ಟಿಪ್ಪು ಹೆಸರಿನಲ್ಲಿ ಬೆಂಕಿ ಹಚ್ಚಬೇಡಿ ಜಮೀರ್!

‘ಸುಮ್ಮನೆ ಇರಲಾರದೆ ಇರುವೆ ಬಿಟ್ಟುಕೊಂಡರು’ ಎನ್ನುತ್ತಾರಲ್ಲ ಹಾಗಾಗಿದೆ ರಾಜ್ಯ ಆಹಾರ ಮತ್ತು ನಾಗರಿಕ ಪೂರೈಕೆ, ವಕ್ಫ್ ಸಚಿವ ಜಮೀರ್ ಅಹಮದ್ ಖಾನ್ ಅವರ ಸ್ಥಿತಿ. ಬೆಂಗಳೂರಿನ ‘ಹಜ್ ಭವನ’ಕ್ಕೆ ‘ಟಿಪ್ಪು ಸುಲ್ತಾನ್ ಘರ್’ ಹೆಸರಿಡಲು ಮುಂದಾಗಿರುವ ಜಮೀರ್ ತಾವೊಬ್ಬರೇ ಇರುವೆ ಬಿಟ್ಟುಕೊಂಡಿಲ್ಲ. ಆದರೆ ಸಾರ್ವಜನಿಕ ಜೀವನದ ಆಯಕಟ್ಟಿನ ಜಾಗದಲ್ಲಿದ್ದುಕೊಂಡು ಇಡೀ ಸಮಾಜದ ನೆಮ್ಮದಿಗೇ ಕಟ್ಟಿರುವೆ (ಗೊದ್ದ, ದೊಡ್ಡ ಗಾತ್ರದ ಕಪ್ಪಿರುವೆ) ಬಿಟ್ಟಿದ್ದಾರೆ. ಈ ಕಚ್ಚಿದರೆ ಭಯಂಕರ ನೋವಾಗುತ್ತದೆ. ತಮ್ಮ ಸಮುದಾಯಕ್ಕೆ ದೊಡ್ಡ ನಾಯಕರಾಗಬೇಕು ಎನ್ನುವ ಭರದಲ್ಲಿ ಜಮೀರ್ ಸಮಾಜಕ್ಕೆ ಅಂಥ ಯಮಯಾತನೆ ನೀಡಲು ಹೊರಟಿದ್ದಾರೆ. ಆ ಯಾತನೆಯಲ್ಲೇ ರಾಜಕೀಯ ಭವಿಷ್ಯ ಗಟ್ಟಿಮಾಡಿಕೊಳ್ಳಲು ಹವಣಿಸಿದ್ದಾರೆ. ಅವರ ಈ ವಿಕೃತ ಬಯಕೆ ಮೊದಲೇ ಗೊಂದಲದಲ್ಲಿ ಮುಳುಗೇಳುತ್ತಿರುವ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರಕ್ಕೆ ಮತ್ತೊಂದು ಹೊಸ ಬಿಕ್ಕಟ್ಟನ್ನು ಕೊಡುಗೆಯಾಗಿ ನೀಡಿದೆ. ಜತೆಗೆ ಸಮಾಜದ ಶಾಂತಿಗೂ ಸವಾಲು ಎಸೆದಿದೆ.

ನಿಜ, ಪ್ರಸ್ತುತ ವಿಚಾರ ಸಮಾಜದ ಶಾಂತಿಗೆ ಸವಾಲು ಏಕೆಂದರೆ, ಇಂಥ ಸದಾನ್ವೇಷಣೆ ನಿರತರಾಗಿರುವ ಬಿಜೆಪಿ ಮುಖಂಡರು ಅದರಲ್ಲೂ ವಿಶೇಷವಾಗಿ ಕೆ.ಜಿ. ಬೋಪಯ್ಯ ಮತ್ತು ಶೋಭಾ ಕರಂದ್ಲಾಜೆ ಅವರು ಹಜ್ ಭವನಕ್ಕೆ ಅದ್ಹೇಗೆ ವಿವಾದಿತ ಟಿಪ್ಪು ಹೆಸರಿಡುತ್ತಾರೋ ನಾವೂ ನೋಡುತ್ತೇವೆ, ಒಂದೊಮ್ಮೆ ಹೆಸರಿಟ್ಟಿದ್ದೇ ಆದಲ್ಲಿ ಕರ್ನಾಟಕ ಹೊತ್ತಿ ಉರಿಯುತ್ತದೆ, ಕೋಮು ಗಲಭೆಗಳಾಗುತ್ತವೆ, ಅದಕ್ಕೆಲ್ಲ ಜಮೀರ್ ಅಹಮದ್ ಅವರೇ ಹೊಣೆಗಾರರು ಎಂದು ಧಮಕಿ ಹಾಕಿದ್ದಾರೆ. ಅಲ್ಲಿಗೆ ಈ ವಿಚಾರ ಎಷ್ಟು ಸೂಕ್ಷ್ಮವಾಗಿದೆ, ಜಮೀರ್ ಪ್ರತಿನಿಧಿಸುತ್ತಿರುವ ಕಾಂಗ್ರೆಸ್ ಹಾಗೂ ಅದನ್ನು ವಿರೋಧಿಸುತ್ತಿರುವ ಬಿಜೆಪಿಗೆ ಇದೊಂದು ರಾಜಕೀಯ ಅಸ್ತ್ರವಾಗಿ ಪರಿಣಮಿಸಿದೆ, ಇದು ಮುಂದೆ ಎಂತೆಂಥ ಅನಾಹುತಗಳಿಗೆ ದಾರಿ ಮಾಡಿಕೊಡಬಹುದು, ಸಮಾಜದ ನೆಮ್ಮದಿಯನ್ನು ಹೇಗೆ ಕಲಕಬಹುದು ಎಂಬುದರ ಮುನ್ಸೂಚನೆಯನ್ನೂ ನೀಡಿದೆ.

