ಪ್ರಧಾನಿ ನರೇಂದ್ರ ಮೋದಿಗೆ 1 ವರ್ಷ ಜೈಲಿನ ಅನುಭವ?

ಡಿಜಿಟಲ್ ಕನ್ನಡ ಟೀಮ್:

ಈ ತಲೆಬರಹ ನೋಡಿ ಕೆಲವರಿಗೆ ಅಚ್ಚರಿ ಆಗಿರಬಹುದು, ಇನ್ನೂ ಕೆಲವರಿಗೆ ಕೋಪ ಬಂದಿರಬಹುದು. ಪ್ರಧಾನಿ ಮೋದಿಗೆ ಒಂದು ವರ್ಷ ಜೈಲು ಹೇಗೆ ಅನ್ನೋದನ್ನು ಹೇಳ್ತೀವಿ ಕೇಳಿ…

ಪ್ರಧಾನಿ ನರೇಂದ್ರ ಮೋದಿ ಉಗ್ರರ ಹಿಟ್‌ಲಿಸ್ಟ್‌ನಲ್ಲಿ ಇರುವ ಗಣ್ಯವ್ಯಕ್ತಿಗಳಲ್ಲಿ ಮೊದಲಿಗರು ಎಂದರೆ ತಪ್ಪಲ್ಲ. ಇತ್ತೀಚಿಗಷ್ಟೇ ಮುಂಬೈನ ಭೀಮಾ ಕೋರೆಂಗಾವ್ ಗಲಭೆ ಪ್ರಕರಣದಲ್ಲಿ ಬಂಧನವಾಗಿದ್ದ ಆರೋಪಿಗಳ ವಿಚಾರಣೆ ವೇಳೆ ಕೆಲವೊಂದು ಸ್ಫೋಟಕ ಮಾಹಿತಿ‌ ಹೊರಬಿದ್ದಿತ್ತು. ಅದರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ರಾಜೀವ್ ಗಾಂಧಿ ಹತ್ಯೆ ಮಾದರಿಯಲ್ಲಿ ಕೊಲೆ ಮಾಡಲು ಸ್ಕೆಚ್ ಹಾಕಿಕೊಂಡಿದ್ದಾರೆ ಅನ್ನೋ ಮಾಹಿತಿಯೂ ಲಭ್ಯವಾಗಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ಕೆಂದ್ರ ಗೃಹ ಇಲಾಖೆ ಪ್ರಧಾನಿ ಭದ್ರತೆಯನ್ನು ಗಣನೀಯ ಪ್ರಮಾಣದಲ್ಲಿ ಹೆಚ್ಚಳ ಮಾಡಿ ಆದೇಶ ಹೊರಡಿಸಿದ್ದಾರೆ.

