ಮಠ ಹತ್ತಿದ ರಾಜಕಾರಣ, ಪೀಠ ಸಮರಕ್ಕೆ ಜಾತಿಕಾರಣ!

ಮಾಜಿ ಪ್ರಧಾನಿ ದೇವೇಗೌಡರ ಕುಟುಂಬ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ನಡುವಣ ವ್ಯಕ್ತಿಗತ ವೈರ ಪ್ರಸ್ತುತ ಕರ್ನಾಟಕ ರಾಜಕೀಯ ವ್ಯವಸ್ಥೆಯನ್ನೇ ಪಲ್ಲಟ ಗೊಳಿಸಿದೆ. ಅವರು ಪ್ರತಿನಿಧಿಸುವ ಒಕ್ಕಲಿಗ ಹಾಗೂ ಕುರುಬ ಸಮುದಾಯಗಳ ನಡುವೆ ದ್ವೇಷದ ಕಾಡ್ಗಿಚ್ಚು ಹಬ್ಬಿಸಿದೆ. ಮಿಗಿಲಾಗಿ ಆಯಾ ಸಮಾಜದ ಮಠಾಧೀಪತಿಗಳನ್ನೂ ರಾಜಕೀಯ ಸುಳಿಯೊಳಗೆ ಸೆಳೆದೊಯ್ದು, ಖಾವಿಯ ಇತಿಮಿತಿ ದಾಟಿ ಪರಸ್ಪರ ಕಾರ್ಕೋಟಕ ವಿಷ ಕಕ್ಕುವಂತೆ ಮಾಡಿದೆ!

ರಾಜಕಾರಣಿಗಳು ಇರುವುದೇ ರಾಜಕೀಯ ಮಾಡಲೆಂದೇ. ತಂತ್ರವೋ, ಪ್ರತಿತಂತ್ರವೋ, ಕುತಂತ್ರವೋ ಅಧಿಕಾರ ಹಿಡಿಯಲೆಂದೇ. ಜನಸೇವೆ ನಿಮಿತ್ತದ ರಾಜಕೀಯ ಗಂಟು ಮೂಟೆ ಕಟ್ಟಿ ಕಾಲವಾಯ್ತು. ಆದರೆ ಈ ಮಠಾಧೀಶರಿಗೆ ಏನಾಗಿದೆ ಎಂದೇ ಅರ್ಥವಾಗುತ್ತಿಲ್ಲ. ಮೈತ್ರಿ ಸರಕಾರದ ಅಂಗಪಕ್ಷಗಳ ನಾಯಕರ ಚುಂಗು ಹಿಡಿದು ರಾಜಕಾರಣಿಗಳನ್ನು ನಾಚಿಸುವ ಹಾಗೆ ವಾಗ್ವಾದಕ್ಕಿಳಿದು, ಪಾರಮಾರ್ಥ ಸಾಧನೆಯ ಮೂಲೋದ್ದೇಶಕ್ಕೆ ತಿಲಾಂಜಲಿ ಇತ್ತಿದ್ದಾರೆ. ಆ ಮೂಲಕ ತಮ್ಮ ಸ್ಥಾನಮಾನದ ಗೌರವ-ಘನತೆಗಳನ್ನು ಹರಾಜು ಹಾಕಿಕೊಂಡಿದ್ದಾರೆ. ಸಾರ್ವಜನಿಕರ ನಗೆಪಾಟಲಿಗೂ ವಸ್ತುವಾಗಿದ್ದಾರೆ.

ಆ ವಿಷಯ ಪಕ್ಕಕ್ಕಿರಲಿ, ಮೈತ್ರಿ ಸರಕಾರ ಅಸ್ತಿತ್ವಕ್ಕೆ ಬಂದಾಗಿನಿಂದಲೂ ಅದರ ಪಾಲುದಾರ ಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ‘ತಾಳಮೇಳ’ವೇ ಏರ್ಪಟ್ಟಿಲ್ಲ. ಪಕ್ಷಗಳ ನಾಯಕರು ನಿತ್ಯ ಉದುರಿಸುತ್ತಿರುವ ಆಣಿ ಮುತ್ತು, ಹಾಡುತ್ತಿರುವ ಸುಪ್ರಭಾತ ಕೇಳಿದರೆ ಯಾವ ಕೋನದಲ್ಲೂ ಇದನ್ನೊಂದು ‘ಮೈತ್ರಿಕೂಟ’ ಎಂದು ಕರೆಯಲೂ ಸಾಧ್ಯವೇ ಇಲ್ಲ. ಇವರ ನಿತ್ಯರಗಳೆ ನೋಡಿ ಜನ ಹಣೆಹಣೆ ಚಚ್ಚಿಕೊಳ್ಳುತ್ತಿದ್ದಾರೆ. ಇವರನ್ನು ಹೆಂಗಪ್ಪಾ ಮಿತ್ರರು ಎಂದು ಕರೆಯುವುದು, ಈ ಸರಕಾರವನ್ನು ಅದ್ಹೇಗೆ ದೋಸ್ತಿ ಸರಕಾರ ಎಂದು ಭಾವಿಸುವುದು ಎಂದು ತಮ್ಮನ್ನು ತಾವೇ ಪ್ರಶ್ನಿಸಿಕೊಳ್ಳುತ್ತಿದ್ದಾರೆ.

