ನಿರುದ್ಯೋಗಿಗಳ ಸಮಸ್ಯೆಗೆ ಸ್ಪಂದಿಸಲು ಸಿಎಂ ಜನತಾ ದರ್ಶನದಿಂದ ಹೊಸ ಪ್ಲಾನ್!

ಡಿಜಿಟಲ್ ಕನ್ನಡ ಟೀಮ್:

2008ರಲ್ಲಿ ಎಚ್.ಡಿ ಕುಮಾರಸ್ವಾಮಿ ಅವರ ಆಡಳಿತಕ್ಕೆ ಟ್ರೇಡ್ ಮಾರ್ಕ್ ಆಗಿದ್ದ ಜನತಾ ದರ್ಶನ ಕಾರ್ಯಕ್ರಮ ಈ ಬಾರಿಯೂ ಪರಿಣಾಮಕಾರಿಯಾಗುತ್ತಿರುವ ಲಕ್ಷಣಗಳು ಗೋಚರಿಸಿವೆ. ಅದಕ್ಕೆ ಕಾರಣ ಜನತಾ ದರ್ಶನದ ಮೂಲಕ ಈಗ 250 ನಿರುದ್ಯೋಗಿಗಳಿಗೆ ಉದ್ಯೋಗ ಸಿಗುವಂತಾಗಿರುವುದು.

ಹೌದು, ಮುಖ್ಯಮಂತ್ರಿಯವರ ಗೃಹ ಕಚೇರಿ ಕೃಷ್ಣಾದಲ್ಲಿ ಇಂದು ನಡೆದ ಜನತಾ ದರ್ಶನದಲ್ಲಿ ಅರ್ಜಿ ಸಲ್ಲಿಸಿದ್ದ 250 ನಿರುದ್ಯೋಗಿಗಳಿಗೆ ಉದ್ಯೋಗ ನೀಡಲು ಚಾಲನೆ ನೀಡಲಾಯಿತು. ಈ ಬಗ್ಗೆ ಮಾಹಿತಿ ನೀಡಿದ ಕುಮಾರಸ್ವಾಮಿ ಅವರು ಹೇಳಿದ್ದಿಷ್ಟು…

‘ಗೃಹ ಕಚೇರಿಯಲ್ಲಿ ಇದಕ್ಕಾಗಿಯೇ ತಂಡವೊಂದು ನೇಮಕಗೊಂಡಿದೆ. ಈ ತಂಡ ವಿವಿಧ ಕಂಪನಿಗಳೊಂದಿಗೆ ಒಡಂಬಡಿಕೆ ಮಾಡಿಕೊಂಡು, ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ ಕಲ್ಪಿಸಲಾಗುವುದು.

ರಾಜ್ಯದ 30 ಜಿಲ್ಲೆಗಳ ಜಿಲ್ಲಾಧಿಕಾರಿಗಳು ಜನಸಾಮಾನ್ಯರ ಸಮಸ್ಯೆಯನ್ನು ಆಲಿಸಲು ಸಮಯ ನಿಗದಿ ಮಾಡುವಂತೆ ಹಾಗೂ ಅಂಗವಿಕಲರು, ಬಡ ಹೆಣ್ಣು ಮಕ್ಕಳು , ನಿರುದ್ಯೋಗಿ ಯುವಕರ ಸಮಸ್ಯೆಗಳನ್ನು ಸ್ಥಳೀಯವಾಗಿಯೇ ಬಗೆಹರಿಸಲು ಸೂಚಿಸಿ ಇಂದು ಸುತ್ತೋಲೆ ಹೊರಡಿಸಲಾಗುವುದು. ಜಿಲ್ಲಾಧಿಕಾರಿಗಳಿಂದ ಬಗೆಹರಿಸಲಾಗದ ಸಮಸ್ಯೆಗಳನ್ನು ಇಲ್ಲಿಗೆ ಶಿಫಾರಸ್ಸು ಮಾಡಬಹುದು. ಈ ಕೆಲಸವನ್ನು ತಿಂಗಳಿಗೆ ಎರಡು ಬಾರಿ ಖುದ್ದು ಪರಿಶೀಲಿಸುತ್ತೇನೆ.

ಜಿಲ್ಲಾ ಉಸ್ತುವಾರಿ ಕಾರ್ಯರ್ಶಿಗಳಾಗಿ ನೇಮಕವಾಗಿರುವ ಪ್ರಧಾನ ಕಾರ್ಯರ್ಶಿಗಳು ತಿಂಗಳಿಗೊಮ್ಮೆ ನೆನೆಗುದಿಗೆ ಬಿದ್ದಿರುವ ಸಮಸ್ಯೆಗಳನ್ನು ಪರಿಶೀಲಿಸಿ ಮುಖ್ಯ ಕಾರ್ಯದರ್ಶಿಗಳ ಮುಖಾಂತರ ನನ್ನ ಗಮನಕ್ಕೆ ತರಲಾಗುವುದು. ಆಡಳಿತದಲ್ಲಿ ಜನಸಾಮಾನ್ಯರಿಗೆ ಉಪಯೋಗವಾಗುವಂತಹ ಕೆಲವು ಮಾರ್ಪಾಡುಗಳನ್ನು ತರಲಾಗುತ್ತಿದೆ.’

Leave a Reply