ಸರ್ಕಾರದ ಮೇಲೆ ಸಿದ್ದು ದಿನಕ್ಕೊಂದು ಬಾಂಬ್!

ಡಿಜಿಟಲ್ ಕನ್ನಡ ಟೀಮ್:

ಧರ್ಮಸ್ಥಳದ ಶಾಂತಿವನದಲ್ಲಿ ವಿಶ್ರಾಂತಿ ನೆಪದಲ್ಲಿ ರಾಜಕಾರಣದ ಬುಡ ಭದ್ರ ಮಾಡಿಕೊಳ್ಳುತ್ತಿರುವ ಸಿದ್ದರಾಮಯ್ಯ, ಮತ್ತೆ ರಾಜ್ಯ ಸರ್ಕಾರದ ಶಾಂತಿ ಕದಡುವ ಹೇಳಿಕೆ ನೀಡಿದ್ದಾರೆ. ಸಮ್ಮಿಶ್ರ ಸರಕಾರ 5 ವರ್ಷ ಉಳಿಯೋದು ಕಷ್ಟ ಎಂದಿರುವ ಸಿದ್ದರಾಮಯ್ಯ ಹೇಳಿಕೆ ಭಾರೀ ಸಂಚಲನ ಮೂಡಿಸಿದ್ದು ಸಿದ್ದರಾಮಯ್ಯ ಅವರೇ ನೇರವಾಗಿ ನಿಂತು ಸರ್ಕಾರ ಉರುಳಿಸಲು ಯೋಜನೆ ರೂಪಿಸಿದ್ದಾರಾ ಅನ್ನೋ ಪ್ರಶ್ನೆ ಮೂಡಿದೆ. ಯಾಕಂದ್ರೆ ಸಾಲಮನ್ನಾ, ಹೊಸ ಬಜೆಟ್ ಸೇರಿದಂತೆ ಹಲವಾರು ವಿಷಯಗಳಲ್ಲಿ‌ ಸಮ್ಮಿಶ್ರ ಸರ್ಕಾರ ಸಿದ್ದರಾಮಯ್ಯ ಮಾತಿಗೆ ಕವಡೆ ಕಾಸಿನ ಕಿಮ್ಮತ್ತು ಕೊಡ್ತಿಲ್ಲ. ಇದೇ ಕಾರಣಕ್ಕೆ ಧರ್ಮಸ್ಥಳದ ಪ್ರಕೃತಿ ಚಿಕಿತ್ಸಾಲಯ ಸೇರಿಕೊಂಡು ತಂತ್ರಗಾರಿಕೆ ಮಾಡ್ತಿರುವ ಸಿದ್ದರಾಮಯ್ಯ ಅವರ ಆಪ್ತ ಮಾತುಕತೆ ಮೊನ್ನೆಯಷ್ಟೇ ಬಹಿರಂಗವಾಗಿತ್ತು. ಆ ಬಳಿಕ ಮುಖ್ಯಮಂತ್ರಿ ಕುಮಾರಸ್ವಾಮಿ ಕೂಡ ತಿರುಗೇಟು‌ನೀಡುವ ಮೂಲಕ ನಾವೇನು ಯಾರ ಹಂಗಿನಲ್ಲೂ ಇಲ್ಲ, ರೈತರ ಸಮಸ್ಯೆ ನಿವಾರಣೆ ಮಾಡುವುದು ನನ್ನ ಉದ್ದೇಶ. ಯಾರು ಅಡ್ಡಿ ಬಂದರು ಬಜೆಟ್ ಮಂಡನೆ ತಡೆಯಲು ಆಗಲ್ಲ ಎಂದು‌ ಎದಿರೇಟು‌ ನೀಡಿದ್ರು.