ಯಾವುದೇ ಪಕ್ಷಕ್ಕೆ ಜನಾದೇಶ ಇಲ್ಲದಿದ್ದ ಸಂದರ್ಭದಲ್ಲಿ ಎರಡೂ ಪಕ್ಷಗಳು ಸೇರಿ ಮಾಡುವ ಸರಕಾರದ ಜವಾಬ್ದಾರಿ ಇಮ್ಮಡಿಯಾಗಿರುತ್ತದೆ. ಚುನಾವಣೆಗೆ ಮೊದಲು ಪರಸ್ಪರ ಕತ್ತಿ ಮಸೆದಿದ್ದ ಪಕ್ಷಗಳು ನಂತರ ಶಸ್ತ್ರಾಸ್ತ್ರಗಳನ್ನು ಕೆಳಗಿಟ್ಟು ಹೆಗಲ ಮೇಲೆ ಕೈಹಾಕಿ ಸರಕಾರ ರಚಿಸಿದಾಗ ಬಹಳ ಸೂಕ್ಷ್ಮವಾಗಿ ಹೆಜ್ಜೆ ಇಡಬೇಕಾಗುತ್ತದೆ. ಸರಕಾರದ ಪ್ರತಿನಿಧಿಗಳು ಬೇಕಾಬಿಟ್ಟಿ ಮಾತಾಡುವಂತಿಲ್ಲ. ಅಳೆದು-ತೂಗಿ ಪ್ರತಿ ಮಾತಾಡಬೇಕಾಗುತ್ತದೆ. ಆದರೆ ಈಗಿನ ಸರಕಾರ ಹಾಗೂ ಅದರ ನಾಯಕರಲ್ಲಿ ಅಂಥ ಯಾವುದೇ ಸಂವೇದನಾಶೀಲತೆ ಕಾಣುತ್ತಿಲ್ಲ. ಏನೋ ಪಡೆಯಲು ಹೋಗಿ ಮತ್ತಿನ್ನೇನನ್ನೋ ಕಳೆದು ಕೊಂಡವರಂತೆ ಆಡುತ್ತಿದ್ದಾರೆ.

ಯಾರಲ್ಲೂ ಸ್ಪಷ್ಟತೆ ಇಲ್ಲ. ಮುಂದಿನದರ ಬಗ್ಗೆ ಇಲ್ಲ. ಸರಕಾರ ಮಾಡಿದರೂ ಚುನಾವಣೆಪೂರ್ವ ಜಗಳ ಮಾತ್ರ ಮರೆಯಾಗಿಲ್ಲ. ಜಗಳವಾಡಲೆಂದೇ ಒಂದಾದರೆಂದು ಭಾಸವಾಗುತ್ತಿದೆ. ದೋಸ್ತಿ ಮತ್ತು ಕುಸ್ತಿ ನಡುವೆ ವ್ಯತ್ಯಾಸವೇ ಗೊತ್ತಾಗುತ್ತಿಲ್ಲ. ಕುಸ್ತಿಯೇ ದೋಸ್ತಿಯಾಗಿದೆ. ಇದಕ್ಕೆಲ್ಲ ಮೂಲಕಾರಣ ದೇವೇಗೌಡ ಕುಟುಂಬ ಮತ್ತು ಸಿದ್ದರಾಮಯ್ಯ ನಡುವಣ ಬದ್ಧವೈರತ್ವ. ಒಂದು ಕಾಲದ ಗುರು-ಶಿಷ್ಯರಾಗಿದ್ದು, ನಂತರ ಕಟ್ಟರ್ ವೈರಿಗಳಾಗಿ ಪರಿವರ್ತಿತರಾಗಿರುವ ಈ ನಾಯಕರ ದ್ವೇಷದ ಕಿಚ್ಚು ಎರಡೂ ಪಕ್ಷಗಳು ಒಂದಾಗಿ ಸರಕಾರ ಮಾಡಿದರೂ ಆರಿಲ್ಲ. ಹಳೇ ಬಾಕಿ ಚುಕ್ತಾ ಮಾಡುವುದರಲ್ಲೇ ತಲ್ಲೀನರಾಗಿರುವ ಈ ರೋಷಾಗ್ನಿ ಮೈತ್ರಿ ಸರಕಾರದ ಭವಿಷ್ಯಕ್ಕೂ ತಾಗಿದೆ. ಒಬ್ಬರ ಮೇಲೋಬ್ಬರು ಹಿಡಿತ ಸಾಧಿಸಲು ನಡೆಸುತ್ತಿರುವ ಹೋರಾಟವನ್ನು ಎರಡೂ ಪಕ್ಷಗಳ ಹಿಂಬಾಲಕರು ‘ರಿಲೇ ರೇಸ್ ದಂಡ’ದಂತೆ ಎತ್ತೋಡುತ್ತಿದ್ದಾರೆ. ಇದನ್ನೂ ಹಿಂದಿಕ್ಕಿ ಅಶಾಂತಿ ಮುಂದೋಡುತ್ತಿದೆ. ಸಂಪುಟ ರಚನೆ, ವಿಸ್ತರಣೆ, ಖಾತೆ ಹಂಚಿಕೆ, ಅಧಿಕಾರಿಗಳ ವರ್ಗಾವಣೆ, ಬಜೆಟ್, ರೈತರ ಸಾಲ ಮನ್ನಾ-ಈ ಎಲ್ಲವೂ ಓಟದ ದಂಡಗಳಾಗಿವೆ. ಪ್ರತಿ ವಿಚಾರದಲ್ಲೂ ತಮ್ಮದೇ ಮಾತು ನಡೆಯಬೇಕೆಂಬ ಇವರಿಬ್ಬರ ಹಠ ಉಳಿದವರ ನೆಮ್ಮದಿ ಕೆಡಿಸಿದೆ.