ಹಿಂದೆ ಟಿಪ್ಪು ಜಯಂತಿ ಆಚರಣೆ ಸಂಬಂಧ ರಾಜ್ಯದಲ್ಲಿ ಎಂತೆಂಥ ಅನಾಹುತಗಳು ಆಗಿವೆ ಎಂಬುದು ಇನ್ನೂ ಕಣ್ಣ ಮುಂದೆಯೇ ಗಿರಕಿ ಹೊಡೆಯುತ್ತಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರಕಾರ ಟಿಪ್ಪು ಜಯಂತಿ ಆಚರಿಸಿತು. ಬಿಜೆಪಿ ವಿರೋಧಿಸಿತು. ಈ ರಾಜಕೀಯ ಸಂಘರ್ಷ ನಡುವೆ ನಡೆದ ಮೆರವಣಿಗೆ ವೇಳೆ ಕೊಡಗಿನಲ್ಲಿ ಎಂಬುವವರ ಹತ್ಯೆಯಾಯಿತು. ಅನೇಕರು ಗಾಯಗೊಂಡರು. ರಾಜ್ಯದ ನಾನಾ ಕಡೆ ಗಲಾಟೆಗಳಾದವು. ಸಾರ್ವಜನಿಕ ಆಸ್ತಿಪಾಸ್ತಿಗೂ ಹಾನಿಯಾಯಿತು. ಕಳೆದ ವಿಧಾನಸಭೆ ಚುನಾವಣೆ ಪ್ರಚಾರದಲ್ಲೂ ಇದೂ ಒಂದು ಅಸ್ತ್ರವಾಯಿತು. ಮುಸ್ಲಿಮರು ಕಾಂಗ್ರೆಸ್ ಪರ ನಿಂತರು. ಅಷ್ಟೊತ್ತಿಗೆ ಜೆಡಿಎಸ್‌ನಿಂದ ಅಮಾನತುಗೊಂಡು ಕಾಂಗ್ರೆಸ್ ಪಾಳೆಯದಲ್ಲಿ ಕಾಣಿಸಿಕೊಂಡಿದ್ದ ಜಮೀರ್‌ಅಹಮದ್ ಖಾನ್ ಕೂಡ ತಮ್ಮ ರಾಜಕೀಯ ಏಳ್ಗೆಗೆ ಇದನ್ನೇ ಒಂದು ಅಸ್ತ್ರ ಮಾಡಿಕೊಂಡರು. ಮುಂದಿನ ವರ್ಷ ಬರುವ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲೂ ಅದೇ ಅಸ್ತ್ರ ಝಳಪಿಸಲು ಹೊರಟಿದ್ದಾರೆ. ಮುಸ್ಲಿಂ ಮನವಿ ಮೇರೆಗೆ ಹೆಸರು ಬದಲಾವಣೆ ಮಾಡಲು ಹೊರಟಿರುವುದಾಗಿ ಹೇಳಿದ್ದಾರೆ. ಅದರೆ ಇದಕ್ಕೆ ಅನ್ಯ ಕಾಂಗ್ರೆಸ್ ನಾಯಕರ ಕುಮ್ಮಕ್ಕೂ ಇರಬಹುದು. ಸರಕಾರ ಈ ವಿಚಾರದಲ್ಲಿ ಇನ್ನೂ ಯಾವುದೇ ನಿರ್ಣಯ ಕೈಗೊಂಡಿಲ್ಲ, ಇನ್ನೂ ಪರಿಶೀಲನೆ ಹಂತದಲ್ಲಿದೆ ಎಂಬುದೆಲ್ಲ ಸರಿ. ಆದರೆ ಇನ್ನೂ ಟೇಕಾಫ್ ಆಗಲು ಏದುಸಿರು ಬಿಡುತ್ತಿರುವ ಮೈತ್ರಿ ಸರಕಾರದ ಎದೆ ಮೇಲೆ ಇಂಥದ್ದೊಂದು ವಿವಾದದ ಬಂಡೆ ಎಳೆಯುವ, ಸಮಾಜದ ಭಾವನೆಗೆ ಬೆಂಕಿ ಹಚ್ಚುವ ಅಗತ್ಯವಿತ್ತೇ ಎಂಬುದು ಈಗಿರುವ ಪ್ರಶ್ನೆ.