ಇವತ್ತು ಮತ್ತೊಂದು ವೀಡಿಯೋ ರಿಲೀಸ್ ಆಗಿದ್ದು, ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದಿರುವ ಕಾಂಗ್ರೆಸ್ ಜೆಡಿಎಸ್‌ನ ಸಮ್ಮಿಶ್ರ ಸರ್ಕಾರ ಐದು ವರ್ಷ ಉಳಿಯೋದು ಡೌಟು. ಪಾರ್ಲಿಮೆಂಟ್ ಎಲೆಕ್ಷನ್ ಆದ ಬಳಿಕ ನೋಣೋಣ ಎಂದು ರಾಗ ಹಾಡಿದ್ದಾರೆ. ಅಂದರೆ ಲೋಕಸಭಾ ಚುನಾವಣೆ ಸಾಧಕ ಬಾಧಕಗಳನ್ನು ನೋಡಿಕೊಂಡು ಮೈತ್ರಿ ಮುರಿಯೋಣ ಎನ್ನುವ ನಿರ್ಧಾರಕ್ಕೆ ಸಿದ್ದರಾಮಯ್ಯ ಅಂಡ್ ಟೀಂ ಬಂದಂತೆ ಕಾಣಿಸುತ್ತಿದೆ. ಸಿದ್ದರಾಮಯ್ಯ ಸದ್ಯ ರಾಜ್ಯ ರಾಜಕಾರಣದಲ್ಲಿ ಕಾಂಗ್ರೆಸ್ ವಿರೋಧಿಸಿ ತನ್ನದೇ ಪಕ್ಷ ಸ್ಥಾಪನೆ ಕಷ್ಟವಾಗಿದೆ. ಈಗಿನ ಸ್ಥಿತಿಯಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಸಿದ್ದರಾಮಯ್ಯ ಮಾತು ನಡೆಯೋದು ಕಷ್ಟವಾಗಿದೆ. ಆಪ್ತರಿಗೆ ಕೇಳಿದ ಸ್ಥಾನಮಾನ ಸಿಗೋದು ಡೌಟ್. ರಾಷ್ಟ್ರೀಯ ಮಟ್ಟದಲ್ಲಿ ಲಾಭನಷ್ಟ ಲೆಕ್ಕಾಚಾರ ಹಾಕುತ್ತಿರುವ ಕಾಂಗ್ರೆಸ್ ಪಕ್ಷ ಜೆಡಿಎಸ್‌ಗೆ ಬೇಷರತ್ ಬೆಂಬಲ ನೀಡಿದೆ. ಆದ್ರೀಗ ಕಾಂಗ್ರೆಸ್ ಪಕ್ಷದ ನಾಯಕರೇ ಸಿಡಿದು ಬೀಳ್ತಿದ್ದು ಹೈಕಮಾಂಡ್ ಏನು ಮಾಡಲಾರದ ಸ್ಥಿತಿ ತಲುಪಿದೆ.

ಜೆಡಿಎಸ್ ಪಕ್ಷದಲ್ಲೇ ಬೆಳೆದು ನಾಯಕ ಎನಿಸಿಕೊಂಡ ಸಿದ್ದರಾಮಯ್ಯ, ಆ ಬಳಿಕ ಜೆಡಿಎಸ್ ವಿರೋಧಿ ರಾಜಕಾರಣ ಮಾಡುತ್ತಿದ್ರು. ಆದ್ರೆ ಅನಿವಾರ್ಯ ಪರಿಸ್ಥಿತಿಯಲ್ಲಿ ಜೆಡಿಎಸ್ ಜೊತೆಗೆ ಹೊಂದಾಣಿಕೆ ಮಾಡಿಕೊಂಡು ಹೋಗುವ ಸ್ಥಿತಿ ತಲುಪಿದ್ದು, ಮನಸ್ಸು ಒಪ್ಪದಿದ್ರೂ ಹೊಂದಾಣಿಕೆಯ ಸೂತ್ರಕ್ಕೆ ತಲೆಯಾಡಿಸಿದ್ರು. ಆದ್ರೆ ಕುಮಾರಸ್ವಾಮಿ ಸರ್ಕಾರ ರೈತರ ಸಾಲ ಮನ್ನಾ ಸೇರಿದಂತೆ ಹಲವು ಯೋಜನೆಗಳನ್ನು ಜಾರಿ ಮಾಡುವ ಮೂಲಕ ಜನಪ್ರಿಯತೆ ಗಳಿಸಿದ್ರೆ ಹಳೇ ಮೈಸೂರು ಭಾಗದಲ್ಲಿ ನಾವು ಅಂದರೆ ಕಾಂಗ್ರೆಸ್ ಉಳಿಯೋದೇ ಅನುಮಾನ ಅನ್ನೋ ಕಾರಣಕ್ಕೆ ಜೆಡಿಎಸ್ ಸರ್ಕಾರ ಬೀಳಿಸುವ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಳ್ಳಲು ಯೋಜನೆ ರೂಪಿಸಿದ್ದು, ಒಂದು ವೇಳೆ ಸರ್ಕಾರ ಬೀಳಿಸಿದ್ರೆ ಮುಳುವಾಗುವ ಸಾಧ್ಯತೆ ಹೆಚ್ಚಾಗಿದೆ. ಇದೇ ಕಾರಣಕ್ಕೆ ಚುನಾವಣೆ ಮುಗಿಯುವ ತನಕ ಯಾವುದೇ ನಿರ್ಧಾರ ಕೈಗೊಳ್ಳೋದು ಬೇಡ. ಚುನಾವಣೆ ಬಳಿಕ ಸರ್ಕಾರ ಉರುಳಿಸೋಣ ಎಂದು ಆಪ್ತರ ಬಳಿ ಹೇಳಿಕೊಂಡಿದ್ದಾರೆ ಎನ್ನಲಾಗಿದೆ. ಅತಂತ್ರ ಸರ್ಕಾರ ಆತಂಕದಲ್ಲೇ ಅಧಿಕಾರ ಮಾಡುವ ಸ್ಥಿತಿಯಲ್ಲಿ ಇದ್ದು, ಯಾವ ಕ್ಷಣದಲ್ಲಿ ಏನು ಬೇಕಾದರೂ ಆಗಬಹುದಾಗಿದೆ.

Leave a Reply