ಸಿದ್ದರಾಮಯ್ಯಗೆ ವಾರ್ನಿಂಗ್.. ಕೇಳದಿದ್ರೆ ಮೂಗುದಾರ!

ಡಿಜಿಟಲ್ ಕನ್ನಡ ಟೀಮ್:

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯ ಸರ್ಕಾರದ ವಿರುದ್ಧ ನೇರಾ ನೇರ ಅಖಾಡಕ್ಕೆ ಎಂಟ್ರಿ ಕೊಡುವ ಸಾಧ್ಯತೆ ಕಾಣಿಸುತ್ತಿದೆ. ಕಳೆದ 12 ದಿನಗಳ ಹಿಂದೆ ಹೊಸ ಬಜೆಟ್‌ಗೆ ವಿರೋಧಿಸಿದ್ದ ಸಿದ್ದರಾಮಯ್ಯ ರೈತರ ಸಾಲ ಮನ್ನಾ ಮಾಡುವ ನಿರ್ಧಾರವನ್ನೂ ಸಮನ್ವಯ ಸಮಿತಿ ಸಭೆಯಲ್ಲಿ ವಿರೋಧಿಸಿದ್ದರು. ಸಿದ್ದರಾಮಯ್ಯ ಮಾತನ್ನು ನಿರ್ಲಕ್ಷ್ಯ ಮಾಡಿದ ಹಾಲಿ ಸಿಎಂ ಕುಮಾರಸ್ವಾಮಿ, ರಾಹುಲ್ ಗಾಂಧಿ ಜೊತೆ ಚರ್ಚೆ ಮಾಡಿದ್ರು. ಹೊಸ ಬಜೆಟ್‌ ಹಾಗೂ ಸಾಲಮನ್ನಾಗೆ ರಾಹುಲ್ ಒಪ್ಪಿದ್ದಾರೆ ಎಂದು ಹೇಳಿಕೆಯನ್ನೂ ಕೊಟ್ಟಿದ್ರು. ಇದ್ರಿಂದ ಮತ್ತಷ್ಟೂ ಕೆರಳಿದ್ದ ಸಿದ್ದರಾಮಯ್ಯ, ಪ್ರಕೃತಿ ಚಿಕಿತ್ಸೆ ನೆಪದಲ್ಲಿ ಧರ್ಮಸ್ಥಳದ ಶಾಂತಿವನದಲ್ಲಿ ಬೀಡುಬಿಟ್ರು. ಆದ್ರೆ ದಿನಕ್ಕೆ ಒಬ್ಬರಂತೆ ಶಾಸಕರು, ಸಚಿವರು ಬೆಂಬಲಿಗರನ್ನು ಕರೆಸಿಕೊಂಡು ಸರ್ಕಾರದ ಮೇಲಿನ ಅತೃಪ್ತಿ ಬಗ್ಗೆ ಮಾತನಾಡುತ್ತಾ ಸಾಗಿದ್ರು. ಮೊಬೈಲ್ ರೆಕಾರ್ಡಿಂಗ್ ಯಾರೋ ಮಾಡಿಕೊಂಡಿದ್ದಾರೆ ಎನ್ನುವಂತೆ ವೀಡಿಯೋ ಮಾಡಿಸಿ ಬಿಡುಗಡೆ ಮಾಡುವ ಮೂಲಕ ಜಾಣತನ ಮೆರೆದರು. ಇದೀಗ ನಿನ್ನೆ ಓರ್ವ ಸಚಿವ ಸೇರಿ 10 ರಿಂದ 12 ಮಂದಿ ಶಾಸಕರು ವಿಶೇಷ ವಿಮಾನ ಮೂಲಕ ಹೋಗಿ ಭೇಟಿ ಮಾಡಿದ್ರು. ಸಿದ್ದರಾಮಯ್ಯನನ್ನು ನಿರ್ಲಕ್ಷ್ಯ ಮಾಡಿದ್ರೆ ಸರ್ಕಾರ ಉಳಿಯಲ್ಲ ಎನ್ನುವ ಮೂಲಕ ಖಡಕ್ ಸಂದೇಶ ರವಾನಿಸಿದ್ದಾರೆ.