ಜಮೀರ್ ಖಾನ್ ವಿಷಯ ಪ್ರಸ್ತಾಪ ಮಾಡಿ ಸುಮ್ಮನಾಗಿಲ್ಲ. ಅದಕ್ಕೊಂದಷ್ಟು ಬೆಂಕಿ ಹಚ್ಚಿ, ತುಪ್ಪ ಸುರಿವ ಕೆಲಸವನ್ನೂ ಮಾಡುತ್ತಿದ್ದಾರೆ. ‘ಟಿಪ್ಪು ಮುಸ್ಲಿಂ ನಾಯಕ. ಹಜ್ ಭವನ ಕೂಡ ಮುಸ್ಲಿಂ ಸಮುದಾಯಕ್ಕೇ ಸೇರಿದ್ದು. ಅವರಿಗೆ ಇಷ್ಟ ಬಂದ ಹೆಸರು ಇಟ್ಟುಕೊಳ್ಳುತ್ತಾರೆ. ಹೀಗಿರುವಾಗ ಟಿಪ್ಪು ಹೆಸರಿಟ್ಟರೆ ತಪ್ಪೇನು? ದೇವನಹಳ್ಳಿ ವಿಮಾನ ನಿಲ್ದಾಣಕ್ಕೆ ಕೆಂಪೇಗೌಡರ ಹೆಸರಿಟ್ಟಿಲ್ಲವೇ? ಅದನ್ನು ಮುಸ್ಲಿಮರು ವಿರೋಧಿಸಿದ್ದರೇ? ಈಗ ಅದೇ ರೀತಿ ನಾವೂ ಹಜ್ ಭವನಕ್ಕೆ ಟಿಪ್ಪು ಹೆಸರಿಟ್ಟೇ ತೀರುತ್ತೇವೆ. ಅದ್ಯಾರು ಬರುತ್ತಾರೋ ನೋಡಿಯೇ ಬಿಡುತ್ತೇನೆ’ ಎಂದು ತಾವು ಅಲಂಕರಿಸಿರುವ ಸಚಿವ ಸ್ಥಾನದ ಘನತೆ, ಗೌರವ ಪಕ್ಕಕ್ಕಿಟ್ಟು ಪರೋಡಿಗಳ ರೀತಿ ಪ್ರತಿ ಧಮಕಿ ಹಾಕಿದ್ದಾರೆ. ಆವಾಜ್ ಹಾಕಿದರೆ ಹೆಸರು ಬರುತ್ತದೆ, ನಾಯಕತ್ವ ಬರುತ್ತದೆ, ಪ್ರಚಾರದಲ್ಲಿಯೂ ಇರಬಹುದು ಎಂದು ಜಮೀರ್ ಭಾವಿಸಿರಬಹುದು ಅಥವಾ ಹಾಗೆಂದು ಅರಿಗೆ ಯಾರಾದರೂ ಹೇಳಿಕೊಟ್ಟಿರಬಹುದು ಎಂದು ಕಾಣುತ್ತದೆ. ಆದರೆ ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆ ಪಾಲನೆ ಹೊಣೆ ಹೊತ್ತ ಸರಕಾರದ ಪ್ರತಿನಿಧಿಯಾಗಿ ಅವರೇ ಹೀಗೆ ನಡೆದುಕೊಂಡರೆ, ಹೀಗೆ ಹೇಳಿಕೆ ಕೊಟ್ಟರೆ ಶಾಂತಿ ಭಂಗ ಕಾರ್ಯಕ್ಕೆ ಪ್ರೇರಣೆ ನೀಡಿದಂತೆ ಆಗುವುದಿಲ್ಲವೇ? ಗಲಭೆಗಳಿಗೆ ಕುಮ್ಮಕ್ಕು ನೀಡಿದಂತೆ ಆಗುವುದಿಲ್ಲವೇ? ಸಚಿವರೇ ಹೀಗೆ ಹೇಳಿರುವಾಗ ಇನ್ನೂ ತಮ್ಮದೇನೂ ಅಂತ ಸಮುದಾಯದ ‘ಕೇಡುಗರು’ ಬೀದಿಕಾಳಗಕ್ಕೆ ಇಳಿಯುವುದಿಲ್ಲವೇ? ಒಬ್ಬ ಮಂತ್ರಿಯಾದವರು ಸಮುದಾಯದವರನ್ನು ಹೀಗೆ ಎತ್ತಿ ಕಟ್ಟಬಹುದೇ?

