲೆಯಲ್ಲಿ ಒಟ್ಟು ಅಂತರವೇ ಎರಡು ಲಕ್ಷ ದಾಟಲಿದ್ದು, ಈ ಬಾರಿ ಕಾಂಗ್ರೆಸ್ ಮತಗಳೂ ಜೆಡಿಎಸ್ ಪಾಲಾದರೆ ಜೆಡಿಎಸ್ ಅಭ್ಯರ್ಥಿ ಕನಿಷ್ಟಪಕ್ಷ ಐದು ಲಕ್ಷ ಅಂತರದಲ್ಲಿ ಗೆಲುವು ಸಾಧಿಸಲಿದ್ದಾರೆ. ಅದು ದೇವೇಗೌಡರು ಸ್ಪರ್ಧಿಸಿದರೂ ಅಷ್ಟೆ, ಬೇರೆ ಯಾರೇ ಸ್ಪರ್ಧಿಸಿದರೂ ಅಷ್ಟೆ. ಯಾಕಂದ್ರೆ ಅದು ಜೆಡಿಎಸ್ ಪಕ್ಷದ ಭದ್ರಕೋಟೆಯಾಗಿದೆ. ತುಂಬಾ ಸರಳವಾಗಿ ಗೆಲ್ಲಬಹುದಾದ ಕ್ಷೇತ್ರದಲ್ಲಿ ಗೌಡರು ಸ್ಪರ್ಧೆ ಮಾಡೋದು ಅಷ್ಟೊಂದು ಸರಿಕಾಣುವುದಿಲ್ಲ ಅನ್ನೋದನ್ನು ಜನರೇ ಮಾತನಾಡಿಕೊಳ್ತಿದ್ದಾರೆ. ಇನ್ನೂ ನಾಗಮಂಗಲ ಶಾಸಕರಾಗಿದ್ದ ಚೆಲುವರಾಸ್ವಾಮಿ ಅವರನ್ನು ಸೋಲಿಸಲು ಅನುವು ಮಾಡಿಕೊಟ್ಟ ನಿವೃತ್ತ ಐಆರ್‌ಎಸ್ ಅಧಿಕಾರಿ ಲಕ್ಷ್ಮೀಗೌಡ ಅವರಿಗೆ ಲೋಕಸಭಾ ಟಿಕೆಟ್ ಎಂದು ಭರವಸೆ ನೀಡಿದ್ದಾರೆ. ಅದೇ ಮಾತನ್ನು ಉಳಿಸಿಕೊಳ್ಳುವ ಮೂಲಕ ದೇವೇಗೌಡರ ಕುಟುಂಬ ಅಧಿಕಾರಕ್ಕೆ ಅಂಟಿ ಕೂರುವುದಿಲ್ಲ ಎನ್ನುವುದನ್ನು ತೋರಿಸಬೇಕಿದೆ. ಸಾಮಾನ್ಯರನ್ನು ನಿಲ್ಲಿಸಿ ಗೆಲ್ಲಿಸಬಹುದಾದ ಕ್ಷೇತ್ರದಿಂದ ದೇವೇಗೌಡರು‌ ಸ್ಪರ್ಧಿಸ್ತಾರೆ ಅಂದ್ರೆ ಅವರ ಘನತೆಗೂ ಸೂಕ್ತವಲ್ಲ ಎನ್ನುತ್ತಿದ್ದಾರೆ. ಆದರೆ ರಾಜಕೀಯ ಲೆಕ್ಕಾಚಾರ ಯಾರು ತಾನೆ ಬಲ್ಲರು. ಘಟನೆ ಘಟಿಸುವ ತನಕ ಯಾವುದೂ ಸತ್ಯವಲ್ಲ. ಯಾವುದೂ ಮಿಥ್ಯವಲ್ಲ. ಹಾಗಾಗಿ ದೇವೇಗೌಡರು ಸ್ಪರ್ಧೆ ಮಾಡುವ ಸಾಧ್ಯತೆ ತೀರ ಕಡಿಮೆ. ಸ್ಪರ್ಧಿಸಲೂ ಬಾರದು. ಅದೇ ಅವರಿಗೆ ದೊಡ್ಡತನ.

Leave a Reply