ರಾಜ್ಯದಲ್ಲಿ ಮತ್ತೆ 20 – 20 ಅಖಾಡ?

ಡಿಜಿಟಲ್ ಕನ್ನಡ ಟೀಮ್:

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಮುಖ್ಯಮಂತ್ರಿ ಆಗಿ ವಿಶ್ವಾಸಮತ ಸೋತ ದಿನ ಹಾಗೂ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಪಕ್ಷ ವಿಶ್ವಾಸಮತ ಗೆದ್ದ ದಿನ ಜೆಡಿಎಸ್ ವಿರುದ್ಧ ತೀವ್ರ ವಾಗ್ದಾಳಿ ಮಾಡಿದ್ರು. ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಪಾಪ ಎಂದಿದ್ದ ಬಿ.ಎಸ್ ಯಡಿಯೂರಪ್ಪ, ಇನ್ಮುಂದೆ ಕಾಂಗ್ರೆಸ್ ವಿರುದ್ಧ ನಾವು ಹೋರಾಟ ಮಾಡೋದಿಲ್ಲ, ಇನ್ನೇನಿದ್ದರೂ ನಮ್ಮ ಹೋರಾಟ ಅಪ್ಪ-ಮಕ್ಕಳ ವಿರುದ್ಧ ಅಂತಾ ಘೋಷಣೆಯನ್ನೂ ಮಾಡಿದ್ರು. ಇದೀಗ ರಾಜಕೀಯ ಆಟಗಳು ಅದಲು ಬದಲಾಗುವ ಹಂತಕ್ಕೆ ಬರುತ್ತಿದ್ದು, ಮತ್ತೆ ಜೆಡಿಎಸ್ ಜೊತೆಗೂಡಿ ಬಿಜೆಪಿ ಟ್ವೆಂಟಿ-20 ಮ್ಯಾಚ್ ಆಡಲು ವೇದಿಕೆ ಸಜ್ಜು ಮಾಡಿಕೊಳ್ತಿದೆ. ಪಿಚ್ ರೆಡಿ ಮಾಡಲು ಮಣ್ಣು, ನೀರು ಹಾಕಿ ಪೋಷಣೆ ಮಾಡ್ತಿರೋದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ. ಈ ರೀತಿಯ ಅನುಮಾನ ಎಲ್ಲರನ್ನೂ ಕಾಡುತ್ತಿರೋದಕ್ಕೆ ಕಾರಣ ಬಿಜೆಪಿಯಲ್ಲಿ ನಡೆಯುತ್ತಿರುವ ಕ್ರಿಪ್ಷ ಬೆಳವಣಿಗೆಗಳು.

ಬೆಂಗಳೂರಿನಲ್ಲೇ ಇದ್ದ ಬಿಜೆಪಿ ರಾಜ್ಯಾಧ್ಯಕ್ಷ ಇದ್ದಕ್ಕಿದ್ದ ಹಾಗೆ ಏಕಾಏಕಿ ಗುಜರಾತ್‌ಗೆ ತೆರಳಲು ಅಹಮದಾಬಾದ್ ವಿಮಾನ ಏರಿದ್ರು. ಆಪ್ತ ಬಸವರಾಜ ಬೊಮ್ಮಾಯಿ ಜೊತೆಗೆ ತೆರಳಿದ ಯಡಿಯೂರಪ್ಪ, ಅಮಿತ್ ಶಾ ಜೊತೆ ಮಹತ್ವದ ಸಭೆ ನಡೆಸಿದ್ರು. ರಾಜ್ಯದ ಸಮ್ಮಿಶ್ರ ಸರ್ಕಾರದಲ್ಲಿ ಉಂಟಾಗಿರುವ ಒಡಕಿನ ಲಾಭ ಪಡೆಯಲು ಏನೆಲ್ಲಾ ಮಾಡಬಹುದು ಅನ್ನೋ ಬಗ್ಗೆಯೂ ಚರ್ಚೆಯಾಗಿದ್ದ, ಮಾಜಿ ಸಿಎಂ ಸಿದ್ದರಾಮಯ್ಯ ಗುಟ್ಟಾಗಿ ವ್ಯಕ್ತಪಡಿಸಿದ್ದ ಅಸಮಾಧಾನ ಬಹಿರಂಗವಾಗಿದೆ. ಇದು ಸರ್ಕಾರದ ಮೇಲೆ ಅತಿ ಹೆಚ್ಚು ಪರಿಣಾಮ ಬೀರುವ ಸಾಧ್ಯತೆಯಿದೆ. ಜೊತೆಗೆ ಸರ್ಕಾರಕ್ಕೆ ಸಿದ್ದರಾಮಯ್ಯ ಹಾವಳಿ ಹೀಗೆ ಮುಂದುವರಿಯುವ ಸಾಧ್ಯತೆಗಳೂ ಹೆಚ್ಚಿವೆ ಅನ್ನೋ ಅಭಿಪ್ರಾಯ ವ್ಯಕ್ತವಾಗಿದೆ. ಇನ್ನು ಕರ್ನಾಟಕ ಸಿಎಂ ಕುಮಾರಸ್ವಾಮಿ ಕೇಂದ್ರ ಸರ್ಕಾರದ ಜೊತೆ ಉತ್ತಮ ಸಂಬಂಧ ಹೊಂದಿದ್ದಾರೆ. ಸಿದ್ದರಾಮಯ್ಯ ಕಿರಿಕಿರಿ ಹೀಗೆ ಮುಂದುವರಿದರೆ ಲೋಕಸಭೆಗೂ ಮುನ್ನ ಅಥವಾ ಲೋಕಸಭೆ ಚುನಾವಣೆ ಬಳಿಕ ನಾವು ಸರ್ಕಾರ ರಚನೆ ಬಗ್ಗೆ ಚಿಂತಿಸುವ ಕಾಲ ಬರುತ್ತದೆ. ಕಾಂಗ್ರೆಸ್ – ಜೆಡಿಎಸ್ ಮೈತ್ರಿಯಾಗುತ್ತೋ ಅಥವಾ ಜೆಡಿಎಸ್ – ಬಿಜೆಪಿ ಮೈತ್ರಿಯಾಗುತ್ತೋ ಚಿಂತಿಸಬೇಡಿ ನಿಮ್ಮ ಪಾಡಿಗೆ ನೀವು ಲೋಕಸಭೆಗೆ ತಯಾರಾಗುತ್ತಿರಿ ಎನ್ನುವ ಸಂದೇಶ ನೀಡಿದ್ದಾರೆ ಎನ್ನಲಾಗಿದೆ.