ಅದು ಯಾರೇ ಮಾಡಲಿ, ಯಾವುದೇ ಒಂದು ಪಕ್ಷ ಮಾಡಲಿ, ಒಂದು ತಪ್ಪನ್ನು ಗೊತ್ತಿಲ್ಲದೇ ಮಾಡುವುದಕ್ಕೂ ಗೊತ್ತಿದ್ದೂ ಮಾಡುವುದಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಹಿಂದೆ ಟಿಪ್ಪು ಜಯಂತಿ ಆಚರಣೆ ಸಂದರ್ಭದಲ್ಲಿ ಏನೆಲ್ಲ ಅನಾಹುತಗಳು ಆಗಿವೆ ಈಗ ಟಿಪ್ಪು ಘರ್ ಹೆಸರಿನ ಬೆನ್ನತ್ತಿರುವವರಿಗೂ ಗೊತ್ತಿದೆ, ವಿರೋಧಿಸುತ್ತಿರುವವರಿಗೂ ಗೊತ್ತಿದೆ. ಆದರೆ ಅನಾಹುತಗಳಿಗೆ ಕಾರಣವಾದ ಟಿಪ್ಪು ಹೆಸರನ್ನೇ ಹಿಡಿದುಕೊಂಡು ಮತ್ತೆ ರಾಜಕೀಯ ಮಾಡಲು ಹೊರಟರೆ ಏನೆನ್ನಬೇಕು? ಬೇಕೆಂದೇ ಮಾಡುತ್ತಿದ್ದಾರೆ, ಉದ್ದೇಶಪೂರ್ವಕವಾಗಿಯೇ ವಿವಾದ ಸೃಷ್ಟಿಸುತ್ತಿದ್ದಾರೆ ಎಂದಾಗುವುದಿಲ್ಲವೇ?

ಜಮೀರ್ ತಮ್ಮ ಕ್ರಮ ಸಮರ್ಥನೆಗೆ ಬಳಸಿಕೊಂಡಿರುವ ಕೆಂಪೇಗೌಡರಾಗಲಿ, ಬಸವಣ್ಣನವರಾಗಲಿ ಅಥವಾ ವಿಶ್ವೇಶ್ವರಯ್ಯನವರಾಗಲಿ ವಿವಾದಿತ ವ್ಯಕ್ತಿಗಳಲ್ಲ. ಅವರ ಮೇಲೆ ಯಾವುದೇ ಕಳಂಕವೂ ಇಲ್ಲ. ಆದರೆ ಟಿಪ್ಪು ಸುಲ್ತಾನ್ ಎಂಬುದೇ ವಿವಾದಗಳ ಮೂಟೆ. ಆತ ಮತ್ತು ಹೈದರಾಲಿ ಸೇರಿ ಕುತಂತ್ರದಿಂದ ಚಿತ್ರದುರ್ಗದ ಪಾಳೇಗಾರ ಮದಕರಿ ನಾಯಕರನ್ನು ಕೊಂದರು, ಹೈದರಾಲಿ ಸೈನಿಕನಾಗಿ ಸೇರಿದ ಮೈಸೂರು ಸಂಸ್ಥಾನದ ಅರಸರ ವಿರುದ್ಧವೇ ಪಿತೂರಿ ಮಾಡಿ ರಾಜನಾದ, ಟಿಪ್ಪು ಮತಾಂತರಕ್ಕೆ ಒಪ್ಪದ ಹಿಂದೂಗಳ ನರಮೇಧ ಮಾಡಿದ, ಆತ ಕನ್ನಡ ವಿರೋಧಿಯಾಗಿದ್ದ ಎಂಬಿತ್ಯಾದಿ ಆರೋಪಗಳು ಇತಿಹಾಸದ ಜತೆಗೇ ಬಂದಿವೆ. ಬ್ರಿಟಿಷರ ವಿರುದ್ಧ ಹೋರಾಡಿದ ಟಿಪ್ಪು ಮೈಸೂರಿನ ಹುಲಿ ಎಂದು ಒಂದು ವರ್ಗದವರು ಹೇಳಿದರೆ, ಬ್ರಿಟಿಷರಿಗೆ ಮೊದಲು ಭಾರತದ ಮೇಲೆ ದಂಡೆತ್ತಿ ಬಂದು 800 ಆಳ್ವಿಕೆ ಮಾಡಿದ ಮೊಗಲರ ಸಾಮ್ರಾಜ್ಯ ಉಳಿಸಿಕೊಳ್ಳಲು ಹೋರಾಡಿದರೇ ಹೊರತು ಕರುನಾಡಿನ ಏಳ್ಗೆಗಾಗಿ ಅಲ್ಲ, ಬ್ರಿಟಿಷರು ಬರದಿದ್ದರೆ ಮೊಗಲರೇ ಆಳುತ್ತಿದ್ದರು, ಹೀಗಾಗಿ ಅವರು ನಾಡಿಗೆ ಯಾವುದೇ ಉಪಕಾರ ಮಾಡಿಲ್ಲ ಎಂದು ಮತ್ತೊಂದು ವರ್ಗ ಪ್ರತಿಪಾದಿಸುತ್ತದೆ. ಪರಿಸ್ಥಿತಿ ಹೀಗಿರುವಾಗ ವಿವಾದಿತ ವ್ಯಕ್ತಿಯ ಹೆಸರನ್ನೇ ಇಟ್ಟುಕೊಂಡು ಹಗ್ಗ-ಜಗ್ಗಾಟ ಮಾಡುವುದು ಎಷ್ಟರಮಟ್ಟಿಗೆ ಸರಿ ಎಂಬ ಪ್ರಶ್ನೆಯೂ ಇಲ್ಲಿ ಮೂಡುತ್ತದೆ.