ಇದೀಗ ಸರ್ಕಾರಕ್ಕೆ ಕುತ್ತಿಗೆಗೆ ಬಂದಿದ್ದು, ಸಿದ್ದರಾಮಯ್ಯ ಅವರನ್ನು ನಿಯಂತ್ರಣ ಮಾಡಲು ಮುಂದಾಗಿದೆ. ಈಗಾಗಲೇ ಡಿಸಿಎಂ ಪರಮೇಶ್ವರ್ ಅವರಿಗೆ ಸ್ಪಷ್ಟ ಸಂದೇಶ ರವಾನೆಯಾಗಿದ್ದು, ಸಚಿವ ಸಭೆ ನಡೆಸುತ್ತಿದ್ದಾರೆ. ಆ ಬಳಿಕ ಸಚಿವರ ಅಭಿಪ್ರಾಯ ಪಡೆದು ಶಾಸಕರ ಸಭೆ ನಡೆಸಿ, ಶಾಸಕಾಂಗ ಪಕ್ಷದ ನಾಯಕನ ಸ್ಥಾನದಿಂದ ದೂರ ಇಡುವ ಕೆಲಸ ಮಾಡಲಾಗುತ್ತದೆ. ಸಿದ್ದರಾಮಯ್ಯ ಅವರನ್ನು ಏಕಾಏಕಿ ಪಕ್ಷದ ಕೆಲಸ ಕಾರ್ಯಗಳಿಂದ ದೂರ ಇಡುವ ಧೈರ್ಯ ಕಾಂಗ್ರೆಸ್ ಹೈಕಮಾಂಡ್‌ಗೆ ಸದ್ಯಕ್ಕೆ ಇಲ್ಲ. ಹಾಗಾಗಿ‌ ಜೆಡಿಎಸ್ ಜೊತೆ ಹೊಂದಾಣಿಕೆ ಮಾಡಿಕೊಂಡು ಹೋಗುವಂತೆ ಮತ್ತೊಮ್ಮೆ ಹೈಕಮಾಂಡ್ ಸೂಚಿಸಲಿದೆ ಎನ್ನಲಾಗಿದೆ. ಒಂದು ವೇಳೆ ಆಸ್ಪತ್ರೆಯಿಂದ ಹೊರಬಂದ ಬಳಿಕ ಮತ್ತೆ ಸರ್ಕಾರಕ್ಕೆ ಮುಜುಗರ ಆಗುವಂತೆ ಮಾತನಾಡಿದ್ರೆ ಶಾಸಕಾಂಗ ಪಕ್ಷದ ನಾಯಕನ ಸ್ಥಾನದಿಂದ ಇಳಿಸುವ ಸಾಧ್ಯತೆ ದಟ್ಟವಾಗಿವೆ. ಶಾಂತಿವನದಲ್ಲಿದ್ದ ಸಿದ್ದರಾಮಯ್ಯ ಅವರಿಗೆ ಈಗಾಗಲೇ ಪರಮೇಶ್ವರ್ ಮೂಲಕ ಎಚ್ಚರಿಕೆ ಸಂದೇಶ ರವಾನೆಯಾಗಿತ್ತು. ಆ ಬಳಿಕವೂ ಸಿದ್ದರಾಮಯ್ಯ ಅವರ ಮತ್ತೊಂದು ವೀಡಿಯೋ ರಿಲೀಸ್ ಆಗಿತ್ತು. ಈ ಕಾರಣಕ್ಕಾಗಿಯೇ ಇಂದು ಸಚಿವರ ಸಭೆ ನಡೆಸಲು ಪರಮೇಶ್ವರ್‌ಗೆ ಸೂಚನೆ ಬಂದಿದೆ ಎನ್ನಲಾಗಿದೆ.

ಹೈಕಮಾಂಡ್ ಬಳಿ ದೇವೇಗೌಡರ ಡಿಮ್ಯಾಂಡ್?

