ಟ್ರಂಪ್ ಗೆ ತಿರುಗುಬಾಣವಾಗುತ್ತಿದೆ ಸುಂಕ ಸಮರ!

ಡಿಜಿಟಲ್ ಕನ್ನಡ ಟೀಮ್:

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಆರಂಭಿಸಿದ ಸುಂಕ ಸಮರ ಈಗ ಅವರಿಗೆ ತಿರುಗುಬಾಣವಾಗುತ್ತಿದೆ. ಭಾರತ ಇತ್ತೀಚೆಗೆ ಅಮೆರಿಕದ 29 ಉತ್ಪನ್ನಗಳ ಮೇಲೆ ಸುಂಕ ಏರಿಕೆ ಮಾಡಿ ತೊಡೆ ತಟ್ಟಿತ್ತು.

ಈ ಹಿಂದೆ ಚೀನಾ ಉತ್ಪನ್ನಗಳ ಮೇಲೆ ಸುಂಕ ಹೆಚ್ಚಿಸಿ ವ್ಯಾಪಾರ ಯುದ್ಧ ಆರಂಭಿಸಿದ ಟ್ರಂಪ್, ಇತ್ತೀಚೆಗೆ ಭಾರತದ ಉತ್ಪನ್ನಗಳ ಮೇಲೆ ಸುಂಕ ಹೆಚ್ಚಿಸಿದ್ದರು. ಅಮೆರಿಕದ ಏಟಿಗೆ ಪ್ರತಿಯಾಗಿ ಈಗ ಭಾರತ ಎದಿರೇಟು ಕೊಟ್ಟಿದ್ದು, ಅಮೆರಿಕ ಮುಟ್ಟಿ ನೋಡುಕೊಳ್ಳುತ್ತಿದೆ. ಭಾರತದ ನಡೆಯಿಂದ ಕಂಗೆಟ್ಟ ಟ್ರಂಪ್ ಸುಂಕ ಸಮರದಲ್ಲಿ ಅಮೆರಿಕಕ್ಕೆ ಸಡ್ಡು ಹೊಡೆದ ರಾಷ್ಟ್ರಗಳ ವಿರುದ್ಧ ಕಿಡಿಕಾರಿದ್ದಾರೆ.

‘ನಾನು ಜಿ7 ಶೃಂಗ ಸಭೆಯಲ್ಲಿ ಸುಂಕ ಇಲ್ಲದೇ ವ್ಯಾಪಾರ ಮಾಡುವ ಬಗ್ಗೆ ಪ್ರಸ್ತಾಪ ಮಾಡಿದ್ದೆ. ಆದರೆ ಅದರ ಬಗ್ಗೆ ಯಾರೂ ಮಾತನಾಡುವುದಿಲ್ಲ. ಕೆಲವು ರಾಷ್ಟ್ರಗಳು ಸುಂಕ ಇಲ್ಲದೇ ವ್ಯಾಪಾರ ಮಾಡುತ್ತಿವೆ. ಕೆಲವು ರಾಷ್ಟ್ರಗಳು ಅದರ ಬಗ್ಗೆ ಮಾತೇ ಆಡುತ್ತಿಲ್ಲ. ನಾವು ಇದರ ಬಗ್ಗೆ ಯೋಚಿಸಿ ನಿರ್ಧಾರ ಕೈಗೊಳ್ಳುತ್ತೇವೆ. ನಮ್ಮನ್ನು ಎಲ್ಲಾ ರಾಷ್ಟ್ರಗಳು ಬ್ಯಾಂಕ್‍ ಥರ ಉಪಯೋಗಿಸಿಕೊಂಡು ಲೂಟಿ ಮಡುತ್ತಿವೆ. ಕಳೆದ ವರ್ಷ ನಾವು ಚೀನಾದೊಂದಿಗೆ ವ್ಯಾಪಾರ ಮಾಡಿ 500 ಬಿಲಿಯನ್ ಡಾಲರ್ ಹಾಗೂ ಯೂರೋಪಿಯನ್ ಒಕ್ಕೂಟಗಳೊಂದಿಗಿನ ವ್ಯಾಪಾರದಲ್ಲಿ 151 ಬಿಲಿಯನ್ ಡಾಲರ್ ನಷ್ಟ ಅನುಭವಿಸಿದ್ದೇವೆ’ ಎಂದು ಟ್ರಂಪ್ ಕಿಡಿ ಕಾರಿದ್ದಾರೆ.

ಭಾರತ ಸಹಿತ ಕೆಲವು ರಾಷ್ಟ್ರಗಳು ನಮ್ಮ ಉತ್ಪನ್ನಗಳಿಗೆ ಶೇ. 100 ರಷ್ಟು ತೆರಿಗೆ ವಿಧಿಸುತ್ತಿದೆ. ಅದನ್ನು ತೆರವುಗೊಳಿಸಬೇಕು ಎಂದು ಟ್ರಂಪ್ ಆಗ್ರಹಿಸಿದ್ದು, ಯೂರೋಪಿಯನ್ ಒಕ್ಕೂಟ ದೇಶಗಳೊಂದಿಗೆ ವ್ಯಾಪಾರ ಅಸಮತೋಲನ ಇದೆ ಎನ್ನುವುದನ್ನು ನಿರಾಕರಿಸಿದ್ದಾರೆ. ಭಾರತ ಹಾಗೂ ಅಮೆರಿಕ ನಡುವೆ ದ್ವಿಪಕ್ಷೀಯ ಮಾತುಕತೆಗೆ ಕೆಲವೇ ದಿನಗಳು ಬಾಕಿ ಇರುವಾಗ ಟ್ರಂಪ್ ಈ ಹೇಳಿಕೆ ನೀಡಿರುವುದು ಕುತೂಹಲ ಮೂಡಿಸಿದೆ.

Leave a Reply