ಕಾಂಗ್ರೆಸ್ ಸರಕಾರದ ದೊಡ್ಡ ಪಾಲುದಾರ. ತಮ್ಮ ಪಕ್ಷದ ಬೆಂಬಲದಿಂದ ಸಿಎಂ ಆಗಿರುವ ಕುಮಾರಸ್ವಾಮಿ ತಮ್ಮ ಕಣ್ಗಾವಲಿನಲ್ಲಿಯೇ ಆಳ್ವಿಕೆ ನಡೆಸಬೇಕು, ಅವರ ಮೇಲೆ ತಮಗೊಂದು ಹಿಡಿತ ಇರಬೇಕು, ತಾವು ಅಧ್ಯಕ್ಷರಾಗಿರುವ ಸಮನ್ವಯ ಸಮಿತಿ ಮೂಲಕವೇ ಸರಕಾರದ ನೀತಿ-ನಿರೂಪಣೆಗಳು ನಿರ್ಧಾರವಾಗಬೇಕು, ಅದರಾಚೆಗೆ ಏನೂ ಆಗಬಾರದು ಎಂಬ ಬಯಕೆ ಸಿದ್ದರಾಮಯ್ಯನವರದು. ಆದರೆ ಎಲ್ಲವೂ ಅವರೆಂದುಕೊಂಡಂತೆ ಆಗುತ್ತಿಲ್ಲ. ಸಂಪುಟದಲ್ಲಿ ಅವರು ಬಯಸಿದವೆಲ್ಲರಿಗೂ ಸ್ಥಾನ ಸಿಕ್ಕಿಲ್ಲ. ಖಾತೆ ಹಂಚಿಕೆಯಲ್ಲೂ ಅವರ ಮಾತು ನಡೆದಿಲ್ಲ. ಸಮನ್ವಯ ಸಮಿತಿ ಸಭೆಯಲ್ಲಿ ಸಾಲಮನ್ನಾ ಕುರಿತ ಅವರ ಅಭಿಪ್ರಾಯಗಳಿಗೆ ಹೊರಗೆ ಪ್ರತಿಕೂಲ ಉತ್ತರ ವ್ಯಕ್ತವಾಗಿದೆ.

ಮೇಲಾಗಿ ಕುಮಾರಸ್ವಾಮಿ ಮತ್ತು ದೇವೇಗೌಡರು ಕಾಂಗ್ರೆಸ್ ಹೈಕಮಾಂಡ್ ಜತೆ ನೇರ ಸಂಪರ್ಕ ಸಾಧಿಸಿರುವುದು, ಉಪಮುಖ್ಯ ಮಂತ್ರಿ ಡಾ.ಜಿ.ಪರಮೇಶ್ವರ ಹಾಗೂ ಸಚಿವ ಡಿ.ಕೆ.ಶಿವಕುಮಾರ್ ಅವರಂಥವರು ಕುಮಾರಸ್ವಾಮಿ ಜತೆಗೂಡಿರುವುದನ್ನು ಅರಗಿಸಿಕೊಳ್ಳಲು ಅವರಿಗೆ ಆಗುತ್ತಿಲ್ಲ. ಇವರೆಲ್ಲರೂ ಸೇರಿಕೊಂಡು ತಮ್ಮ ವಿರುದ್ಧ ಕತ್ತಿ ಮಸೆಯುತ್ತಿದ್ದಾರೆ, ತಮ್ಮನ್ನು ಮೂಲೆಗುಂಪು ಮಾಡಲು ಹುನ್ನಾರ ನಡೆಸಿದ್ದಾರೆ ಎಂಬ ಶಂಕೆ ಅವರನ್ನು ಬಲವಾಗಿ ಕಾಡುತ್ತಿದೆ. ಜತೆಗೆ ತಮ್ಮ ಸರಕಾರದ ಅವಧಿಯಲ್ಲಿ ಆಯಕಟ್ಟಿನ ಜಾಗದಲ್ಲಿ ನಿಯೋಜಿತರಾಗಿದ್ದ ಕುರುಬ ಸಮುದಾಯದ ಅಧಿಕಾರಿಗಳನ್ನು ವರ್ಗ ಮಾಡುತ್ತಿರುವುದು ಅವರನ್ನು ಕೆಂಡಮಂಡಲರನ್ನಾಗಿಸಿದೆ. ಹೀಗಾಗಿಯೇ ಅವರು ಧರ್ಮಸ್ಥಳದ ಶಾಂತಿವನದಲ್ಲಿ ಕೂತು ಕುಮಾರಸ್ವಾಮಿ ಆಡಳಿತ ವೈಖರಿ ವಿರುದ್ಧ ಒಂದಷ್ಟು ಮಾತಿನ ಬಾಂಬ್‌ಗಳನ್ನು ಸಿಡಿಸಿದ್ದಾರೆ. ಇದರಿಂದ ಸರಕಾರ ಹಾಗೂ ರಾಜಕೀಯ ವಲಯದಲ್ಲಿ ಒಂದಷ್ಟು ಬಿರುಗಾಳಿ ಎದ್ದಿದೆ.

