ಅನ್ನ ಬೆಳೆವ ರೈತನಿಗೆ ಜಾತಿ ಇದೆಯೇ?!

ತಿನ್ನೋ ಅನ್ನಕ್ಕೆ ಜಾತಿ ಇದೆಯೇ? ಆ ಅನ್ನ ಬೆಳವ ರೈತನಿಗೆ ಜಾತಿ ಇದೆಯೇ? ಇದು ಲಿಂಗಾಯತರು ಬೆಳೆದ ಅಕ್ಕಿ, ಇದು ಒಕ್ಕಲಿಗರು ಬೆಳೆದ ಕಬ್ಬು, ಇದು ಕುರುಬರು ಬೆಳೆದ ತೆಂಗು, ಇದು ಬ್ರಾಹ್ಮಣರು ಬೆಳೆದ ಬಾಳೆ ಅಂತ ಬೆಳೆಯನ್ನು ವಿಭಜನೆ ಮಾಡಿ ನೋಡ ಲು ಆಗುತ್ತಾ? ಕೃಷಿ ಮತ್ತು ಕೃಷಿಕನನ್ನು ಜಾತಿ ಆಧಾರದಲ್ಲಿ ಅಳೆಯಲು ಸಾಧ್ಯವೇ? ಹಾಗೆ ಅಳೆಯೋದು, ಸರಿಯೇ?

ಖಂಡಿತಾ ಸಾಧ್ಯವಿಲ್ಲ. ಏಕೆಂದರೆ ಬೇಸಾಯ ಯಾರಪ್ಪನ ಸ್ವತ್ತೂ ಅಲ್ಲ. ಅದಕ್ಕೆ ಯಾರ ಪ್ಪನ ಅಪ್ಪಣೆಯೂ ಬೇಕಿಲ್ಲ. ಇಂಥವರೇ ಮಾಡಬೇಕೆಂಬ ಷರತ್ತೂ ಇಲ್ಲ. ಹೀಗಾಗಿಯೇ ಲಾಗಾಯ್ತಿನಿಂದಲೂ ಭಾರತದಲ್ಲಿ ಜಾತಿ-ಮತಬೇಧವಿಲ್ಲದೆ ಎಲ್ಲ ಸಮುದಾಯ ದವರೂ ಕೃಷಿ ಮಾಡಿಕೊಂಡು ಬಂದಿದ್ದಾರೆ. ಕಾಲ ಕಳೆದಂತೆ ಪ್ರಮಾಣದಲ್ಲಿ ಸ್ವಲ್ಪ ಏರುಪೇರಾಗಿರಬಹುದು. ಹಳ್ಳಿಗರು ನಗರಪ್ರದೇಶಗಳಿಗೆ ವಲಸೆ ಬಂದ ಪ್ರಯುಕ್ತ ಶೇಕಡಾ 70 ರಿಂದ 67ಕ್ಕೆ ಕುಸಿದಿರಬಹುದು. ಆದರೆ ಬೇಸಾಯ ಭಾರತದ ಬೆನ್ನೆಲುಬು ಎಂಬ ಬಿರುದು ಎಂದು ಬಾಗಿಲ್ಲ, ಲಕ್ಷಣಗಳೂ ಇಲ್ಲ. ಅಲ್ಲಿಗೆ ಕೃಷಿ ಸರ್ವರ ಖುಷಿ ಕಸುಬು.

ರೈತ ಮತ್ತು ಆತ ಬೆಳೆದ ಅನ್ನಕ್ಕೆ ಜಾತಿ ಇಲ್ಲ ಎಂದ ಮೇಲೆ ಮುಖ್ಯಮಂತ್ರಿ ಕುಮಾರಸ್ವಾಮಿ ಬಜೆಟ್‌ನಲ್ಲಿ ಮಾಡಿದ ಕೃಷಿ ಸಾಲ ಮನ್ನಾದಲ್ಲಿ ‘ಜಾತಿ ಭಿನ್ನ’ ಎಣಿಸುತ್ತಿರುವುದು ಎಷ್ಟರ ಮಟ್ಟಿಗೆ ಸರಿ? ಕುಮಾರಸ್ವಾಮಿ ಮಾಡಿರುವ ಸಾಲಮನ್ನಾದಲ್ಲಿ ಹಳೇ ಮೈಸೂರು ಪ್ರಾಂತ್ಯ ಹಾಗೂ ಈ ಭಾಗದಲ್ಲಿ ಹೆಚ್ಚಾಗಿರುವ ಒಕ್ಕಲಿಗರಿಗೆ ಮಾತ್ರ ಅನುಕೂಲ ಆಗಿದೆಯಂತೇ. ಮೊದಲ ಹಂತದಲ್ಲಿ ಮನ್ನಾಕ್ಕೆ ಮೀಸಲಾಗಿರುವ 34 ಸಾವಿರ ಕೋಟಿ ಪೈಕಿ ಶೇಕಡಾ 32 ರಷ್ಟು ಲಾಭ ಒಕ್ಕಲಿಗರಿಗೇ ಆಗಿದೆಯಂತೇ. ಹಳೇ ಮೈಸೂರು ಭಾಗದವರಿಗೆ ಶೇಕಡಾ 15 ರಷ್ಟು. ಉಳಿದವರಿಗೆ, ಉಳಿದ ಭಾಗವದವರಿಗೆ ಭಾರೀ ಅನ್ಯಾಯ ಆಗಿದೆಯಂತೇ. ಕುಮಾರಸ್ವಾಮಿ ಹಾಗೂ ದೇವೇಗೌಡರು ಜಂಟಿ ಕಾರ್ಯಾಚರಣೆ ನಡೆಸಿ ಮೋಸ ಮಾಡಿದ್ದಾ ರಂತೇ.