ಲೋಕಸಭೆ ಚುನಾವಣೆಯನ್ನೇ ಟಾರ್ಗೆಟ್ ಮಾಡಿಕೊಂಡಿರುವ ಆಗಂತುಕರು, ಮುಂದಿನ ವರ್ಷದ ಚುನಾವಣೆ ಆಸುಪಾಸಿನಲ್ಲಿ ಹತ್ಯೆ ಮಾಡಲು ಯೋಜನೆ ರೂಪಿಸಿದ್ದಾರೆ ಅನ್ನೋ ಮಾಹಿತಿ ಗುಪ್ತಚರ ಇಲಾಖೆಗಳಿಗೆ ಸಿಕ್ಕಿದೆ. ಹಾಗಾಗಿ ಮುಂದಿನ ಒಂದು ವರ್ಷಗಳ ಕಾಲ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡೋದಕ್ಕೆ ತುಂಬಾ ಹರಸಾಹಸವನ್ನೇ ಮಾಡಬೇಕು. ಪ್ರಧಾನಿ ಬೇರೆ ರಾಜ್ಯಗಳ ಪ್ರವಾಸ ಕೈಗೊಂಡಾಗ ಅಲ್ಲಿನ ಸಚಿವರು, ಸರ್ಕಾರಿ ಅಧಿಕಾರಿಗಳು ಕೂಡ ನೇರವಾಗಿ ಪ್ರಧಾನಿ ಭೇಟಿ ಮಾಡಲು ಅವಕಾಶವಿಲ್ಲ. ಮೋದಿ ಭದ್ರತೆಯ ಹೊಣೆಗಾರಿಕೆ ಹೊತ್ತಿರುವ ಎಸ್‌ಪಿಜಿ ಅಧಿಕಾರಿಗಳು ಅವಕಾಶ ಕೊಟ್ಟರೆ ಮಾತ್ರ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಬಹುದು. ಈ ವೇಳೆಯಲ್ಲೂ ಸಚಿವರು ಅಥವಾ ಅಧಿಕಾರಿಗಳನ್ನು ಸಂಪೂರ್ಣವಾಗಿ ತಪಾಸಣೆ ಮಾಡುವ ಅಧಿಕಾರ ಎಸ್‌ಪಿಜಿ ಅಧಿಕಾರಿಗಳಿಗೆ ಇರುತ್ತದೆ ಎನ್ನುವ ಅಂಶ ಆದೇಶದಲ್ಲಿದೆ.

ಈ ಹಿಂದೆ ತನ್ನ ಮಗ ಸಿದ್ದಾರ್ಥ ಗೌತಮನಿಗೆ ಹೊರಗಿನ ಪ್ರಪಂಚದ ಕಷ್ಟ ಸುಖಗಳ ಬಗ್ಗೆ ಗೊತ್ತಾಗದಿರಲಿ ಅನ್ನೋ ಕಾರಣಕ್ಕೆ ಅವರ ತಂದೆ ರಾಜ ಶುದ್ಧೋದನ ಅರಮನೆಯಲ್ಲಿ ಬೇಕಾದ ವ್ಯವಸ್ಥೆ ಮಾಡಿ ಸಾಕಿದ್ದರು. ಆದರೆ ಕೊನೆಗೆ ಅದೇ ಸಿದ್ದಾರ್ಥ ಗೌತಮ, ನನ್ನನ್ನು ಸೆರೆಯಲ್ಲಿಟ್ಟು ಯಾಕೆ ಸಾಕಿದಿರಿ ಎಂದು ತಂದೆಯನ್ನು ಪ್ರಶ್ನಿಸಿದ್ದ. ಅದೇ ರೀತಿ ಪಾಕಿಸ್ತಾನ ಮಾಜಿ ಅಧ್ಯಕ್ಷ ಫರ್ವೇಜ್ ಮುಷರಫ್ ಅವರನ್ನು ಸರ್ಕಾರ ಭ್ರಷ್ಟಾಚಾರ ಆರೋಪದಲ್ಲಿ ಕೆಲವು ದಿನಗಳ ಕಾಲ ಗೃಹ ಬಂಧನದಲ್ಲಿ ಇರಿಸಿತ್ತು. ಗೃಹ ಬಂಧನ ಎಂದರೆ ಕಂಬಿಗಳ ಹಿಂದೆ ಕೂಡಿ ಹಾಕುವುದಲ್ಲ, ಅವರದೇ ಮನೆಯಲ್ಲಿ, ಒಂಟಿಯಾಗಿ ಜೀವನ ನಡೆಸುವುದು. ಅಧಿಕಾರಿಗಳು ಒಪ್ಪಿದರೆ ಕೆಲವೊಂದು ದಿನನಿತ್ಯದ ಕೆಲಸ ಮಾರ್ಗಗಳನ್ನು ಮಾಡಲು ಅಡ್ಡಿಯಿಲ್ಲ.