ನಿಜ, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದೇ ಬಿಟ್ಟಿತು ಎಂಬ ‘ಹವಾ’ ಸೃಷ್ಟಿಯಾಗಿದ್ದು, ಆದರೆ ಅದು ಠುಸ್ಸಾದರೂ 79 ಸ್ಥಾನ ಪಡೆದಿದ್ದರಲ್ಲಿ ಸಿದ್ದರಾಮಯ್ಯನವರ ಶ್ರಮವಿದೆ ಎಂಬುದು ಸುಳ್ಳಲ್ಲ. ಆದರೆ ಸ್ವಂತ ಕ್ಷೇತ್ರ ಚಾಮುಂಡೇಶ್ವರಿಯಲ್ಲಿ ಸೋತು, ಬಾದಾಮಿಯಲ್ಲಿ ಅಲ್ಪ ಮತಗಳ ಅಂತರದಿಂದ ಗೆದ್ದ ಸಿದ್ದರಾಮಯ್ಯನವರ ಆತ್ಮವಿಶ್ವಾಸ ಕಂಗೆಟ್ಟಿದ್ದೂ ಅಷ್ಟೇ ನಿಜ. ಅವರಿಗೆ ಪಕ್ಷದಲ್ಲಿ ಈಗಲೂ ಸಾಕಷ್ಟು ಶಾಸಕರ ಬೆಂಬಲವಿದೆ. ಎಂ.ಬಿ.ಪಾಟೀಲ್, ಎಸ್.ಆರ್. ಪಾಟೀಲ್ ಅವರಂಥ ನಾಯಕರೂ ಜತೆಗಿದ್ದಾರೆ. ಆದರೆ ಅದೇ ರೀತಿ ಕೆಲ ನಾಯಕರೂ ಅವರ ವಿರುದ್ಧ ಕತ್ತಿ ಝಳಪಿಸುತ್ತಿದ್ದಾರೆ. ಪರಮೇಶ್ವರ, ಶಿವಕುಮಾರ್, ಸತೀಶ್ ಜಾರಕಿಹೊಳಿ ಸೇರಿದಂತೆ ಸಿದ್ದರಾಮಯ್ಯ ಸರಕಾರದಲ್ಲಿ ಉಪೇಕ್ಷಿತರಾಗಿದ್ದ ಕೆಲವರು ಬಾಕಿ ತೀರಿಸಲು ಟೊಂಕಕಟ್ಟಿ ನಿಂತಿದ್ದಾರೆ. ಮೈತ್ರಿ ಸರಕಾರದ ಮೇಲೆ ಹಿಡಿತ ಸಾಧಿಸಲು ಸಿದ್ದರಾಮಯ್ಯನವರು ನೀಡುತ್ತಿರುವ ಹೇಳಿಕೆಗಳಿಗೆ ಪ್ರತಿಹೇಳಿಕೆಗಳನ್ನು ಉದುರಿಸುತ್ತಿದ್ದಾರೆ.

