ರಾಜಕೀಯದಲ್ಲಿ ಸ್ವಾಮೀಜಿಗಳು ಮೂಗು ತೂರಿಸೋದು ಎಷ್ಟು ಸರಿ?

ಡಿಜಿಟಲ್ ಕನ್ನಡ ಟೀಮ್:
ರಾಜ್ಯದಲ್ಲಿ ರಾಜಕಾರಣಿಗಳು ಸುಮ್ಮನಿದ್ದರೂ ಅವರ ಬೆಂಬಲಿಗ ಮಠಾಧೀಶರು ಮಾತ್ರ ಹೇಳಬೇಕಿದ್ದನ್ನು ಹೇಳುವ ಚಾಳಿ ಮಾಡಿಕೊಂಡಿದ್ದಾರೆ. ಮೊನ್ನೆ ಕೆಂಪೇಗೌಡ ಜಯಂತಿ ಆಚರಣೆ ವೇಳೆ ಮಾತನಾಡಿದ ಒಕ್ಕಲಿಗ ಸಮುದಾಯದ ಸ್ವಾಮೀಜಿಗಳು, ಕುಮಾರಸ್ವಾಮಿ ಸರ್ಕಾರ ಸುಭದ್ರವಾಗಿ ಇರುವಂತೆ ನೋಡಿಕೊಳ್ಳುವ ಜವಾಬ್ದಾರಿ ಜಲಸಂಪನ್ಮೂಲ ಸಚಿವ ಡಿ ಕೆ ಶಿವಕುಮಾರ್ ಮೇಲಿದೆ. ಸರ್ಕಾರ ರಚನೆ ವೇಳೆ ಡಿ.ಕೆ ಶಿವಕುಮಾರ್ ತೆಗೆದುಕೊಂಡ ಮುತುವರ್ಜಿಯನ್ನು ಸರ್ಕಾರ ಉಳಿಸುವ ಬಗ್ಗೆಯೂ ನೋಡಿಕೊಳ್ಳಬೇಕು. ಒಂದು ವೇಳೆ ಕುಮಾರಸ್ವಾಮಿ ಸರ್ಕಾರವನ್ನು ಯಾರಾದರೂ ಅಸ್ತಿರ ಮಾಡಲು ಯತ್ನಿಸಿದರೆ ಅದರ ಪರಿಣಾಮವನ್ನು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಅದರ ಎದುರಿಸಬೇಗಾಗುತ್ತದೆ ಎಂದು ನೇರಾನೇರ ಎಚ್ಚರಿಕೆ ನೀಡಿದ್ರು.
ಆ ಬಳಿಕ ದಾವಣಗೆರೆಯಲ್ಲಿ ಮಾತನಾಡಿದ ಕುರುಬ ಸಮಾಜದ ಕಾಗಿನೆಲೆ ಶ್ರೀಗಳು, ಮುಖ್ಯಮಂತ್ರಿ ವಿರುದ್ಧ ವಾಗ್ದಾಳಿ ಮಾಡಿದರು. “ರಾಜ್ಯದ ಮೈತ್ರಿ ಸರಕಾರ ಕುರುಬ ಸಮುದಾಯದ ಅಧಿ ಕಾರಿಗಳನ್ನು ಹತ್ತಿಕ್ಕುವ ಕಾರ್ಯ ಮಾಡುತ್ತಿದೆ” ಒಂದು ಜಾತಿ, ಜನಾಂಗದ ಅಧಿಕಾರಿಗಳ ವಿರುದ್ಧ ರಾಜ್ಯ ಸರಕಾರ ಕೈಗೊಂಡಿರುವ ದ್ವೇಷದ ಪ್ರಕ್ರಿಯೆ ಖಂಡನೀಯ ಎಂದು ಕಿಡಿಕಾರಿದ್ರು. ಸಾಮಾರಸ್ಯದಿಂದ ಆಡಳಿತ ನಡೆಸಿದರೆ ಸರ್ಕಾರಕ್ಕೆ ಒಳ್ಳೆಯದು, ಇಲ್ಲವಾದರೆ ರಾಜ್ಯದ ಪ್ರತಿಯೊಂದು ಜಿಲ್ಲೆಯಲ್ಲೂ ಉಗ್ರ ಹೋರಾಟ ಮಾಡ್ತೇವೆ ಎಂದಿದ್ರು. ಮಾಜಿ ಸಿಎಂ ಸಿದ್ದರಾಮಯ್ಯ ಸುಮ್ಮನೆ ಇದ್ದಾರೆ ಎಂದರೆ ಸೋತಿದ್ದಾರೆ ಎಂದು ಅರ್ಥವಲ್ಲ. ಟಗರು ಹಿಂದೆ ಸರಿದಿದೆ ಎಂದರೆ ಮುಂದಿನ ಹೆಜ್ಜೆ ಇಡಲು ರೆಡಿಯಾಗ್ತಿದೆ ಎಂದರ್ಥ, ಟಗರಿನ ಹೊಡೆತಕ್ಕೆ ಎಲ್ಲಾ ಛಿದ್ರವಾಗುತ್ತೆ ಎಂದು ಸಿನಿಮಾ ಸ್ಟೈಲ್‌ನಲ್ಲಿ ಅಬ್ಬರಿಸಿದ್ರು.