ಈಗಾಗಲೇ ಮೈತ್ರಿ ಸರ್ಕಾರದಲ್ಲಿ ಮುಖ್ಯಮಂತ್ರಿ ಆಗಿರುವ ಕುಮಾರಸ್ವಾಮಿ, ಸಿಕ್ಕಿರುವ ಅಧಿಕಾರ ಬಿಟ್ಟುಕೊಟ್ಟು ಬೇರೆಯವರಿಗೆ ಅಧಿಕಾರದ ಚುಕ್ಕಾಣಿ ಹಿಡಿಯಲು ಬಿಡೋದಿಲ್ಲ. ಅಥವಾ ಕಾಂಗ್ರೆಸ್ ಎದುರು ಮಂಡಿಯೂರಿ ಆಡಳಿತ ನಡೆಸುವ ಜಾಯಮಾನವೂ ಅವರಲ್ಲಿಲ್ಲ. ಕೊನೆ ಪಕ್ಷ ವಿಧಾನಸಭೆ ವಿಸರ್ಜನೆ ಮಾಡಿ ಹೊಸದಾಗಿ ಜನಾದೇಶ ಪಡೆಯುವ ಪರಿಸ್ಥಿತಿಯಲ್ಲಿ ಯಾವ ರಾಜಕಾರಣಿಗಳು ಇಲ್ಲ. ಈ ಪರಿಸ್ಥಿತಿಯಲ್ಲಿ ಆದಷ್ಟು ಉತ್ತಮ ಕೆಲಸಗಳನ್ನು ಮಾಡುತ್ತಾ ದಿನ ದೂಡುವುದಷ್ಟೇ ಉಳಿದಿರುವ ಮಾರ್ಗ. ಆದರೆ‌ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷರಾಗಿದ್ದು, ಸಮಸ್ಯೆಗಳ ಪರಿಹಾರಕ್ಕೆ ಸೂಕ್ತ ಸೂತ್ರ ಕಂಡುಹಿಡಿಯಬೇಕಿತ್ತು. ಆದರೆ ಸ್ವತಃ ಸಿದ್ದರಾಮಯ್ಯನೇ ಸರ್ಕಾರಕ್ಕೆ ಸಮಸ್ಯೆ ಆಗಿರೋದು ಕಾದ ಕಬ್ಬಿಣದಲ್ಲಿ ಸಿಲುಕಿದಂತಾಗಿದೆ. ಕಾಂಗ್ರೆಸ್ ಹೈಕಮಾಂಡ್ ಕೂಡಲೇ ಮಧ್ಯ ಪ್ರವೇಶ ಮಾಡಿ ಸಿದ್ದರಾಮಯ್ಯ ಅವರನ್ನು ನಿಯಂತ್ರಣ ಮಾಡದಿದ್ದರೆ, ಕಮಲ ನಾಯಕರ ಯೋಜನೆ ಕೈಗೂಡುವುದು ಕಷ್ಟವೇನಲ್ಲ. ಸರ್ಕಾರದಲ್ಲಿ ಮೈತ್ರಿ ಬಿರುಕು ಹೆಚ್ಚಾಗುತ್ತಿದ್ದರೆ, ರಾಜ್ಯದ ಅಭಿವೃದ್ಧಿ ಹಾಗೂ ಕಾಂಗ್ರೆಸ್‌ನ ಅಸಹಾಕಾರ ಮುಂದಿಟ್ಟುಕೊಂಡು ಜೆಡಿಎಸ್ ಕೂಡ ಬಿಜೆಪಿ ಜೊತೆ ಹೆಜ್ಜೆ ಹಾಕಿದ್ರೆ ಅಚ್ಚರಿಯೂ ಅಲ್ಲ.

Leave a Reply