ಈಗಾಗಲೇ ಸಿದ್ದರಾಮಯ್ಯ ಮಾತಿಗೆ ಎದಿರೇಟು ನೀಡದಂತೆ ಸಿಎಂ ಕುಮಾಸ್ವಾಮಿಗೆ ಸೂಚನೆ ಕೊಟ್ಟಿರುವ ಮಾಜಿ ಪ್ರಧಾನಿ ದೇವೇಗೌಡರು, ಕಾಂಗ್ರೆಸ್ ಹೈಕಮಾಂಡ್ ಮೂಲಕ ಸಿದ್ದರಾಮಯ್ಯನನ್ನು ಹತೋಟಿಗೆ ತರಲು ಯೋಜನೆ ರೂಪಿಸಿದ್ದಾರೆ. ಒಂದು ವೇಳೆ ಸಿದ್ದರಾಮಯ್ಯ ತನ್ನ ಬೆಂಬಲಿಗರ ಜೊತೆ ಸೇರಿಕೊಂಡು ಸರ್ಕಾರ ಬೀಳಿಸಿದ್ರೆ ಬೀಳಿಸಲಿ ಅದರಿಂದ ಜೆಡಿಎಸ್‌ಗೆ ನಷ್ಟವೇನು ಆಗೋದಿಲ್ಲ, ಆದರೆ ಮಾತಿಗೆ ಎದುರೇಟು ನೀಡುತ್ತಾ ರಾಜ್ಯದ ಜನರ ಮುಂದೆ ನಾವೂ ಬೆತ್ತಲಾಗೋದು ಬೇಡ, ತಾಳ್ಮೆ ಇರಲಿ ಎಂದು ಸಿಎಂ ಕುಮಾರಸ್ವಾಮಿಗೆ ಖಡಕ್ ಸೂಚನೆ ನೀಡಿದ್ದಾರೆ. ಹೀಗಾಗಿಯೇ ಕುಮಾರಸ್ವಾಮಿ ಮಾಧ್ಯಮದ ಎದುರು ಭಿನ್ನಮತೀಯ ಚಟುವಟಿಕೆ ಬಗ್ಗೆ ಉಸಿರು ಬಿಡದೆ ನನಗೆ ಬೇರೆ ಕೆಲಸಗಳಿವೆ ಎಂದು ಹೇಳಿಕೆ ಕೊಟ್ಟಿದ್ದು.

ಸಮನ್ವಯ ಸಮಿತಿ ಅಧ್ಯಕ್ಷರಾದವರು ಎರಡೂ ಪಕ್ಷಗಳ ನಡುವೆ ಎದಿರಾಗುವ ಸಮಸ್ಯೆಗಳನ್ನು ನಿವಾರಣೆ ಮಾಡಬೇಕೇ ಹೊರತು, ಸಮಸ್ಯೆಯನ್ನು ಸೃಷ್ಟಿ ಮಾಡುವುದಲ್ಲ ಎಂದು ವಾದ ಮುಂದಿಟ್ಟಿರುವ ಗೌಡರು, ಎರಡೂ ಪಕ್ಷಗಳ ನಾಯಕ ಜೊತೆ ಉತ್ತಮ ಒಡನಾಟ ಇಟ್ಟುಕೊಳ್ಳಬಲ್ಲವರನ್ನು ಸಮನ್ವಯ ಸಮಿತಿ ಅಧ್ಯಕ್ಷರನ್ನಾಗಿ ಮಾಡಿ ಎಂದು ‘ಕೈ’ಕಮಾಂಡ್ ಬಳಿ ಒತ್ತಾಯ ಮಾಡಿದ್ದಾರೆ ಎನ್ನಲಾಗಿದೆ. ಹೀಗಾಗಿ ಕಾಂಗ್ರೆಸ್ ಹೈಕಮಾಂಡ್ ಒತ್ತಡಕ್ಕೆ ಸಿಲುಕಿದ್ದು, ಕರ್ನಾಟಕದಲ್ಲಿ ಸರ್ಕಾರ ಉಳಿಸಿಕೊಳ್ಳುವ ಮೂಲಕ ರಾಷ್ಟ್ರಮಟ್ಟದಲ್ಲಿ ಮರ್ಯಾದೆ ಉಳಿಸಿಕೊಳ್ಳುವ ಅನಿವಾರ್ಯತೆ ಸೃಷ್ಟಿಯಾಗಿದೆ. ಒಂದು ವೇಳೆ ಸಿದ್ದರಾಮಯ್ಯ‌ಗೆ ಕಡಿವಾಣ ಹಾಕಲು ವಿಳಂಬ ಮಾಡಿ‌ ಸರ್ಕಾರಕ್ಕೇನಾದರು ತೊಂದರೆಯಾದರೆ ಮುಂದಿನ ಲೋಕಸಭಾ‌ ಚುನಾವಣೆಯಲ್ಲಿ ಯಾರು ನಂಬದ ಸ್ಥಿತಿಗೆ ತಲುಪಲಿದ್ದು, ಹೀನಾಯ ಸೋಲು ಅನುಭವಿಸುವ ಭೀತಿಯೂ ಇದೆ. ಅದೇ ಕಾರಣಕ್ಕೆ ಕುಮಾರಸ್ವಾಮಿ‌ ಸರ್ಕಾರ ಉಳಿಸಲು‌‌ ಸಿದ್ದರಾಮಯ್ಯಗೆ ಯಾವುದೇ ರೀತಿಯ ಮೂಗುದಾರ ಹಾಕಲು ಕಾಂಗ್ರೆಸ್ ಹೈಕಮಾಂಡ್ ಸಿದ್ಧವಾಗಿದೆ ಎನ್ನಲಾಗಿದೆ.

Leave a Reply