ಪರಮೇಶ್ವರ ಅವರಂತೂ ಈ ಸರಕಾರದಲ್ಲಿ ನಾನೇ ಕಾಂಗ್ರೆಸ್ ನಾಯಕ, ನಾನು ಹೇಳಿದ್ದೇ ಅಂತಿಮ ಎನ್ನುವಷ್ಟರ ಮಟ್ಟಿಗೆ ಚಿಗಿತುಕೊಂಡಿದ್ದರೆ, ಹೈಕಮಾಂಡ್ ಬಿಟ್ಟು ಅನ್ಯರ ಮಾತುಗಳಿಗೆ ಕಿಮ್ಮತ್ತಿಲ್ಲ ಎಂದು ಹೇಳುವ ಮೂಲಕ ಸಿದ್ದರಾಮಯ್ಯನವರ ಮಾತುಗಳನ್ನು ಶಿವಕುಮಾರ್ ಒರೆಸಿ ಬಿಸಾಕಿದ್ದಾರೆ. ಇದಿಷ್ಟೇ ಆಗಿದ್ದರೆ ಪರವಾಗಿರಲಿಲ್ಲ. ಜೀವದ ಗೆಳೆಯರಾಗಿದ್ದ ಎಚ್.ಸಿ. ಮಹದೇವಪ್ಪ ಅವರಂಥವರೂ ಚುನಾವಣೆ ಸಿದ್ದರಾಮಯ್ಯನವರ ಬೆನ್ನಿಗೆ ಇರಿದಿದ್ದಾರೆ. ತಮ್ಮ ಮಗನಿಗೆ ಟಿಕೆಟ್ ಕೊಡಲಿಲ್ಲ ಎಂಬ ಸಿಟ್ಟನ್ನಿಟ್ಟುಕೊಂಡು ಈಗಲೂ ಸಿದ್ದರಾಮಯ್ಯನವರ ವಿರುದ್ಧ ಒಳೇಟುಗಳನ್ನು ಹೊಸೆಯುತ್ತಿದ್ದಾರೆ. ಬಿಜೆಪಿ ಜತೆಗೋಗಿ ಅಧಿಕಾರ ಹಿಡಿಯಲು ಕಾಂಗ್ರೆಸ್‌ನ ಒಂದು ಗುಂಪು ಈಗಲೂ ಹಪಾಹಪಿಸುತ್ತಿದೆ. ಆದರೆ ನೇತೃತ್ವ ವಹಿಸಲು ಯಾರಿಗೂ ಧೈರ್ಯವಿಲ್ಲ. ಟಿ.ನರಸೀಪುರದಲ್ಲಿ ಸೋತು ಸುಣ್ಣವಾಗಿರುವ ಮಹದೇವಪ್ಪ ಆ ನೇತೃತ್ವ ವಹಿಸಿಕೊಂಡು ಹಿಂಬಾಗಿಲ ಮೂಲಕ ಅಧಿಕಾರ ಸ್ಪರ್ಶದ ಹವಣಿಕೆಯಲ್ಲಿದ್ದಾರೆ. ಹಿಂದೆ ಸಿದ್ದರಾಮಯ್ಯನವರ ಜತೆ ಉತ್ತಮ ಬಾಂಧವ್ಯ ಹೊಂದಿದ್ದ ರಾಮಲಿಂಗಾರೆಡ್ಡಿ ಅವರಂಥವರು ಈಗ ಅವರ ಕೈಬಿಟ್ಟು ತಟಸ್ಥರಾಗಿದ್ದಾರೆ.

ಹೀಗೆ ಪಕ್ಷದ ಒಳಗೆ ಮತ್ತು ಹೊರಗೆ ತಮ್ಮನ್ನು ಮೂಲೆಗುಂಪು ಮಾಡಲು ವ್ಯವಸ್ಥಿತ ಸಂಚು ನಡೆಯುತ್ತಿರುವುದು ಸಿದ್ದರಾಮಯ್ಯನವರನ್ನು ಕೆರಳಿಸಿದೆ. ಈ ಸರಕಾರ ಇದ್ದರೂ ಹೋದರೂ ಅವರು ಕಳೆದುಕೊಳ್ಳುವಂಥದ್ದೂ ಏನೂ ಇಲ್ಲ. ಅವರೇನು ಸಿಎಂ ಸ್ಥಾನದಲ್ಲಿ ಕುಳಿತಿಲ್ಲ, ಅಧಿಕಾರ ಹೋದರೆ ಹೇಗಪ್ಪಾ ಎಂದು ಚಿಂತಿಸಲು. ಆದರೆ ಶಾಸಕಾಂಗ ಪಕ್ಷ ಹಾಗೂ ಸಮನ್ವಯ ಸಮಿತಿ ನಾಯಕ ಸ್ಥಾನದಿಂದ ಹೊರಡಿಸುವ ಹುಕುಂಗಳಿಗೆ ಬೆಲೆ ಸಿಗದಿದ್ದರೆ, ಸ್ವಾಭಿಮಾನಕ್ಕೆ ಧಕ್ಕೆ ತಾವು ಸುಮ್ಮನಿರುವುದಿಲ್ಲ ಎಂಬ ಸಂದೇಶವನ್ನು ಧರ್ಮಸ್ಥಳದಿಂದ ನೇರವಾಗಿ ತಲುಪಿಸಿದ್ದಾರೆ. ತಮ್ಮ ಸಮುದಾಯ ಪ್ರತಿನಿಧಿಸುವ ಕಾಗಿನೆಲೆ ಶ್ರೀ ನಿರಂಜನಾ ನಂದಪುರಿ ಸ್ವಾಮೀಜಿಗಳ ಮೂಲಕವೂ ರವಾನಿಸಿದ್ದಾರೆ.