‘ನುಡಿದರೆ ಮುತ್ತಿನ ಹಾರದಂತಿರಬೇಕು, ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು, ನುಡಿದರೆ ಸ್ಫಟಿಕದ ಸಲಾಕೆಯಂತಿರಬೇಕು, ನುಡಿದರೆ ಲಿಂಗ ಮೆಚ್ಚಿ ಅಹುದಹುದೆನ್ನಬೇಕು’ ಅಂಥ ಬಸವಣ್ಣನವರು ಹೇಳಿದ್ದಾರೆ. ಆದರೆ ಅದ್ಯಾವುದೋ ತಲೆತಿರುಕ ಸಂಸ್ಥೆ ಕೊಟ್ಟ ತಿರುಳಿಲ್ಲದ ಇಟ್ಟುಕೊಂಡು ಮಿದುಳಿಲ್ಲದವರು ಎಬ್ಬಿಸಿರುವ ಇಂಥ ಕೂಗಿಗೇ ಏನೆಂದು ಕರೆಯಬೇಕು? ಮೊದಲೇ ಧರ್ಮ, ಜಾತಿ ಆಧಾರದಲ್ಲಿ ಸಮಾಜ ಛಿದ್ರ-ಛಿದ್ರವಾಗಿ ಹೋಗಿದೆ. ಹೀಗಿರುವಾಗ ಯಾವೊಂದು ಬೇಧ-ಭಾವದ ಲೇಪ-ಲೋಪವಿಲ್ಲದೆ ತಮ್ಮ ಪಾಡಿಗೆ ತಾವು ಕೃಷಿ ಮಾಡಿಕೊಂಡು ಹೋಗುತ್ತಿರುವ ನಿರುಪದ್ರವಿ ರೈತರನ್ನು ಈಗ ಜಾತಿ ಆಧಾರದಲ್ಲಿ ಒಡೆಯಲು ಹೋಗು ತ್ತಿರುವವರನ್ನುಏನೆಂದು ಜರಿಯಬೇಕು?

ರೈತ ಸಮುದಾಯಕ್ಕೆ ಯಾವುದೇ ಒಂದು ಜಾತಿ ಎಂಬುದಿಲ್ಲ. ಕರ್ನಾಟಕದಲ್ಲಿ ಲಿಂಗಾಯತರು, ಒಕ್ಕಲಿಗರು, ಕುರುಬರು, ಪರಿ ಶಿಷ್ಟರು, ಹಿಂದುಳಿದ ವರ್ಗದವರು, ಮುಸ್ಲಿಮರು, ಜೈನರು, ಮರಾಠಿಗರು – ಸಕಲೆಂಟು ಜಾತಿ, ಧರ್ಮದವರೂ ಆರಂಭ ಮಾಡು  ತ್ತಿದ್ದಾರೆ. ಅದೇ ರೀತಿ ಬೇಸಾಯ ಮಾಡುತ್ತಿರುವ ಜಾತಿ, ಧರ್ಮದವರು ಯಾವುದೇ ಒಂದು ಪ್ರದೇಶಕ್ಕೆ, ಭಾಗಕ್ಕೆ ಸೀಮಿತರಾಗಿಲ್ಲ. ಇಂಥ ಜಾತಿಯವರು ಇಲ್ಲಿ ಮಾತ್ರ ಇದ್ದಾರೆ ಎಂದು ಹೇಳಲು ಬರುವುದಿಲ್ಲ. ಅವರು ಎಲ್ಲ ಕಡೆ ಹರಿದು ಹಂಚಿ ಹೋಗಿದ್ದಾರೆ. ಪ್ರದೇಶವಾರು ಪ್ರಮಾಣದಲ್ಲಿ ವ್ಯತ್ಯಾಸಗಳು ಇರಬಹುದು. ಆದರೆ ಈ ವ್ಯತ್ಯಾಸ ಕೃಷಿಗಾಗಲಿ, ಕೃಷಿ ಮಾಡುತ್ತಿರುವವರಿಗಾಗಲಿ ಅನ್ವಯ ಆಗುವುದಿಲ್ಲ. ರಾಜ್ಯದ ಎಲ್ಲೆಡೆ ಕೃಷಿ ಮಾಡುತ್ತಿರುವ ಎಲ್ಲರೂ ಕೃಷಿಕರೇ ಆಗಿದ್ದಾರೆಯೇ ಲಿಂಗಾಯತ ರೈತ, ಒಕ್ಕಲಿಗ ರೈತ, ಕುರುಬ ರೈತ, ಬ್ರಾಹ್ಮಣ ರೈತ ಎಂದು ವಿಂಗಡಿಸಲು ಬರುವುದಿಲ್ಲ. ರೈತನ ಕುಲ ಒಂದೇ. ಅದು ಒಕ್ಕಲುತನ.