ಶ್ರೀಗಳ ಹೇಳಿಕೆಗೆ ತಿರುಗೇಟು ನೀಡಿದ ಜೆಡಿಎಸ್ ಶಾಸಕ ಹೆಚ್. ವಿಶ್ವನಾಥ್, ಸಿದ್ದರಾಮಯ್ಯ ನನ್ನನ್ನು ಹೀನಾಯವಾಗಿ ಕಂಡಾಗ ಶ್ರೀಗಳಿಗೆ ಗೊತ್ತಾಗಲಿಲ್ಲ, ನಾನು ಕುರುಬ ಸಮಾಜದಿಂದ ಬಂದಿಲ್ಲವೇ? ಎಂದು ಪ್ರಶ್ನಿಸಿದರು. ಕುರುಬ ಸಮಾಜ, ಕಾಗಿನೆಲೆ ಪೀಠ ಕೇವಲ ಸಿದ್ದರಾಮಯ್ಯ ಅವರಿಗೆ ಮಾತ್ರ ಸೀಮಿತವಾಗಿದೆಯಾ ಎಂದು ಪ್ರಶ್ನಿಸಿದ ಅವರು, ಮಠಗಳನ್ನು ವಿರೋಧಿಸುತ್ತಿದ್ದವರು ಸಿದ್ದರಾಮಯ್ಯ, ಮಠ ಕಟ್ಟುವಲ್ಲಿ ಅವರ ಕೊಡುಗೆ ಏನು ಎಂದು ಟೀಕಿಸಿದ್ರು. ಆ ಬಳಿಕ ಮತ್ತೆ ವಿಶ್ವಾನಾಥ್ ಮಾತಿಗೆ ತಿರುಗೇಟು ಕೊಟ್ಟ ಕಾಗಿನೆಲೆ ಶ್ರೀಗಳು, ನಾನು ಯಾರ ಪರವೂ ಇಲ್ಲ, ಸಮಾಜಕ್ಕೆ ಅನ್ಯಾಯ ಆದಾಗ ದನಿ ಎತ್ತುತ್ತೇನೆ. ಇದೇ ವಿಶ್ವನಾಥ್ ಪರವಾಗಿಯೂ ನಾನು ಮಾತನಾಡಿದ್ದೇನೆ ಎಂದಿದ್ದಾರೆ. ಅದಕ್ಕೆ ಕೂಡಲೇ ಉತ್ತರ ಕೊಟ್ಟಿರುವ ವಿಶ್ವಾನಾಥ್, ನನ್ನ ಪರವಾಗಿ ಮಾತನಾಡಿರುವ ನೆನಪೇ ಇಲ್ಲ ಎಂದಿದ್ದಾರೆ.
ಇದು ಸ್ವಾಮೀಜಿ ಹಾಗೂ ಶಾಸಕ ವಿಶ್ವನಾಥ್ ನಡುವಿನ ಸಂಘರ್ಷಕ್ಕಿಂತ ಧಾರ್ಮಿಕ ನಾಯಕರ ನಡುವೆ ಸಂಘರ್ಷ ಉಂಟು ಮಾಡುವ ಸಾಧ್ಯತೆ ಇದೆ. ಮಠ ಮಾನ್ಯಗಳು ಎಂದರೆ ಸಮಾಜದಲ್ಲಿ‌ ಜನರಿಗೆ ಸೇವೆ ನೀಡುವುದು ಅನ್ನೋ ಮಾತಿತ್ತು. ಈಗಲೂ ಕೆಲವೊಂದು ಮಠಗಳನ್ನು ಅದನ್ನು ಪಾಲಿಸಿಕೊಂಡು ಬರುತ್ತಿವೆ. ಆದರೆ ಕೆಲವು ಸ್ವಾಮೀಜಿಗಳು ನೇರವಾಗಿ ರಾಜಕಾರಣಿಗಳನ್ನು ಟೀಕಿಸುವ ಮೂಲಕ ತಮ್ಮ ಕೆಲಸವನ್ನು ಮರೆತಂತೆ ಕಾಣುತ್ತಿದೆ. ಮಠ ಮಾನ್ಯಗಳಲ್ಲಿ ಜಾತಿ ಧರ್ಮ ನೋಡಬಾರದು, ಎಲ್ಲರನ್ನು ಮನುಷ್ಯರೆಂದು ಗುರ್ತಿಸಬೇಕು ಅನ್ನೋದು ಪರಂಪರೆ, ಆದರೀಗ ನಮ್ಮ ಸಮುದಾಯದ ರಕ್ಷಣೆಗೆ ನಿಲ್ಲುವುದು ಸರಿಯಲ್ಲವೇ ಎಂದು ಮಠಾಧೀಶರೇ ಪ್ರಶ್ನಿಸುತ್ತಿರೋದು ಆತಂಕದ ವಿಚಾರ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಜಕೀಯಕ್ಕೆ ಯಾರು‌ಬೇಕಿದ್ದರೂ ಪ್ರವೇಶ ಮಾಡುವ ಅವಕಾಶವಿದೆ. ಆದರೆ ಕಾವಿ ಹಾಕಿಕೊಂಡು ರಾಜಕೀಯ ಮಾಡೋದನ್ನು ಇನ್ನಾದರೂ ಎಲ್ಲಾ ಧರ್ಮದ ಗುರುಗಳು (ಹೀಗೆ ಕರೆಸಿಕೊಳ್ಳುತ್ತಿರುವ) ಜಾತಿ ರಾಜಕೀಯ ಬಿಡಲಿ, ಇಲ್ಲ ಅಖಾಡ ರಾಜಕೀಯಕ್ಕೆ ಬಂದು ಬಿಡಲಿ. ಇಲ್ಲದಿದ್ದರೆ ಜನರು ಇವರ ಮೇಲಿಟ್ಟಿರುವ ಗೌರವ ಮಣ್ಣಾಗುವ ಸಮಯ ದೂರವಿಲ್ಲ.

Leave a Reply