‘ಟಗರು ಎರಡೆಜ್ಜೆ ಹಿಂದೆ ಹೋಗಿ ಸುಮ್ನಿದೆ ಎಂದರೆ ಗುಮ್ಮಲು ರೆಡಿ ಆಗುತ್ತಿದೆ’ ಎಂದರ್ಥ ಎಂದು ಕಾಗಿನೆಲೆ ಶ್ರೀಗಳು ಸಿದ್ದರಾಮಯ್ಯ ಪರ ಹೇಳಿದ್ದಾರೆ. ಅವರ ಈ ಹೇಳಿಕೆಗೆ ಶ್ರೀಕಾರ ಹಾಕಿಕೊಟ್ಟದ್ದು ಒಕ್ಕಲಿಗ ಸಮುದಾಯದ ನಂಜಾವಧೂತ ಸ್ವಾಮೀಜಿಗಳ ಮಾತು. ಕುಮಾರಸ್ವಾಮಿ ಸರಕಾರಕ್ಕೆ ತೊಂದರೆ ಮಾಡಿದರೆ ಹುಷಾರ್, ಆಗ ಇಡೀ ಸಮುದಾಯ ದಂಗೆಯೇಳುತ್ತದೆ ಎಂದು ಅವರು ಧಮಕಿ ಹಾಕಿದ್ದರು. ಅದಕ್ಕೆ ಪ್ರೇರಣೆ ನೀಡಿದ್ದು ಧರ್ಮಸ್ಥಳದಲ್ಲಿ ಸಿದ್ದರಾಮಯ್ಯನವರು ಸಿಡಿಸಿದ ವಿಡಿಯೋ ಬಾಂಬ್. ಕುಮಾರಸ್ವಾಮಿ ಸರಕಾರ ಒಂದು ವರ್ಷ ಇದ್ದರೆ ಹೆಚ್ಚು ಎಂಬುದು ಆ ಬಾಂಬ್‌ನ ತಿರುಳು. ಸಿದ್ದರಾಮಯ್ಯ ಆ ರೀತಿ ಹೇಳಲು ಕಾರಣ ತಮ್ಮನ್ನು ಮೂಲೆಗುಂಪು ಮಾಡಲು ಸಂಚು ನಡೆದಿದೆ ಎಂಬ ಗುಮಾನಿ ಕಾಡಿದ್ದು. ಹೀಗೆ ಒಂದಕ್ಕೊಂದು ಬೆಳವಣಿಗೆಗಳು ಬೆಸೆದುಕೊಂಡು ಮೈತ್ರಿ ಸರಕಾರದ ಸ್ಥಿತಿ ಮಸಾಲೆದೋಸೆ ಜತೆ ಸಿಪ್ಪೆಸಮೇತ ಬಾಳೆಹಣ್ಣು ಕಿವುಚಿಟ್ಟಂತಾಗಿದೆ. ಅದಕ್ಕೆ ರೂಪವೂ ಇಲ್ಲ, ರುಚಿಯೂ ಇಲ್ಲ!

ನಂಜಾವಧೂತ ಶ್ರೀಗಳು ಕುಮಾರಸ್ವಾಮಿ ಪರ ಹಾಗೂ ಕಾಗಿನೆಲೆ ಶ್ರೀಗಳು ಸಿದ್ದರಾಮಯ್ಯ ಪರ ಬ್ಯಾಟಿಂಗ್ ಆಡಿರುವ ಹಿನ್ನೆಲೆಯಲ್ಲಿ ಮಾಜಿ ಸಚಿವ ಎಚ್.ವಿಶ್ವನಾಥ್ ಮಠಾಧೀಶರ ಜವಾಬ್ದಾರಿ ಬಗ್ಗೆ ಆಡಿರುವ ಮಾತುಗಳು ಸರಿ ಎನಿಸಿವೆ. ಹಿಂದೆ ಕಾಂಗ್ರೆಸ್ಸಿಗೆ ವೋಟು ಹಾಕಿ ಎಂದು ಬಹಿರಂಗವಾಗಿಯೇ ಕರೆ ನೀಡಿದ್ದ ಮಾತೆ ಮಹಾದೇವಿ ಅವರಿಂದ ಹಿಡಿದು ರಾಜಕೀಯ ಮೂಸುವ ಎಲ್ಲ ಪೀಠಾಧಿಪತಿಗಳ ನಡೆಯನ್ನು ಅವರು ಪ್ರಶ್ನಿಸಿದ್ದಾರೆ. ಧರ್ಮಪೀಠದ ಮೇಲೆ ಕುಳಿತು ಮಾನವ ಧರ್ಮ ಬೋಧಿಸಬೇಕಾದ ಸ್ವಾಮೀಜಿಗಳು ರಾಜಕೀಯ ಮಾತಾಡುವುದು, ತಮಗೆ ಅಡ್ಡಬೀಳುವವರ ಪರ ವಕಾಲತ್ತು ವಹಿಸುವುದು ಸರಿಯಲ್ಲ ಎಂದು ಹೇಳಿರುವುದು ನೂರಕ್ಕೆ ಇನ್ನೂರರಷ್ಟು ಸತ್ಯ. ಹೆಂಡದಂಗಡಿ, ಬೀದಿ ಕೊಳಾಯಿ ಬಳಿ ಕಿತ್ತಾಡುವವರಂತೆ ಸ್ವಾಮೀಜಿಗಳು ವರ್ತಿಸಿದರೆ ಸಮಾಜದಲ್ಲಿ ಅವರ ಮರ್ಯಾದೆ, ಗೌರವ ಏನಾಗಬೇಡ? ರಾಜಕೀಯದಲ್ಲಿ ಧರ್ಮ ಇರಬೇಕು, ರಾಜಕಾರಣಿಗಳೂ ಧರ್ಮ ಮೀರಬಾರದು ಎಂಬುದು ಸರಿ.