ಇದೀಗ ನಮ್ಮ ಪ್ರಧಾನಿ‌ ನರೇಂದ್ರ ಮೋದಿ ಅವರಿಗೆ ಭದ್ರತೆ ನೆಪದಲ್ಲಿ ಅವರನ್ನು ಜನಸಂಪರ್ಕದಿಂದ ದೂರ ಮಾಡಲಾಗ್ತಿದೆ. ಸ್ವತಂತ್ರ ದಿನಾಚರಣೆಯ ವೇಳೆ ಪ್ರಧಾನಿ ಮಕ್ಕಳ ಜೊತೆ ಬೆರೆಯುತ್ತಾ ಸಂತೋಷದಿಂದ ಇರುತ್ತಿದ್ದರು, ಆದರೆ ಈ ಬಾರಿ ಅವಕಾಶ ಇರುವುದಿಲ್ಲ ಎನಿಸುತ್ತದೆ. ಜೊತೆಗೆ ಕಳೆದ ನಾಲ್ಕು ವರ್ಷ ಕೆಂಪು ಕೋಟೆ ಮೇಲೆ ಗುಂಡು ನಿರೋಧಕ ಕವಚದ ಬಾಕ್ಸ್ ಹಾಕಿಕೊಳ್ಳದೆ ಪ್ರಧಾನಿ ಭಾಷಣ ಮಾಡ್ತಿದ್ರು. ಈ ವರ್ಷ ಅದಕ್ಕೂ ಅಧಿಕಾರಿಗಳು ತಡೆಯೊಡ್ಡುವ ಕೆಲಸ ಮಾಡುವ ಸಾಧ್ಯತೆಯಿದೆ. ಚುನಾವಣೆಗಳಲ್ಲಿ ರೋಡ್ ಶೋಗಳನ್ನು ಮಾಡದೆ ಕೇವಲ ರ‌್ಯಾಲಿಗಳನ್ನು ಮಾತ್ರ ಮಾಡುವಂತೆ ಈಗಾಗಲೇ ಅಧಿಕಾರಿಗಳು‌ ಸೂಚನೆ ರವಾನಿಸಿದ್ದಾರೆ. ಒಟ್ಟಾರೆ ದೇಶದ ಪ್ರಧಾನಿ ಆಗಿರುವ ನರೇಂದ್ರ ಮೋದಿ ಮುಂದಿನ ಒಂದು ವರ್ಷಗಳ ಕಾಲ ಸ್ವತಂತ್ರ ಕಳೆದುಕೊಂಡು ಅಧಿಕಾರಿಗಳ ತಾಳಕ್ಕೆ ತಕ್ಕಂತೆ ಕೆಲಸ ಮಾಡುವ ಕೈಗೊಂಬೆ ಆಗಲಿದ್ದಾರೆ. ಇದನ್ನು ಒಂದು ರೀತಿಯ ಜೈಲು ಎಂದರೂ ತಪ್ಪೇನಾಗುವುದಿಲ್ಲ.‌ಆದರೆ ತಪ್ಪು ಮಾಡಿ ಜೈಲು ಶಿಕ್ಷೆಯಲ್ಲ, ಬದಲಿಗೆ‌ ಭಯೋತ್ಪಾದಕರ ಭೀತಿಯಲ್ಲಿ ಈ ಕ್ರಮ ಅನಿವಾರ್ಯವಾಗಿದೆ.

ಮೇಲೆ ನೀಡಲಾದ ಎರಡೂ ಉದಾಹರಣೆ ಬೇರೆ ಆಯಾಮದ್ದಾಗಿವೆ. ಬುದ್ಧನನ್ನು ಬಂಗಾರದ ಪಂಜರದಲ್ಲಿ ಇಟ್ಟರೆ, ಮುಷರಫ್ ರನ್ನು ಕಾನೂನಿನ ಪಂಜರದಲ್ಲಿ ಇರಿಸಲಾಗಿತ್ತು. ಈಗ ಮೋದಿ ಅವರನ್ನು ಭದ್ರತೆಯ ಪಂಜರದಲ್ಲಿ ಇರಿಸಲಾಗುತ್ತಿದೆ.

Leave a Reply