ಒಂದೊಮ್ಮೆ ಹಜ್ ಭವನಕ್ಕೆ ಮುಸ್ಲಿಂ ಗಣ್ಯರ ಹೆಸರನ್ನೇ ಇಡಬೇಕೆಂದು ಜಮೀರ್ ಅಹಮದ್ ಖಾನ್ ಅವರಿಗೆ ಗಡಿನಾಡ ಗಾಂಧಿ ಅಬ್ದುಲ್ ಗಫಾರ್ ಖಾನ್, ಸ್ವಾತಂತ್ರ್ಯ ಹೋರಾಟಗಾರ ಮೌಲಾನಾ ಆಜಾದ್, ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ, ಮಾಜಿ ಉಪರಾಷ್ಟ್ರಪತಿ ಜಾಕೀರ್ ಹುಸೇನ್, ಷಹನಾಯ್ ಮಾಂತ್ರಿಕ ಬಿಸ್ಮಿಲ್ಲಾ ಖಾನ್ ಹೆಸರಿಡಬಹುದು. ಕನ್ನಡ ನಾಡಿನವರೇ ಆಗಬೇಕು ಎನ್ನುವುದಾದರೆ ಸಂತ ಶಿಶುನಾಳ ಷರೀಫ್, ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರ ಸಂಪುಟದಲ್ಲಿ ಸಚಿವರಾಗಿದ್ದುಕೊಂಡು ಬೋರ್‌ವೆಲ್ ಕ್ರಾಂತಿ ಮೂಲಕ ‘ನೀರ್ ಸಾಬ್’ ಎಂದೇ ಹೆಸರಾದ ನಜೀರ್ ಸಾಬ್, ಖ್ಯಾತ ಸಾಹಿತಿಗಳಾದ ಎಸ್.ಕೆ.ಕರೀಂ ಖಾನ್, ಅಹಮದ್ ಅವರ ಹೆಸರಿಡಬಹುದಲ್ಲ. ಇವರಲ್ಲಿ ಯಾರೊಬ್ಬರ ಹೆಸರಿಟ್ಟರೂ ಹಿಂದೂಗಳು ಸೇರಿದಂತೆ ಯಾರೂ ಆಕ್ಷೇಪ ವ್ಯಕ್ತಪಡಿಸುವುದಿಲ್ಲ. ಅಬ್ದುಲ್ ಕಲಾಂ ಅವರು ರಾಷ್ಟ್ರಪತಿಯಂಥ ಮಹೋನ್ನತ ಹುದ್ದೆ ಅಲಂಕರಿಸಿದ್ದು ಒಬ್ಬ ಪ್ರಾಮಾಣಿಕ, ನಿಸ್ಪೃಹ ವ್ಯಕ್ತಿಗೆ ಆತನ ಜಾತಿ, ಧರ್ಮ ಮೀರಿಯೂ ಈ ದೇಶದಲ್ಲಿ ಗೌರವ, ಮನ್ನಣೆ ಸಿಗುತ್ತದೆ ಎಂಬುದರ ಪ್ರತೀಕ. ಹೀಗಿರುವಾಗ ಹಜ್ ಭವನಕ್ಕೆ ಅವರ ಹೆಸರನ್ನೇ ಇಡಬಹುದಲ್ಲ. ಯಾವುದೇ ವಿವಾದ ಇಲ್ಲದ ಇಂಥ ವ್ಯಕ್ತಿಗಳ ಹೆಸರಿಟ್ಟುಬಿಟ್ಟರೆ ರಾಜಕೀಯ ಮಾಡಲು ತಮಗೆ ವಿಷಯವೇ ಎಂಬ ದೂರಾಲೋಚನೆ ಜಮೀರ್ ಅಹಮದ್ ಖಾನ್ ಅವರಂಥವರನ್ನು ಕಾಡಿರಬಹುದು. ಹೀಗಾಗಿ ವಿವಾದಿತ ಟಿಪ್ಪು ಹೆಸರೇಳಿಕೊಂಡು ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಹೊರಟಿರಬಹುದು.

ಇಲ್ಲಿ ಇನ್ನೂ ಒಂದು ವಿಚಾರ. ಹಜ್ ಭವನ ಮುಸ್ಲಿಮರಿಗೆ ಸೇರಿದ ಒಂದು ಸ್ವಾಯತ್ತ ಸಂಸ್ಥೆ. ಖಾಸಗಿ ಸಂಸ್ಥೆಗೆ ಯಾರನ್ನೂ ಕೇಳಿ ಹೆಸರಿಡುವ ಅಗತ್ಯವಿಲ್ಲ. ಮುಸ್ಲಿಮರು ತಮಗೆ ಬೇಕಾದ ಹೆಸರಿಟ್ಟುಕೊಳ್ಳುತ್ತಾರೆ ಎಂದು ಜಮೀರ್ ಹೇಳಿದ್ದಾರೆ. ನಿಜ, ಹಜ್ ಭವನ ಸ್ವಾಯತ್ತ ಸಂಸ್ಥೆ. ಆದರೆ ಅದಕ್ಕೆ ಯಡಿಯೂರಪ್ಪನವರ ಸರಕಾರ 50 ಕೋಟಿ ರುಪಾಯಿ ಅನುದಾನ ಕೊಟ್ಟಿದೆ. ಮೇಲಾಗಿ ಹಜ್ ಯಾತ್ರೆ ಕೈಗೊಳ್ಳುವವರಿಗೆ ಸರಕಾರ ಅನುದಾನವನ್ನೂ ಕೊಡುತ್ತಿದೆ. ಅಲ್ಲಿಗೆ ಸ್ವಾಯತ್ತ ಸಂಸ್ಥೆಗೆ ಸರಕಾರದ ಹಣ ಸಂದಾಯವಾಯಿತು ಎಂದಾಯಿತು. ಸರಕಾರದ ಹಣವೆಂದರೆ ಸಾರ್ವಜನಿಕರ ಹಣ. ಈ ಹಣಕ್ಕೆ ಹಿಂದೂ, ಮುಸ್ಲಿಂ, ಕ್ರೈಸ್ತ ಎಂಬ ಹೆಸರಿರುವುದಿಲ್ಲ. ಈ ದೇಶ ಯಾವುದೇ ಒಂದು ಜಾತಿ, ಧರ್ಮ, ಪಂಗಡಕ್ಕೆ ಸೀಮಿತವಾಗಿಲ್ಲ. ಇದು ಸರ್ವಧರ್ಮ ಸಮನ್ವಯದ ನೆಲೆಯ ಮೇಲೆ ಎದ್ದು ನಿಂತಿರುವ ರಾಷ್ಟ್ರ. ಹೀಗಾಗಿ ಹಜ್ ಭವನಕ್ಕೆ ವಿವಾದಿತ ವ್ಯಕ್ತಿಗಳ ಸರ್ವಸಮ್ಮತ ವ್ಯಕ್ತಿ ಹೆಸರಿಡಿ ಎಂದು ಕೇಳುವುದರಲ್ಲಿ ತಪ್ಪೇನೂ ಇಲ್ಲ. ಜಮೀರ್ ಅವರು ಹೇಳುವಂತೆ ಮುಸ್ಲಿಂ ಸಮುದಾಯದವರಿಗೆ ಯಾರ ಹೆಸರನ್ನು ಬೇಕಾದರೂ ಇಟ್ಟುಕೊಳ್ಳುವ ಸ್ವಾತಂತ್ರ್ಯವಿದೆ ಎನ್ನುವುದಾದರೆ, ಅವರಿಗೆ ಇಷ್ಟ ಎನ್ನುವ ಕಾರಣಕ್ಕೆ ಉಗ್ರರ ದೊರೆ ಒಸಾಮ ಬಿನ್ ಲಾಡೆನ್, ಭೂಗತ ಪಾತಕಿಗಳಾದ ಹಾಜಿ ಮಸ್ತಾನ್, ದಾವೂದ್ ಇಬ್ರಾಹಿಂ, ಛೋಟಾ ಶಕೀಲ್, ಯಾಸಿನ್ ಮಲ್ಲಿಕ್ ಹೆಸರಿಡಲು ಸಾಧ್ಯವೇ? ಈ ದೇಶವನ್ನು ಇನ್ನಿಲ್ಲದಂತೆ ಲೂಟಿ ಮಾಡಿದ ಮಹಮದ್ ಬಿನ್ ತುಗಲಕ್, ಅಲ್ಲಾವುದ್ದೀನ್ ಖಿಲ್ಜಿ ಯಾರಾದರೂ ಸಹಿಸಿಕೊಳ್ಳಲು ಸಾಧ್ಯವೇ? ಸ್ವಾತಂತ್ರ್ಯ ಇದೆ ಎಂದಮಾತ್ರಕ್ಕೆ ಅದನ್ನು ಹೇಗೆಂದರೆ ಹಾಗೆ ಬಳಸಿಕೊಳ್ಳಲು ಸಾಧ್ಯವೇ?