ಭೌಗೋಳಿಕ ಮತ್ತು ಜನಸಂಖ್ಯೆ ಆಧಾರದಲ್ಲಿ ನೋಡಿದಾಗ ದಕ್ಷಿಣ ಕರ್ನಾಟಕಕ್ಕಿಂಥ ಉಳಿದ ಭಾಗಗಳಲ್ಲಿ ಅದರಲ್ಲೂ ಉತ್ತರ ಕರ್ನಾಟಕದಲ್ಲಿ ಹೆಚ್ಚಿನ ರೈತರಿದ್ದಾರೆ, ಜಮೀನ್ದಾರರು ಇದ್ದಾರೆ. ಉತ್ತರ ಕರ್ನಾಟಕದಲ್ಲಿ ಕೃಷಿ ಭೂಮಿ ಪಾಲು ಹೆಚ್ಚು. ಹಳೇ ಮೈಸೂರು ಭಾಗದಲ್ಲಿಯೂ ಕೃಷಿಯೇ ಪ್ರಧಾನವಾದರೂ ಸಣ್ಣ ಪ್ರಮಾಣದ ಹಿಡುವಳಿದಾರರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಸಹಜವಾಗಿಯೇ ಸಾಲಮನ್ನಾ ಪ್ರಮಾಣ ಆಯಾ ಭಾಗದ ಹಿಡುವಳಿದಾರರು, ಅವರು ಉಳುಮೆ ಮಾಡುವ ಭೂಮಿ ಪ್ರಮಾಣಕ್ಕೆ ಅನುಗುಣವಾಗಿಯೇ ಹಂಚಿಕೆ ಆಗುತ್ತದೆ. ಈಗ ಎಲ್ಲ ರೈತರಿಗೂ ಸಾರಸಗಟಾಗಿ ಎರಡು ಲಕ್ಷ ರುಪಾಯಿವರೆಗೆ ಮಾತ್ರ ಮನ್ನಾ ಮಾಡುತ್ತಿರುವುದರಿಂದ ಒಬ್ಬರಿಗೆ ಒಂದು ಮತ್ತೊಬ್ಬರಿಗೆ ಇನ್ನೊಂದು ಎನ್ನುವ ಪ್ರಶ್ನೆಯೇ ಉದ್ಭವ ಆಗುವುದಿಲ್ಲ.

ಸರಕಾರದ ಅಂಕಿ-ಅಂಶಗಳ ಪ್ರಕಾರ ಈಗ ಸಾಲ ಮನ್ನಾ ಆಗಿರುವ ಜಿಲ್ಲೆಗಳ ಪೈಕಿ ಬೆಳಗಾವಿಗೆ ಸಿಂಹಪಾಲು. ಅಂದರೆ 7 ಸಾವಿರ ಕೋಟಿ ರುಪಾಯಿ ಸಿಕ್ಕಿದೆ. ನಂತರದ ಕಲ್ಬುರ್ಗಿ ಜಿಲ್ಲೆಯದು. ಈ ಜಿಲ್ಲೆಗೆ 7 ಸಾವಿರ ಕೋಟಿ ರುಪಾಯಿ. ಈ ಎರಡು ಜಿಲ್ಲೆಗೆ ಸಿಗುತ್ತಿರುವ ಲಾಭ ಒಟ್ಟಾರೆ 13 ಸಾವಿರ ಕೋಟಿ ರುಪಾಯಿ. ಇದಕ್ಕೆ ವ್ಯತಿರಿಕ್ತವಾಗಿ ಒಕ್ಕಲಿಗ ಸಮುದಾಯದ ರೈತರು ಹೆಚ್ಚಿನ ಸಂಖ್ಯೆಯಲ್ಲಿರುವ, ದೇವೇಗೌಡರ ತವರಾದ ಹಾಸನ ಜಿಲ್ಲೆಗೆ 1.5 ಸಾವಿರ ಕೋಟಿ ರುಪಾಯಿ, ಮಂಡ್ಯ ಜಿಲ್ಲೆಗೆ 1 ಸಾವಿರ ಕೋಟಿ ರುಪಾಯಿ ಹಾಗೂ ಸಿಎಂ ಕುಮಾರಸ್ವಾಮಿ ರಾಜಕೀಯ ಕರ್ಮಭೂಮಿ ರಾಮನಗರ ಜಿಲ್ಲೆಗೆ 1 ಸಾವಿರ ಕೋಟಿ ಮೊತ್ತದ ಸಾಲ ಮನ್ನಾ ಪಾಲು ಸಿಗುತ್ತಿದೆ. ಬೆಳಗಾವಿ, ಕಲ್ಬುರ್ಗಿಯಲ್ಲಿ ಒಕ್ಕಲಿಗ ಸಮುದಾಯದವರೇನೂ ಇಲ್ಲ. ದಕ್ಷಿಣ ಕರ್ನಾಟಕದ ನಾಲ್ಕೈದು ಜಿಲ್ಲೆಗಳಲ್ಲಿ ಒಕ್ಕಲಿಗರು ಪ್ರಬಲರಾಗಿದ್ದಾರೆ ಎಂಬುದು ನಿಜ. ಆದರೆ ಉಳಿದ ಜಿಲ್ಲೆಗಳಲ್ಲಿ ಅನ್ಯವರ್ಗದವರೇ ಹೆಚ್ಚಾಗಿ ಕೃಷಿ ಅವಲಂಬಿಸಿದ್ದಾರೆ. ಹೀಗಿರುವಾಗ ಸಾಲಮನ್ನಾದ ಶೇಕಡಾ 32 ರಷ್ಟು ಪಾಲು ಗೌಡ ಸಮುದಾಯಕ್ಕೆ ಸಲ್ಲುತ್ತಿದೆ ಎಂಬ ವಾದ ಬಾಲಿಶ ಮತ್ತು ಕಪೋಲಕಲ್ಪಿತ.

