ಸರ್ಕಾರದ ವಿರುದ್ಧ ತಿರುಗಿಬಿದ್ದ ಕೈ ಶಾಸಕರು!

ಡಿಜಿಟಲ್ ಕನ್ನಡ ಟೀಮ್:

ರಾಜ್ಯ ಸರ್ಕಾರದ ಬಜೆಟ್ ಬಳಿಕ ಕರಾವಳಿ ಭಾಗಕ್ಕೆ ಅನ್ಯಾಯವಾಗಿದೆ ಎಂದು ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಜಿಲ್ಲೆಯ ಜನಪ್ರತಿನಿಧಿಗಳು ಪ್ರತಿಭಟನೆ ನಡೆಸಿದ್ದಾರೆ, ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದ್ದಾರೆ. ಬಜೆಟ್‌ಗೆ ಸದನದ ಒಪ್ಪಿಗೆ ಪಡೆಯುವ ಮುಂಚಿತವಾಗಿ ಕರಾವಳಿ ಭಾಗಕ್ಕೆ ಅನ್ಯಾಯ ಆಗಿರುವ ಯೋಜನೆಗಳನ್ನು ಸೇರಿಸಬೇಕೆಂದು ಪಟ್ಟು ಹಿಡಿದಿದ್ದಾರೆ. ಇವರ ಆರೋಪ ಅಲ್ಲಗಳೆದಿರುವ ಮುಖ್ಯಮಂತ್ರಿ ಕುಮಾರಸ್ವಾಮಿ, ಮೀನುಗಾರರ ಅಭಿವೃದ್ಧಿಗೆ ಸಿದ್ದರಾಮಯ್ಯ ಸರ್ಕಾರದಲ್ಲಿ 150 ಕೋಟಿ ಅನುದಾನ ನೀಡಲಾಗಿದೆ. ಆ ಬಜೆಟ್ ಅನ್ನೂ ಕೂಡ ಮುಂದುವರಿಸುತ್ತಿರುವ ಕಾರಣ ಯಾರಿಗೂ ಅನ್ಯಾಯ ಆಗುವ ಪ್ರಶ್ನೆಯಿಲ್ಲ, ಸದನದಲ್ಲಿ ಅವರ ಆರೋಪಕ್ಕೆ ಸೂಕ್ತ ಉತ್ತರ ನೀಡಲಾಗುವುದು ಎಂದಿದ್ದಾರೆ. ಕರಾವಳಿ ಪ್ರದೇಶದಲ್ಲಿ ಬಿಜೆಪಿ ಪಕ್ಷ ಪ್ರಾಬಲ್ಯ ಸಾಧಿಸಿದ್ದು, ಬಕೆಟ್‌ನಲ್ಲಿ ಏನನ್ನೂ ಕೊಟ್ಟಿಲ್ಲ ಎಂದು ಒಂದು ವಿರೋಧ ಪಕ್ಷವಾಗಿ ಪ್ರತಿಭಟನೆ ಮಾಡೋದ್ರಲ್ಲಿ ಅರ್ಥವಿದೆ. ಆದರೆ ಮೈತ್ರಿ ಪಕ್ಷವಾಗಿರುವ ಕಾಂಗ್ರೆಸ್ ಶಾಸಕರೇ ಪ್ರತಿಭಟಿಸುತ್ತಿರೋದು ಸರ್ಕಾರಕ್ಕೆ ಮುಜುಗರ ಉಂಟು ಮಾಡಿದೆ.

ಸಿಎಂ ಹಾಗೂ ಮಾಜಿ ಸಿಎಂಗೆ ಹೆಚ್‌ಕೆ ಪಾಟೀಲ್ ಪತ್ರ

ಬಜೆಟ್ ಮಂಡನೆ ಆಗ್ತಿದ್ದ ಹಾಗೆ ಕಾಂಗ್ರೆಸ್ ಪಕ್ಷದಿಂದ ಸಚಿವರಾಗಿರುವ ಯು.ಟಿ ಖಾದರ್ ಅಲ್ಪಸಂಖ್ಯಾತ ಇಲಾಖೆಗೆ ಈ ಬಾರಿ ಬಜೆಟ್‌ನಲ್ಲಿ ಏನನ್ನೂ ಕೊಟ್ಟಿಲ್ಲ ಎಂದು ಮಾಧ್ಯಮಗಳ ಎದುರೇ ಹೇಳಿದ್ರು. ಇನ್ನು ಅನ್ನಭಾಗ್ಯ ಯೋಜನೆಯಲ್ಲಿ ಎರಡು ಕೆಜಿ ಅಕ್ಕಿ ಕಡಿಮೆ ಮಾಡಿರೋದ್ರಿಂದ ಕೆಟ್ಟ ಪರಿಣಾಮ ಬೀರಲಿದೆ ಎಂದು ಸಚಿವ ಜಮೀರ್ ಅಹ್ಮದ್ ಎಚ್ಚರಿಸಿದ್ರು. ಇನ್ನು ಉತ್ತರ ಕರ್ನಾಟಕ ಭಾಗದ ಹಿರಿಯ ಮುಖಂಡರಾದ ಹೆಚ್‌ಕೆ ಪಾಟೀಲರು ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ರು. ಇದೀಗ ಉತ್ತರ ಕರ್ನಾಟಕ ಭಾಗಕ್ಕೆ ಬಜೆಟ್‌ನಲ್ಲಿ ಏನೂ ಸಿಲ್ಕಿಲ್ಲವೆಂದು ಮುಖ್ಯಮಂತ್ರಿ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಅಸಮಾಧಾನ ತೋಡಿಕೊಂಡಿದ್ದಾರೆ. ಮೈತ್ರಿ ಪಕ್ಷದ ಶಾಸಕರ ಆರೋಪವನ್ನೂ ಅಲ್ಲಗಳೆದಿರುವ ಮುಖ್ಯಮಂತ್ರಿ, ಉತ್ತರ ಕರ್ನಾಟಕ ಭಾಗವನ್ನು ನಿರ್ಲಕ್ಷ್ಯ ಮಾಡುವ ಸಾಧ್ಯತೆಯಿಲ್ಲ, ಹೊಸ ಬಜೆಟ್‌ನಲ್ಲಿ 15 ಕಾರ್ಖಾನೆಗಳನ್ನು ನೀಡಲಾಗಿದೆ. ಗದಗ ಜಿಲ್ಲೆಗೆ ಕುಡಿಯುವ ನೀರು ಪೂರೈಕೆಗಾಗಿ 15 ಕೋಟಿ ಅನುದಾನ ಒದಗಿಸಲಾಗಿದೆ ಅಂತಾ ಹೇಳಿದ್ದಾರೆ. ಹಾಗಿದ್ದ ಮೇಲೆ ಹೆಚ್‌ಕೆ ಪಾಟೀಲರು ಆರೋಪ ಮಾಡ್ತಿರೋದು ಯಾಕೆ? ಅನ್ನೋ ಅನುಮಾನ ಮೂಡೋದು ಸಹಜ. ಅದಕ್ಕೂ ಒಂದು ಕಾರಣವಿದೆ.

ಮಾಜಿ ಮಂತ್ರಿ ಆಗಿರುವ ಹೆಚ್‌ಕೆ ಪಾಟೀಲರು ಸರ್ಕಾರದ ಬಜೆಟ್ ವಿರುದ್ದ ಅಪಸ್ವರ ಎತ್ತಲು ಕಾರಣವಿದೆ. ಅದೇನಂದರೆ ಮೈತ್ರಿ ಸರ್ಕಾರದಲ್ಲಿ ಮತ್ತೆ ಮಂತ್ರಿಯಾಗಲು ತುಂಬಾ ಓಡಾಟ ನಡೆಸಿದ್ರು. ಒಂದು ಸರ್ಕಾರದಲ್ಲಿ‌ ಸಚಿವನಾಗಿ ಕೆಲಸ ಮಾಡಿದ್ರೂ ತಮ್ಮ ಜಿಲ್ಲೆಯಲ್ಲಿ ಒಂದೇ ಒಂದು ಸ್ಥಾನವನ್ನು ಗೆಲ್ಲಿಸಲು ಆಗಲಿಲ್ಲ ಹಾಗು ಸಚಿವರಾಗಿದ್ದರೂ ಕೂಡ ಪಕ್ಷದ ಪರವಾಗಿ ಬೇರೆ ಅಭ್ಯರ್ಥಿಗಳಿಗೆ ಸಹಾಯ ಮಾಡಲಿಲ್ಲ ಅನ್ನೋ ಆರೋಪ ಇರುವ ಕಾರಣಕ್ಕೆ ಹೈಕಮಾಂಡ್ ಸಚಿವಗಿರಿ ಕೊಡಲಿಲ್ಲ. ಕಡೇ ಪಕ್ಷ ಯಾವುದಾದರೂ ನಿಗಮ ಮಂಡಳಿಗೆ ಅಧ್ಯಕ್ಷರಾಗಲು ಪಾಟೀಲರು ಯತ್ನಿಸಿದ್ರು. ಅದೂ ಕೈಗೂಡುವ ಸಾಧ್ಯತೆ ತೀರ ಕಡಿಮೆಯಾಗಿದೆ. ಇದನ್ನೆಲಾ ಮನಗಂಡಿರುವ ಹೆಚ್‌ಕೆ ಪಾಟೀಲರು ಸರ್ಕಾರದ ಮೇಲೆ ಒತ್ತಡ ಹೇರುವ ತಂತ್ರವಾಗಿ ಪತ್ರದ ಸಮರ ಶುರು ಮಾಡಿದ್ದಾರೆ ಎನ್ನಲಾಗ್ತಿದೆ.

Leave a Reply