ಈ ಜಮೀರ್ ಅಹಮದ್ ಅವರಿಗೆ ವಿವಾದಗಳು ಎಂದರೆ ಬಲುಪ್ರೀತಿ ಎಂದು ಕಾಣುತ್ತದೆ. ವಿಧಾನಸಭೆ ಚುನಾವಣೆಗೆ ಮುನ್ನ ಮುಸ್ಲಿಂ ಸಮುದಾಯದವರನ್ನು ಉದ್ದೇಶಿಸಿ ಅವರು ಮಾತನ್ನಾಡಿದ್ದ ವಿಡಿಯೋ ಒಂದು ವೈರಲ್ ಆಗಿತ್ತು. ಈ ಬಾರಿ ಅಲ್ಪಸಂಖ್ಯಾತರು ಪೂರ್ಣ ಕಾಂಗ್ರೆಸ್‌ಗೇ ಮತ ನೀಡಬೇಕು. ನೀವು ಜೆಡಿಎಸ್‌ಗೆ ಮತ ಹಾಕಿದರೆ ಬಿಜೆಪಿ ಅಧಿಕಾರಕ್ಕೆ ಬರುತ್ತದೆ. ಕಾಂಗ್ರೆಸ್ ಸರಕಾರ ಬಂದರೆ ಮುಖ್ಯಮಂತ್ರಿ ಆಗುತ್ತಾರೆ. ಅವರು ಸಿಎಂ ಆದರೆ ನನ್ನನ್ನೂ ಮಂತ್ರಿ ಮಾಡು ತ್ತಾರೆ. ನಾವು-ನೀವೆಲ್ಲ ಸೇರಿಕೊಂಡು ಈ ಬಿಜೆಪಿಯವರು ಮೆರೆಸುತ್ತಿರೋ ಹಿಂದೂಗಳನ್ನು ಬಡಿದು ಹಾಕಬಹುದು ಅಂತ ಹೇಳಿದ್ದರು. ವೈರಲ್ ಆದ ಈ ವಿಡಿಯೋ ವಿವಾದ ಸೃಷ್ಟಿಸುತ್ತಿದ್ದಂತೆ ಜಮೀರ್ ಪ್ಲೇಟು ಬದಲಿಸಿದ್ದರು. ನಾನು ಮೊದಲು ಭಾರತೀಯ. ಆಮೇಲೆ ಮುಸ್ಲಿಂ ಅಂತ. ಇವರೇ ಹೇಳಿಕೊಂಡರುವಂತೆ ಇವರು ಮೊದಲು ಭಾರತೀಯರೇ ಆದ ಪಕ್ಷದಲ್ಲಿ ನಾಡಿನ ಬಹುತೇಕರು ವಿರೋಧಿಸುತ್ತಿರುವ ಟಿಪ್ಪು ಹೆಸರಿಡುವ ಪ್ರಸ್ತಾಪವನ್ನು ಏಕೆ ಕೈಬಿಡಬಾರದು. ನೆ ವಿವಾದವನ್ನೇಕೆ ಸೃಷ್ಟಿ ಮಾಡಬೇಕು. ನಾಡಿನ ಜನ ನೆಮ್ಮದಿಯಾಗಿರುವುದು ಅವರಿಗೆ ಬೇಕಿಲ್ಲವೇ?

ಸಿದ್ದರಾಮಯ್ಯನೋರು ಮುಖ್ಯಮಂತ್ರಿ ಆಗದಿದ್ದರೂ ಜಮೀರ್ ಅಹಮದ್ ಖಾನ್ ಮಂತ್ರಿ ಆಗಿದ್ದಾರೆ. ಸಿದ್ದರಾಮಯ್ಯನವರೇ ಮುತುವರ್ಜಿ ವಹಿಸಿ ಅವರಿಗೆ ಈ ಹುದ್ದೆ ಕೊಡಿಸಿದ್ದಾರೆ. ಒಂದು ಕಾಲದಲ್ಲಿ ದೇವೇಗೌಡರು ಮತ್ತು ಕುಮಾರಸ್ವಾಮಿ ಅವರನ್ನು ಇದೇ ಜಮೀರ್ ‘ಅಪ್ಪ-ಅಣ್ಣ’ ಎಂದು ಸಂಭೋದಿಸಿಕೊಂಡು ತಿರುಗುತ್ತಿದ್ದರು. ಅದೇ ಗೌಡರು ಮತ್ತು ಕುಮಾರಸ್ವಾಮಿ ಅವರನ್ನುಚುನಾವಣೆಗೆ ಮೊದಲು ಬಾಯಿಗೆ ಬಂದಂತೆ ಬೈಯ್ದುಕೊಂಡು ತಮ್ಮ ಹಿಂದೆ-ಮುಂದೆ ಓಡಾಡಿಕೊಂಡಿದ್ದ ಜಮೀರ್‌ಗೆ ಬಳುವಳಿಯಾಗಿ ಮಂತ್ರಿ ಪದವಿ ಕೊಡಮಾಡಿಸಿದ್ದಾರೆ. ಇದು ಮೈಸೂರು ಮೂಲದ ತನ್ವೀರ್ ಸೇಠ್ ಅವರ ಕೆಂಗಣ್ಣಿಗೂ ಗುರಿಯಾಗಿದ್ದು, ಜಮೀರ್ ಅವರನ್ನು ಮಂತ್ರಿ ಪದವಿಗೆ ಅನರ್ಹ, ಅಯೋಗ್ಯ ಎಂದೆಲ್ಲ ಜರಿದಿದ್ದಾರೆ. ಕಾಂಗ್ರೆಸ್‌ನಲ್ಲಿ ಅಷ್ಟೆಲ್ಲ ವರ್ಷ ಮಣ್ಣೊತ್ತಿರುವ ತಮಗೆ ಸಿಗದ ಹುದ್ದೆ ಮೂರು ತಿಂಗಳ ಹಿಂದೆಯಷ್ಟೇ ಪಕ್ಷಕ್ಕೆ ಬಂದ ಜಮೀರ್ ಪಾಲಾಯಿತಲ್ಲ ಎಂಬ ಸಂಕಟ ಅವರಿಂದ ಈ ಮಾತು ಹೇಳಿಸಿದೆ. ಆದರೆ ತಮ್ಮ ನಡೆ-ನುಡಿಯಿಂದ ತನ್ವೀರ್ ಸೇಠ್ ತಮ್ಮ ಬಗ್ಗೆ ಮಾಡಿರುವ ಆರೋಪ ಮಾಡಬೇಕಾದ ಜವಾಬ್ದಾರಿ ಕೂಡ ಜಮೀರ್ ಅವರ ಮೇಲಿದೆ. ಅದಕ್ಕೆ ಅವರು ಮಾಡಬೇಕಿರುವ ಕೆಲಸ ಇಷ್ಟೇ. ಬಾಯಿಗೆ ಬಂದದ್ದು ಮಾತಾಡಬಾರದು. ತಲೆಗೆ ಬಂದದ್ದು ಮಾಡಬಾರದು. ಈ ರಾಜ್ಯದ ನೆಮ್ಮದಿ ಕದಡುತ್ತಾ ಬಂದಿರುವ ಟಿಪ್ಪು ಸುಲ್ತಾನ್ ಅವರ ಹೆಸರನ್ನು ಮುಂದಿಟ್ಟುಕೊಂಡು ರಾಜ ಕೀಯ ಮಾಡುವುದನ್ನು ಬಿಡಬೇಕು. ಇದರಿಂದ ಒಂದು ಧರ್ಮದವರ ವಿರುದ್ಧ ಮತ್ತೊಂದು ಧರ್ಮದವರನ್ನು ಎತ್ತಿಕಟ್ಟಿ, ಕೋಮುಭಾವನೆ ಕೆರಳಿಸಿದ ಪಾಪದಿಂದ ಪಾರಾಗಬಹುದು. ಕೋಮುಗಲಭೆಗಳಾಗಿ ಸಾವು-ನೋವು ಉಂಟಾದರೆ, ಸಾರ್ವಜನಿಕ ಆಸ್ತಿಪಾಸ್ತಿ ಹಾನಿಯಾದರೆ ಜಮೀರ್ ಯಾವುದೇ ಲಾಭವಿಲ್ಲ. ಬದಲಿಗೆ ಸಾರ್ವಜನಿಕ ಶಾಪಕ್ಕೆ ಗುರಿಯಾಗಬೇಕಾಗುತ್ತದೆ. ಅಷ್ಟಕ್ಕೂ ಜಮೀರ್ ಅವರಿಗೆ ಟಿಪ್ಪು ಸುಲ್ತಾನ್ ಬಗ್ಗೆ ಪ್ರೀತಿ, ಗೌರವ ಇದ್ದರೆ ಅದರಲ್ಲಿ ತಪ್ಪೇನೂ ಇಲ್ಲ. ಬೇಕಿದ್ದರೆ ಅವರ ಮನೆಗೋ, ಬೇರಾವುದೇ ಸ್ವಂತ ಕಟ್ಟಡಕ್ಕೋ ಅವರ ಹೆಸರಿಟ್ಟುಕೊಳ್ಳಲಿ. ಬೇಕಿದ್ದರೆ ಟಿಪ್ಪುವಿನ ಫ್ಯಾನ್ಸಿ ಡ್ರೆಸ್ ಹಾಕಿಕೊಂಡು ತಿರುಗಲಿ. ಯಾರೂ ಬೇಡ ಅನ್ನುವುದಿಲ್ಲ. ಆದರೆ ಹಜ್ ಭವನಕ್ಕೆ ಅಬ್ದುಲ್ ಕಲಾಂ ಅವರಂಥ ನಿಷ್ಕಳಂಕ ವ್ಯಕ್ತಿಗಳ ಹೆಸರಿಡುವ ಬಗ್ಗೆ ಚಿಂತನೆ ಮಾಡಲಿ. ಇದರಿಂದ ಜಮೀರ್ ಗೌರವವೂ ಹೆಚ್ಚುತ್ತದೆ.

ಲಗೋರಿ: ಗಿರಿಗಿಟ್ಲೆ ಆಡಿದಾಗ ತಲೆತಿರುಗಿಯೂ ಬೀಳಬಹುದು!

(ವಿಶ್ವವಾಣಿಯಲ್ಲಿ ಪ್ರಕಟಿತ)

Leave a Reply