ಇಲ್ಲಿ ಇನ್ನೊಂದು ವಿಷಯ. ಜನಸಂಖ್ಯೆ, ರೈತರ ಸಂಖ್ಯೆಯನ್ನು ಒತ್ತಟ್ಟಿಗಿಟ್ಟು ಸಾಲ ಪಡೆದವರ ಸಂಖ್ಯೆಯನ್ನೇ ಸಾಲಮನ್ನಾಕ್ಕೆ ಹಾಗೆ ಸಾಲ ಪಡೆದವರ ಸಂಖ್ಯೆಯಲ್ಲಿ ಒಕ್ಕಲಿಗರೇ ಹೆಚ್ಚಾಗಿದ್ದಿದ್ದರೆ ಹಾಸನ, ಮಂಡ್ಯ, ರಾಮನಗರ, ಮೈಸೂರು ಜಿಲ್ಲೆಗಳಿಗೆ ಬೆಳ ಗಾವಿ ಮತ್ತು ಕಲ್ಗುರ್ಗಿಗಿಂತಲೂ ಹೆಚ್ಚು ಪಾಲು ಸಿಗಬೇಕಿತ್ತು. ಆದರೆ ಈ ನಾಲ್ಕು ಜಿಲ್ಲೆಗಳ ಸಾಲಮನ್ನಾ ಮೊತ್ತ ಬರೀ ಬೆಳಗಾವಿ ಜಿಲ್ಲೆಯೊಂದರ ಪ್ರಮಾಣಕ್ಕೆ ಸರಿಸಾಟಿ ಆಗುವುದಿಲ್ಲ. ಹೀಗಿರುವಾಗ ದೇವೇಗೌಡರು ಮತ್ತು ಕುಮಾರಸ್ವಾಮಿ ಒಕ್ಕಲಿಗ ಸಮುದಾ ಯಕ್ಕೆ ಸೇರಿದ್ದಾರೆ ಎಂಬ ಕಾರಣಕ್ಕೆ ಒಕ್ಕಲಿಗ ಸಮುದಾಯದವರೇ ಹೆಚ್ಚಾಗಿರುವ ಹಳೇ ಮೈಸೂರು ಪ್ರಾಂತ್ಯಕ್ಕೆ ಹೆಚ್ಚಿನ ಸಾಲ ಮನ್ನಾ ಲಾಭ ದೊರಕಿಸಿಕೊಟ್ಟಿದ್ದಾರೆ ಎಂಬ ಸತ್ಯವಾದರು ಎಲ್ಲಿದೆ? ಸುಳ್ಳು ಹೇಳಲು ಒಂದು ಮಿತಿ ಬೇಡವೇ?

ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಹಕಾರಿ ಬ್ಯಾಂಕ್‌ಗಳಲ್ಲಿ ರೈತರು ಮಾಡಿಕೊಂಡಿದ್ದ 8,150 ಕೋಟಿ ರುಪಾಯಿ ಸಾಲಮನ್ನಾ ಮಾಡಿದ್ದರು. ಅದರಲ್ಲಿ 4,000 ಕೋಟಿ ರುಪಾಯಿ ಬಿಡುಗಡೆ ಆಗಿತ್ತು. ಬಾಕಿ 4,150 ಸಾವಿರ ಕೋಟಿ ರುಪಾಯಿಯನ್ನು ಈಗ ಕುಮಾರಸ್ವಾಮಿ ಬಿಡುಗಡೆ ಮಾಡಿದ್ದಾರೆ. ಹಿಂದೆ ಸಿದ್ದರಾಮಯ್ಯನವರು ಸಾಲಮನ್ನಾ ಮಾಡಿದಾಗ ಅವರು ಪ್ರತಿನಿಧಿಸುವ ಕುರುಬ ಸಮುದಾಯದವರನ್ನಾಗಲಿ ಅಥವಾ ಅವರ ರಾಜಕೀಯ ಕಾರ್ಯಕ್ಷೇತ್ರ ಹಳೇ ಮೈಸೂರು ಭಾಗವನ್ನಾಗಲಿ ಅವರು ಸಾಲಮನ್ನಾ ಮಾಡಿದಾಗಲೂ ಅದು ಇಡೀ ರಾಜ್ಯದ ರೈತರಿಗೆ ಅನ್ವಯ ಆಗಿತ್ತು. ಈಗಿರುವ ರೈತರೇ ಆಗಲೂ ಕೃಷಿಸಾಲದ ವಾರಸುದಾರರಾಗಿದ್ದರು. ಈಗ ಹಳೇ ಮೈಸೂರು ಪ್ರಾಂತ್ಯದಲ್ಲಿರುವ ಒಕ್ಕಲಿಗರು ಸಿದ್ದರಾಮಯ್ಯನವರು ಸಾಲಮನ್ನಾ ಮಾಡಿದ ಒಂದು ವರ್ಷದ ಹಿಂದೇನೂ ಆ ಭಾಗದಿಂದ ಮಾಯವಾಗಿರಲಿಲ್ಲ. ಈಗ ಒಕ್ಕಲಿಗ ಸಮುದಾಯದ ಕುಮಾರಸ್ವಾಮಿ ಸಿಎಂ ಆಗಿದ್ದಾ ರೆಂದು ಧುತ್ತೆಂದು ಪ್ರತ್ಯಕ್ಷವಾಗಿಲ್ಲ.

ಅದಕ್ಕೂ ಮೊದಲು ಯಡಿಯೂರಪ್ಪನವರು ಮುಖ್ಯಮಂತ್ರಿ ಆಗಿದ್ದಾಗ ಸಾಲಮನ್ನಾಕ್ಕೆ ಸಾಕಷ್ಟು ಒತ್ತಡ ಬಂದಿತ್ತು. ಆದರೆ ಅವರು ಅದಕ್ಕೇನೂ ಜಗ್ಗಿರಲಿಲ್ಲ. ಸಾಲಮನ್ನಾ ಮಾಡದಿದ್ದರೂ ಅದರ ಮೇಲಿನ ಬಡ್ಡಿ ಮಾತ್ರ ಮನ್ನಾ ಮಾಡಿದ್ದರು. ಅದೇ ಬಿಜೆಪಿ ಸರಕಾರದ ಅವಧಿಯಲ್ಲಿ ಮೂರನೇ ಮುಖ್ಯಮಂತ್ರಿ ಆಗಿ ಬಂದ ಜಗದೀಶ ಶೆಟ್ಟರು ರೈತರ ಸಾಲಮನ್ನಾ ಘೋಷಿಸಿ, ಅದರಲ್ಲಿ 800 ಕೋಟಿ ರುಪಾಯಿ ಭರಿಸಿದ್ದರು. ಅವರೇನೂ ತಾವು ಪ್ರತಿನಿಧಿಸುವ ಲಿಂಗಾಯತ ಸಮುದಾಯ ಕೇಂದ್ರೀಕೃತ ಭಾಗದ ರೈತರಿಗೆ ಮಾತ್ರ ಈ ಸೌಲಭ್ಯ ನೀಡಿರಲಿಲ್ಲ. ಅದು ಅವರ ದೃಷ್ಟಿಯೂ ಆಗಿರಲಿಲ್ಲ. ಆಗಲೂ ಜಾತಿವಾರು, ಪ್ರಾಂತ್ಯವಾರು ರೈತರ ಪ್ರಮಾಣ ಈಗಿನಂತೆಯೇ ಇತ್ತು. ಈಗ ಇದ್ದಕ್ಕಿದ್ದಂತೆ ಒಂದು ಸಮುದಾಯದ ರೈತರಿಗೆ ಮಾತ್ರ ಅದರ ಲಾಭ ಹೇಗೆ ಸಿಗುತ್ತದೋ ಆ ಭೂಮಿ ತಾಯಿಯೇ ಬಲ್ಲಳು!

