ಸ್ನೇಹಿತನ ಮಾತಿಗೆ ರಾಹುಲ್ ಗಾಂಧಿ ಮನ್ನಣೆ!

ಡಿಜಿಟಲ್ ಕನ್ನಡ ಟೀಮ್:

ಕರ್ನಾಟಕ ರಾಜ್ಯ ಕಾಂಗ್ರೆಸ್ ಅಧ್ಯಕ್ಷರಾಗಿ ದಿನೇಶ್ ಗುಂಡೂರಾವ್ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ. ಜೊತೆ ಉತ್ತರ ಕರ್ನಾಟಕಕ್ಕೆ ತಾರತಮ್ಮ ಅನ್ನೋ ಆರೋಪ‌ ನಿವಾರಣೆ ಮಾಡಿಕೊಳ್ಳುವತ್ತ ಹೆಜ್ಜೆ ಹಾಕಿರುವ ಕಾಂಗ್ರೆಸ್ ಹೈಕಮಾಂಡ್, ಬೀದರ್‌ನಿಂದ ಆಯ್ಕೆಯಾಗಿರುವ ಈಶ್ವರ್ ಖಂಡ್ರೆ ಅವರನ್ನು ಕೆಪಿಸಿಸಿ ಕಾರ್ಯಾಧ್ಯಕ್ಷರನ್ನಾಗಿ ನೇಮಕ ಮಾಡುವ ಮೂಲಕ ಪ್ರಾದೇಶಿಕ ಅಸಮತೋಲನ ತೊಲಗಿಸುವ ಕೆಲಸ ಮಾಡಿದ್ದಾರೆ. ಸರ್ಕಾರ ರಚನೆ ವೇಳೆಯೇ ದಿನೇಶ್ ಗುಂಡೂರಾವ್ ನೇಮಕದ ಬಗ್ಗೆ ಸಾಕಷ್ಟು ಚರ್ಚೆಗಳೂ ನಡೆದವು. ರಾಜ್ಯ ಸಚಿವ ಸಂಪುಟದಲ್ಲಿ‌ ಮಂತ್ರಿ ಸ್ಥಾನ ಸಿಗದೆ ಇದ್ದಾಗ ದಿನೇಶ್ ಗುಂಡೂರಾವ್ ಅವರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಪಕ್ಕಾ ಎಂದೇ ಹೇಳಲಾಗಿತ್ತು. ಆದರೆ ಬ್ರಾಹ್ಮಣ ಸಮುದಾಯಕ್ಕೆ ಸೇರಿರುವ ದಿನೇಶ್ ಗುಂಡೂರಾವ್ ಅವರನ್ನು ನೇಮಕ ಮಾಡಿದರೂ ಪಕ್ಷಕ್ಕೆ ಹೆಚ್ಚಿನ ಲಾಭ ಆಗುವುದಿಲ್ಲ ಎಂದು ಕಾಂಗ್ರೆಸ್ ಪಕ್ಷದೊಳಗೇ ವಿರೋಧ ವ್ಯಕ್ತವಾಗಿತ್ತು. ಆದರೂ ಅವೆಲ್ಲಾ ವಿರೋಧಗಳನ್ನು ಬದಿಗೆ ಸರಿಸಿ ಕೆಪಿಸಿಸಿ ಅಧ್ಯಕ್ಷರನ್ನಾಗಿ ದಿನೇಶ್ ಗುಂಡೂರಾವ್ ಅವರನ್ನು ನೇಮಕ ಮಾಡಲು ಕಾರಣವಾಗಿದ್ದು ಸ್ನೇಹ!

ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಪರಮೇಶ್ವರ್ ಇಬ್ಬರೂ ಕೂಡ ಒಬ್ಬೊಬ್ಬರ ಪರವಾಗಿ ಲಾಬಿ ಮಾಡುತ್ತಿದ್ದರು. ಕೆಪಿಸಿಸಿ ಅಧ್ಯಕ್ಷರೂ ಆಗಿದ್ದ ಡಾ. ಜಿ. ಪರಮೇಶ್ವರ್, ಹೆಚ್.ಕೆ ಪಾಟೀಲ್ ಪರವಾಗಿ ಲಾಬಿ ಮಾಡಿದ್ರು. ಉತ್ತರ ಕರ್ನಾಟಕ ಭಾಗದಲ್ಲಿ ಈಗಾಗಲೇ ಲಿಂಗಾಯತರು ಪಕ್ಷದಿಂದ ದೂರ ಹೊಗಿದ್ದಾರೆ, ಅವರನ್ನು ಮತ್ತೊಮ್ಮೆ ಪಕ್ಷದತ್ತ ಸೆಳೆಯಲು ಕೆಪಿಸಿಸಿ ಅಧ್ಯಕ್ಷರಾಗಿ ಲಿಂಗಾಯತರನ್ನು ಮಾಡಬೇಕು ಎಂದಿದ್ದರು. ಇನ್ನು ದಿನೇಶ್ ಗುಂಡೂರಾವ್ ಪರವಾಗಿ ಸಿದ್ದರಾಮಯ್ಯ ಬ್ಯಾಟ್ ಬೀಸಿದ್ದರು. ಇದೀಗ ದಿನೇಶ್ ಗುಂಡೂರಾವ್ ಹಾಗೂ ಈಶ್ವರ್ ಖಂಡ್ರೆ ಅವರನ್ನು ನೇಮಕ ಮಾಡಿರೋದು ಸಿದ್ದರಾಮಯ್ಯ ಅವರಿಗೆ ಆನೆ ಬಲ ಬಂದಂತೆ ಆಗಿದೆ. ಸಚಿವ ಸ್ಥಾನ ಸಿಗದೆ ಅಸಮಾಧಾನಗೊಂಡಿದ್ದ ಈಶ್ವರ್ ಖಂಡ್ರೆ ಅವರನ್ನು ಕೆಪಿಸಿಸಿ ಕಾರ್ಯಾಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡಲಾಗಿದೆ. ಈ ಮೂಲಕ ಉತ್ತರ ಕರ್ನಾಟಕ ಭಾಗಕ್ಕೆ ಆಗಿದೆ ಎನ್ನಲಾದ ತಾರತಮ್ಯವನ್ನು ನಿವಾರಿಸಿದಂತೆ ಆಗಿದೆ. ಅದರ ಜೊತೆಗೆ ಲಿಂಗಾಯತ ಮುಖಂಡರಿಗೆ ಮಣೆ ಹಾಕಿದಂತೆಯೂ ಆಗಿದೆ ಅನ್ನೋದು ಕಾಂಗ್ರೆಸ್ ಹೈಕಮಾಂಡ್ ಯೋಜನೆಯಾಗಿದೆ. ಸಿದ್ದರಾಮಯ್ಯ ಅಥವಾ ಪರಮೇಶ್ವರ್ ನಡುವಿನ ಗುದ್ದಾಟದಲ್ಲಿ ಸಿದ್ದರಾಮಯ್ಯ ಅವರಿಗೆ ಮೇಲುಗೈ ಆಗಿದೆ ಅನ್ನೋದಕ್ಕಿಂತ ಸ್ನೇಹಿತನ ಮಾತಿಗೆ ರಾಹುಲ್ ಗಾಂಧಿ ಮಣೆ ಹಾಕಿದ್ದಾರೆ ಅನ್ನೋದೇ ಸೂಕ್ತ.