ಬೇಕಿದ್ದರೆ ರಾಜಕಾರಣಿಗಳನ್ನು ಮಠಕ್ಕೆ ಕರೆಸಿಕೊಂಡು ಧರ್ಮದ ಪಾಠ ಹೇಳಿಕೊಡಲಿ. ಯಾರೂ ಬೇಡವೆನ್ನುವುದಿಲ್ಲ. ಆದರೆ ಸ್ವಾಮೀಜಿಗಳೇ ಧರ್ಮಪೀಠದಿಂದ ರಾಜಕೀಯ ಮಾಡಲು ತಮ್ಮ ಮೈಮೇಲೆ ರಾಜಕೀಯ ನಾಯಕರನ್ನೇ ಆವಾಹನೆ ಮಾಡಿಕೊಂಡರೆ, ‘ಬಬ್ರುವಾಹನ’ ಸಿನಿಮಾ ರಾಜಕುಮಾರ್ ಶೈಲಿಯಲ್ಲಿ ಡೈಲಾಗ್ ಹೊಡೆಯಲು ಶುರುಮಾಡಿದರೆ ಗತಿ ಏನು? ಜನ ಇವರಿಗೆ ಬೆಲೆ ಕೊಡುತ್ತಾರೆಯೇ? ಇವರಿಗೆ ಅಷ್ಟೆಲ್ಲ ರಾಜಕೀಯ ಆಸಕ್ತಿ ಇದ್ದರೆ ಖಾವಿ ಕಿತ್ತೊಗೆಯುವುದೇ ಬೇಡ, ಅದನ್ನು ಹಾಕಿಕೊಂಡೇ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ರೀತಿ ಸಕ್ರಿಯ ರಾಜಕಾರಣಕ್ಕೆ ಧುಮುಕಲಿ. ರಾಜಕೀಯ ವೇದಿಕೆಗಳಲ್ಲೇ ತಮ್ಮ ‘ಪೌರುಷ’ ಮೆರೆಯಲಿ. ಅವರೂ ಅಧಿಕಾರ ಹಿಡಿಯಲಿ. ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯನವರ ಪರ ಕಿತ್ತಾಡುವುದು ಬೇಡ, ಅವರೇ ಕುಮಾರಸ್ವಾಮಿ, ಸಿದ್ದರಾಮಯ್ಯನವರಾಗಿ ತಮ್ಮ ವಾಗ್ಝರಿ ಹರಿಸಲಿ. ಯಾರು ಬೇಡವೆನ್ನುತ್ತಾರೆ? ಸನ್ಯಾಸಿ ರಾಜಕಾರಣಿ ಆಗಬಾರದು ಅಂತಲೂ ಇಲ್ಲ, ರಾಜಕಾರಣಿ ಸನ್ಯಾಸಿ ಆಗಬಾರದು ಎಂದೂ ಇಲ್ಲ. ಆದರೆ ಒಂದರ ವೇಷ ತೊಟ್ಟು ಮತ್ತೊಂದರ ಪಾತ್ರ ಮೆರೆಯುವುದು ಮಾತ್ರ ಸರಿಯಲ್ಲ. ಅದು ಛದ್ಮವೇಷವಾಗುತ್ತದೆ, ನಾಟಕವಾಗುತ್ತದೆ!