ಹಿಂದೆ ಜೆ.ಎಚ್. ಪಟೇಲರು ಮುಖ್ಯಮಂತ್ರಿ ಆಗಿದ್ದಾಗ ಆಶ್ರಯ ಮನೆ ಹಂಚಿಕೆ ಕುರಿತು ವಿಧಾನಸಭೆಯಲ್ಲಿ ತೀವ್ರ ಗದ್ದಲವಾಗಿತ್ತು. ಆಗ ಇದೊಂದೇ ವಿಷಯ ಕುರಿತು ಮೂರು ದಿನಗಳ ಕಾಲ ವಿಶೇಷ ಚರ್ಚೆ ನಡೆದಿತ್ತು. ಆಡಳಿತಪಕ್ಷದ ಶಾಸಕರ ಕ್ಷೇತ್ರಗಳಿಗೆ ಹೆಚ್ಚಿನ ಮನೆಗಳನ್ನು ಹಂಚಿಕೆ ಮಾಡಲಾಗಿದೆ, ಪ್ರತಿಪಕ್ಷಗಳ ಕ್ಷೇತ್ರಗಳಿಗೆ ಕಡಿಮೆ ಮಂಜೂರು ಮಾಡಲಾಗಿದೆ ಎಂದು ಪ್ರತಿಪಕ್ಷ ಮತ್ತು ಕಾಂಗ್ರೆಸ್ ಆಡಳಿತರೂಢ ಜನತಾ ದಳವನ್ನು ಹಿಗ್ಗಾಮುಗ್ಗಾ ಜಾಡಿಸಿದ್ದವು. ಪಟೇಲರೂ ತೀವ್ರ ಟೀಕೆಗೆ ಗುರಿಯಾಗಿದ್ದರು. ಮೂರು ದಿನಗಳ ಚರ್ಚೆಗೆ ಮುಖ್ಯಮಂತ್ರಿಗಳು ಕೊಟ್ಟ ಉತ್ತರ ಹೀಗಿತ್ತು: ‘ಮದುವೆ ಮನೆ ಊಟದ ಪಂಕ್ತಿಯಲ್ಲಿ ಕೂತವರಿಗೆ ತುಪ್ಪ ಬಡಿಸುವಾಗ ಒಬ್ಬನಿಗೆ ಒಂದು ಸ್ವಾರಿಗೆ ಹೆಚ್ಚು ಬೀಳುತ್ತದೆ, ಮತ್ತೊಬ್ಬನಿಗೆ ಕಡಿಮೆ ಬೀಳುತ್ತದೆ. ತುಪ್ಪ ಬಡಿಸುವವನಿಗೆ ಅವನಿಗೆ ಜಾಸ್ತಿ ಬಡಿಸಬೇಕು, ಇವನಿಗೆ ಕಡಿಮೆ ಬಡಿಸಬೇಕು ಎನ್ನುವುದಿರುವುದಿಲ್ಲ.

ಆದರೂ ಬಡಿಸುವಾಗ ಕೈಕದಲಿ ಸ್ವಲ್ಪ ಹೆಚ್ಚು ಕಡಿಮೆ ಆಗುತ್ತದೆ. ಗದ್ದಲ ಮಾಡಿದರೇ ಊಟಕ್ಕೇ ಕೂತವರ ಮರ್ಯಾದೆಯೇ ಹೋಗುತ್ತದೆ. ಇಷ್ಟಕ್ಕೂ ಆಶ್ರಯ ಮನೆಗಳನ್ನು ಕೊಟ್ಟಿರುವುದು ಯಾರಿಗೆ? ಬಡವರಿಗೇ ಅಲ್ಲವೇ? ಒಂದು ಕ್ಷೇತ್ರದಲ್ಲಿ ಶ್ರೀಮಂತರಿಗೆ ಮತ್ತೊಂದು ಕ್ಷೇತ್ರದಲ್ಲಿ ಬಡವರಿಗೇನೂ ಹಂಚಿಕೆ ಮಾಡಿಲ್ಲವಲ್ಲ. ಅದು ಆಡಳಿತ ಪಕ್ಷದವರದೋ, ಪ್ರತಿಪಕ್ಷದವರದೋ ಅಂತೂ ಬಡವರಿಗೇ ತಾನೇ ಹಂಚಿಕೆ ಆಗಿರೋದು. ಒಂದು ಕ್ಷೇತ್ರದಲ್ಲಿ ಜಾಸ್ತಿ ಮನೆ ಹಂಚಿಕೆ ಆಗಿದ್ದರೇ ಅದು ಬಡವರಿಗೇ ತಾನೇ ಸಿಗುವುದು. ಖುಷಿಪಡುವ ವಿಚಾರಕ್ಕೆ ಮೂರು ದಿನ ಸುಖಾಸುಮ್ಮನೆ ಚರ್ಚೆ ಮಾಡಿ, ಕಲಾಪದ ಸಮಯ ಮಾಡಿದ್ದೀರಲ್ಲ. ನಿಮಗೇನಾದರೂ ಬುದ್ಧಿ ಇದೆಯೇ?’ ಮೂರು ದಿನ ನಡೆದ ಚರ್ಚೆಗೆ ಪಟೇಲರು ಕೊಟ್ಟ ಉತ್ತರ ಮೂವತ್ತು ನಿಮಿಷವನ್ನೂ ದಾಟಲಿಲ್ಲ! ಎಲ್ಲರ ಬಾಯಿ ಮತ್ತು ಮನಸ್ಸು ಕಟ್ಟಿ ಹೋಗಿತ್ತು!!

