ಸೋತ ಕಾಂಗ್ರೆಸ್ ಅಭ್ಯರ್ಥಿಗಳ ಮಾತು ಕೇಳಿ ಸಿದ್ದು ಶಾಕ್!

ಡಿಜಿಟಲ್ ಕನ್ನಡ ಟೀಮ್:

ರಾಜ್ಯದಲ್ಲಿ ಮೈತ್ರಿ ಸರ್ಕಾರ ಅಸ್ತಿತ್ವದಲ್ಲಿದೆ, ಯಾವುದಾದರೂ ಯೋಜನೆ ಆಗಬೇಕು ಅಂದರೆ ಹಣಕಾಸು ಖಾತೆ ಹೊಂದಿರುವ ಸಿಎಂ ಕುಮಾರಸ್ವಾಮಿ, ಇಲಾಖೆಗಳಿಗೆ ಹಣ ಬಿಡುಗಡೆ ಮಾಡಬೇಕು. ಅದು ಕಾಂಗ್ರೆಸ್ ಶಾಸಕಾರದರೂ ಸರಿ, ಜೆಡಿಎಸ್ ಶಾಸಕರಾದರೂ ಸರಿ. ಆದರೆ ಇಂದು ಸಿದ್ದರಾಮಯ್ಯ, ಶಾಸಕರ ಭವನದಲ್ಲಿ ಸೋಲುಂಡ ಕಾಂಗ್ರೆಸ್ ಅಭ್ಯರ್ಥಿಗಳ ಸಭೆ ನಡೆಸಿದ್ರು. ಈ ವೇಳೆ ಕೆಲವು ನಾಯಕರು ಕೆಲವೊಂದು ಅಭಿಪ್ರಾಯ ಹೇಳಿಕೊಂಡಿದ್ದು, ಅವರ ಅಭಿಪ್ರಾಯಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಅವರೇ ತಲೆಕೆಡಿಸಿಕೊಂಡಿದ್ದಾರೆ.

ಯಾಕಂದ್ರೆ ಯಾವುದೇ ಕಾರಣಕ್ಕೂ ಜೆಡಿಎಸ್ ಪಕ್ಷದ ಶಾಸಕರು ಬೆಳೆಯಲು ಬಿಡಬಾರದು ಎಂದು ಆಕಾಂಕ್ಷೆ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್‌ನಿಂದ ಸಚಿವರಾಗಿರುವವರು ಜೆಡಿಎಸ್ ಶಾಸಕರಿರೋ ಕ್ಷೇತ್ರಗಳನ್ನ ಕಡೆಗಣಿಸಬೇಕು, ಅವರಿಗೆ ಶಕ್ತಿ ತುಂಬಲು ಬಿಡಬೇಡಿ ಎಂದಿರುವ ಸೋಲನಪ್ಪಿದ ನಾಯಕರು, ಬಿಜೆಪಿ ಶಾಸಕರಿರುವ ಕ್ಷೇತ್ರಗಳಿಗೆ ನಯಾ ಪೈಸೆ ಕೂಡ ಕೊಡಬೇಡಿ ಎಂದಿದ್ದಾರೆ. ಅದರಲ್ಲೂ ಇಕ್ಬಾಲ್ ಅನ್ಸಾರಿ, ಶಿವರಾಜ್ ತಂಗಡಗಿ, ನರೇಂದ್ರಸ್ವಾಮಿ ಸೇರಿದಂತೆ ಕೆಲವರು ಸಿದ್ದರಾಮಯ್ಯ ಒತ್ತಡ ಹೇರಿದ್ದಾರೆ ಎನ್ನಲಾಗಿದೆ. ಕೊಪ್ಪಳ ಎಸ್‌ಪಿ ಬಿಜೆಪಿ ಅಭ್ಯರ್ಥಿಗಳಿಗೆ ಚುನಾವಣೆ ಸಂದರ್ಭದಲ್ಲಿ ನೆರವಾಗಿದ್ದಾರೆ. ಹಲವು ಅಧಿಕಾರಿಗಳು ಬಿಜೆಪಿ ಅಭ್ಯರ್ಥಿಗಳ ಪರವಾಗಿ ಕೆಲಸ ಮಾಡಿದ್ದಾರೆ. ಚುನಾವಣೆಯಲ್ಲಿ ಬಿಜೆಪಿಯವರು ಮಾಡಿದ ಅಕ್ರಮಗಳಿಗೆ ಅಧಿಕಾರಿಗಳೇ ಕೈ ಜೋಡಿಸಿದ್ದು, ಬಿಜೆಪಿ ನಾಯಕರ ಗೂಢಚಾರರಂತೆ ಕೆಲಸ ಮಾಡಿದ್ದಾರೆ ಅಂತ ಆರೋಪಿಸಿದ್ರು. ಜೆಡಿಎಸ್ ಕೂಡ ಅಧಿಕಾರಿಗಳನ್ನು ಇದೇ ರೀತಿ ಬಳಸಿಕೊಂಡಿದೆ ಅನ್ನೊ ಆರೋಪ ಹಳೇ ಮೈಸೂರು ಭಾಗದ ನಾಯಕರಿಂದ ಕೇಳಿಬಂತು.