ಚುನಾವಣೆಯಲ್ಲಿ ಕಾಂಗ್ರೆಸ್ ಕುಸಿತ ಅನುಭವಿಸಿದ ಬಳಿಕ ಜೆಡಿಎಸ್ ಜೊತೆ ಹೊಂದಾಣಿಕೆ ಮಾಡಿಕೊಂಡು ಸರ್ಕಾರ ರಚನೆ ಮಾಡಿತ್ತು. ಈ ವೇಳೆಯೇ ಸಚಿವ ಸ್ಥಾನ ಸಿಗದ ದಿನೇಶ್ ಗುಂಡೂರಾವ್ ಅವರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಅನ್ನೋದು ಫಿಕ್ಸ್ ಆಗಿತ್ತು ಆದರೆ ಭಾರಿ ವಿರೋಧವೂ ಕೇಳಿ ಬಂದ ಬಳಿಕ ನೇಮಕವನ್ನು ತಾತ್ಕಾಲಿವಾಗಿ ತಡೆ ಹಿಡಿಯಲಾಗಿತ್ತು. ಈ ವೇಳೆ ಹೈಕಮಾಂಡ್ ಮಟ್ಟದಲ್ಲಿ ಸ್ನೇಹಿತನ ಬಳಿ ಲಾಬಿ ಮಾಡಿದ್ದು ಇದೇ ಕೃಷ್ಣಭೈರೇಗೌಡ. ಅಸಲಿಗೆ ರಾಜ್ಯ ಸರ್ಕಾರದಲ್ಲಿ ಸಚಿವರಾಗಿರುವ ಕೃಷ್ಣಭೈರೇಗೌಡ, ರಾಹುಲ್ ಗಾಂಧಿಗೆ ಆಪ್ತ ಸ್ನೇಹಿತ. ಇಲ್ಲಿ‌ ಕರ್ನಾಟಕದಲ್ಲಿ ಕೃಷ್ಣಭೈರೇಗೌಡ ಅವರಿಗೆ ದಿನೇಶ್ ಗುಂಡೂರಾವ್ ಸ್ನೇಹಿತರು. ಹೀಗಾಗಿ ದಿನೇಶ್ ಗುಂಡೂರಾವ್ ಅವರಿಗೆ ಕೆಪಿಸಿಸಿ ಅಧ್ಯಕ್ಷ ಸಿಗುವಂತೆ ನೋಡಿಕೊಂಡಿದ್ದಾರೆ ಎನ್ನಲಾಗಿದೆ. ಈ ಮಾತು ಸತ್ಯ ಎನ್ನುವಂತೆ ಕೃಷ್ಣಭೈರೇಗೌಡರು ಕೂಡ ಸಾಕಷ್ಟು ಬಾರಿ ದೆಹಲಿಗೆ ತೆರಳಿ ಹೈಕಮಾಂಡ್ ಜೊತೆ ಮಾತುಕತೆ ನಡೆಸಿದ್ರು.

ರಾಜ್ಯ ಸರ್ಕಾರದ ವಿರುದ್ಧ ಅಸಮಾಧಾನ ಭುಗಿಲೆದ್ದಾಗಲೂ ಸಂಧಾನ ಮಾಡಿದ್ದು ಇದೇ ಕೃಷ್ಣಭೈರೇಗೌಡ. ರಾಹುಲ್ ಗಾಂಧಿ ಅವರು ನೇರವಾಗಿ ಸಂದೇಶ ರವಾನಿಸಿದ ಬಳಿಕ ಅಖಾಡಕ್ಕೆ ಎಂಟ್ರಿಕೊಟ್ಟಿದ್ದ ಕೃಷ್ಣಭೈರೇಗೌಡ, ಎಂಬಿ ಪಾಟೀಲ್ ಸೇರಿ‌ಹಲವರ ಜೊತೆ ಚರ್ಚೆ ನಡೆಸಿದ್ರು. ಈಗ ಸ್ನೇಹಿತನಿಗಾಗಿ ಸ್ನೇಹಿತನ ಬಳಿ‌ಲಾಬಿ ಮಾಡಿ ಸಚಿವ ಕೃಷ್ಣಭೈರೇಗೌಡ ಯಶಸ್ವಿಯಾಗಿದ್ದಾರೆ. ಸ್ನೇಹಿತನ ಮಾತಿಗೆ ರಾಹುಲ್ ಗಾಂಧಿಯೂ ಮಣೆ ಹಾಕಿದ್ದಾರೆ. ಇದು ಕಾಂಗ್ರೆಸ್ ನಾಯಕರಲ್ಲೇ ಕೇಳಿ ಬರುತ್ತಿರೋ ಮಾತು.

Leave a Reply