ಕೇವಲ ಫೋಟೋಗೆ ಸೀಮಿತವಾಗುತ್ತ ವಿರೋಧ ಪಕ್ಷಗಳ ಒಗ್ಗಟ್ಟು! ಈ ಬಗ್ಗೆ ದೇವೇಗೌಡರು ಹೇಳಿದ್ದೇನು?

ಡಿಜಿಟಲ್ ಕನ್ನಡ ಟೀಮ್:

ಕಳೆದ ತಿಂಗಳು ಎಚ್ ಡಿ ಕುಮಾರಸ್ವಾಮಿ ಅವರು ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದು, ರಾಷ್ಟ್ರ ರಾಜಕಾರಣದಲ್ಲಿ ಹೊಸ ಅಲೆಯ ಸೃಷ್ಟಿ ಮಾಡುವ ಸೂಚನೆ ನೀಡಿತ್ತು. ಅದಕ್ಕೆ ಪ್ರಮುಖ ಕಾರಣ ಬಿಜೆಪಿಯ ವಿರೋಧ ಸ್ಥಾನದಲ್ಲಿರುವ ಎಲ್ಲ ಪಕ್ಷಗಳ ನಾಯಕರು ಪರಸ್ಪರ ಕೈ ಜೋಡಿಸಿ ಫೋಟೋಗೆ ಪೋಸ್ ನೀಡಿದ್ದರು.

ಅದರೊಂದಿಗೆ 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಎಲ್ಲ ರಾಜಕೀಯ ಪಕ್ಷಗಳು ಒಟ್ಟಾಗಿ ಸ್ಪರ್ಧಿಸಲಿವೆ ಎಂಬ ಸಂದೇಶ ರವಾನೆಯಾಗಿತ್ತು. ಆದ್ರೆ ಈಗ ಈ ಸಂದೇಶ ಹುಸಿಯಾಗುವ ಲಕ್ಷಣಗಳು ಗೋಚರಿಸುತ್ತಿವೆ. ಈ ಬಗ್ಗೆ ದೇವೇಗೌಡರು ಹೇಳಿಕೆ ನೀಡಿದ್ದು ಅದು ಹೇಗಿದೆ…

‘ಮುಂದಿನ ಚುನಾವಣೆಯಲ್ಲಿ ಈ ಪಕ್ಷಗಳು ಎಲ್ಲ ರಾಜ್ಯಗಳಲ್ಲಿ ಒಟ್ಟಾಗಿ ಸ್ಪರ್ಧಿಸುವ ಅಗತ್ಯವಿಲ್ಲ. ನಿಗದಿತ ಅವಧಿಗೂ ಮುನ್ನ ಚುನಾವಣೆ ಎದುರಾಗುವ ಸಾಧ್ಯತೆ ದಟ್ಟವಾಗಿರುವ ಕಾರಣ ವಿರೋಧ ಪಕ್ಷಗಳು ಆದಷ್ಟು ಬೇಗ ಮೈತ್ರಿ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಂಡು ಪ್ರತಿ ರಾಜ್ಯಗಳಲ್ಲಿ ಆಯಾ ಪಕ್ಷಗಳ ಕಾರ್ಯಕರ್ತರು ಕೆಲಸ ಆರಂಭಿಸಲು ಅವಕಾಶ ನೀಡಬೇಕು. ಕರ್ನಾಟಕದಲ್ಲಿ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಕ್ಷೇತ್ರಗಳ ಹಂಚಿಕೆ ಇನ್ನಷ್ಟೇ ಆಗಬೇಕು. ಈ ಕುರಿತ ಅಂತಿಮ ತೀರ್ಮಾನವನ್ನು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಕುಮಾರಸ್ವಾಮಿ ಅವರು ಚರ್ಚಿಸಿ ತೆಗೆದುಕೊಳ್ಳಲಿದ್ದಾರೆ. ಕರ್ನಾಟಕದಲ್ಲಿ ಬಿಎಸ್ಪಿಗೆ ಕ್ಷೇತ್ರ ಬಿಟ್ಟುಕೊಡಲು ಸಿದ್ಧವಿದ್ದೇವೆ. ಆದ್ರೆ ಅವರು ಉತ್ತರ ಪ್ರದೇಶದಲ್ಲಿ ನಮ್ಮ ಪಕ್ಷದ ಪ್ರಧಾನ ಕಾರ್ಯದರ್ಶಿ ಡ್ಯಾನಿಶ್ ಅಲಿ ಅವರಿಗೆ ಕ್ಷೇತ್ರ ಬಿಟ್ಟುಕೊಡಬೇಕು. ಕೇರಳದಲ್ಲಿ ಎಲ್ಡಿಎಫ್ ನಮಗೆ ಕ್ಷೇತ್ರ ಬಿಟ್ಟುಕೊಟ್ಟಿದೆ.’

ಹೀಗೆ ಅನೇಕ ಷರತ್ತುಗಳು ಮೈತ್ರಿಯಲ್ಲಿ ಎಲ್ಲ ಪಕ್ಷಗಳಿಗೂ ಹೊಂದಾಣಿಕೆಯಾಗಬೇಕು. ಹೀಗಾಗಿ ವಿರೋಧ ಪಕ್ಷಗಳ ಮೈತ್ರಿ ಕೇವಲ ಫೋಟೋ ಪೋಸಿಗೆ ಸೀಮಿತವಾಗುತ್ತಾ? ಇಲ್ಲ ಚುನಾವಣೆಯಲ್ಲಿ ಕೆಲಸ ಮಾಡುತ್ತಾ? ಎಂಬ ಪ್ರಶ್ನೆಗಳು ಹುಟ್ಟುಕೊಂಡಿವೆ.

Leave a Reply