ಇನ್ನು ಹಾಸನದಲ್ಲಿ ಹೀನಾಯವಾಗಿ ಸೋಲನಪ್ಪಿದ ಮಾಜಿ ಸಚಿವ ಎ. ಮಂಜು ಜೆಡಿಎಸ್ ವಿರುದ್ಧ ಗುಡುಗಿದ್ರು. 37 ಶಾಸಕರಿದ್ದವರು ಸಿಎಂ ಆದ್ರು. 78 ಶಾಸಕರಿದ್ದರೂ ಹಣಕಾಸು ಖಾತೆ ಸಿಗಲಿಲ್ಲ ಎಂದು ಕಿಡಿಕಾರಿದ್ರು. ಜೆಡಿಎಸ್ ಪಕ್ಷ ಕಾಂಗ್ರೆಸ್ ಜೊತೆಗೂಡಿ ಅಧಿಕಾರ ಹಿಡಿದಿದ್ದರೂ ಕಾಂಗ್ರೆಸ್ ಮುಗಿಸುವ ಸಂಚು ಹೂಡಿದೆ ಈ ಬಗ್ಗೆ ಎಚ್ಚರವಹಿಸೋದು ಸೂಕ್ತ ಎಂದು ಪಕ್ಷವನ್ನು ಎಚ್ಚರಿಸುವ ಕೆಲಸ ಮಾಡಿದ್ರು. ಜೊತೆಗೆ ಚುನಾವಣೆ ಸಮಯದಲ್ಲಿ ಜಿದ್ದಿಗೆ ಬಿದ್ದು ವರ್ಗಾವಣೆ ಮಾಡಿಸುವಲ್ಲಿ ಸಫಲವಾಗಿದ್ದ ಹಾಸನ ಡಿಸಿ ರೋಹಿಣಿ ಸಿಂಧೂರಿ, ಮೈತ್ರಿ ಸರ್ಕಾರದಲ್ಲಿ ಮತ್ತೆ ಹಾಸನಕ್ಕೆ ವರ್ಗಾವಣೆ ಆಗಿರುವ ಬಗ್ಗೆಯೂ ಎ ಮಂಜು ಗರಂ ಆಗಿದ್ರು. ನಾವು ಹಾಸನದಿಂದ ವರ್ಗಾವಣೆ ಮಾಡಿಸಿದ್ದ ರೋಹಿಣಿ ಸಿಂಧೂರಿಯನ್ನ ಮತ್ತೇ ಹಾಸನ ಡಿಸಿಯಾಗಿ ವರ್ಗಾವಣೆ ಮಾಡಿದ್ದು ಎಷ್ಟು ಸರಿ ಅಂತಾ ನೇರವಾಗಿಯೇ ಸಿದ್ದರಾಮಯ್ಯಗೆ ಪ್ರಶ್ನಿಸಿದ್ದಾರೆ. ಇದೇ ರೀತಿ ಮುಂದುವರಿದರೆ ಕಾಂಗ್ರೆಸ್ ಕಥೆ ಹರೋಹರ ಎಂದಿದ್ದಾರೆ. ಒಟ್ಟಾರೆ ಎಲ್ಲಾ ಮಾಜಿ ಶಾಸಕರ ಆಕ್ರೋಶದ ಮಾತುಗಳನ್ನು ಕೇಳಿದ ಸಿದ್ದರಾಮಯ್ಯ ಒಂದು ಕ್ಷಣ ಅವಕ್ಕಾಗಿದ್ದಾರೆ.

Leave a Reply