ಒಂದೊಮ್ಮೆ ಸಾಲಮನ್ನಾದಲ್ಲಿ ತಾರತಮ್ಯವೇನಾದರೂ ಆಗಿದ್ದಿದ್ದರೆ ಸಮಾಧಾನ ಮಾಡಿಕೊಳ್ಳಲು ಪಟೇಲರ ಈ ಮಾತುಗಳನ್ನು ಉದಾಹರಣೆಯಾಗಿ ತೆಗೆದುಕೊಳ್ಳಬಹುದಿತ್ತು. ಅದರ ಲಾಭ ರೈತರಿಗೆ ತಾನೇ ಸಿಕ್ಕಿರುವುದು, ಬೇರೆಯವರಿಗೇನೂ ಅಲ್ಲವಲ್ಲ ಎಂದು. ಆದರೆ ಈಗ ಅದಕ್ಕೂ ಆಸ್ಪದವಾಗಿಲ್ಲ. ಪ್ರದೇಶ, ಜಾತಿ, ಧರ್ಮ, ಆಡಳಿತ ಪಕ್ಷದ ಕ್ಷೇತ್ರ, ಕ್ಷೇತ್ರದ ರೈತರು ಎಂಬ ಯಾವುದೇ ಬೇಧವಿಲ್ಲದೆ ಎಲ್ಲ ಕೃಷಿಕರ 2 ಲಕ್ಷ ರುಪಾಯಿವರೆಗಿನ ಸಾಲವನ್ನು ಮನ್ನಾ ಮಾಡಲಾಗಿದೆ. ಇಡೀ ಕರ್ನಾಟಕಕ್ಕೆ ಏಕರೂಪ ಸದೃಶವಾಗಿರುವ ಈ ಮನ್ನಾದಲ್ಲಿ ಮಣ್ಣು ಹುಡುಕುವುದು ‘ಒಲ್ಲದ ಗಂಡನಿಗೆ ಮೊಸರಲ್ಲಿ ಕಲ್ಲು’ ಎಂಬ ಗಾದೆ ಮಾತಿಗಷ್ಟೇ ಸೀಮಿತವಾಗಲಿದೆ.

ಒಂದೊಮ್ಮೆ ಇಲ್ಲಿ ಏನಾದರೂ, ಯಾರಾದರೂ ಅಪಸ್ವರ ಎತ್ತಲು ಅವಕಾಶವಿದೆ ಎನ್ನುವುದಾದರೆ ಅದು ಚುನಾವಣೆ ಪ್ರಣಾ ಳಿಕೆಯಲ್ಲಿ ಆದ ಘೋಷಣೆಗೂ ಈಗ ಅನುಷ್ಠಾನಕ್ಕೆ ಬಂದಿರುವ ಪ್ರಮಾಣಕ್ಕೂ ಇರುವ ವ್ಯತ್ಯಾಸದ ಬಗ್ಗೆ ಆಡಳಿತಕ್ಕೆ ಬಂದ ಇಪ್ಪತ್ನಾಲ್ಕು ಗಂಟೆಯೊಳಗೇ ರೈತರ ಎಲ್ಲ ಸಾಲ ಮನ್ನಾ ಮಾಡುವುದಾಗಿ ಕುಮಾರಸ್ವಾಮಿ ಹೇಳಿದ್ದರು. ಆದರೆ ಈಗ 2 ಲಕ್ಷ ರುಪಾಯಿಗೆ ಅದನ್ನು ಮಿತಿಗೊಳಿಸಲಾಗಿದೆ. ಆಡಿದ ಮಾತಿಗೆ ನಡೆದುಕೊಳ್ಳಲಿಲ್ಲ ಎಂದು ಯಾರಾದರೂ ಆಕ್ಷೇಪ ಎತ್ತಿದರೆ ಅದಕ್ಕೊಂದು ಅರ್ಥ ಮತ್ತು ಸಾಕ್ಷಿ ಎರಡೂ ಇದೆ. ಆದರೆ ಸಾಲಮನ್ನಾ ಲಾಭ ಸಂಬಂಧ ರೈತರನ್ನು ಜಾತಿ, ಪ್ರದೇಶವಾರು ಆಧಾರದಲ್ಲಿ ಒಡೆಯುವುದು, ಒಬ್ಬರ ಮೇಲೆ ಮತ್ತೊಬ್ಬರನ್ನು ಎತ್ತಿ ಕಟ್ಟುವುದು ಅಕ್ಷಮ್ಯ ಮತ್ತು ವಿಕೃತ ಮನಸ್ಸಿನ ಪ್ರತೀಕ.