ಕುಮಾರಸ್ವಾಮಿ ಅವರಿಗೆ ಏನಾದರೂ ತೊಂದರೆ ಆದರೆ ಅದನ್ನು ನೋಡಿಕೊಳ್ಳಲು ಅವರೇ ಸಮರ್ಥರಿದ್ದಾರೆ. ಮೇಲಾಗಿ ಅವರ ತಂದೆ, ರಾಜಕೀಯ ಗಾರುಡಿಗ ಅವರ ರಾಜಕೀಯ ಆಗುಹೋಗುಗಳ ಬಗ್ಗೆ ನಂಜಾವಧೂತ ಸ್ವಾಮೀಜಿಗಳು ತಲೆ ಕೆಡಿಸಿಕೊಳ್ಳಬೇಕಿಲ್ಲ, ಧಮಕಿ ಹಾಕುವ ಅಗತ್ಯವೂ ಇಲ್ಲ. ಅದೇ ರೀತಿ ಸಿದ್ದರಾಮಯ್ಯನರೂ ತಮ್ಮನ್ನು ತಾವು ರಕ್ಷಿಸಿಕೊಳ್ಳುವಷ್ಟು ಸಬಲರಿದ್ದಾರೆ. ಅಗತ್ಯಬಿದ್ದರೆ ರಾಜಕೀಯವಾಗಿ ಗುದ್ದಲು ಟಗರಿನಷ್ಟೇ ಗಟ್ಟಿಯೂ ಇದ್ದಾರೆ. ಕಾಗಿನೆಲೆ ಶ್ರೀಗಳ ಮಂತ್ರದಂಡದ ನೆರವು ಅವರಿಗೆ ಬೇಕಿಲ್ಲ. ಸಿದ್ದರಾಮಯ್ಯನವರ ಅವಧಿಯಲ್ಲಿ ಆಯಕಟ್ಟಿನ ಜಾಗಗಳಲ್ಲಿದ್ದ ಕುರುಬ ಸಮುದಾಯದ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗುತ್ತಿದೆ ಎಂದು ಕಾಗಿನೆಲೆ ಶ್ರೀಗಳು ಗುಟುರು ಹಾಕಿದ್ದಾರೆ. ಆದರೆ ಇದರಲ್ಲಿ ವಿರುದ್ಧಾರ್ಥವೂ ಅಡಗಿದೆ ಶ್ರೀಗಳು ಯೋಚಿಸಬೇಕಿತ್ತು. ಅಂದರೆ ಸಿದ್ದರಾಮಯ್ಯನವರ ಅವಧಿಯಲ್ಲಿ ಆಯಕಟ್ಟಿನ ಜಾಗಗಳಿಗೆ ಕುರುಬ ಸಮುದಾಯದವರನ್ನು ನಿಯೋಜಿಸಲಾಗಿತ್ತು. ಹಾಗೇ ನಿಯೋಜಿಸುವಾಗ ಮೊದಲು ಆ ಜಾಗದಲ್ಲಿದ್ದ ಅನ್ಯವರ್ಗದವರನ್ನು ಎತ್ತಂಗಡಿ ಮಾಡಲಾಗಿತ್ತು ಎಂಬ ಅರ್ಥವನ್ನು ಇದು ಬಿಂಬಿಸುವುದಿಲ್ಲವೇ? ಸಿದ್ದರಾಮಯ್ಯನವರು ಆ ಕೆಲಸ ಮಾಡಿದಾಗ ‘ಧರ್ಮಕಾರ್ಯ’. ಈಗ ಕುಮಾರಸ್ವಾಮಿ ಮಾಡಿದರೆ ‘ಅಧರ್ಮ ಕಾರ್ಯ’!

ಈಗ ಜಾತಿ, ಧರ್ಮ, ರಾಜಕಾರಣ ಮಿಶ್ರಣದಿಂದ ಈಗೇನಾಗಿದೆ ಎಂದರೆ ದೇವೇಗೌಡರ ಕುಟುಂಬ ವರ್ಸಸ್ ಸಿದ್ದರಾಮಯ್ಯ, ನಂಜಾವಧೂತ ಸ್ವಾಮೀಜಿ ವರ್ಸಸ್ ಕಾಗಿನೆಲೆ ಶ್ರೀ, ವರ್ಸಸ್ ಕುರುಬರು ಎಂಬಂತಾಗಿದೆ. ಇಬ್ಬರ ರಾಜಕೀಯ ವೈಷಮ್ಯಕ್ಕೆ ಅವರು ಪ್ರತಿನಿಧಿಸುವ ಸಮುದಾಯ, ಸರ್ವರನ್ನೂ ಏಕಭಾವದಿಂದ ನೋಡಬೇಕಾದ ಮಠಾಧಿಪತಿಗಳೂ ಪರಸ್ಪರ ಹಲ್ಲು ಮಸೆಯುವಂತೆ ಮಾಡಿದೆ. ಖಂಡಿತವಾಗಿಯೂ ಇದು ಸಮಾಜದ ಹಿತದೃಷ್ಟಿಯಿಂದ ಒಳ್ಳೆಯ ಬೆಳವಣಿಗೆ ಅಲ್ಲ. ರಾಜಕಾರಣಿಗಳು ತಪ್ಪು ಮಾಡಿದರೆ ಮತದಾರರು ಪಾಠ ಕಲಿಸುತ್ತಾರೆ. ಆದರೆ ಉಳಿದವರು ತಪ್ಪು ಮಾಡಿದಾಗ ಸ್ವಾಮೀಜಿಗಳಾದವರು ತಿದ್ದಬೇಕು. ಆದರೆ ತಮ್ಮನ್ನೇ ತಿದ್ದುವ ತಪ್ಪು ಮಾಡಿದವರು ಸ್ವಾಮೀಜಿಗಳು ಎನಿಸಿಕೊಳ್ಳುವುದಿಲ್ಲ. ಅಂಥವರಿಂದ ಸಮಾಜವೂ ಉದ್ಧಾರವಾಗುವುದಿಲ್ಲ!

ಲಗೋರಿ : ಸನ್ಯಾಸಿ ರಾಜಕಾರಣಿ ಸಹವಾಸ ಸಮಾಜಕ್ಕೆ ಮುಳುವಾಗಬಾರದು!

(ವಿಶ್ವವಾಣಿಯಲ್ಲಿ ಪ್ರಕಟಿತ)

Leave a Reply