ಇನ್ನು ಕುಮಾರಸ್ವಾಮಿ ಬಜೆಟ್‌ನಲ್ಲಿ ಉತ್ತರ ಕರ್ನಾಟಕ, ಕರಾವಳಿ, ಮಲೆನಾಡು ಭಾಗಗಳಿಗೆ ಹೋಲಿಸಿದರೆ ಹಳೇ ಮೈಸೂರು ಭಾಗಕ್ಕೆ ಹೆಚ್ಚಿನ ಒತ್ತು ನೀಡಿದ್ದಾರೆಂಬ ಆರೋಪವಿದೆ. ಇದರಲ್ಲಿ ಒಂದಷ್ಟು ಸತ್ಯವಿರುವುದು ಸುಳ್ಳಲ್ಲ. ಮಾಜಿ ಮುಖ್ಯಮಂತ್ರಿ ಸಿದ್ದ ರಾಮಯ್ಯನವರು ಕಳೆದ ಫೆಬ್ರವರಿಯಲ್ಲಿ ಮಂಡಿಸಿದ್ದ ಬಜೆಟ್‌ನ ಎಲ್ಲ ಕಾರ್ಯಕ್ರಮ, ಯೋಜನೆಗಳನ್ನು ಯಥಾವತ್ತಾಗಿ ಮುಂದು ವರಿಸುತ್ತಿರುವುದಾಗಿ ಕುಮಾರಸ್ವಾಮಿ ಹೇಳಿದ್ದಾರೆ. ಸಿದ್ದರಾಮಯ್ಯನವರು ಚುನಾವಣೆಪೂರ್ವ ಮಂಡಿಸಿದ್ದ ಈ ಬಜೆಟ್‌ನಲ್ಲಿ ಮತದಾರರನ್ನು ಸೆಳೆಯಲು ಸಮಗ್ರ ಕರ್ನಾಟಕವನ್ನು ಗಮನದಲ್ಲಿಟ್ಟುಕೊಂಡಿದ್ದರು.

ಕುಮಾರಸ್ವಾಮಿ ಅವರು ಅದನ್ನು ಮುಂದುವರಿಸಿರುವುದರಿಂದ ಕಾಂಗ್ರೆಸ್‌ನ, ಸಿದ್ದರಾಮಯ್ಯನವರ ದೃಷ್ಟಿಕೋನವನ್ನು ಕುಮಾರ ಸ್ವಾಮಿ ಬಣ್ಣದ ಕನ್ನಡಕ ಹಾಕಿಕೊಂಡು ತೋರಿಸಿದ್ದಾರೆ. ಆದರೆ ಅವರು ಸಿದ್ದರಾಮಯ್ಯನವರ ಬಜೆಟ್‌ಗಿಂಥ ಹೆಚ್ಚಿಸಿರುವ 9,307 ಕೋಟಿ ರುಪಾಯಿ ಗಾತ್ರದಲ್ಲಿ ಸಾಲಮನ್ನಾ ಹೊರತುಪಡಿಸಿ ರೂಪಿಸಿರುವ ಒಂದಷ್ಟು ಹೊಸ ಯೋಜನೆಗಳನ್ನು ಹಾಸನ, ರಾಮನಗರ, ಮಂಡ್ಯ, ಮೈಸೂರು, ಚಿಕ್ಕಬಳ್ಳಾಪುರ, ಬೆಂಗಳೂರು ಸೇರಿದಂತೆ ಹಳೇ ಮೈಸೂರು ಭಾಗಕ್ಕೆ ಕೇಂದ್ರೀಕೃತಗೊಳಿಸಿದ್ದಾರೆ. ಈ ಯೋಜನೆಗಳನ್ನು ರಾಜ್ಯದ ಅನ್ಯಭಾಗಗಳಿಗೂ ಹಂಚಿಕೆ ಮಾಡಲು ಅವಕಾಶವಿತ್ತು. ಆದರೆ ಕುಮಾರಸ್ವಾಮಿ ಆ ಆವಕಾಶ ಕಳೆದುಕೊಂಡಿದ್ದಾರೆ. ಟೀಕೆಗಳಿಗೆ ಆಸ್ಪದ ಮಾಡಿಕೊಟ್ಟಿದ್ದಾರೆ. ತಪ್ಪನ್ನು ತಪ್ಪೇನೂ ಇಲ್ಲ. ಆದರೆ ಇಲ್ಲದ ತಪ್ಪಲ್ಲಿ ತಪ್ಪು ಹುಡುಕು ವುದು ತಪ್ಪಾಗುತ್ತದೆ. ಅದರ ಹಿಂದಿನ ವಿಕೃತಿಯನ್ನು ಅನಾವರಣಗೊಳಿಸುತ್ತದೆ. ಈಗ ರೈತರ ಸಾಲಮನ್ನಾ ವಿಚಾರದಲ್ಲಿ ಆಗುತ್ತಿರುವುದು ಅದೇ..!

ಲಗೋರಿ: ಹಲುಬುವವನು ಮರುಗುವನು, ಕರುಬುವವನು ಕರಗುವನು!

(ವಿಶ್ವವಾಣಿಯಲ್ಲಿ ಪ್ರಕಟಿತ)

Leave a Reply